ತಿಳಿಯದಿರುವುದು ಏನಿದೆ? ಜಗತ್ತೇ ಕನ್ನಡದಲ್ಲಿ ವ್ಯವಹರಿಸುತ್ತಿದೆ…

ಲೇಖನದ ಈ ಮೇಲಿನ ಸಾಲುಗಳನ್ನು ನೀವು ನಿಮ್ಮ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನುಗಳು, ಟ್ಯಾಬ್ಲೆಟ್ ಪಿ.ಸಿ‌ಗಳ ಮೂಲಕ ಓದಲು ಸಾಧ್ಯವಾಗುತ್ತಿದೆ ಎಂದರೆ ನಾನು ನನ್ನ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸಿ ಬರೆಯುತ್ತಿರುವ ಕನ್ನಡದ ಈ ಲೇಖನವನ್ನು ನಿಮ್ಮಂತೆಯೇ ಯಾರು ಬೇಕಾದರೂ, ವಿಶ್ವದ ಯಾವುದೇ ಮೂಲೆ ಇಂದ, ಯಾವುದೇ ಗಣಕಯಂತ್ರವನ್ನು ಬಳಸಿ ಓದಲು ಸಾಧ್ಯವಿದೆ ಎಂದರ್ಥ ಅಲ್ಲವೇ?

ಒಮ್ಮೆ ಕರ್ನಾಟಕ ಸರ್ಕಾರದ ಕೆಲವು ವೆಬ್‌ಸೈಟ್‌ಗಳನ್ನು ತೆರೆದು ನೋಡಿ. ಉದಾ: ಕನ್ನಡ ಸಂಸ್ಕೃತಿ ಇಲಾಖೆಯ ಈ ಒಂದು ಪುಟ http://samskruthi.kar.nic.in/Homepage/Kale-Samskruthi/Kale-Samskruthi.htm . ನನ್ನ ಕಂಪ್ಯೂಟರಿನಲ್ಲಿ ಇದು ಈ ಕೆಳಕಂಡಂತೆ ಕಾಣುತ್ತದೆ.

ನಿಮ್ಮ ಕಂಪ್ಯೂಟರಿನಲ್ಲೂ ಜಾಲತಾಣ ಚಿತ್ರದಲ್ಲಿರುವಂತೆಯೇ ಕಂಡಿತೆ? ಇಲ್ಲವಾದಲ್ಲಿ ನೀವು ಕನ್ನಡ ಗಣಕ ಪರಿಷತ್ತಿನ ನುಡಿ ತಂತ್ರಾಂಶ ಬಳಸುತ್ತಿದ್ದು, ಅದರ ಜೊತೆಗೆ ಬರುವ ನುಡಿ ಫಾಂಟುಗಳು ನಿಮ್ಮ ಗಣಕದಲ್ಲಿ ಸ್ಥಾಪಿತವಾಗಿದ್ದಲ್ಲಿ, ಮೇಲಿನ ಜಾಲತಾಣದ ಕೊಂಡಿ ತೆರೆದಾಗ ಚಿತ್ರದಲ್ಲಿ ತೋರುವ ಅರ್ಥವಾಗದ ಭಾಷೆ ನಿಮ್ಮ ಪರದೆಯಲ್ಲಿ ಕನ್ನಡವಾಗಿ ಕಂಡಿರಬಹುದು.

ಈ ಮೇಲಿನ ಸಾಲುಗಳಲ್ಲಿ ಕನ್ನಡ ಕಂಪ್ಯೂಟರಿನಲ್ಲಿ ಮೂಡಲು ಸಾಧ್ಯವಾಗುತ್ತಿದ್ದ ಕಾಲಕ್ಕೂ, ಸುಲಭ ಸಾಧ್ಯವಾಗಿರುವ ಕಾಲಕ್ಕೂ ಇರುವ ಬದಲಾವಣೆಗಳನ್ನು ನಿಮಗೆ ಅರಿವಾಗುವಂತೆ ಮಾಡಲು ಸಾಧ್ಯವಾಗಿದೆ. ಇದೇಕೆ ಹೀಗೆ? ಇಲ್ಲಿ ಏನಾಗುತ್ತಿದೆ? ಎಂದು ಅರಿಯಲು ನಾವು ಕಂಪ್ಯೂಟರಿನ ಕೆಲವು ಶಿಷ್ಟತೆಗಳ (Standards) ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ.

