ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪ್ರಕಟಿಸುತ್ತಿರುವ ‍ಕನ್ನಡ ಜಾಗೃತಿ ಪತ್ರಿಕೆಗೆ ನವೆಂಬರ್ ೨೦೨೦ ರಲ್ಲಿ ಬರೆದ ಲೇಖನ:

ಕನ್ನಡ ಭಾಷೆಯ ಸುತ್ತಲಿನ ಪ್ರೀತಿಯ ಅಭಿವ್ಯಕ್ತಿಗೆ ಮೊದಲ ಕೊಂಡಿ ಪುಸ್ತಕ. ಅವುಗಳಲ್ಲಿ ಅಡಗಿರುವ ಸಾಹಿತ್ಯ, ಅದನ್ನು ಸೃಷ್ಟಿಸಿದ ಕನ್ನಡದ ಲೇಖಕ/ಲೇಖಕಿಯರು ಮತ್ತು ಅವರನ್ನು ಕನ್ನಡ ಓದುಗರಿಗೆ ಪರಿಚಯಿಸಿದ ಪ್ರಕಾಶಕರಿಂದ ಮೊದಲುಗೊಂಡು, ಅದರಲ್ಲಿನ ಚಿತ್ರಕಲೆ, ಮುಖಪುಟ, ಅದರ ಸಂಪಾದನೆ, ಮುದ್ರಣ ಹೀಗೆ ಹತ್ತು ಹಲವು ಪ್ರಯೋಗಗಳನ್ನು ನಮ್ಮ ಭಾಷೆಯ ಬೆಳವಣಿಗೆಯ ಭಾಗವಾಗಿ ನಾವು ನೋಡಬಹುದು, ಅಭ್ಯಸಿಸಬಹುದು. 

‍ಕಾಲಕ್ಕೆ ತಕ್ಕಂತೆ ಭಾಷೆಯ ಉಳಿವಿಗೆ ಆಯಾ ಕಾಲದ ವಿಜ್ಞಾನ, ತಂತ್ರಜ್ಞಾನದ ಲಭ್ಯತೆಗಳನ್ನು ಭಾಷಾ ತಂತ್ರಜ್ಞಾನದ ಬೆಳೆವಣಿಗೆಯ ಆಯಾಮದ ಮೂಲಕ ಒಗ್ಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಕನ್ನಡದ ಭಾಷೆ ಕಂಪ್ಯೂಟರಿನ ಪರದೆಯ ಜೊತೆಗೆ ಇತರೆ ಬಹುಮಾಧ್ಯಮಗಳಲ್ಲೂ, ತಂತ್ರಜ್ಞಾನ ಪ್ರೇರಿತ ಅನ್ವಯಗಳಲ್ಲೂ ಸಿಗುವಂತಾಗಿರುವುದು ಈ ಬೆಳವಣಿಗೆಯ ಭಾಗವೇ ಆಗಿದೆ. ಇಂಟರ್ನೆಟ್ ಲಭ್ಯತೆ ಹಾಗೂ ಯುನಿಕೋಡ್ ಶಿಷ್ಟತೆಗಳ ಬಳಕೆ ಹೆಚ್ಚುತ್ತಿದ್ದಂತೆ ಇಂಗ್ಲೀಷ್ ಜೊತೆಗೆ ಜನ ತಮ್ಮ ಭಾಷೆಗಳಲ್ಲೇ ಮಾಹಿತಿ ಸಂವಹನಕ್ಕೆ ಮುಂದಾದರು. ಜ್ಞಾನ ಪ್ರಸರಣೆ ಹಾಗೂ ಮಾಹಿತಿಯ ಆಗರ ಕೈಬೆರಳಿನ ಅಂಚಿಗೆ ಸರಿದಾಗ, ಪುಸ್ತಕಗಳಿಗೂ ಇದರ ಡಿಜಿಟಲ್ ಟಚ್ ಒದಗಿಬಂತು. ಕಿಂಡಲ್, ಆಪಲ್ ಬುಕ್, ಲುಲು, ಗೂಗಲ್ ಪ್ಲೇ ಬುಕ್ ಹೀಗೆ ಹತ್ತು ಹಲವು ಇ-ಪುಸ್ತಕ ತಾಣಗಳು, ಆಪ್‌ಗಳು, ಟ್ಯಾಬ್‌ಗಳು/ಹಾರ್ಡ್ವೇರ್ ಮುಂತಾದ ಸಾಧ್ಯತೆಗಳು ಓದುಗನಿಗೆ ಮಾಹಿತಿಯನ್ನು ಒದಗಿಸುವ ಪ್ರಯತ್ನಮಾಡಲಾರಂಭಿಸಿದವು. ಖಾಸಗಿ ಸಂಸ್ಥೆಗಳಷ್ಟೇ ಅಲ್ಲದೇ ಮುಕ್ತ ಜ್ಞಾನದ (ಓಪನ್ ನಾಲೆಡ್ಜ್) ಯೋಜನೆಗಳಾದ ಗುಟೆನ್‌ಬರ್ಗ್, ವಿಕಿಪೀಡಿಯಾ ಮುಂತಾದ ಸಮುದಾಯಗಳೂ, ಭಾರತದಲ್ಲಿ ಡಿಜಿಟಲ್ ಲೈಬ್ರೈರಿ ಆಫ್ ಇಂಡಿಯಾದಂತಹ ಸರ್ಕಾರೀ ಯೋಜನೆಗಳೂ ಪುಸ್ತಕಗಳನ್ನು ಜನರಿಗೆ ಲಭ್ಯವಾಗಿಸಲು ಮುಂದಾದವು. ನಂತರದ ವರುಷಗಳಲ್ಲಿ ಕನ್ನಡದ ಇ-ಪುಸ್ತಕಗಳು ಕಣಜ, ಭಾರತವಾಣಿ, ಪೋತಿ ಹಾಗೂ ಇತರೆ ತಾಣಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದವು. ಆದರೆ, ಇವೆಲ್ಲವೂ ಪೂರ್ಣ-ಪ್ರಮಾಣದ ಇ-ಪುಸ್ತಕಗಳಾಗಿಲ್ಲದೇ ಇದ್ದದ್ದು ನಿಜ. 

