೧೮-ಡಿಸೆಂಬರ್-೨೦೧೦ ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಚಿತ್ರಕೃಪೆ: ಪ್ರಜಾವಾಣಿ

ಕಳೆದ ಸಹಸ್ರಮಾನದ ಕೊನೆಯ ವರ್ಷದಲ್ಲಿ ಡಾರ್ಸಿ ಡಿ ನುಚ್ಚಿ ಎಂಬ ವಿದ್ಯುನ್ಮಾನ ಮಾಹಿತಿ ವಿನ್ಯಾಸ ತಂತ್ರಜ್ಞೆ, ಲೇಖಕಿ ‘ಫ್ರ್ಯಾಗ್ಮೆಂಟೆಡ್ ಫ್ಯೂಚರ್’ ಎಂಬ ಲೇಖನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಇಂಟರ್ನೆಟ್‌ನ ಎರಡನೇ ಆವೃತ್ತಿ ಎಂಬರ್ಥದಲ್ಲಿ ವೆಬ್ 2.0 ಎಂಬ ಪದವನ್ನು ಬಳಸಿದರು.

ಅಲ್ಲಿಯ ತನಕ ಸ್ಥಿರವಾಗಿದ್ದ ವೆಬ್ ಪುಟಗಳು ಸಂವಹನಾತ್ಮಕವಾಗಿ ಬದಲಾಗುತ್ತಿದ್ದ ವಿದ್ಯಮಾನವನ್ನು ಅವರು ವಿವರಿಸಿದ್ದರು. ಅಲ್ಲಿಂದ ಮುಂದಿನದ್ದು ಇತಿಹಾಸ. ಎಲ್ಲೋ ಒಂದು ಕಡೆ ಕುಳಿತು ಊಡಿಸಿದ ಮಾಹಿತಿಗಳನ್ನು ಜಾಲಿಗರು ಓದುವ ಸ್ಥಿತಿ ಬದಲಾಯಿತು. ಓದುತ್ತಲೇ ಅದಕ್ಕೆ ಪ್ರತಿಕ್ರಿಯಿಸುವ ಅವಕಾಶ ದೊರೆಯಿತು. ಮಾಹಿತಿಯ ಬಳಕೆದಾರರೇ ಮಾಹಿತಿಯನ್ನೂ ಸೃಷ್ಟಿಸುವ ಅವಕಾಶವನ್ನು ಜಾಲತಾಣಗಳು ಬಳಸಿಕೊಳ್ಳಲು ಆರಂಭಿಸಿದ ನಂತರ ಒಂದು ಮೌನ ಕ್ರಾಂತಿ ನಡೆಯಿತು. ಅಲ್ಲಿಯ ತನಕ ಜಾಲ ತಾಣಗಳನ್ನು ನೋಡುವ ಅವಕಾಶ ಕಲ್ಪಿಸಿದ್ದ ಬ್ರೌಸರ್ ಮಾಹಿತಿಯನ್ನು ಸೃಷ್ಟಿಸುವ ಉಪಕರಣವಾಗಿಯೂ ಬಳಕೆಯಾಯಿತು.