ಕಂಪ್ಯೂಟರಿನ ಪರದೆಯ ಮೇಲೆ ಅಕ್ಷರಗಳು ಮೂಡುವುದಾದರೂ ಹೇಗೆ? ಇದಕ್ಕೆ ಉತ್ತರ ಆರಂಭಿಕ ದಿನಗಳಲ್ಲಿ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಓದುವಾಗ ಸ್ವಲ್ಪ ಸ್ವಲ್ಪವಾಗಿ ನೀವು ತಿಳಿದುಕೊಂಡಿರಬಹುದು. ಇಂಗ್ಲೀಷ್ ಅಕ್ಷರ ಮಾಲೆಯ ಮೂಲಕ ಸಂದೇಶಗಳನ್ನು ನೀಡಿದಾಗ, ಅದನ್ನು ಮೊದಲು ಕಂಪ್ಯೂಟರಿನ ಯಂತ್ರಾಂಶ(ಹಾರ್ಡ್‌ವೇರ್) ಅರ್ಥ ಮಾಡಿಕೊಳ್ಳುವ ದ್ವಿಮಾನ ಪದ್ದತಿ(Binary Format) ನ ಅಂಕಿಗಳಾದ (ಬೈನರಿ ಡಿಜಿಟ್‌) ‘೦’ ಮತ್ತು ‘೧’ ಕ್ಕೆ ಪರಿವರ್ತಿಸಲಾಗುವುದು. ಕಂಪ್ಯೂಟರ್‌ಗೆ ಇಂಗ್ಲೀಷ್ ವರ್ಣಮಾಲೆ ನೇರವಾಗಿ ಅರ್ಥವಾಗುವುದಿಲ್ಲ ಎಂದು ಈ ಮೂಲಕ ತಿಳಿಯುತ್ತದೆ. ಆದ್ದರಿಂದ ಕಂಪ್ಯೂಟರ್ ಮನುಷ್ಯನಂತೆ ತಾನೂ ಕೂಡ ಪ್ರತಿಯೊಂದೂ ಅಕ್ಷರ, ಸಂಖ್ಯೆ, ಚಿನ್ಹೆ ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಲು “Character Encoding” (http://en.wikipedia.org/wiki/Character_encoding) ಎಂಬ ವ್ಯವಸ್ಥೆಯನ್ನು ಬಳಸಲಾಯ್ತು. ಮೂರ್ಸ್ ಕೋಡ್, ಆಸ್ಕಿ ಕೋಡ್ ಯುನಿಕೋಡ್ ಇತ್ಯಾದಿಗಳು ಕ್ಯಾರಕ್ಟರ್ ಎನ್ಕೋಡಿಂಗ್‌ನದ್ದೇ ವ್ಯವಸ್ಥೆಗಳಾಗಿದ್ದು, ವಿದ್ಯುನ್ಮಾನ ಸಂವಹನಕ್ಕೆ ಕಾಲಕಾಲಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಂಡು ಬರುತ್ತಿರುವ ಶಿಷ್ಟತೆಗಳಾಗಿ ರೂಪಿತಗೊಂಡಿವೆ. ಯಾವುದೇ ಅಕ್ಷರ/ಪದ ಡಿಜಿಟಲ್/ವಿದ್ಯುನ್ಮಾನ ರೂಪದಲ್ಲಿ ಹೇಗಿರಬೇಕು ಎಂಬುದನ್ನು ಇವು ನಿರ್ಧರಿಸುತ್ತವೆ.

ASCII (American Standards Code for Information Interchange) (https://en.wikipedia.org/wiki/ASCII) ಎಂಬ ಶಿಷ್ಟತೆಯನ್ನು ಬಳಸಿ, ಇಂಗ್ಲೀಷ್ ವರ್ಣಮಾಲೆಯನ್ನು ಕಂಪ್ಯೂಟರಿನ ಸಂಕೇತಗಳನ್ನಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಇದನ್ನು ಮತ್ತೆ ನಿಮ್ಮ ಕಂಪ್ಯೂಟರಿನ ಪರದೆಯ ಮುಂದೆ ಬರುವಂತೆ ಮಾಡಲು ಕಂಪ್ಯೂಟರ್‌ಗೆ ಔಟ್‌ಪುಟ್ ಅಥವಾ ಫಲಿತಾಂಶ ನೀಡು ಎಂಬ ಆದೇಶವನ್ನು ನೀಡಿದಾಗ ಮಾನಿಟರ್ ಅಥವಾ ಅಕ್ಷರ ಮೂಡ ಬೇಕಾದ ತಂತ್ರಾಂಶದಲ್ಲಿ ಬಳಸುವ ರೆಂಡರಿಂಗ್ ಎಂಜಿನ್ (Rendering Engine), ನಿಮ್ಮ ಸಿಸ್ಟಂ‌ನಲ್ಲಿನ ಪೂರ್ವ ನಿರ್ದೇಶಿತ ಫಾಂಟ್‌ಗಳನ್ನು ಬಳಸಿಕೊಂಡು, ತನಗೆ ದೊರಕಿದ ಮಾಹಿತಿಯ ಪ್ರಕಾರ ನಾಮಫಲಕ ಬರೆಯುವ ವ್ಯಕ್ತಿ ಒಂದೊಂದೇ ಅಕ್ಷರಗಳನ್ನು ಬರೆಯುವಂತೆ ಫಾಂಟಿನ ಒಳಗಿರುವ ಅಕ್ಷರದ ತುಣುಕುಗಳನ್ನು ಒಂದರ ಪಕ್ಕ ಒಂದು ಬರುವಂತೆ ಮಾಡುತ್ತದೆ. ಕೊನೆಗೆ ನೀವು ಕ್ಲಿಕ್ಕಿಸಿದ ಕೀಬೋರ್ಡ್ ಕೀಲಿಗಳು ಸಂಕೇತಗಳಾಗಿ ಪರಿವರ್ತನೆಗೊಂಡು, ಅಪ್ಲಿಕೇಷನ್ನಿಗೆ ಇನ್‌ಪುಟ್ (INPUT) ನಂತರ ನಿಮ್ಮ ಪರದೆಯ ಮೇಲೆ ಅಕ್ಷರದ ಔಟ್‌ಪುಟ್ (OUTPUT) ಆಗಿಯೂ ಮೂಡುವುದು.