ಆದರೆ ೨೦೧೯ರಲ್ಲಿ ನಾನು ಅಭ್ಯಸಿದಂತೆ ‍ಲಭ್ಯವಿದ್ದ ಕನ್ನಡ ಪುಸ್ತಕಗಳ ಸಂಖ್ಯೆ ಹೀಗಿತ್ತು(ಫೆಬ್ರವರಿ ೨೦೧೯ರ ಮಾಹಿತಿಯ ಪ್ರಕಾರ):

ಗೂಗಲ್ ಪ್ಲೇ ಬುಕ್

212‍

‍ಐ-ಬುಕ್ಸ್

0

ಕಿಂಡಲ್

0

ಪೋ‍ತಿ

30

ಪುಸ್ತಕ.ಕೊ.ಇನ್

200

ಡೈಲಿ ಹಂಟ್‍‍‍‍

1,000

‍ಇಂಟರ್ನೆಟ್ ಆರ್ಕೈ‍ವ್

‍7665 

ಕಣಜ

837

ಭಾರತವಾಣಿ

523

ಮೇರಾ ಲೈಬ್ರರಿ

413

ಇ-ಪುಸ್ತಕಗಳ ಬಗ್ಗೆ ‍ಕನ್ನಡದಲ್ಲಿ ಮೊದಲ ಮಾಹಿತಿ ಸಿಗುವುದು ‍ಬಹುಷ: ಡಾ. ಎಂ. ಎಸ್. ಶ್ರೀಧರ್ ಅವರು ೨೦೦೬ರಲ್ಲಿ ಬರೆದ ಲೇಖನದ ಮೂಲಕ. ‍ಪ್ರಥಮ ಇ-ಪುಸ್ತಕ ಮೇಳ‌ದ ಬಗ್ಗೆ ವಿವರಿಸುತ್ತಾ, ಗೂಗಲ್, ಮೈಕ್ರೋಸಾಫ್ಟ್, ಗುಟೆನ್‌ಬರ್ಗ್ ಹಾಗೂ ಇತರೆ ಪ್ರಕಾಶಕ ಸಂಸ್ಥೆಗಳು ಇ-ಪುಸ್ತಕಗಳನ್ನು ಲಭ್ಯವಾಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಗ್ಗೆ ಸುಧೀರ್ಘವಾಗೇ ಬರೆದಿದ್ದಾರೆ. ಜೊತೆಗೆ ಇ-ಪುಸ್ತಕಗ‌ಳಿಂದ ಬಳಕೆದಾರರಿಗೆ ಆಗುವ ಉಪಯೋಗಗಳನ್ನೂ ಬರೆದಿದ್ದಾರೆ. ಆಗ ಲಭ್ಯವಿದ್ದ ಕನ್ನಡ ಪುಸ್ತಕಗಳ ಸಂಖ್ಯೆ ನಗಣ್ಯ ಎಂದೂ, ತಮಿಳು ಪುಸ್ತಕಗಳ ‍ವಿನೀತ ಕಾಣಿಕೆಯನ್ನೂ ಸ್ಮರಿಸುತ್ತಾರೆ. ಈ ಸಂಖ್ಯೆ ಇತ್ತೀಚಿನವರೆಗೆ ಬಹಳಷ್ಟು ಬದಲಾಗಿರಲಿಲ್ಲ. 

ಇ-ಪುಸ್ತಕಗಳ ಸ್ವರೂಪ

ಎಲ್ಲ ಪಿ.ಡಿ.ಎಫ್ ಪುಸ್ತಕಗಳೂ – ಇ-ಪುಸ್ತಕವಲ್ಲ!

ಕನ್ನಡ ಪುಸ್ತಕಗಳನ್ನು ಇಂಟರ್ನೆಟ್/ಅಂತರಜಾಲದಲ್ಲಿ ಹುಡುಕುವವರಿಗೆ  ಅ) ಸಾಮಾನ್ಯ ಪುಸ್ತಕ ಮಾದರಿಯಲ್ಲಿ ಕೊಳ್ಳಲು ಸಪ್ನ, ದಟ್ಸ್ ಕನ್ನಡ, ಅಮೇಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ದೊರೆಯುತ್ತವೆ ಆ) ಇ-ಪುಸ್ತಕಗಳು(?) ಗೂಗಲ್ ಪ್ಲೇ ಸ್ಟೋರ್, ಅಮೇಜಾನ್ ಕಿಂಡಲ್(?), ಇಂಟರ್ನೆಟ್ ಆರ್ಕೈವ್ (archive.org), ಡೈಲಿ ಹಂಟ್,  ಕಣಜ, ಭಾರತವಾಣಿ ಇತ್ಯಾದಿಗಳಲ್ಲಿ ದೊರೆಯುತ್ತವೆ ಎಂದು ಹೇಳುವುದು ರೂಡಿಯಲ್ಲಿದೆ. ಆದರೆ ಹೀಗೆ ದೊರೆಯುವ ಕನ್ನಡ ಪುಸ್ತಕಗಳು ಡಿಜಿಟಲೀಕರಿಸಿದ ದತ್ತಾಂಶ ಮಾತ್ರ ಆಗಿದ್ದು, ನಿಜವಾದ/ನೈಜವಾದ ಇ-ಪುಸ್ತಕಗಳಲ್ಲ. 

ಕನ್ನಡದ ಇ-ಪುಸ್ತಕ ಎಂದರೆ ಸಾಮಾನ್ಯವಾಗಿ ಕೈಗೆಟಕುವವು,  ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿದ ಅಥವಾ ಪ್ರಿಂಟ್ ಆವೃತ್ತಿಯ ಮೂಲವನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಿರುವ/ಡಿಜಿಟಲೀಕರಿಸಿರುವ ಪುಸ್ತಕಗಳು. ಇವುಗಳನ್ನು ಇ-ಪುಸ್ತಕ/ಇ-ಬುಕ್ ಎನ್ನಲು ಬರುವುದಿಲ್ಲ. 