ವೆಬ್ 2.0 ತಂತ್ರಜ್ಞಾನದ ಫಲವಾಗಿ ಉದ್ಭವಿಸಿದ ಸಾಮಾಜಿಕ ಜಾಲ ತಾಣಗಳು ಕೇವಲ ಗೆಳೆಯರ ಮಧ್ಯೆ ಸಂಪರ್ಕ ಕಲ್ಪಿಸುವ ಸಾಧನಗಳಾಗಿಯಷ್ಟೇ ಉಳಿಯಲಿಲ್ಲ. ಅವು ನಿರ್ದಿಷ್ಟ ವಿಚಾರಗಳ ಬಗ್ಗೆ ಚರ್ಚೆ ನಡೆಸುವ, ಅಭಿಪ್ರಾಯ ರೂಪಿಸುವ ತಾಣಗಳಾಗಿಯೂ ಬದಲಾದವು. ಈ ಅಭಿಪ್ರಾಯ ರೂಪಿಸುವ ಕ್ರಿಯೆ ಈಗ ಕೇವಲ ಜಾಲ ಜಗತ್ತಿಗೆ ಸೀಮಿತವಾಗಿ ಉಳಿದಿಲ್ಲ. ಜಾಲ ಪೌರರೆಂದು ಕರೆಯಬಹುದಾದ ನೆಟಿಝನ್‌ಗಳ ಅಭಿಪ್ರಾಯ ಸಾಂಪ್ರದಾಯಿಕ ಮಾಧ್ಯಮದ ಮೇಲೂ ಪರಿಣಾಮ ಬೀರುತ್ತವೆ ಎಂಬುದು ಇತ್ತೀಚಿನ ರಾಡಿಯಾ ಟೇಪ್ ಹಗರಣದಲ್ಲಿ ಬಯಲಾಯಿತು. ಭಾರತದ ಗೃಹ ಸಚಿವಾಲಯ 2008-09ರ ಅವಧಿಯಲ್ಲಿ ವೈಷ್ಣವಿ ಕಮ್ಯುನಿಕೇಶನ್ಸ್‌ನ ಮುಖ್ಯಸ್ಥೆ ನೀರಾ ರಾಡಿಯಾರ ದೂರವಾಣಿ ಕರೆಗಳ ಮೇಲೆ ಸುಮಾರು 300 ದಿನಗಳ ಕಾಲ ನಿಗಾ ಇರಿಸಿ ಎಲ್ಲಾ ಸಂಭಾಷಣೆಗಳನ್ನೂ ದಾಖಲಿಸಿತ್ತು.

ಈ ಟೇಪ್‌ಗಳು ಬಹಿರಂಗಗೊಂಡ ಮೇಲೆ ಎರಡನೇ ತಲೆಮಾರಿನ ತರಂಗಗುಚ್ಛಗಳ ಹರಾಜಿನಲ್ಲಿ ನಡೆದಿರುವ ದೊಡ್ಡ ಹಗರಣ ಹೊರಬಂತು. ಈ ಹಗರಣದ ಕೇಂದ್ರ ಬಿಂದುವಾದ ಡಿಎಂಕೆಯ ಎ.ರಾಜಾಗೆ ಸಂಪರ್ಕ ಖಾತೆ ದೊರೆಯುವಂತೆ ಮಾಡಲು ಕೆಲವು ಪತ್ರಕರ್ತರೂ ಲಾಬಿ ಮಾಡಿದ್ದರು.

ಈ ವಿಷಯವನ್ನು ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು ಮರೆತೇ ಬಿಟ್ಟಿದ್ದವು. ಇದನ್ನು ಮಾಧ್ಯಮಗಳಿಗೆ ನೆನಪಿಸಿಕೊಟ್ಟದ್ದು ಸಾಮಾಜಿಕ ಜಾಲ ತಾಣಗಳು. ಟ್ವಿಟ್ಟರ್‌ನಲ್ಲಿ ಬರ್ಖಾ ದತ್ ಎಂಬ ಹ್ಯಾಶ್ ಟ್ಯಾಗ್ (# ಚಿಹ್ನೆಯ ಜೊತೆಗೆ ಬರ್ಖಾ ದತ್ ಎಂದು ನಮೂದಿಸಿದರೆ) ಈ ಹಗರಣಕ್ಕೆ ಸಂಬಂಧಿಸಿದ ಸಾವಿರಾರು ಪ್ರತಿಕ್ರಿಯೆಗಳು ಸಿಗುತ್ತವೆ. ಫೇಸ್‌ಬುಕ್, ಬ್ಲಾಗ್‌ಗಳು, ಬಝ್ಾ ದಾಖಲೆಗಳನೆಲ್ಲಾ ಸೇರಿಸಿದರೆ ಈ ಸಂಖ್ಯೆ ಲಕ್ಷಗಳನ್ನು ಮೀರುತ್ತದೆ.