ಆದರೆ, ಇದೇ ರೀತಿ ಜಗತ್ತಿನ ಇತರೆ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಮೂಡಿಸಲು ASCII ಶಿಷ್ಟತೆ ಬಳಸಲು ಮುಂದಾದಾಗ ಎರಡಕ್ಕಿಂತ ಹೆಚ್ಚು ಭಾಷೆಗಳನ್ನು ಆಸ್ಕಿ ಆಧರಿಸಿ ತಯಾರಿಸಿದ ಫಾಂಟುಗಳಲ್ಲಿ ಲಭ್ಯವಾಗಿಸುವುದು ಕಷ್ಟವಾಯ್ತು. ೮ ಬಿಟ್ ಅಂದರೆ ಸುಮಾರು ೨೫೬ ಅಕ್ಷರಗಳನ್ನು ಮಾತ್ರ ಈ ಶಿಷ್ಟತೆಯ ಮಾದರಿ ಹೊಂದಿರಲು ಸಾಧ್ಯವಾಗುತ್ತಿತ್ತು. ಇದೇ ಕಾರಣದಿಂದಲೇ ಆಸ್ಕಿಯನ್ನು ಆಧರಿಸಿ ಭಾರತದ ಭಾಷೆಗಳಿಗೆ ತಯಾರಿಸಿದ ಶಿಷ್ಟತೆ (ISCII = Indian Script Code for Information Interchange) ಬಳಸಿ ಭಾರತದಲ್ಲಿ ಫಾಂಟುಗಳು ತಯಾರಿಸಿದಾಗ, ಪ್ರತಿಯೊಂದೂ ಭಾಷೆಗೂ ಅದರದ್ದೇ ಆದ ಫಾಂಟುಗಳು ಲಭ್ಯವಾದವು. ಎನ್‌ಕೋಡಿಂಗ್ ಸಿಸ್ಟಂ‌ನಲ್ಲಿದ್ದ ಸಂಕೇತಗಳನ್ನು ಆಧರಿಸಿ, ಅದನ್ನು ಬೆಂಬಲಿಸುವ ತಂತ್ರಾಂಶವೂ, ಫಾಂಟುಗಳು ಜೊತೆಗೆ ಇದ್ದಲ್ಲಿ ಮಾತ್ರ ಕನ್ನಡ ಇತ್ಯಾದಿ ಭಾಷೆಗಳು ಕಂಪ್ಯೂಟರಿನ ಪರದೆಯಲ್ಲಿ ಕಾಣಿಸಲು ಸಾಧ್ಯವಾಗಿಸಿತು. ಇದು ಕನ್ನಡ ಸಂಸ್ಕೃತಿ ಇಲಾಖೆಯ ಜಾಲಪುಟ ನನ್ನ ಸಿಸ್ಟಂ‌ನಲ್ಲೇಕೆ ಸರಿಯಾದ ಕನ್ನಡವನ್ನು ತೋರಿಸಲಿಲ್ಲ ಎನ್ನುವುದಕ್ಕೆ ಉತ್ತರ ನೀಡುತ್ತದೆ.

ಇದನ್ನು ಸ್ವಲ್ಪ ವಿವರಿಸಬೇಕು ಎಂದರೆ, ಇಲಾಖೆಯ ಜಾಲಪುಟ (Webpage)ನಲ್ಲಿರುವ ಕನ್ನಡವನ್ನು ಆಸ್ಕಿ ಫಾಂಟು ಬಳಸಿ ಟೈಪಿಸಲಾಗಿದ್ದು, ಅದಕ್ಕೆ ಬಳಸಿದ ಫಾಂಟ್‌ ಅನ್ನು ನಾನು ನನ್ನ ಕಂಪ್ಯೂಟರಿನಲ್ಲಿ ಸ್ಥಾಪಿಸಿಕೊಳ್ಳದ್ದಿದ್ದಲ್ಲಿ ಪುಟವನ್ನು ನನಗೆ ಓದಲು ಸಾಧವಾಗುವುದಿಲ್ಲ. ಆ ಜಾಲತಾಣದಲ್ಲೇ ನಾನು ಓದಲು ಸಾಧ್ಯವಾಗುವಂತೆ “HELP” ಎಂಬ ಪುಟದಲ್ಲಿ ನನ್ನ ಕಂಪ್ಯೂಟರ್ ಪರದೆಯ ಮೇಲೆ ಮೂಡಿಸಬಲ್ಲ ಇಂಗ್ಲೀಷ್ ಭಾಷೆಯಲ್ಲಿ ಜಾಲತಾಣವನ್ನು ಕನ್ನಡದಲ್ಲಿ ಓದಲು ಬೇಕಿರುವ ಸವಲತ್ತುಗಳು, ಫಾಂಟು ಇತ್ಯಾದಿಗಳನ್ನು ವಿವರಿಸಿ, ಫಾಂಟನ್ನು ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟು, ನಂತರ ಅದನ್ನು ಇನ್ಸ್ಟಾಲ್ ಮಾಡುವುದನ್ನೂ ವಿವರಿಸಿದ್ದು, ಕಂಪ್ಯೂಟರ್ ಜೊತೆಗೆ ಪ್ರಯೋಗ ಮಾಡಲು ಸಿದ್ದ ಮನಸ್ಸಿರುವವರಾದರೆ ಮೇಲಿನ ಪುಟವನ್ನು ಕನ್ನಡದಲ್ಲಿ ಓದಲು ಸಾಧ್ಯವಾದೀತು. ಒಂದು ವೇಳೆ ನಾನು ಫಾಂಟ್ ಇನ್ಸ್ಟಾಲ್ ಮಾಡಿಕೊಂಡು ಓದಲು ಸಾಧ್ಯವಾಗಿದ್ದು, ಇದರಲ್ಲಿರುವ ವಿವರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗೂಗಲ್‌ನಲ್ಲಿ ಸರ್ಚ್ ಮಾಡಬೇಕು ಎಂದರೆ, ಅದೇ ಫಾಂಟ್ ಬಳಸಿ ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ, ಇಂಟರ್ನೆಟ್‌ನಲ್ಲಿಯೂ ಅದೇ ಫಾಂಟ್ ಬಳಸಿ ಬರೆದ ಲೇಖನಗಳಿದ್ದಲ್ಲಿ ಮಾತ್ರ ನಮಗೆ ಉತ್ತರ ಸಿಗಬಹುದು. ಒಮ್ಮೆ ಕನ್ನಡ ಪ್ರಭ, ಉದಯವಾಣಿ, ಪ್ರಜಾವಾಣಿ ಇತ್ಯಾದಿ ಪತ್ರಿಕೆಗಳ ವೆಬ್‌ಸೈಟುಗಳನ್ನು ಓದಲು, ಆಯಾ ತಾಣದಲ್ಲಿ ನೀಡಲಾಗುತ್ತಿದ್ದ ಫಾಂಟುಗಳನ್ನು ಡೌನ್‌ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳುತ್ತಿದ್ದ ಕಾಲವನ್ನು ನೆನಪಿಸಿಕೊಳ್ಳಿ.