ಇ-ಪುಸ್ತಕಗಳು ಇ-ಪಬ್ (.epub, .mobi) ಅಥವಾ ಇ-ಪುಸ್ತಕ ಓದುಗಗಳ (ebook readers) ಸ್ವರೂಪದಲ್ಲಿರಬೇಕು.   ಇ-ಪಬ್ ಸ್ವರೂಪದ ಪುಸ್ತಕಗಳು – ನಮ್ಮ ಇ-ಪುಸ್ತಕ ಓದುಗ ಇರುವ ತೆರೆಯ ಅಳತೆಗೆ ಅನುಗುಣವಾಗಿ ಪುಸ್ತಕದ ಮಾಹಿತಿಯನ್ನು ಅಳವಡಿಸಿ ಕೊಡುವುದರೊಂದಿಗೆ ಮೊದಲು ಮಾಡಿ (ಫಾಂಟಿನ/ಅಕ್ಷರ ಶೈಲಿಯ ಗಾತ್ರ ಹಿಗ್ಗಿಸುವ/ಕುಗ್ಗಿಸುವ ಸೌಲಭ್ಯ), ಪುಸ್ತಕದ ಮಾಹಿತಿ ಯಾವುದೇ ಸಾಧನದಲ್ಲಿ ಮೂಡುವಂತೆ ಮಾಡುವ ಶಿಷ್ಠಾಚಾರಗಳನ್ನು (Standards) ಉದಾ: ಯುನಿಕೋಡ್ ಬಳಕೆ, ಯುನಿಕೋಡ್ ನಲ್ಲಿ ಮಾಹಿತಿ ಹುಡುಕಾಟ, ಪುಸ್ತಕ ಓದುವ ಸಮಯದಲ್ಲಿ ಬೇಕಾಗುವ ನಿಘಂಟುವಿನೊಂದಿಗೆ ಪುಸ್ತಕದ ಮಾಹಿತಿ ಬೆಸೆಯುವ ಸೌಲಭ್ಯ. ಅವಶ್ಯ ಬಿದ್ದಲ್ಲಿ ಓದುಗ ತನ್ನದೇ ಆದ ನಿಘಂಟುವನ್ನು ಸೃಷ್ಟಿಸಿಕೊಳ್ಳುವ ಸೌಲಭ್ಯ, ಓದುವ ಸಮಯದಲ್ಲಿ ಟಿಪ್ಪಣಿ, ಪುಟಗುರುತುಗಳು, ಸಾಧ್ಯವಾದೆಡೆ ಹೊರಗಿನ/ಬಾಹ್ಯ ಮಾಧ್ಯಮವನ್ನು (ಆಡಿಯೋ, ವಿಡಿಯೋ, ಆನಿಮೇಷನ್) ತನ್ನಲ್ಲಿ ಅಡಗಿಸಿಕೊಳ್ಳುವ/ಎಂಬೆಂಡ್ ಮಾಡಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. .txt ಹೊರತು ಪಡಿಸಿ ಮತ್ತೆಲ್ಲವೂ ವಿದ್ಯುನ್ಮಾನ ಹಕ್ಕುಗಳನ್ನು ಸಂರಕ್ಷಿಸುತ್ತವೆ. ಈ ಕೆಲವೊಂದು ಸಾಧ್ಯತೆಗಳನ್ನು ಕೆಲವು ಇ-ಪುಸ್ತಕ ಸ್ವರೂಪಗಳು ಕೊಡದೇ ಹೋಗಬಹುದು. 

ಪರಿಪೂರ್ಣ ಇ-ಪುಸ್ತಕಗಳು ಕನ್ನಡಕ್ಕೆ ಬಾರುದುದಕ್ಕೆ ಕಾರಣಗಳು

ಇತ್ತೀಚಿನವರೆಗೂ (೨೦೧೯) ಇ-ಪುಸ್ತಕಗಳು ಎಂದರೆ ಕೇವಲ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಪಿ.ಡಿಎಫ್. ಲಭ್ಯವಾಗಿಸುವುದು ಎನ್ನುವ ಸುಲಭ ಸಾಧ್ಯತೆಯನ್ನು ಕನ್ನಡದ ಸುತ್ತ ಕೆಲಸ ಮಾಡಿದ ಯೋಜನೆಗಳು ತಮ್ಮ ಕಾರ್ಯವೈಖರಿಗೆ ಅಳವಡಿಸಿಕೊಂಡವು. ಮುಕ್ತ ಶಿಷ್ಠತೆಗಳನ್ನು (‌Open Standards) ಅಭ್ಯಸಿಸಿ ಬಳಸುವ ಶಿಸ್ತು ನಮ್ಮಲ್ಲಿ ಇಲ್ಲದೇ ಇರುವುದನ್ನು ಇದು ಮುಖ್ಯವಾಗಿ ಎತ್ತಿ ತೋರಿಸುತ್ತದೆ. ಜೊತೆಗೆ ಮುದ್ರಣ ವ್ಯವಸ್ಥೆಗಳಾದ ಡಿ.ಟಿ.ಪಿ ಇತ್ಯಾದಿ ಇಂದಿನವರೆಗೂ ASCII(ಆಸ್ಕಿ)ಯಲ್ಲಿ (ಸಾಮಾನ್ಯರ ಆಡುಭಾಷೆಯಲ್ಲಿ ಕನ್ನಡವನ್ನು ನುಡಿ ತಂತ್ರಾಂಶದಲ್ಲಿ) ಟೈಪಿಸುವ ಹಾಗೂ ಹಳೆಯ ಫೇಜ್‌ಮೇಕರ್ ಹಾಗೂ ಕೋರಲ್ ಡ್ರಾ ನಂತಹ ತಂತ್ರಾಂಶಗಳನ್ನು ಇನ್ನೂ ನೆಚ್ಚಿಕೊಂಡಿರುವುದೂ ಕೂಡ ಇದಕ್ಕೆ ಮತ್ತೊಂದು ಕಾರಣ. ಈ ತಂತ್ರಾಂಶಗಳು ಯುನಿಕೋಡ್ ಶಿಷ್ಠತೆಯನ್ನು ತಮ್ಮ ಪರಿಷ್ಕರಣೆಯಲ್ಲಿ ಒದಗಿಸದೆ ಇದ್ದದ್ದೂ, ಆ ನಂತರ ಬಂದ ಅಡೋಬ್ ಇನ್‌ಡಿಸೈನ್ ತಂತ್ರಾಂಶಗಳ ಬೆಲೆ, ಹಾಗೂ ಅಡೋಬ್ ತನ್ನ ಉತ್ಪನ್ನಗಳನ್ನು ಕ್ಲೌಡ್ ಚಂದಾ ವ್ಯವಸ್ಥೆಗೆ ಅಳವಡಿಸಿದ್ದೂ ಕೂಡ ASCII/ನುಡಿಯಲ್ಲಿ ಕನ್ನಡ ಟೈಪಿಸುವ ದಶಕಕ್ಕೂ ಹಿಂದಿನ ಪರಿಪಾಟವನ್ನೇ ಮುಂದುವರೆಸುವಂತೆ ಮಾಡಿತು. ಪುಸ್ತಕ ಪ್ರಿಂಟ್ ಆದರೆ ಸಾಕು ಎನ್ನುವ ಹಾಗೂ ಇ-ಪುಸ್ತಕಗಳ ಮೂಲಕ ಮಾಹಿತಿ ಸುರಕ್ಷತೆ, ಮಾಹಿತಿ ಕಳವು, ಕಾಪಿರೈಟ್ ಇತ್ಯಾದಿಗಳ ಬಗೆಗಿನ ಮಾಹಿತಿಯ ಕೊರತೆ, ಮುದ್ರಣಕ್ಕೆ ಅವಶ್ಯಕವಾದ ಬಹು ವಿನ್ಯಾಸದ ಯುನಿಕೋಡ್ ಫಾಂಟುಗಳ ಕೊರತೆ ಕೂಡ ಮುದ್ರಣದಲ್ಲಿ ಯುನಿಕೋಡ್ ಶಿಷ್ಠತೆಯನ್ನು ಬಳಸುವಲ್ಲಿ ಹಿನ್ನೆಡೆಯನ್ನು ‍ಉಂಟು ಮಾಡಿದವು. 

ಸಂಚಯ(https://sanchaya.org) ೨೦೧೧ರಲ್ಲಿ ಪ್ರಾರಂಭಿಸಿದ ಅರಿವಿನ ಅಲೆಗಳು ಯೋಜನೆಯ ಮೂಲಕ ತಯಾರಾದ ಜನ ಸಮುದಾಯದಿಂದಲೇ peer-reviewed ಆದ ಇ-ಪುಸ್ತಕಗಳು – ಯುನಿಕೋಡ್‌ನಲ್ಲೇ ತಯಾರಾದ ಮೊದಲ ಇ-ಪುಸ್ತಕಗಳು. 

