ಚುನಾಯಿತರಾಗಲು ಅನುಯಾಯಿಗಳ
ಕಾಲನಿಡುಯುವ ಕಾಲ
ಅಜ್ಜ ಅಜ್ಜಿಯರಿರಲಿ, ದೊಡ್ಡವರೂ, ಯುವಕ, ಯುವತಿಯರೂ
ಅದೆಲ್ಲ ಬಿಡಿ, ಬಿಟ್ಟಿಲ್ಲ ನಮ್ಮ ಚಿಕ್ಕ ಪುಟ್ಟ ಕಂದಮ್ಮಗಳನ್ನೂ

ಓಟು ಕೊಡಿ.. ಎತ್ತರಿಸಿದ ದನಿಯಲ್ಲಿ ಕೂಗುತ್ತಿರುವ
ಆ ಮೈಕಿನ ಧ್ವನಿಗೆ ಎದೆ ಝಲ್ ಎಂದಿತ್ತು
ಕೂಗುತ್ತಿದ್ದವರಾರು? ಏನಾಯಿತು ಎನ್ನುವುದರಲ್ಲೇ
ತಿಳಿದದ್ದು, ಅದು ಮಗುವೊಂದರ ಮಾತೆಂದು

ಕೊಡುತ್ತಿದ್ದಾರೆ ಸೀರೆ, ಕಾಸು, ಬಾಟಲಿಗಳ
ಇದೆಲ್ಲಾ ಖಾಸ್ ಬಾತ್.. ಹೊರಗೆ ತಿಳಿದರದು
ಮಿಡಿಯಾದ ಕರಾಮತ್ತು… ಆದರೂ ನೆಡೆಯುತ್ತಿದೆ
ಚೌಕಾಸಿ ಗತ್ತಿನಿಂದಲೇ ನಡುರಸ್ತೆಯಲ್ಲಿ

ಚುನಾಯಿಸ ಬೇಕಿದೆ ಓದಿ ತಿಳಿದ, ತಲೆಯಿರುವ
ನಾಯಕನ… ಪಕ್ಷದ್ದಿರಲಿ ಸಿಕ್ಕರೆ ಸಾಕಾಗಿದೆ ಅವನ
ಅಟೆಸ್ಟ್ ಮಾಡಿದ ಗುರುತು ಪರಿಚಯ, ನಂತರ
ನಾಡ ಕಟ್ಟಲಿಕ್ಕಿರುವ ಯೋಜನೆಗಳ ಸವಿವರ

ನಾವು ಕಟ್ಟುತ್ತೇವೆ, ನಾವು ಕೆಡವುತ್ತೇವೆ
ನಾವು ಏನು ಮಾಡುತ್ತೇವೆಯೋ ಕಣ್ಮುಚ್ಚಿ ನೋಡಿ
ನೀವೇ ನಾವು.. ಸಧ್ಯ ನಮಗೆ ಓಟು ಕೊಡಿ
ಹಿಂದಿನದೆಲ್ಲವ ಮರೆತು ಮುಂದಿನದನ್ನು ಚಿಂತಿಸದೆ – ಕಿವಿ ಮಾತು

ಪ್ರತಿವರ್ಷದ ಚುನಾವಣಾ ಪ್ರಣಾಳಿಕೆಗಳನ್ನು
ನೋಡಿ ನೋಡಿ, ಓದಿ ನಾನೇ ಒಂದು ಬರೆಯಬಲ್ಲೆ
ಎಂದೆನಿಸಿದಾಗ ನನ್ನ ತಲೆಯಲ್ಲೊಳೆಯುತ್ತಿದೆ ಒಂದು
‘ಟ್ಯೂಬ್ ಲೈಟ್’ – ನಾನೇ ಏಕೆ ಸ್ವರ್ಧಿಸ ಬಾರದು

ಠೇವಣಿಯ ಭಯವಿಲ್ಲ… ನಾವು ಬದಲಾಗಬೇಕು,
ಬದಲಾವಣೆಯು ಸಾಧ್ಯ ಎಂದು ಬಾರಾಕ್ ಹೇಳಿದನೆಂದು
ಇಲ್ಲೂ ಬದಲಾವಣೆಯ ತರುವ ಬಯಕೆಯಲ್ಲ
ನಾವೇಕೆ ಒಂದು ಹೆಜ್ಜೆ ಮುಂದುವರೆಯ ಬಾರದು -ತಡೆಯಾದರೂ ಏನು

ಇರಲಿ, ಸಧ್ಯದ ಪರಿಸ್ಥಿತಿಗೆ, ಲಾಯಕ್ಕಾದ
ಸ್ವಲ್ಪವಾದರೂ ಛಲೋ ಅನ್ನಿಕ್ಕೆ ಸಾಧ್ಯನಾದ
ಯೋಗ್ಯನನ್ನ ಆರಿಸಿ, ಗೆಲ್ಲಿಸಿ ಗದ್ದುಗೆಗೆ ತಳ್ಳ ಬೇಕಿದೆ
ಓಟ್ ಹಾಕಿ, ಮತ್ತೆ ಮರೆಯದೆ ಪ್ರಶ್ನೆ ಹಾಕಿ.. ಎಚ್ಚರಿಸುತ್ತಿರಿ!

ಮರೆಯ ಬೇಡಿ ಮತದಾರರೆ, ಮತ ಪಡೆದವರನ್ನು
ಗೆಲ್ಲಿಸಿಕೊಂಡು ಬೃಹತ್ ಪಾಲಿಕೆಯಲ್ಲಿ ಬಾರಿ ಮೇಜೋವಾನಿ
ಮಾಡ್ದಾಂಗ್ ನೋಡ್ಕೊಳ್ಲಿಕ್ಕೆ ಬೇಕು ನಿಮ್ಮ ಜಾಗೃತಿ.
ಚುನಾವಣೆಯ ಮೊದಲು, ನಂತರ ಹಾಗೂ ಆನಂತರವೂ – ಜಾಗೃತರಾಗಿರಿ