– ವಿಚಾರ ಮಂಡನೆ – ಮಾತೃಭಾಷಾ – ತಂತ್ರಜ್ಞಾನದಲ್ಲಿ ಕನ್ನಡ 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಜುಲೈ, ೨೦೧೬ರ ಶನಿವಾರ ಸೆಂಟ್ರಲ್ ಕಾಲೇಜು ಆವರಣದ ‘ಸೆನೆಟ್ ಸಭಾಂಗಣದಲ್ಲಿ’ ಆಯೋಜಿಸಿದ್ದ “ಮಾತೃಭಾಷಾ” ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ನಾನು “ತಂತ್ರಜ್ಞಾನದಲ್ಲಿ ಕನ್ನಡ” ಎನ್ನುವ ವಿಚಾರವಾಗಿ ವಿಷಯವನ್ನು ಮಂಡಿಸಿದ್ದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಎಚ್. ಎಸ್. ರಾಘವೇಂದ್ರರಾವ್ ವಹಿಸಿಕೊಂಡಿದರು.

ನನ್ನ ವಿಚಾರ ಮಂಡನೆಯ ಮುಖ್ಯ ವಿಷಯಗಳನ್ನು ದಾಖಲಿಸುವ ಪ್ರಯತ್ನ ಈ ಬ್ಲಾಗ್ :- 

  • ಪ್ರಾಥಮಿಕ ಬಳಕೆಗೆ ಬೇಕಿರುವ ತಂತ್ರಾಂಶಗಳು ಕನ್ನಡಕ್ಕೆ ಲಭ್ಯವಿವೆ. ಕೀಬೋರ್ಡ್ ಇತ್ಯಾದಿ – ಇದರಿಂದಾಗಿ ಕನ್ನಡವನ್ನು ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಲ್ಲಿ ಬಳಸಲು (ಓದಲು/ಬರೆಯಲು) ಸಾಧ್ಯವಿದೆ.  
  • ಸರ್ಕಾರ ಮತ್ತು ಸಂಬಂಧಿತ ಸರ್ಕಾರೀ ಸಂಸ್ಥೆಗಳು ಹಾಗೂ ಪ್ರಾಧಿಕಾರ ತಂತ್ರಾಂಶಗಳ ಅಭಿವೃದ್ಧಿಯ ಕಡೆ ಗಮನ ಹರಿಸುವ ಬದಲು – ಭಾಷಾ ತಂತ್ರಜ್ಞಾನದ ಸಂಶೋಧನೆ, ಅದಕ್ಕೆ ಅವಶ್ಯವಿರುವ ನೀತಿ/ನಿಯಮಗಳನ್ನು, ಶಿಷ್ಟತೆಗಳನ್ನು (‌Standards), ‍ ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳೊಂದಿಗಿನ ಸಹಯೋಗಗಳತ್ತ ಗಮನ ಹರಿಸಬೇಕಿದೆ. ಇದರಿಂದ ಇನ್ನೂ ಕಗ್ಗಂಟಿನ ಗೂಡಾಗಿರುವ ತಂತ್ರಜ್ಞಾನ/ತಂತ್ರಾಂಶಗಳಲ್ಲಿನ ಭಾಷಾ ಬೆಂಬಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಉದಾ: ಆಡೋಬ್ ಕಂಪೆನಿಯ ಫೋಟೋಶಾಪ್ ಇತ್ಯಾದಿಗಳಲ್ಲಿ ಇಂದಿಗೂ ಕನ್ನಡ ಟೈಪಿಸಲು ಸಾಧ್ಯವಿಲ್ಲ. ಮೈಕ್ರೋಸಾಫ್ಟ್ ಇಂದಿಗೂ ಕನ್ನಡದ ಕಗಪ ಕೀಬೋರ್ಡ್ ನೊಂದಿಗೆ ಲಭ್ಯವಿಲ್ಲ. ಇತ್ಯಾದಿ.