ಇ-ಬುಕ್ ಪಬ್ಲಿಕೇಶನ್ ಕನ್ನಡದಲ್ಲಿ ಈಗ ಹೇಗಿದೆ? ಆಗಬೇಕಾದ ಪ್ರಮಾಣದಲ್ಲಿ ಆಗ್ತಾ ಇದೆಯೇ? ಈ ಕ್ಷೇತ್ರದಲ್ಲಿ ಏನಾಗಬೇಕಿದೆ?

ಇ-ಬುಕ್ ಪ್ರಕಟಣೆ ಉತ್ತರ ಭಾರತದ ಇತರೆ ಭಾಷೆಗಳಿಗೆ (ತಮಿಳು, ತೆಲುಗು, ಮಲಯಾಳಂ) ಹೋಲಿಸಿದಲ್ಲಿ ಕನ್ನಡ ಇನ್ನೂ ಹಿಂದೆ ಇದೆ. ಅಮೇಜಾನ್‌ನ ಪುಸ್ತಕ ಓದುಗ ಕಿಂಡಲ್‌ನಲ್ಲಿ ೨೦೧೮ರ ವರ್ಷದಿಂದ ಕ್ಲಿಷ್ಟ ಪದಗಳನ್ನು (Complex Characters Support) ಬೆಂಬಲಿಸಿದ ನಂತರ ತಮಿಳು, ತೆಲುಗು ಸೇರಿದಂತೆ ಕನ್ನಡವೂ ಸುಲಭವಾಗಿ ಮೂಡುವಂತೆ ಮಾಡಲಾಗಿದ್ದರೂ, ಕನ್ನಡದ ಇ-ಪುಸ್ತಕ ಪ್ರಕಟಣೆಗೆ ಅಮೇಜಾನ್ ಕಿಂಡಲ್‌ನ ಪ್ರಕಾಶಕ ತಂತ್ರಾಂಶಗಳು ಕನ್ನಡದ ಆಯ್ಕೆ ಕೊಡುತ್ತಿಲ್ಲ. ಇದಕ್ಕೆಂದೇ ಆನ್ಲೈನ್ ಚಳುವಳಿಯನ್ನೂ ಕೈಗೊಳ್ಳಲಾಗಿತ್ತು. ಆದರೆ ಅದರ ಆಯ್ಕೆ ನೀಡಿದರೂ, ಮೇಲೆ ಹೇಳಿದಂತೆ ಯುನಿಕೋಡ್‌ನಲ್ಲೇ ತಯಾರಾದ ಪುಸ್ತಕಗಳೂ, ಅದನ್ನು ಸಿದ್ಧಪಡಿಸಲು ಪ್ರಕಾಶಕರೂ ಮನಸ್ಸು ಮಾಡಿರಲಿಲ್ಲ ಎನ್ನಬಹುದು. 

ಈ ನಡುವೆ ಕನ್ನಡದ ಪುಸ್ತಕಗಳನ್ನು ಇ-ಪುಸ್ತ‍ಕಗಳ ಮಾದರಿಯಲ್ಲಿ ಪ್ರಕಟಿಸುವ ಮೇರಾ ಲೈಬ್ರರಿಯಂತಹ ‍ ಕಂಪೆನಿಗಳು ಬಂದು ಹೋಗಿವೆಯಾದರೂ, ಲೇಖಕರು ಹಾಗೂ ಪ್ರಕಾಶಕರಿಗೆ ಡಿಜಿಟಲ್ ಮಾಧ್ಯಮದ ಸಾಧ್ಯತೆ, ಸವಾಲುಗಳನ್ನು ಸ್ಪಷ್ಟವಾಗಿ ವಿವರಿಸಿ, ಅಗತ್ಯವಾದ ನಂಬಿಕೆಯನ್ನು, ಧೈರ್ಯವನ್ನು ತುಂಬಲು ಅವುಗಳಿಗೆ ಸಾಧ್ಯವಾಗಲಿಲ್ಲ.  ಇ-ಪುಸ್ತಕಗಳ ಕಡೆಗೆ ಪ್ರಕಾಶಕರು ತೋರುವ ಆಸಕ್ತಿ ಕಡಿಮೆ ಆಗಲು ಇವುಗಳೂ ಮುಖ್ಯ ಕಾರ‍ಣ. ಜೊತೆಗೆ ಇ-ಪುಸ್ತಕಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸು ಕಂಡ ಡೆಲಿ-ಹಂಟ್‌ನಂತಹ ಕಂಪೆನಿಗಳು ಇದ್ದಕ್ಕಿದ್ದಂತೆ ತಮ್ಮ ಕೆಲಸ ನಿಲ್ಲಿಸಿದ್ದೂ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಿತು. 

ಕನ್ನಡದ ಇ-ಪುಸ್ತಕಗಳನ್ನು ಗೂಗಲ್ ಪ್ಲೇ ಬುಕ್ ಮೂಲಕ ‍ಇಂತಹ ಕೆಲಸಕ್ಕೆ ಕೈ-ಹಾಕಿದ್ದು ಶ್ರೀ ವಸುದೇಂದ್ರ. ಇದರ ಬಗ್ಗೆ ಸ್ವತ: ಪ್ರಕಾಶಕರೂ, ಲೇಖಕರೂ ಆಗಿರುವ ಶ್ರೀ ವಸುದೇಂದ್ರ ಅವರನ್ನು ತಮ್ಮ ಇ-ಪುಸ್ತಕ ಪ್ರೇಮದ ಬಗ್ಗೆ ಕೇಳುತ್ತಾ ಮಾತಿಗೆ ಎಳೆದಾಗ, ಮೊದಲು ನಾವುಗಳು ಆಡೋಬ್ ಟೂಲ್‌ಗಳಲ್ಲಿ ಕನ್ನಡ ಬರುವಂತೆ ಮಾಡಲು ಪಟ್ಟ ಪಾಡು, ನಂತರ ದಿನಗಳಲ್ಲಿ ತಂತ್ರಜ್ಞಾನದ ಬೆಂಬಲ ದೊರೆತದ್ದನ್ನು ನೆನೆಯುತ್ತಾರೆ. ಜೊತೆಗೆ ಪೈರಸಿ ಇತ್ಯಾದಿಗಳ ಬಗ್ಗೆ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಇದ್ದ ಭಯವನ್ನು ಹೋಗಲಾಡಿಸಲು ತಾವು ಎಲ್ಲರನ್ನೂ ಒಟ್ಟುಗೂಡಿಸಿ ನೆಡೆಸಿದ ವಿಚಾರದ ಸಂಕಿರಣ ಬಗ್ಗೆ ಹೇಳುತ್ತಾರೆ. ಪ್ರಕಾಶಕರಿಗೆ ಮತ್ತು ಲೇಖಕರಿಗೆ ಪೈರಸಿ ಇತ್ಯಾದಿಗಳ ಬಗ್ಗೆ ಹಾಗೂ ಅವುಗಳನ್ನು ತಪ್ಪಿಸಲು ಲಭ್ಯವಿರುವ ಡಿಆರ್‌ಎಂ (ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್) / ವಿದ್ಯುನ್ಮಾನ ಹಕ್ಕುಗಳ ನಿರ್ವಹಣೆ ಬಗ್ಗೆ ಮಾಹಿತಿ ಇರುವುದನ್ನು, ತಮ್ಮ ಪುಸ್ತಕಕ್ಕೆ ತಕ್ಕ ಬೆಲೆಯನ್ನು ತಂದುಕೊಡಬಲ್ಲ ದೊಡ್ಡಣ್ಣಗಳಾದ ಅಮೇಜಾನ್ ಕಿಂಡಲ್/ಗೂಗಲ್ ಪ್ಲೇ ಸ್ಟೋರ್/ಆಪಲ್ ಐ-ಬುಕ್ಸ್ ಇತ್ಯಾದಿ ಕನ್ನಡದ ಮಟ್ಟಿಗೆ ಬಂಡವಾಳ ಹೂಡುವುದು ಪ್ರಕಾಶಕರ ಮತ್ತು ಲೇಖಕರ ಬಳಗಕ್ಕೆ ಮುಖ್ಯವಾಗುತ್ತದೆ ಎಂದು ವಸು ತಿಳಿಸುತ್ತಾರೆ.