ಮುಖ್ಯವಾಹಿನಿ ಮಾಧ್ಯಮಗಳ ದೊಡ್ಡ ಶಕ್ತಿ ಎಂದರೆ ಅವಕ್ಕೆ ಇರುವ ವಿಶ್ವಾಸಾರ್ಹತೆ. ಅವು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸುವುದಕ್ಕೆ ಜನರಿಗೆ ಯಾವ ವೇದಿಕೆಯೂ ಇರಲಿಲ್ಲ. ಸಾಮಾಜಿಕ ತಾಣ ಗಳು ಅದ ಕ್ಕೊಂದು ವೇದಿಕೆಯಾಯಿತು. ಹಗರಣದಲ್ಲಿ ಪಾಲ್ಗೊಂಡ ಪತ್ರಕರ್ತರೂ ಇಂಥ ತಾಣಗಳ ಸದಸ್ಯರಾಗಿದ್ದರಿಂದ ಅವರಿಗೆ ಅಲ್ಲಿಯೂ ಒಂದು ಇಮೇಜ್ ಇದ್ದುದರಿಂದ ಅವರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಯಿತು. ಉಳಿದ ಮಾಧ್ಯಮಗಳು ತಾವಿನ್ನು ಸುಮ್ಮನೆ ಕುಳಿತರೆ ತಮ್ಮ ವಿಶ್ವಾಸಾರ್ಹತೆಯ ಬಗ್ಗೆಯೂ ಸಂಶಯ ಮೂಡಬಹುದು ಎಂದು ಅನುಮಾನಿಸಿದವು. ಪರಿಣಾಮವಾಗಿ ರಾಡಿಯಾ ರಾಡಿ ನೆಟಿಝನ್‌ಗಳಲ್ಲದ ಜನರನ್ನೂ ತಲುಪಿತು.

ಭಾರತದ ಮಟ್ಟಿಗೆ ಇದೊಂದು ದೊಡ್ಡ ಬೆಳವಣಿಗೆಯೇ ಸರಿ. ಇಂಟರ್ನೆಟ್ ಬಳಕೆ ಹೆಚ್ಚಿರುವ ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಸೇವಾ ಲೋಪವನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟಿಸುವ ಮಾದರಿಗಳಿವೆ. ಹಾಗೆಯೇ ಮರಗಳನ್ನು ಕಡಿಯುವುದು, ಪ್ರಾಣಿಗಳನ್ನು ಉಳಿಸುವುದು ಮುಂತಾದ ಅನೇಕ ಹೋರಾಟಗಳಿಗೂ ಈ ಮಾಧ್ಯಮ ಬಳಕೆಯಾಗುತ್ತಿದೆ. ಜಗತ್ತಿನ ಯಾವುದೋ ಮೂಲೆಗಳಲ್ಲಿ ಕುಳಿತಿರುವವರನ್ನು ಒಂದು ಉದ್ದೇಶಕ್ಕಾಗಿ ಒಂದುಗೂಡಿಸುವ ಕೆಲಸವನ್ನು ಈ ಸಾಮಾಜಿಕ ತಾಣಗಳು ಮಾಡುತ್ತವೆ.