  • ಭಾಷಾ ತಂತ್ರಜ್ಞಾನ ಕೇವಲ ಅನ್ವಯಗಳ, ಜಾಲತಾಣಗಳ ಅಭಿವೃದ್ಧಿಯಲ್ಲ. ಕನ್ನಡ ಭಾಷಾ ಪಂಡಿತರು, ಗಣಕ ತಂತ್ರಜ್ಞರು, ಜನ ಸಾಮಾನ್ಯರು, ಇತರೆ ಕ್ಷೇತ್ರಗಳ ಪರಿಣಿತರೂ ಸಹ ಒಟ್ಟಿಗೆ ಸೇರಿ ಭಾಷೆಯ ಬಳಕೆ, ಬೆಳವಣಿಗೆ ಇತ್ಯಾದಿಗಳಿಗೆ ಬೇಕಿರುವ ತಂತ್ರಜ್ಞಾನ, ತಂತ್ರಾಂಶದ ರೂಪುರೇಷೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಬೇಕಾದ ಅಂಶವಾಗಿದೆ. 
  •  ಎನ್. ಎಲ್. ಪಿ (ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್) ಕೇವಲ ಪಿ.ಎಚ್.ಡಿ ವಿಷಯವಾಗದೆ, ಸಂಶೋಧನೆ ನಿಜ ಜೀವನದ ಕನ್ನಡ ಬಳಕೆಗೆ ಲಭ್ಯವಾಗುವಂತಾಗಬೇಕು.
  • ಗ್ರಾಮರ್ ಚೆಕ್/ ವರ್ಡ್ ಚೆಕ್/ ಸ್ಪೆಲ್ ಚೆಕ್/ವರ್ಡ್ ಪ್ರೆಡಿಕ್ಷನ್ – ನುಡಿ/ಪದ ಜಾಣ ತಂತ್ರಾಂಶಗಳು ಎಲ್ಲ ಸಾಧನಗಳಲ್ಲೂ, ಆಪರೇಟಿಂಗ್ ಸಿಸ್ಟಂಗಳಿಗೂ ಲಭ್ಯವಾಗುವಂತಾಗಬೇಕು. 
  • ಓ.ಸಿ.ಆರ್ ನ ಸಧ್ಯದ ಸ್ಥಿತಿ ಮತ್ತು ಗೂಗಲ್ ಜಗತ್ತಿನ ಅನೇಕ ಭಾಷೆಗಳಿಗೆ ತನ್ನ ಓ.ಸಿ.‌ಆರ್ ತೆರೆದಿಟ್ಟಿರುವ ಹಿಂದಿನ ಗುಟ್ಟು ಅದರಿಂದ ಗೂಗಲ್‌ಗೆ ಆಗಬಹುದಾದ ಲಾಭ ಇತ್ಯಾದಿಗಳನ್ನು ತಿಳಿಸಲಾಯ್ತು. ನಮ್ಮಲ್ಲೇ ತಯಾರಾದ ಓ.ಸಿ.‌ಆರ್‌ಗಳ ಗತಿ ಮತ್ತು ಮುಂದೆ ಕನ್ನಡಕ್ಕೆ ಇದರಿಂದ ಆಗಬೇಕಿರುವ ಕೆಲಸವನ್ನೂ ವಿವರಿಸಲಾಯ್ತು. ಸಾಮಾನ್ಯನೂ ತನ್ನ ಮೊಬೈಲ್ ಇತ್ಯಾದಿಗಳನ್ನು ಬಳಸಿ ಓ.ಸಿ.‌ಆರ್ ಮೂಲಕ ಮಾಹಿತಿಯನ್ನು ತನಗೆ ಅವಶ್ಯವಿರುವಂತೆ ಬಳಸಿಕೊಳ್ಳುವ ಮುಕ್ತ ಅನುಭವವನ್ನು ಕೊಡುವ ಬಗ್ಗೆಯೂ ತಿಳಿಸಲಾಯ್ತು. 