ಇ-ಪುಸ್ತಕ ಸೃಷ್ಟಿ ಮತ್ತು ಪ್ರಕಟಣೆ

ಈ ಹಿಂದೆ ಕಂಪ್ಯೂಟರಿನಲ್ಲಿ ಡಿ.ಟಿ.ಪಿ ಮಾಡುವುದರಿಂದ ಹಿಡಿದು, ಪ್ರಿಂಟ್ ಹಾಗೂ ನಂತರದ ದಿನಗಳಲ್ಲಿ ಇ-ಪುಸ್ತಕಗಳನ್ನು ಮಾಡಿಕೊಡಿ ಎಂದು ಮೂರನೆ ವ್ಯಕ್ತಿಯನ್ನು ಆಶ್ರಯಿಸುವ ಅಗತ್ಯ ಬಹಳ ಇತ್ತು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬೆಳವಣಿಗೆಯನ್ನು ನೋಡಿದರೆ, ಕಂಪ್ಯೂಟರ್ ಅಥವಾ ಮೊಬೈಲ್ ಬಳಸಿ ಬರೆದ ಮೈಕ್ರೋಸಾಫ್ಟ್ ವರ್ಡ್, ಗೂಗಲ್ ಡಾಕ್ಸ್ ಇತ್ಯಾದಿ ಕಡತಗಳನ್ನು ಕ್ಷಣ ಮಾತ್ರದಲ್ಲಿ ಇ-ಪಬ್ ಆಗಿ ಮಾರ್ಪಡಿಸಲು ಅನೇಕ ಆನ್ಲೈನ್ ಅಥವಾ ಆಫ್ ಲೈನ್ ಸೌಲಭ್ಯಗಳಿವೆ. ಉದಾಹರಣೆಗೆ: ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಕಾಲಿಬ್ರೆ ಬಳಸಿ ಸುಲಭವಾಗಿ ಯಾವುದೇ ಕಂಪ್ಯೂಟರಿನ ಮೂಲಕ ಇ-ಪುಸ್ತಕ ಸೃಷ್ಟಿಸಬಹುದು. ಆದೇ ರೀತಿ ಆಪಲ್‌ನ ಮ್ಯಾಕ್‌ನಲ್ಲಿ ಐಬುಕ್ ಕ್ರಿಯೇಟರ್/ಪೇಜ್ಸ್‍ ಜೊತೆಗೆ ಇ-ಪುಸ್ತಕ ತಯಾರಿಸುವುದು ಎಂದರೆ ಅದೇ ಒಂದು ವಿಶಿಷ್ಟ ಅನುಭವ.  ಕಿಂಡಲ್ ಕ್ರಿಯೇಟ್‌ ಮೂಲಕವೂ ಇ-ಪುಸ್ತಕ ಸೃಷ್ಟಿ ಸಾಧ್ಯವಿದ್ದು – ಅಮೇಜಾನ್ ನಮ್ಮ ಭಾಷೆಯನ್ನು ಇಲ್ಲಿಗೆ ಸೇರಿಸಬೇಕಷ್ಟೇ. 

ಇ-ಪುಸ್ತಕಗಳನ್ನು ಪ್ರಕಟಿಸಿ ಮಾರಲು ಗೂಗಲ್ ಪ್ಲೇ ಬುಕ್ಸ್, ಇಟ್ಯೂನ್ಸ್, ಅಮೇಜಾನ್ ಕಿಂಡಲ್,ಕೊಬೋ, ಪೋತಿ ಬುಕ್ಸ್, ಜೊತೆಗೆ ಲುಲು.ಕಾಮ್ ನಂತಹ ಅನೇಕ ತಾಣಗಳಿವೆ. ಕೇವಲ ಕನ್ನಡಿಗ‌ರಷ್ಟೆ ಅಲ್ಲ, ಬೇರೆಯವರೂ ಕನ್ನಡ ಭಾಷೆಗೆ ತಮ್ಮ ಕೃತಿಗಳನ್ನು ತಂದು ಮಾರಲೂ – ಇಲ್ಲಿ ಮುಕ್ತ ಅವಕಾಶವಿದೆ. ಆಪಲ್ ಬುಕ್ಸ್, ಅಮೇಜಾನ್ ಕಿಂಡಲ್, ಗೂಗಲ್ ಪ್ಲೇ ಬುಕ್ ತಮ್ಮಲ್ಲಿ ವಿಶ್ವದಾದ್ಯಂತ ಮಾರುವ ಪುಸ್ತಕಗಳಿಗೆ ೭೦% ವರೆಗಿನ ರಾಯಧನವನ್ನೂ ನೀಡುತ್ತಿವೆ. 