ಸಾಂಪ್ರದಾಯಿಕ ಸುದ್ದಿಮೂಲಗಳ ಬುಡವನ್ನು ಅಲುಗಾಡಿಸುವಂತಹ ಸುದ್ದಿಯ ವಿಶ್ವಾಸಾರ್ಹತೆಯ ವಿಮರ್ಶೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಹೀಗೆ ಹತ್ತು ಹಲವು ಮುಖಗಳಲ್ಲಿ ಅಣುಬಾಂಬ್‌ನ ಸ್ಫೋಟದಲ್ಲಿ ಕಾಣುವ ವಿದಳನಾ ಕ್ರಿಯೆಯಂತೆ ಮುಂದುವರಿಯುತ್ತದೆ. ಒಬ್ಬ ವ್ಯಕ್ತಿ ತನ್ನ ಟ್ವಿಟರ್, ಬಜ್ ಅಥವಾ ಫೇಸ್‌ಬುಕ್‌ನಲ್ಲಿ ಬರೆದ ವಿಷಯ ಆತನ ಸಂದೇಶದ ಹಿಂಬಾಲಕರ ಕಂಪ್ಯೂಟರ್, ಮೊಬೈಲ್, ನೆಟ್ ಬುಕ್, ಲ್ಯಾಪ್ ಟಾಪ್ ಇತ್ಯಾದಿಗಳ ಪರದೆಯ ಮೇಲೆ ಬರುತ್ತಿದ್ದಂತೆಯೇ ಆ ವಿಷಯದ ಪರ ಅಥವಾ ವಿರೋಧಿ ಮಾತುಕತೆಗಳು ಸಂವಾದದ ರೂಪದಲ್ಲಿ ಇಂಟರ್ನೆಟ್‌ನ ಒಡಲು ತುಂಬುತ್ತಾ ಹೋಗುತ್ತವೆ.

ಒಮ್ಮೆ ಇಂಟರ್ನೆಟ್‌ನಲ್ಲಿ ಸುದ್ದಿಯೊಂದು ಮೂಡಿದರೆ ಅದನ್ನು ಏನೇ ಮಾಡಿದರೂ ಅಳಿಸಲಾಗದು. ಇನ್ನು ಜೇಬುತುಂಬಿಸಿ ಇತರರ ಬಾಯಿಮುಚ್ಚಿಸುವುದು ಸಾಧ್ಯವೇ ಇಲ್ಲವೆನ್ನಿ. ಒಂದೆಡೆ ನಡೆದ ಘಟನೆಗಳನ್ನು ತಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳಲ್ಲಿ ರೆಕಾರ್ಡ್ ಮಾಡಿ, ಫೋನಿನಲ್ಲೇ ಇರುವ ಇಂಟರ್ನೆಟ್ ಕನೆಕ್ಷನ್ ಬಳಸಿ ಕೆಲವೇ ನಿಮಿಷಗಳಲ್ಲಿ ಇತರರು ಧ್ವನಿ , ದೃಶ್ಯ ಅಥವಾ ಬ್ಲಾಗ್ ಲೇಖನಗಳ ಮುಖೇನ ಸ್ಪಂದಿಸುವಂತೆ ಮಾಡುವುದು ಇಂದು ಸುಲಭಸಾಧ್ಯ.

ಅರಳಿ ಕಟ್ಟೆಯಲ್ಲಿ ಕೂತು ಹರಟುವ ಹಾಗೂ ರಾಜ್ಯ ಹಾಗೂ ದೇಶದ ಸುದ್ದಿಗಳ ಬಗ್ಗೆ ವಿಚಾರವಿನಿಮಯ ಮಾಡಿಕೊಂಡು ಅದಕ್ಕೆ ನಮ್ಮದೇನಾದರೂ ಕಾಣಿಕೆ ಕೊಡಲಿಕ್ಕೆ ಸಾಧ್ಯವೇ ಎಂದು ಯೋಚಿಸಿ, ಪತ್ರವ್ಯವಹಾರ ಮುಖೇನ ವ್ಯವಹರಿಸಿ ವರ್ಷಗಟ್ಟಲೆ ಕಾದು ಕೂರುವ ದಿನಗಳಲ್ಲಿ ಈಗ ನಾವಿಲ್ಲ. ಹಳ್ಳಿಗನೂ ಇಂದು ವಿಶ್ವದ ಇನ್ಯಾವುದೋ ಮೂಲೆಯ ವಿಜ್ಞಾನಿಯ ನೆರವನ್ನು ಪಡೆದು ತನ್ನ ಉತ್ಪತ್ತಿಯನ್ನು ಹೆಚ್ಚಿಸಿಕೊಳ್ಳುವ ಕಾಲವಿದು.

