ಪ್ರಜಾವಾಣಿಯಲ್ಲಿ 04/04/2015 ರಂದು ಅಂತರಾಳದಲ್ಲಿ ಪ್ರಕಟಗೊಂಡ ಲೇಖನ ಮನುಷ್ಯ ಆದಿಮಾನವನ ಕಾಲದಿಂದಲೂ ತನ್ನ ಇರವಿನ ಸುತ್ತ ಕೋಟೆ ಕೊತ್ತಲೆಗಳ ಜೊತೆಗೆ ಕಟ್ಟಳೆಗಳನ್ನೂ ಕಟ್ಟಿಕೊಂಡು ಬಂದಿದ್ದಾನೆ. ಸ್ವಾತಂತ್ರ್ಯ, ಪ್ರಾಬಲ್ಯ ಹಾಗೂ ಸಹಬಾಳ್ವೆಯ ಬದುಕು ಇದರ ಉದ್ದೇಶವಾಗಿತ್ತು. ಭಾಷೆ, ಸಂಸ್ಕೃತಿಯ ಬೆಳವಣಿಗೆ, ಹೊಸ ಭೂಪ್ರದೇಶಗಳ ಅನ್ವೇಷಣೆಯು ಪ್ರಾದೇಶಿಕ, ಭಾಷಿಕ ಹಾಗೂ ವಿದೇಶಿ ಕಾನೂನು ರಚನೆಗೆ ನಿಧಾನವಾಗಿ ಅಡಿಗಲ್ಲುಗಳಾದವು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಕಾನೂನು ಸುವ್ಯವಸ್ಥೆಯ ಸಲುವಾಗಿ, ಇಂಟರ್ನೆಟ್ ಜಗತ್ತಿನಲ್ಲೂ ತನ್ನದೇ ನಿಯಂತ್ರಣ ಹೊಂದಲು ಇದೇ ವರ್ಗೀಕರಣದ ಮಾದರಿ ಅನುಸರಿಸುವುದನ್ನು ನೋಡಬಹುದು. ಒಬ್ಬ ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದಲ್ಲಿ ತನ್ನಿಚ್ಛೆಯಂತೆ ಇರುವುದರ ಜೊತೆಗೆ, ಮಾನವ ಸಹಜ ಗುಣಗಳಿಂದ ಬಂದಿರುವ ಎಲ್ಲ ರೀತಿಯ ಭಾವನೆಗಳನ್ನೂ ಹೊರಗೆಡವುತ್ತಾನೆ. ಕ್ರೋಧ, ಮದ, ಮಾತ್ಸರ್ಯ ಇತ್ಯಾದಿಗಳನ್ನು ತನ್ನ ನಡೆ ನುಡಿಯಿಂದ, ಬರಹಗಳಿಂದ ತೋರ್ಪಡಿಸಿದರೂ ತನ್ನ ಅಸ್ತಿತ್ವವನ್ನು, ಅಂತಸ್ತನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ತನ್ನೆಲ್ಲ ಹೆಜ್ಜೆಗಳಲ್ಲೂ ಮಾಡುತ್ತಲೇ ಇರುತ್ತಾನೆ. ಇದೆಲ್ಲದರ ಜೊತೆಗೆ ಯಾರಿಗೂ ಅರಿವಾಗದಂತಹ, ಬೇರೆಯವರಿಗೆ ತೋರ್ಪಡಿಸಿಕೊಳ್ಳಲು ಇಚ್ಛಿಸದ ಮುಖವಾಡವನ್ನೂ ಹೊಂದಿರುತ್ತಾನೆ. ಬಹುಶಃ ಜಗತ್ತಿನಲ್ಲಿ ನಡೆಯುತ್ತಿರುವ ಅದೆಷ್ಟೋ ಕಳ್ಳತನ, ಕಪಟತನದಂತಹ ಸಂಗತಿಗಳು ಈ ಎರಡನೇ ಮುಖಕ್ಕೆ ಸಂಬಂ