  • ಖಾಸಗೀ ಕಂಪನಿಗಳು, ವೃತ್ತಪತ್ರಿಕೆಗಳು ಇತ್ಯಾದಿ ಗ್ರಾಹಕರನ್ನು ಸೆಳೆಯಲು, ತಂತ್ರಜ್ಞಾನವನ್ನು ಯುನಿಕೋಡ್ ಬಳಸಲು ಪ್ರಾರಂಭಿಸಿ ದಶಕಕ್ಕಿಂತ ಹೆಚ್ಚು ಸಮಯ ಆಗಿದ್ದಲ್ಲೂ ಸರ್ಕಾರಿ ಅಂಗ ಸಂಸ್ಥೆಗಳು ಇದರಲ್ಲಿ ಎಡವಿರುವುದನ್ನು ಮತ್ತೆ ವಿವರಿಸಲಾಯ್ತು. 
  • ‍ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು ಕನ್ನಡಕ್ಕೆ ನೀಡುತ್ತಿರುವ ಸವಲತ್ತುಗಳನ್ನು, ‌Mozilla Firefox, Libre Office, Ubuntu ಇತ್ಯಾದಿಗಳು ಸಮುದಾಯದ ಕೆಲಸದಿಂದಾಗಿ ಕನ್ನಡದಲ್ಲೂ ಲಭ್ಯವಿರುವುದನ್ನು, ಅವುಗಳನ್ನು 
  • ಕನ್ನಡ ವಿಕಿಪೀಡಿಯದಂತಹ ಮುಕ್ತ ಜ್ಞಾನ ಯೋಜನೆಗಳ ಬಗ್ಗೆಯೂ ತಿಳಿಸಲಾಯ್ತು. 
  • ಮುಖ್ಯವಾಹಿನಿಯಲ್ಲಿ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳಿಗೆ ಪ್ರಚುರಪಡಿಸುತ್ತಿರುವ ಕೆಲವು ಲಾಭರಹಿತ ಸಂಸ್ಥೆಗಳ ಮಾಹಿತಿಯನ್ನೂ ಹಂಚಿಕೊಳ್ಳಲಾಯ್ತು. 
  • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಸಮುದಾಯ ಹಾಗೂ ಅದರ ತತ್ವಗಳನ್ನೇ ಬಳಸಿ ಕನ್ನಡಕ್ಕೆ ಸಾಧ್ಯವಾಗಿಸಿರುವ ಸಾಹಿತ್ಯ ಅಧ್ಯಯನ ವೇದಿಕೆ ಕನ್ನಡ ಸಂಚಯ ಮತ್ತು ಅದರ ಇತರೆ ಯೋಜನೆಗಳಾದ ವಚನ ಸಂಚಯ, ದಾಸ ಸಂಚಯ, ಸಮೂಹ ಸಂಚಯ, ಪುಸ್ತಕ ಸಂಚಯ ಇತ್ಯಾದಿಗಳ ಬಗ್ಗೆ ತಿಳಿಸಲಾಯ್ತು. 
  • ಕನ್ನಡದಲ್ಲಿ ಗೂಗಲ್ ಹಾಗೂ ಓಪನ್ ಸ್ಟ್ರೀಟ್ ಮ್ಯಾಪ್‌ಗಳ ಲಭ್ಯತೆ ಅದನ್ನು ಜನರು ದಿನನಿತ್ಯ ಹೇಗೆ ಬಳಸುತ್ತಿದ್ದಾರೆ ಎಂದು ವಿವರಿಸಲಾಯ್ತು. 