ನುಡಿ, ಬರಹ, ಆಕೃತಿ, ಶ್ರೀಲಿಪಿ ಇತ್ಯಾದಿ ತಂತ್ರಾಂಶಗಳನ್ನು ಇನ್ಸ್ಟಾಲ್ ಮಾಡಿಕೊಂಡು ಓದಿ, ಅದರಲ್ಲೇ (ಸರ್ಕಾರೀ ಕಚೇರಿಗಳಲ್ಲಿ, ಪತ್ರಿಕೆಗಳಿಗೆ ನುಡಿಯಲ್ಲೇ ಪತ್ರ ಇತ್ಯಾದಿ ಬರೆಯಬೇಕು ಎಂಬುದು) ಉತ್ತರವನ್ನು ಸೃಷ್ಟಿಸಿ ಕಳಿಸಿ ಎಂದು ಕೇಳಿವುದು ಕನ್ನಡದ ಮಟ್ಟಿಗೆ ಇಂದಿಗೂ ನಿಜ. ಏಕೆಂದರೆ ನಾವುಗಳು ಇನ್ನೂ ಇದೇ ಹಳೆಯ ಆಸ್ಕಿ ಪದ್ದತಿಯನ್ನು ಬಳಸಿ ಕನ್ನಡವನ್ನು ಟೈಪಿಸುತ್ತಿರುವುದು. ಬರೆಯುವ ಮತ್ತು ಓದುವ ಇಬ್ಬರ ಬಳಿಯಲ್ಲೂ ಬಳಸಿದ ಫಾಂಟ್ ಮತ್ತು ಅದನ್ನು ಪರದೆಯ ಮೇಲೆ ಮೂಡಿಸುವ ಎನ್ಕೋಡಿಂಗ್ ಹಾಗೂ ರೆಂಡರಿಗ್ ಸೌಲಭ್ಯ ಲಭ್ಯವಿರದ ಹೊರತು ಹೀಗೆ ಸೃಷ್ಟಿಸಿದ ಲೇಖನಗಳು ಬೇರೆಯವರಿಗೆ ಕನ್ನಡವಾಗಿ ಗೋಚರಿಸುವುದಿಲ್ಲ.

ಇಷ್ಟೆಲ್ಲಾ ಪಾಡುಪಡುವ ಕೆಲಸವನ್ನು ತಪ್ಪಿಸಿ, ಜಗತ್ತಿನ ಎಲ್ಲ ಭಾಷೆಗಳನ್ನೂ ಯಾರು, ಎಲ್ಲಿ ಬೇಕಾದರೂ ಕಂಪ್ಯೂಟರಿನಲ್ಲಿ ಮೂಡುವಂತೆ ಮಾಡುವ ಸೌಕರ್ಯವನ್ನು ಮಾಡಿಕೊಟ್ಟಿದ್ದು, ಯುನಿಕೋಡ್ ಶಿಷ್ಟತೆ. ಜಗತ್ತಿನ ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗಿರುವ ಪ್ರತಿಯೊಂದೂ ಅಕ್ಷರಕ್ಕೂ ಒಂದು ಅಪೂರ್ವ (Unique) ಸಂಖ್ಯೆ ಎಂದು ಕರೆಸಿಕೊಳ್ಳುವ ಕೋಡ್ ಪಾಯಿಂಟ್ ಕೊಡುವುದರ ಮೂಲಕ, ವಿದ್ಯುನ್ಮಾನ ಮಾಹಿತಿ ಸಂಗ್ರಹದಲ್ಲಿ ಏಕರೂಪತೆಯನ್ನು ತರಲು ಸಾಧ್ಯವಾಗಿಸಿತು. ಯುನಿಕೋಡ್ ಕನ್ಸಾರ್ಷಿಯಂ (unicode.org) ಎಂಬ ಅಂತರಾಷ್ಟ್ರೀಯ ಸಂಸ್ಥೆ ವಿಶ್ವದ ಎಲ್ಲ ಭಾಷೆಗಳನ್ನು ಪ್ರತಿನಿಧಿಸುವ ಸಂಸ್ಥೆ ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ತನ್ನ ಸದಸ್ಯರನಾಗಿಸಿಕೊಂಡು, ಆಯಾ ಭಾಷೆಗೆ ಬೇಕಿರುವ ಎಲ್ಲ ಅಕ್ಷರ, ಚಿನ್ಹೆ ಇತ್ಯಾದಿಗಳಿಗೆ ಈ ಅಪೂರ್ವ ಸಂಖ್ಯೆಯನ್ನು/ಸಂಕೇತವನ್ನು ನೀಡುವ ಕೆಲಸ ಮಾಡುತ್ತದೆ. ಇದರಿಂದ ‘ಅ’ ಎಂಬುದು ವಿಶ್ವದ ಯಾವುದೇ ಕಂಪ್ಯೂಟರಿನಲ್ಲೂ ‘ಅ’ ಎಂದೇ ಪರಿಗಣಿಸಲು ಸಾಧ್ಯವಾಗುತ್ತದೆ. ಜೊತೆಗೆ ಭಾಷೆಗೆ ಬೇಕಿರುವ ಅಕಾರಾದಿ ವಿಂಗಡಣೆಗೆ ಕೂಡ ಯುನಿಕೋಡ್ ವ್ಯವಸ್ಥೆಯನ್ನು ಒದಗಿಸುತ್ತದೆ.