ಅದಕ್ಕವನು ಸ್ಥಿರ ದೂರವಾಣಿಯ ಗೋಜಿಗೂ ಹೋಗುವಂತಿಲ್ಲ. ತನ್ನ ಕಿಸೆಯಲ್ಲಿನ ಮೊಬೈಲ್ ತೆರೆದು ಇಂಟರ್ನೆಟ್ ಮೂಲಕ ತನ್ನ ‘ಅಂತರ ರಾಷ್ಟ್ರೀಯ’ ಗೆಳೆಯರ ಸಂಗ ಬೆಳೆಸಬಹುದು. ಸರಿ ತಪ್ಪುಗಳನ್ನು ಗ್ರಹಿಸಿ ತನ್ನ ದೇಶವನ್ನಾಳುವ ಜವಾಬ್ದಾರಿ ಹೊತ್ತ ನಾಯಕನನ್ನೂ ಎಚ್ಚರಿಸಬಹುದು. ತನಗೆ ಹಕ್ಕಿನಿಂದ ದೊರೆಯಬೇಕಿದ್ದ ಸುದ್ದಿ ತನ್ನೆಡೆಗೆ ತರದಿದ್ದಲ್ಲಿ ಮಾಧ್ಯಮವನ್ನೂ ತರಾಟೆಗೆ ತೆಗೆದುಕೊಳ್ಳಬಹುದು.

ಸೋಷಿಯಲ್ ಮೀಡಿಯಾ ಜನರ ನಿತ್ಯದ ನಿಯತ ಹವ್ಯಾಸವಾಗಿ ಬೆಳೆಯುತ್ತಿದೆ. ಅದಕ್ಕೆ ಸಾಂಪ್ರದಾಯಿಕ ಮಾಧ್ಯಮಗಳ ಸುದ್ದಿ ಹರಿವಿನಷ್ಟು ಪ್ರಭಾವ ಬೀರಲು ಇನ್ನೂ ಅದಕ್ಕೆ ತಂತ್ರಜ್ಞಾನದ ಪ್ರಸರಣೆಯ ದೃಷ್ಟಿಯಿಂದ ಸಾಧ್ಯವಾಗದೇ ಇದ್ದರೂ, ವಿದ್ಯಾವಂತರ ನಡುವೆ ಬಹಳಷ್ಟು ಬಳಕೆಯಲ್ಲಿದೆ. ಮುಖ್ಯವಾಹಿನಿ ಮಾಧ್ಯಮಗಳಿಗೆ ಸೋಷಿಯಲ್ ಮೀಡಿಯಾ ಸುದ್ದಿ ಸಂಗ್ರಹ, ವಿನಿಮಯಕ್ಕೆ ಎಷ್ಟೇ ಸಹಾಯ ಮಾಡುವುದರ ಜೊತೆಗೆ ಅವು ತಪ್ಪು ಮಾಡಿದಾಗ ಅವುಗಳನ್ನು ಎಚ್ಚರಿಸಲು, ತಪ್ಪನ್ನು ಎತ್ತಿತೋರಿಸಲು, ಈ ಕುರಿತಂತೆ ಅಭಿಪ್ರಾಯ ರೂಪಿಸಲೂ ಇದೇ ತಂತ್ರಜ್ಞಾನ ಬಳಕೆಯಾಗುತ್ತದೆ. ರಾಡಿಯಾ ಟೇಪ್ ಪ್ರಕರಣದಲ್ಲಿ ಭಾರತೀಯ ಮಾಧ್ಯಮಗಳು ಸೋಷಿಯಲ್ ಮೀಡಿಯಾದಿಂಂದ ಪಾಠ ಕಲಿತಿವೆ. ಅನೇಕ ಬಳಕೆದಾರರ ಸಂಘಟನೆಗಳು ಭಾರೀ ಉದ್ಯಮಗಳಿಗೆ ಇದೇ ತಂತ್ರದ ಮೂಲಕ ಪಾಠ ಕಲಿಸಿವೆ. ಮುಂದಿನ ದಿನಗಳಲ್ಲಿ ಈ ಸಾಧ್ಯತೆಯ ಇನ್ನಷ್ಟು ಮುಖಗಳು ಅನಾವರಣಗೊಳ್ಳಬಹುದು.