  • ಸರ್ಕಾರೀ ಸಂಸ್ಥೆಗಳೇ ತಂತ್ರಾಂಶ ಅಭಿವೃದ್ಧಿಗೆ ಇಳಿದಾಗ ಆಗಬಹುದಾದ ತೊಂದರೆಗಳನ್ನು, ಅದನ್ನು ನಿವಾರಿಸಲು ಅಥವಾ ಉತ್ತಮಗೊಳಿಸಲು ಸಾಧ್ಯವಾಗದೇ ಇರಬಹುದಾದ ಸಂದರ್ಭಗಳನ್ನು ವಿವರಿಸಲಾಯ್ತು. ಐ.ಐ.ಎಸ್.ಸಿ, ಓಸ್ಮಾನಿಯ ಯುನಿವರ್ಸಿಟಿಯ ಡಿಜಿಟಲ್ ಲೈಬ್ರರಿಗಳ ಮೆಟಾಡೇಟಾ ಸ್ಥಿತಿಗತಿ ಹಾಗೂ ಅದರ ತೊಂದರೆ ನಿವಾರಿಸಿ ಕನ್ನಡ ಪುಸ್ತಕಗಳನ್ನು ಹುಡುಕಲು ಸಂಚಯದ ಮೂಲಕ ಸೃಷ್ಟಿಸಿದ ಕ್ರೌಡ್ ಸೋರ್ಸಿಂಗ್ ಯೋಜನೆಯ ಫಲಿತಾಂಶವನ್ನು ಎಲ್ಲರ ಮುಂದಿಡಲಾಯ್ತು. 
  • ಡಿ.ಟಿ.ಪಿ ಇತ್ಯಾದಿ ಕ್ಷೇತ್ರಗಳಿಗೆ ಬೇಕಿರುವ ಕನ್ನಡದ ಸವಲತ್ತುಗಳನ್ನು ಒದಗಿಸಿಕೊಡುವುದರಿಂದ ಹೆಚ್ಚಾಗಬಹುದಾದ ಉದ್ಯೋಗಗಳ ಬಗ್ಗೆಯೂ ಗಮನ ಸೆಳೆಯಲಾಯ್ತು. ಸಾಫ್ಟ್‌ವೇರ್ ಪೈರಸಿಯನ್ನು ತಡೆಯುವ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಲಾಯ್ತು.
  • ಸರ್ಕಾರ/ಅಂಗಸಂಸ್ಥೆಗಳು ಮಾಡಬೇಕಾದ ಕೆಲಸವನ್ನು ಮತ್ತೆ ಈ ರೀತಿ ಪಟ್ಟಿ ಮಾಡಲಾಯ್ತು:
    • ಭಾಷಾ ತಂತ್ರಜ್ಞಾನಕ್ಕೆ ಅವಶ್ಯವಿರುವ – ನೀತಿ, ನಿಯಮಗಳು, ಶಿಷ್ಠತೆಗಳು , ಬಳಕೆಯ ಮಾನದಂಡಗಳು, ಫಾಂಟ್, ಫಾಂಟ್ ಶೇಪ್ ಇತ್ಯಾದಿಗಳನ್ನು ಮುಕ್ತವಾಗಿ ಲಭ್ಯವಾಗಿಸುವುದು.
    • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದತ್ತ ಒಲವು ತೋರಿಸಿ, ಕೋಟಿಗಟ್ಟಲೆ ಹಣವನ್ನು ಖಾಸಗೀ ತಂತ್ರಾಂಶಗಳತ್ತ ಸುರಿಯುವುದನ್ನು ತಡೆದು, ತನ್ನಲೇ ಭಾಷಾ ತಂತ್ರಜ್ಞಾನ ಬೆಳವಣಿಗೆಗೆ ಬೇಕಿರುವ ಸಂಪತ್ತನ್ನು ಒಗ್ಗೂಡಿಸಿಕೊಳ್ಳುವುದು.
    • ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳಿಗೆ ಬೆಂಬಲ ನೀಡಿ ಅವುಗಳೊಂದಿಗೆ ಕೆಲಸ ಮಾಡುವುದು. – ಇದರಿಂದ ತಂತ್ರಜ್ಞಾನ ಬೆಳವಣಿಗೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದಂತಾಗುತ್ತದೆ. 