೧೬ ಬಿಟ್‌ ಸಂಕೇತಿಕರಣದ ವ್ಯವಸ್ಥೆ ಬಳಸುವುದರಿಂದ ಯುನಿಕೋಡ್‌ನಲ್ಲಿ 65000 ಮೂಲಾಕ್ಷರಗಳಿಗೆ ಸ್ಥಳಾವಕಾಶ ದೊರೆತು ಪ್ರಪಂಚದ ಯಾವುದೇ ಭಾಷೆಯ ಪದ/ಚಿನ್ಹೆಗಳಿಗೂ ಇಲ್ಲಿ ಸ್ಥಾನ ದೊರಕಿಸುವುದು ಸಾಧ್ಯವಾಗುತ್ತದೆ. ಜೊತೆಗೆ ಯಾವುದೇ ಶಿಷ್ಟತೆಯನ್ನು ಉಪಯೋಗಿಸಿದಂತೆ ಕಂಡು ಬರುವ ನ್ಯೂನ್ಯತೆಗಳನ್ನು ತಿದ್ದಲು ಕೂಡ ಅವಕಾಶ ಇದರಿಂದ ದೊರೆಯುತ್ತದೆ. ಒಮ್ಮೆ ಉಪಯೋಗಿಸಿರುವ ಕೋಡ್ ಪಾಯಿಂಟ್‌ಗಳನ್ನು ಮತ್ತೆ ಅದಲು ಬದಲು ಮಾಡುವ ಅವಕಾಶ ಕೊಡದಿರುವುದರಿಂದ ಮುಂದೆ ಹೊಸದಾಗಿ ಸೇರಿಸಿದ ಅಕ್ಷರ ಇತ್ಯಾದಿ, ಈಗಾಗಲೇ ಸಿದ್ದಪಡಿಸಿರುವ ಯುನಿಕೋಡ್ ಲೇಖನಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಲಾರದು. ಯಾವುದೇ ಭಾಷೆಯನ್ನು ಪ್ರತಿನಿಧಿಸುವ ಸರ್ಕಾರ ಅಥವಾ ಆ ಜವಾಬ್ದಾರಿಯನ್ನು ಹೊರುವ ಸಂಸ್ಥೆ ಯುನಿಕೋಡ್ ಕನ್ಸಾರ್ಷಿಯಮ್‌ನ ಸದಸ್ಯತ್ವ ಪಡೆದು, ತನ್ನ ಭಾಷೆಗೆ ಯುನಿಕೋಡ್ ಶಿಷ್ಟತೆಯ ನಿಯಮಾವಳಿಗಳಲ್ಲಿ ಸರಿಯಾದ ಸಂಕೇತ ಇತ್ಯಾದಿಗಳು ಲಭಿಸಿವೆ ಮತ್ತು ಯಾವುದೇ ತೊಂದರೆ ಇಲ್ಲದೆ ಭಾಷೆಯನ್ನು ಓದಲು ಬರೆಯಲು ಸಾಧ್ಯವಾಗುತ್ತಿದೆ ಎಂದು ಕಾಲಕಾಲಕ್ಕೆ ಧೃಡೀಕರಿಸಿಕೊಳ್ಳಬೇಕಾಗುತ್ತದೆ. ಇವು ಯಾವುದೇ ಫಾಂಟುಗಳಲ್ಲ. ಶಿಷ್ಟತೆಯನ್ನು ಆಧಾರವಾಗಿರಿಸಿಕೊಂಡು ಓಪನ್ ಟೈಪ್ ಫಾಂಟುಗಳನ್ನು ತಯಾರಿಸಲಾಗುತ್ತದೆ. ಯುನಿಕೋಡ್ ಶಿಷ್ಟತೆ ಹೇಗೆ ಕೆಲಸ ಮಾಡುತ್ತದೆ, ಓಪನ್ ಟೈಪ್ ಫಾಂಟುಗಳನ್ನು ಸೃಷ್ಟಿಸುವುದು ಹೇಗೆ ಎಂದು ಓದಿ ಅರ್ಥ ಮಾಡಿಕೊಳ್ಳುಬಲ್ಲ ಯಾವುದೇ ತಂತ್ರಜ್ಞರು, ಲಿಪಿಯನ್ನು ವಿವಿಧ ರೂಪಗಳಲ್ಲಿ ಬರೆಯಬಲ್ಲ ಕಲಾವಿದರ ಸಹಾಯದೊಡನೆ, ವಿಧವಿಧ ಮಾದರಿಯ ಫಾಂಟುಗಳನ್ನು ತಯಾರಿಸಬಹುದು. ಯುನಿಕೋಡ್ ಎನ್ನುವುದು ಕೇವಲ ಕನ್ನಡದ ಫಾಂಟ್ ಅಲ್ಲ ಎನ್ನುವುದು ನಿಮಗೆ ಇದರಿಂದ ಅರಿವಾಗುತ್ತದೆ.