ಕನ್ನಡ ಪುಸ್ತಕಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸಿದ ಇ-ಪುಸಕಗಳು ಹಾಗೂ ಸ್ಥಳೀಯ ಸಂಸ್ಥೆಗಳು

೨೦೧೮-೧೯ರಲ್ಲಿ ಕನ್ನಡದ ಪುಸ್ತಕಗಳು ನಿಜವಾಗಿ ಡಿಜಿಟಲ್ ಕವಚ ಹೊದ್ದು ಇ-ಪುಸ್ತಕಗಳ ರೂಪದಲ್ಲಿಯೂ ಜೊತೆಗೆ ಆಡಿಯೋ ಪುಸ್ತಕಗಳಾಗಿಯೂ ಜನರಿಗೆ ಲಭ್ಯವಾಗಲಾರಂಭಿಸಿದವು. ಹೊಸ ಡಿಜಿಟಲ್ ಪುಸ್ತಕ ಪ್ರಿಯರ ಮಾರುಕಟ್ಟೆ ಲೇಖಕರಿಗೆ, ಪ್ರಕಾಶಕರಿಗೆ, ಓದುಗರಿಗೆ ಬೆರಳಂಚಿನಲ್ಲಿ ದೊರೆಯಿತು. ಇದಕ್ಕೆ ಮುಖ್ಯ ಕಾರಣ ಇ-ಪುಸ್ತಕ ಸೇವೆಯನ್ನು ಒದಗಿಸಲು ಕನ್ನಡದ್ದೇ ಆದ ಖಾಸಗೀ ಸಂಸ್ಥೆಗಳು ಸೃಷ್ಟಿಯಾದದ್ದು. ವಿವಿಡ್‌ಲಿಪಿ, ಮೈಲ್ಯಾಂಗ್ ಬುಕ್ಸ್, ಋತುಮಾನ, ಆಲಿಸಿರಿ, ‌ಅಕ್ಷರ ಪ್ರಕಾಶನ,ಛಂದ ಪುಸ್ತಕ, ಶ್ರೀರಂಗಟೆಕ್ ಹೀಗೆ ಸಾಲಾಗಿ ಇ-ಪುಸ್ತಕ ಹಾಗೂ ಆಡಿಯೋ ಪುಸ್ತಕಗಳನ್ನು ಲಭ್ಯವಾಗಿಸಲು ಮುಂದಾಗಿವೆ. ಜೊತೆಗೆ ಪ್ರಕಾಶಕರು, ಲೇಖಕರಿಗೆ ತಮ್ಮವರೊಂದಿಗೇ ವ್ಯವಹರಿಸುವ, ಹೊಸ ಲೇಖಕರು, ಡಿ.ಟಿ.ಪಿ. ಕೆಲಸಗಾರರು, ‍‍ಸಂಪಾದಕರು, ‍ಕಲಾವಿದರು, ಚಿತ್ರಕಾರರು ಹೀಗೆ ಹತ್ತಾರು ಹೊಸ ಉದ್ಯೋಗಗಳ ಸಾಧ್ಯತೆಯನ್ನೂ ಕಂಡುಕೊಳ್ಳಲಾಗಿದೆ. ಇದೆಲ್ಲದರ ಜೊತೆಗೆ ಸ್ವಯಂ ಪ್ರಕಾಶನಕ್ಕೂ ಒತ್ತುಕೊಡುವ, ಇ-ಪುಸ್ತಕಗಳನ್ನು ಬೇರೆ ಬೇರೆ ಮಾದರಿಗಳಲ್ಲಿ ಸೃಷ್ಟಿಸಲು ಬೇಕಿರುವ ತಂತ್ರಾಂಶ, ಯುನಿಕೋಡ್‌ನಲ್ಲೇ ಕೆಲಸ ಮಾಡಲು ಸಾಧ್ಯವಾಗುವ ಎಡಿಟಿಂಗ್ ಡೆಸ್ಕ್, ಜೊತೆಗೆ ಪ್ರಿಂಟ್‌ ಆನ್ ಡಿಮ್ಯಾಂಡ್‌ಗೂ ಒಮ್ಮೆಲೆ ಇ-ಪುಸ್ತಕಗಳನ್ನು ಸೃಷ್ಟಿಸುವ ಸಾಧ್ಯತೆಗಳನ್ನು ಟೆಕ್‌‌ಫಿಝ್ ಸಂಸ್ಥೆಯ ಇ-‌Pustaka ink & weave ‌ಅಭಿಯಾನ ಒದಗಿಸಿಕೊಟ್ಟಿದ್ದು, ತಂತ್ರಜ್ಞಾನದ ಅರಿವು, ಬಳಕೆಗೆ ಬೇಕಿರುವ ಸೇವಾ ಸವಲತ್ತುಗಳನ್ನು ಕನ್ನಡಕ್ಕೆ ಒದಗಿಸಿಕೊಡುತ್ತಿದೆ. ಮೈಲ್ಯಾಂಗ್ ೪೦೦+, ಋತುಮಾನ ೧೦೦+, ಅಕ್ಷರ ಪ್ರಕಾಶನ ಸುಮಾರು ೧೦೦ ಇ-ಪುಸ್ತಕಗಳನ್ನು ಕನ್ನಡಿಗರಿಗೆ ಒದಗಿಸಿದ್ದು, ಪ್ರಕಾಶಕರು ಹಾಗೂ ಲೇಖಕರಿಗೆ ನೇರವಾಗಿ ಇ-ಪುಸ್ತಕ ಸಿದ್ಧಪಡಿಸಿ ಪ್ರಕಟಿಸುವ ಸೇವೆ ಒದಗಿಸುವ ಟೆಕ್‌ಫಿಝ್ ಮೊದಲ ತಿಂಗಳಲ್ಲೇ ೨೫ಕ್ಕೂ ಹೆಚ್ಚು ಪುಸ್ತಕಗಳ ಇ-ಪುಸ್ತಕ ರೂಪ ಸಿದ್ಧಪಡಿಸಿದೆ. ಇದೆಲ್ಲದರ ಜೊತೆಗೆ ಬುಕ್ ಬ್ರಹ್ಮ, ಅವಧಿ, ಇ-ಹೊತ್ತಿಗೆ, ಪ್ರತಿಲಿಪಿ ಯಂತಹ ಆನ್ಲೈನ್ ವೇದಿಕೆಗಳು, ಫೇಸ್‌‌‌ಬುಕ್, ವಾಟ್ಸಾಪ್, ಟೆಲಿಗ್ರಾಂ, ಯೂಟ್ಯೂಬ್ ಗುಂಪುಗಳೂ ಕೂಡ ಕನ್ನಡ ಪುಸ್ತಕಗಳ ಕಂಪನ್ನು ಹರಿಯಲು ಬಿಟ್ಟಿವೆ. 

ಹೊರನಾಡ ಕನ್ನಡಿಗರು ಕನ್ನಡ ಇ-ಪುಸ್ತಕಗಳನ್ನು ಅವುಗಳ ಬಿಡುಗಡೆಯ ಕ್ಷಣದಿಂದಲೇ ಖರೀದಿಸಿ, ಓದುವ ಸಾಧ್ಯತೆಯನ್ನು ಈಗ ಪರಿಪೂರ್ಣವಾಗಿ ಕಂಡುಕೊಳ್ಳಲಾಗಿದೆ. 