    • ಪಾರಿಭಾಷಿಕ ಪದಕೋಶ ಇತ್ಯಾದಿಗಳನ್ನು ಸೃಷ್ಟಿಸುವುದು. ಇದಕೆ ‌Fuel Project ನಂತಹ ಈಗಾಗಲೇ ಇರುವ ಶಿಷ್ಠತೆಗಳನ್ನು ಬಳಸಿಕೊಳ್ಳುವುದು.
    • Unicode consortium, ISBN, ISO, W3C ಇತ್ಯಾದಿ ಒಕ್ಕೂಟ/ಸಂಸ್ಥೆಗಳಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಖಾತ್ರಿಪಡಿಸಿಕೊಂಡು, ಕನ್ನಡಕ್ಕೆ ಅವಶ್ಯವಿರುವ ಶಿಷ್ಠತೆಗಳನ್ನು ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಮಾಡುವುದು.
    •  G‌TLD‌ – ಕನ್ನಡದ ಡೊಮೇನ್ ಹೆಸರುಗಳು ಲಭ್ಯವಾಗುವಂತೆ ಮಾಡಬೇಕಿರುವ ಪ್ರಕ್ರಿಯೆಗೆ ವೇಗ ದೊರೆಯುವಂತೆ ಮಾಡುವುದು.
    • ಮಾತೃಭಾಷೆಯ ಕಲಿಕೆಗೆ ತಂತ್ರಜ್ಞಾನಗಳನ್ನು ರೂಪಿಸಲು ತಂತ್ರಜ್ಞ ಹಾಗೂ ಭಾಷಾ ತಂತ್ರಜ್ಞರನ್ನು ಒಟ್ಟುಗೂಡಿಸುವುದು.
    • ಇಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಭಾಷಾ ತಂತ್ರಜ್ಞಾನಕ್ಕೆ ಪ್ರಾಯೋಗಿಕ ಸ್ಪರ್ಶ ನೀಡುವುದು. 
    • ಕನ್ನಡ ತಂತ್ರಜ್ಞಾನ ಅಭಿವೃದ್ಧಿಗೆ ರಿಸೋರ್ಸ್ ಸೆಂಟರ್/ಟೆಕ್ನಿಕಲ್ ಟಾಸ್ಕ್‌ಫೋರ್ಸ್ ರಚಿಸಿ ಪ್ರಾಯೋಗಿಕ ಕೆಲಸಗಳಲ್ಲಿ ಯಶಸ್ಸು ಸಾಧಿಸುವುದು.
    • ಕನ್ನಡ ಪುಸ್ತಕಗಳಿಗೆ ಕಡ್ಡಾಯ ಐ.ಎಸ್.ಬಿ.ಎನ್. ನಂಬರ್ ಸಿಗುವಂತೆ ನೋಡಿಕೊಳ್ಳುವುದು.
    • ಕನ್ನಡ ಪುಸ್ತಕಗಳ ಪರಿವಿಡಿ ಇಂಟರ್ನೆಟ್‌ನಲ್ಲಿ ಲಭ್ಯವಿರುವಂತೆ ಸಾಹಿತ್ಯ ಪರಿಷತ್, ಪುಸ್ತಕ ಪ್ರಾಧಿಕಾರ ಮತ್ತಿತರ ಸಂಸ್ಥೆಗಳ ಮೂಲಕ ನೋಡಿಕೊಳ್ಳುವುದು. 

ಒಟ್ತಿನಲ್ಲಿ ಜನಸಾಮಾನ್ಯರ ಮಧ್ಯೆ ಭಾಷಾ ತಂತ್ರಜ್ಞಾನದ ಬೆಳವಣಿಗೆ ಆಗಬೇಕು ಇದಕ್ಕೆ ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುವ ಅವಶ್ಯಕತೆಯನ್ನು ಉದಾಹರಣೆಗಳ ಮೂಲಕ ನೀಡಲಾಯ್ತು.