ಜೊತೆಗೆ ಈವರೆಗೆ ಚರ್ಚಿಸದ ಕಗಪ, ಇನ್ಸ್‌ಸ್ಕ್ರಿಪ್ಟ್, ಐಟ್ರಾನ್ಸ್, ಬರಹ ಕೀಬೋರ್ಡ್ ಲೇಔಟುಗಳು ಕೂಡ ನಮ್ಮ ಅವಶ್ಯಕತೆಗೆ ತಕ್ಕಂತೆ ಮಾಡಿಕೊಂಡತಹುವುಗಳು ಎಂಬುದನ್ನು ಇಲ್ಲಿ ನೀವು ಗಮನಿಸಬೇಕು. ಅವು ನಮ್ಮ ಕಂಪ್ಯೂಟರಿನಲ್ಲಿರುವ ಕೀಲಿಮಣೆಯ ಇಂಗ್ಲೀಷ್ ಅಕ್ಷರಗಳನ್ನು ಕುಟುಕಿದಾಗ ಪರದೆಯ ಮೇಲೆ ನಮ್ಮ ಭಾಷೆಯ ಸಂಕೇತಗಳನ್ನು ಮೂಡಿಸುವಂತೆ ಬದಲಾಯಿಸಿಕೊಂಡ ಪುಟ್ಟ ತಂತ್ರಾಂಶವಷ್ಟೇ. ಯುನಿಕೋಡ್ ಬರುವುದಕ್ಕೂ ಮುಂಚೆ ಅವು ಹೇಗೆ ಕೆಲಸ ಮಾಡುತ್ತಿದ್ದವೋ, ಹಾಗೆಯೇ ಅದು ಬಂದ ನಂತರವೂ ಯುನಿಕೋಡ್‌ನಲ್ಲಿ ಕನ್ನಡ ಟೈಪಿಸಲು ನಾವು ಅವನ್ನೇ ಉಪಯೋಗಿಸುತ್ತಿರುವುದನ್ನು ನೀವು ಗಮನಿಸಬಹುದು. ಆಂಡ್ರಾಯ್ಡ್ ಫೋನುಗಳಲ್ಲಿ, ಗೂಗಲ್ ಚಾಟ್, ಫೇಸ್‌ಬುಕ್, ವಿಕಿಪೀಡಿಯ ಇವೆಲ್ಲ ಪ್ರತಿದಿನ ಲಕ್ಷಾಂತರ ಕನ್ನಡಿಗರಿಂದ ಕನ್ನಡವನ್ನು ಗುನುಗಲು ಸಾಧ್ಯವಾಗಿರುವುದು ಇದರಿಂದಲೇ.

ಯುನಿಕೋಡ್ ಶಿಷ್ಟತೆ ಕನ್ನಡಕ್ಕೆ ಲಭ್ಯವಾದ ತಕ್ಷಣ ವಿಂಡೋಸ್ ಎಕ್ಸ‌ಪಿಯಲ್ಲಿ ಓಪನ್‌ಟೈಪ್ ಫಾಂಟನ್ನು ಜನರಿಗೆ ಆಪರೇಟಿಂಗ್ ಸಿಸ್ಟಂ‌ಗಳ ಜೊತೆಗೆ ದೊರೆಯುವಂತೆ ಮಾಡಲಾಯಿತು. ಇದರಿಂದಾಗಿ, ವಿಂಡೋಸ್ ಎಕ್ಸ್‌ಪಿ/ಯುನಿಕೋಡ್ ಬೆಂಬಲಿಸುವ ಸಿಸ್ಟಂಗಳಲ್ಲಿ ಯುನಿಕೋಡ್‌ನಲ್ಲಿ ಟೈಪಿಸಿದ ಯಾವುದೇ ಲೇಖನಗಳನ್ನು ಬರೆದು ಬೇರೆಯವರಿಗೆ ಕಳಿಸಿದಾಗ, ಅದಕ್ಕೆ ಉಪಯೋಗಿಸಿದ ಫಾಂಟನ್ನು ಜೊತೆಗೆ ಕಳಿಸುವ ಅವಶ್ಯಕತೆ ತಪ್ಪಿತು. ಜೊತೆಗೆ ಯಾವುದೇ ಸಿಸ್ಟಂಗಳಲ್ಲಿ ಹೊರಗಿನ ಫಾಂಟುಗಳನ್ನು ನೆಚ್ಚಿಕೊಳ್ಳದೆ ತಮ್ಮ ಸಿಸ್ಟಂನಲ್ಲಿರುವ ಫಾಂಟಿನ ಬೆಂಬಲದಿಂದ ಲೇಖನವನ್ನು ಓದುವುದು ಸಾಧ್ಯವಾಯಿತು. ಈಗಂತೂ ಮೊಬೈಲ್‌ನಲ್ಲೂ ಕೂಡ ನಾವು ಕನ್ನಡ ಓದಲು/ಟೈಪಿಸಲು ಇದರಿಂದಲೇ ಸಾಧ್ಯವಾಗಿರುವುದು. ಯುನಿಕೋಡ್ ನಲ್ಲಿರುವ ಕನ್ನಡವನ್ನು ಓದಿ ಹೇಳಬಲ್ಲ eSpeak ತಂತ್ರಾಂಶದ ಬಗ್ಗೆ ನಿಮಗೆ ತಿಳಿದಿರಬೇಕಲ್ಲವೇ?

ಈ ಎಲ್ಲ ಚರ್ಚೆ ನಿಮಗೆ ಯುನಿಕೋಡ್ ಶಿಷ್ಟತೆ ಕಂಪ್ಯೂಟರಿನಲ್ಲಿ ಯಾವುದೇ ಭಾಷೆಯ ಅಕ್ಷರಗಳನ್ನು ಮೂಡಿಸಲು ಬೇಕಿರುವ ಸಂಕೇತಗಳು ಇತ್ಯಾದಿ ವ್ಯವಸ್ಥೆಗಳ ಬಗ್ಗೆ ಏಕರೂಪತೆ ಕೊಡುವ ಒಂದಷ್ಟು ನಿಯಮಾವಳಿಗಳು, ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿ, ಅಳವಡಿಸಲು ಶ್ರಮಿಸುತ್ತಿರುವ ಯುನಿಕೋಡ್ ಕರ್ನಾರ್ಷಿಯಂ ಬಗ್ಗೆ, ಒಪನ್‌ಟೈಪ್ ಫಾಂಟು, ಕೀಬೋರ್ಡುಗಳು ಇತ್ಯಾದಿಗಳ ಬಗ್ಗೆ ತಿಳಿಸಿತು ಎಂದು ಭಾವಿಸುತ್ತೇನೆ.