ಡಿಜಿಟಲ್ ಕನ್ನಡ ಪುಸ್ತಕಗಳು ಹಾಗೂ ಸಮುದಾಯ

ಇದುವರೆಗೆ ಈ ಮೇಲೆ ಹೇಳಿದಂತೆ ಕನ್ನಡ ಪುಸ್ತಕಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ವಾಣಿಜ್ಯ ರೂಪದಲ್ಲೇ ಭಾಷೆಯನ್ನೂ, ಭಾಷೆಯ ಸೇವೆಯನ್ನೂ ನೋಡುವ ಸಾಮಾನ್ಯ ವಿಷಯ ನಿಮಗೆ ಕಂಡು ಬಂದಿರಬಹುದು. 

ಇದೆಲ್ಲದರ ನಡುವೆ ಕಳೆದ ಎರಡು ಮೂರು ವರ್ಷಗಳಿಂದ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಇತ್ಯಾದಿಗಳಲ್ಲಿದ್ದ ಕನ್ನಡದ ಪಿಡಿಎಫ್ ಪುಸ್ತಕಗಳನ್ನು ಕಾಪಿಡುವ, ಅವುಗಳನ್ನು ಜನರಿಗೆ ಸುಲಭವಾಗಿ ಸಿಗುವಂತೆ ಮಾಡುವ ಸಮುದಾಯ ಸಹಭಾಗಿತ್ವದ (crowd sourcing) ಯೋಜನೆಯಾದ ಪುಸ್ತಕ ಸಂಚಯ (https://pustaka.sanchaya.net) ಮಾಡಿರುವ ಕೆಲಸವನ್ನೂ ಗಮನಿಸಬೇಕು. 

ಇದ್ದೂ ಇಲ್ಲದಂತಾಗಿದ್ದ ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯಾ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿದ್ದ ೬೦೦೦ ಡಿಜಿಟಲೀಕರಿಸಿದ ಪುಸ್ತಕಗಳಿಗೆ ಜನರ ಸಹಾಯದಿಂದ ಅವುಗಳ ಹೆಸರು, ಲೇಖಕರ ಹೆಸರು, ಪ್ರಕಾಶಕರ ಹೆಸರು ಇತ್ಯಾದಿ ಮೆಟಾಡೇಟಾವನ್ನು ಕನ್ನಡೀಕರಿಸಿ – ಇಂಟರ್ನೆಟ್ ಮೂಲಕ ಅವುಗಳ ಸುಲಭ ಲಭ್ಯತೆಗೆ ಈ ಯೋಜನೆ ಕಾರಣವಾಯಿತು. ಈ ಪುಸ್ತಕಗಳ‌ನ್ನು ಡಿಜಿಟಲೀಕರಿಸಿದ ಮೂಲ ಯೋಜನೆಯ ತಾಣಗಳು ಈಗ ಸಾರ್ವಜನಿಕರಿಗೆ ಲಭ್ಯ ಇಲ್ಲದಿರುವುದನ್ನು ಮನಗಂಡು ಇಷ್ಟೂ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ಇಲ್ಲೂ ಸಹ ಪುಸ್ತಕಗಳ ಮೆಟಾಡೇಟಾ ಕನ್ನಡದಲ್ಲಿರುವುದರಿಂದ ನೇರವಾಗಿ ಗೂಗಲ್ ಸರ್ಚ್ನಲ್ಲಿ ಕೂಡ ಈ ಕೊಂಡಿಗಳು ಸಿಗುವುದು ಸಾಧ್ಯವಾಗಿದೆ. ಪುಸ್ತಕ ಸಂಚಯದ ಮೂಲಕ ೬೦೦೦ಕ್ಕೂ ಹೆಚ್ಚು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯಾ ಡಿಜಿಟಲ್ ಲೈಬ್ರರಿಯ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್ ಮೂಲಕ ಹುಡುಕಿ ಪಡೆಯುವ ಅವಕಾಶವಿದೆ. ಈ ಎಲ್ಲಾ ಪುಸ್ತಕಗಳನ್ನು ಪರಿಪೂರ್ಣ ಇ-ಪುಸ್ತಕ ಆಗಿಸುವ ಕಾರ್ಯವನ್ನೂ ಕೂಡ ಸಂಚಯ (https://sanchaya.org) ಕೈಗೆತ್ತಿಕೊಂಡಿದೆ. ಇದರ ಜೊತೆಗೆ ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಧಿಕಾರ ಇತ್ಯಾದಿಗಳು ಪ್ರಕಟಿಸಿರುವ ಪುಸ್ತಕಗಳ ಮಾಹಿತಿಯನ್ನೂ ಇದು ಒದಗಿಸುತ್ತಿದ್ದು, ಜನರನ್ನು ಆಯಾ ಸಂಸ್ಥೆಯ ಜಾಲತಾಣಕ್ಕೆ ಒಯ್ದು ಬಿಡುತ್ತದೆ. ಇದಕ್ಕೆ ಪ್ರಕಾಶಕರು ಹಾಗೂ ಲೇಖಕರು ಸಹಕರಿಸಿದರೆ ಮುಂದೊಂದು ದಿನ ಕನ್ನಡದ ಪುಸ್ತಕಗಳ ಸಂಪೂರ್ಣ ಪರಿವಿಡಿ ದೊರೆಯುವುದರಲ್ಲಿ ಸಂಶಯವೇ ಇಲ್ಲ. 