ಕನ್ನಡದ ಯುನಿಕೋಡ್ ಬಳಕೆಯನ್ನು ಅಳವಡಿಸಿಕೊಳ್ಳುತ್ತಾ, ಹಲವಾರು ಕನ್ನಡ ಬ್ಲಾಗು, ಜಾಲತಾಣಗಳನ್ನು ನಿರ್ಮಿಸಿ ಕನ್ನಡವನ್ನು ಇಂಟರ್ನೆಟ್‌ನಲ್ಲಿ ಸ್ಥಾಪಿಸಿದ್ದು ಹವ್ಯಾಸಿ ಕನ್ನಡ ಯುವಪೀಳಿಗೆಯೇ. ಇದರ ಉಪಯುಕ್ತತೆಯನ್ನು ಅಗಾಗ್ಗೆ ವಿವರಿಸುತ್ತ ಇದನ್ನು ಸರ್ಕಾರ ಅಧಿಕೃತವಾಗಿ ಶಿಷ್ಟತೆ ಎನ್ನು ಪರಿಗಣಿಸಿ ಎಂದು ಕನ್ನಡದ ಯುವ ತಂತ್ರಜ್ಞರು ವರ್ಷಾನುವರ್ಷದಿಂದ ಕೇಳಿಕೊಳ್ಳುತ್ತಿದ್ದರೂ ನಮ್ಮ ಸರ್ಕಾರ ಇನ್ನೂ ಕಣ್ಮುಚ್ಚಿ ಕುಳಿತಿದೆ. ಇದು ಸಾಧ್ಯವಾಗಿರುವುದಾದರೂ ಹೇಗೆ ಎಂಬ ಪುಟ್ಟ ಪ್ರಶ್ನೆಗೆ ಉತ್ತರವನ್ನು ಹುಡುಕಿಕೊಳ್ಳುವ ಪ್ರಯತ್ನ ಮಾಡಿದ್ದೇ ಆಗಿದಲ್ಲಿ ನಮ್ಮ ಸರ್ಕಾರ ಕನ್ನಡವನ್ನು ಕಂಪ್ಯೂಟರಿನಲ್ಲಿ ಎಲ್ಲೆಡೆ ಏಕರೂಪದಲ್ಲಿ ಉಪಯೋಗಿಸಿಕೊಳ್ಳುವಂತಾಗಿಸಲು ಜಾರಿಗೊಳಿಸ ಬೇಕಿರುವ ಯುನಿಕೋಡ್ ಶಿಷ್ಟತೆಯನ್ನು ಯಾವಗಲೋ ಜಾರಿಗೊಳಿಸಲು ಸಾಧ್ಯವಿತ್ತು. ಸರ್ಕಾರೀ ಕಡತಗಳು, ಮತ್ತು ಅವುಗಳ ಜೀವಿತಾವಧಿ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡಾಗ ಹಾಗೂ ಅವುಗಳ ತರಾವರಿ ಉಪಯೋಗಗಳನ್ನು ಗಮನಿಸಿದಾಗ ಕಳೆದ ಹತ್ತುವರ್ಷಗಳಲ್ಲಿ ತಯಾರಾದ ಕಡತಗಳೆಲ್ಲ ಅಸ್ಕಿಯಲ್ಲಿದ್ದು, ಅವುಗಳನ್ನು ಸರ್ಚ್ ಮಾಡಲೂ ಕೂಡ ದುಸ್ಸಾಧ್ಯವಾಗಿರುವುದನ್ನು ನೆನೆಸಿಕೊಂಡರೆ, ಅವುಗಳನ್ನು ಯುನಿಕೋಡ್ ರೂಪಕ್ಕೆ ತರಲು ಮತ್ತೆ ಬಹುಕೋಟಿ ಹಗರಣ ಮಾಡಿದರೂ ಆಶ್ಚರ್ಯವೇನಿಲ್ಲ. ವಿಶೇಷ ಸೂಚನೆ: ಅಸ್ಕಿಯಲ್ಲಿರುವ / ನುಡಿ ರೂಪದಲ್ಲಿರುವ ಕಡತಗಳನ್ನು ಯುನಿಕೋಡ್‌ಗೆ ಪರಿವರ್ತಿಸುವ ವಿಧಾನ ಕಂಪ್ಯೂಟರ್ ಬಳಸುವ ಎಲ್ಲ ಕನ್ನಡಿಗನಿಗೂ ಸಧ್ಯ ತಿಳಿದಿದ್ದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಉಪಯೋಗ ಮತ್ತು ಬಳಕೆಯಲ್ಲಿ ಸರ್ಕಾರದಿಂದ ಸಾರ್ವಜನಿಕರೇ ಮುಂದಿರುವುದರಿಂದ ಇಂತದ್ದೊಂದು ಹಗರಣ ಕೇಳಿಬರದು ಎಂದು ಭಾವಿಸೋಣ.

ದಿನಗಳೆದಂತೆ ಮಿಂಚಿನ ವೇಗದಲ್ಲಿ ಬದಲಾಗುವ ತಾಂತ್ರಿಕತೆ, ನಮ್ಮ ಸರ್ಕಾರಗಳ ಪಂಚವಾರ್ಷಿಕ ಯೋಜನೆಗಳಂತಲ್ಲ. ಆಯಾ ಕಾಲದಲ್ಲಿ ಭಾಷೆಯ ಸುತ್ತ ಅಭಿವೃದ್ದಿಗೊಳ್ಳುತ್ತಿರುವ ಶಿಷ್ಟತೆ, ತಂತ್ರಾಂಶ ಇತ್ಯಾದಿಗಳ ಸುತ್ತ ಗಮನವರಿಸುತ್ತಾ, ಅದನ್ನು ಶೀಘ್ರವಾಗಿ, ತೀಕ್ಷ್ಣ ಬುದ್ದಿಯಿಂದ ಅರಿತು ಕನ್ನಡಕ್ಕೂ ಲಭ್ಯವಾಗಿಸುವವರು ಕನ್ನಡದ ತಂತ್ರಜ್ಞಾನದ ಅಭಿವೃದ್ದಿಯ ಮುಂದಾಳತ್ವವಹಿಸಬೇಕಿದೆ.  ಡಿ.ಟಿ.ಪಿ ಇತ್ಯಾದಿಗಳಿಂದ ಹೊಟ್ಟೆ ತುಂಬಿಕೊಳ್ಳುವ ಕನ್ನಡಿಗನಿಗೆ ಬೇಕಿರುವ ಫಾಂಟುಗಳನ್ನು ಮುಕ್ತ ಮತ್ತು ಸ್ವತಂತ್ರವಾಗಿ ಅಭಿವೃದ್ದಿಕೊಳಿಸಿ ಬಿಡುಗಡೆ ಮಾಡಿಬೇಕಿದೆ. ಇದಕ್ಕೆ ಹೊಸ ತಂತ್ರಜ್ಞಾನ, ಉದ್ದಿಮೆ, ಸಂಶೋಧನೆಯ ಅಗತ್ಯವಿಲ್ಲ. ಕೆಲವು ಕಲಾವಿದರ, ತಂತ್ರಜ್ಞರ ನೆರವಿನಿಂದ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಬಳಸಿ ಯೋಚಿಸಲೂ ಸಾಧ್ಯವಾಗದಷ್ಟು ಕಡಿಮೆ ಬೆಲೆಯಲ್ಲಿ ಇವುಗಳನ್ನು ಸೃಷ್ಟಿಸುವುದು ಸಾಧ್ಯ. ವಿಂಡೋಸ್, ಲಿನಕ್ಸ್, ಆಂಡ್ರಾಯ್ಡ್ ಇತ್ಯಾದಿಗಳನ್ನು ಸೃಷ್ಟಿಸುವ ಕಂಪೆನಿಗಳು ಕನ್ನಡಿಗರ ಕಿಸೆಗೆ ಸೇರಲು ಸರ್ಕಾರವನ್ನು ನೆಚ್ಚಿ ಕೂತಿದ್ದರೆ, ಕನ್ನಡವನ್ನು ಅಂಗೈಯಲ್ಲಿ ಕಾಣಲು ಮತ್ತೆಷ್ಟು ಶತಮಾನಗಳನ್ನು ಕಾಣಬೇಕಿತ್ತೋ. ಕನ್ನಡದ ಹವ್ಯಾಸಿ ತಂತ್ರಜ್ಞರಿಂದ ಸೃಷ್ಟಿಗೊಂಡಿರುವ ಫಾಂಟುಗಳು, ಅಪ್ಲಿಕೇಷನ್‌ಗಳು, ಅವುಗಳ ಬಳಕೆ ಇತ್ಯಾದಿಗಳನ್ನು ಸಮೀಕ್ಷೆಯ ಮೂಲಕ ವಿಶ್ಲೇಷಿಸಿ ನೋಡಿದರೆ ತಾಂತ್ರಿಕವಾಗಿ ಕನ್ನಡ ಎಲ್ಲಿದೆ ಎಂಬುದು ತಿಳಿಯುತ್ತದೆ.


ಏಳಿ, ಎದ್ದೇಳಿ, ಎಲ್ಲರಿಗೂ ಕೇವಲ ಯುನಿಕೋಡ್‌ನಲ್ಲಿ ವ್ಯವಹರಿಸಲು ಹೇಳಿ. ಫಾಂಟುಗಳಿಲ್ಲ, ಕೀಬೋರ್ಡ್ ಇಲ್ಲ, ಎಂಬಿತ್ಯಾದಿಗಳ ಸತ್ಯಾಸತ್ಯತೆಯನ್ನು ಕಂಪ್ಯೂಟರ್ ಬಳಸುವವರನ್ನು ಕೇಳಿ ತಿಳಿದು ನಂತರ ಮುಂದೆ ಹೆಜ್ಜೆ ಇಡಿ. ಅಭಿವೃದ್ದಿಯ ಜೀವನ ಚಕ್ರವನ್ನು ಮೊದಲಿನಿಂದ ಆರಂಭಿಸುವ ಕಾರ್ಯದಿಂದ ಕನ್ನಡದ ತಾಂತ್ರಿಕ ಬೆಳವಣಿಗೆಯನ್ನು ಇನ್ನೂ ಕುಂಠಿತಗೊಳಿಸುವುದು ಅನವಶ್ಯಕ. ಸರ್ಕಾರ Free & Open Source Software (ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು) ಐ.ಟಿ ಜಗತ್ತಿನ ಬಹುಮುಖ್ಯ ಭಾಗವಾಗಿ ಬೆಳೆದು ಬಂದಿರುವ ನಿಜಾಂಶವನ್ನು ಅರಿತು ಇನ್ಮುಂದೆ ನೆಡೆಯ ಬೇಕಾಗಿರುವ ಅಭಿವೃದ್ದಿ ಹಾಗೂ ಸಂಶೋಧನೆಯ ಬಗ್ಗೆ ಶೀಘ್ರವಾಗಿ ಕಾರ್ಯೋನ್ಮುಖವಾಗಬೇಕಿದೆ.