ಈ ಮಧ್ಯೆ ಸಂಚಯ ಕನ್ನಡ ಪುಸ್ತಕಗಳ ಡಿಜಿಟಲೀಕರಣ ಯೋಜನೆ – ಕಾಪಿರೆಟ್ ಹೊರತಾದ ಹಾಗೂ ಲೇಖಕ/ಪ್ರಕಾಶಕರು ತಾವಾಗಿಯೇ ಮುಂದೆ ಬಂದು – ಮುಕ್ತ ಜ್ಞಾನದ (Open Knowledge intiative) ಆಶಯಕ್ಕೆ ಓಗುಡುತ್ತಾ –  ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಅಡಿ ಬಿಡಿಗಡೆ ಗೊಳಿಸಿದ ೧೫೦೦ಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್, ಪಬ್ಲಿಕ್ ರಿಸೋರ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಸಂಚಿ ಫೌಂಡೇಷನ್ ಆಶ್ರಯದಲ್ಲಿ ಡಿಜಿಟಲೀಕರಿಸಿದೆ. ಇಂಟರ್ನೆಟ್ ಆರ್ಕೈವ್‌ನ ಅಂತರರಾಷ್ಟ್ರೀಯ ಮಟ್ಟದ ಸ್ಕ್ಯಾನರ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಓಪನ್ ಸ್ಟಾಂಡರ್ಡ್ಸ್ ಬಳಸಿ ಸ್ಕ್ಯಾನ್ ಮಾಡಲಾಗಿದೆ. ಎರಡನೇ ಹಂತದಲ್ಲಿ ಈ ಪುಸ್ತಕಗಳನ್ನು ಗೂಗಲ್ ವಿಷನ್ ಎಪಿಐ ಬಳಸಿ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್) ತಂತ್ರಜ್ಞಾನ ಬಳಸಿ ಓಸಿಆರ್ ಮಾಡಲಾಗಿದ್ದು, ಎಲ್ಲ ಪುಸ್ತಕಗಳ ಪೂರ್ಣ ಪಠ್ಯ ಯುನಿಕೋಡ್‌ನಲ್ಲಿ ಲಭ್ಯವಾಗಿದೆ ಹಾಗೂ ಈ ಪುಸ್ತಕಗಳು ಇಪಬ್ ಹಾಗೂ ಇತರೆ ಮಾದರಿಗಳಲ್ಲಿ ಲಭ್ಯವಿವೆ. ಈ ಪುಸ್ತಕಗಳಲ್ಲಿ ನೇರವಾಗಿ ಯುನಿಕೋಡ್‌ನಲ್ಲಿ ಸರ್ಚ್ ಮಾಡಬಹುದು. ಇವುಗಳ ಪಿಡಿಎಫ್‌ನಲ್ಲೂ ಯುನಿಕೋಡ್ ಸರ್ಚ್ ಸುಲಭವಾಗಿ ಕೆಲಸ ಮಾಡುತ್ತದೆ. ಈ ಎಲ್ಲಾ ಪುಸ್ತಕಗಳನ್ನು https://digital.sanchaya.net ಹಾಗೂ https://archive.org/details/ServantsOfKnowledge  ಮೂಲಕವೂ ಸುಲಭವಾಗಿ ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಲಭ್ಯವಾದ ಪುಸ್ತಕಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುವ ಮೂಲಕ ನೇರವಾಗಿ ಪಡೆಯುವುದೂ ಸಾಧ್ಯವಾಗಿದ್ದು, ಇದರ ಮೂಲಕ ಪುಸ್ತಕ ಹುಡುಕಾಟಕ್ಕೆ ವೆಬ್‌ಸೈಟ್‌ಗಳನ್ನು ಮಾತ್ರ ಅವಲಂಭಿಸುವ ಕಷ್ಟ ತಪ್ಪಿಸಲಾಗಿದೆ. 

ಸಮುದಾಯ ಒದಗಿಸಿದ ಇ-ಪುಸ್ತಕಗಳು

ಜಿ. ಟಿ ನಾರಾಯಣರಾವ್ (ಸಮಗ್ರ), ಕೆ. ವಿ. ಸುಬ್ಬಣ್ಣ, ಪಾವೆಂ ಆಚಾರ್ಯ (ಸಮಗ್ರ), ಚೆನ್ನಪ್ಪ ಎರೇಸೀಮೆ (ಸಮಗ್ರ), ಕೆ. ವಿ. ಅಕ್ಷರ, ಓ. ಎಲ್. ನಾಗಭೂಷಣ ಸ್ವಾಮಿ, ಟಿ. ಆರ್. ಅನಂತರಾಮು, ಎ.ಪಿ. ಮಾಲತಿ (ಸಮಗ್ರ), ಪಾಲಹಳ್ಳಿ ವಿಶ್ವನಾಥ್ ಮುಂತಾದವರ ಕೃತಿಗಳೂ, ೫೦ ವರ್ಷದ ಕಸ್ತೂರಿ ಸಂಚಿಕೆಗಳು, ನೀನಾಸಂ‌ನ ಮಾತುಕತೆ, ಸಂಚಯ, ನಗುವ ನಂದ, ‍ಸಾಕ್ಷಿ, ರುಜುವಾತು, ‍ಕಾನನ, ‍ನವಕರ್ನಾಟಕದ ಹೊಸತು, ‍‍‍ಪಂಚಾಮೃತ. ಸಿದ್ದಗಂಗ ಮಠದ ೫೦ ವರ್ಷಗಳ ತ್ರೈಮಾಸಿಕ, ‍ಕಲ್ಯಾಣ ಕನ್ನಡ, ‍‍ಇತ್ಯಾದಿ ಪತ್ರಿಕೆಗಳೂ ಸೇರಿದ್ದು – ಕೆಲವು ಅಮೂಲ್ಯ ಪ್ರಥಮ ಮುದ್ರಣಗಳು ಜನರ ಒತ್ತಾಸೆಯಿಂದಲೇ ಮುಂದಿನ ತಲೆಮಾರಿಗೆ ಕಾಪಿಡಲು ಲಭ್ಯವಾಗಿವೆ. ಇತ್ತೀಚೆಗೆ ನವಲುಗುಂದದ ಶಂಕರ ಆರ್ಟ್ಸ್‌ ಮತ್ತು ಕಾಮರ್ಸ್ ಕಾಲೇಜು ಕೂಡ ತನ್ನಲ್ಲಿನ ಅಮೂಲ್ಯ ಹಸ್ತ ಪ್ರತಿಗಳನ್ನು ಈ ಯೋಜನೆಯ ಮೂಲಕ ಡಿಜಿಟಲೀಕರಿಸಿದೆ. 

ಈ ಸಮುದಾಯದ ಕೆಲಸ‌ಗಳು ದಶಕಗಳ ಕನ್ನಡ ಮುದ್ರಣದಲ್ಲಿ ಅಡಗಿದ್ದ ಅನೇಕ ವಿಷಯಗಳನ್ನು ಹುಡುಕಿ ನೋಡಿ ಮತ್ತೆ ಆಸ್ವಾದಿಸಲು ಅವಕಾಶ ಮಾಡಿಕೊಟ್ಟಿದೆ. 

ಮುಕ್ತ ಜ್ಞಾನವನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ

ಪಬ್ಲಿಕ್ ಡೊಮೇನ್‌ನಲ್ಲಿರುವ ಕನ್ನಡ ಪುಸ್ತಕಗಳನ್ನು ಉತ್ತಮ ತಾಂತ್ರಿಕ ಶಿಷ್ಠಾಚಾರಗಳನ್ನು ಅಳವಡಿಸಿಕೊಂಡಿರುವ ವೇದಿಕೆಗಳ ಮೂಲಕ (ಉದಾ: ಇಂಟರ್ನೆಟ್ ಆರ್ಕೈವ್) ಲಭ್ಯವಾಗಿಸಲು ನಮ್ಮ ಸರ್ಕಾರೀ ಯೋಜನೆಗಳು ಖಂಡಿತವಾಗಿಯೂ ಆಲೋಚಿಸಬೇಕಿದೆ. ಕಣಜ ಹಾಗೂ ಭಾರತವಾಣಿಯಲ್ಲಿ ಲಭ್ಯ ಪುಸ್ತಕಗಳ ಸಂಖ್ಯೆಯನ್ನು ತಿಳಿದುಕೊಳ್ಳುಲು ತಡಕಾಡಬೇಕಾಗಿದೆ. ಪುಸ್ತಕಗಳನ್ನು ಹುಡುಕಿ ಓದುವುದು ಮತ್ತೊಂದು ಸಾಹಸ. ಕೆಲವೊಮ್ಮೆ ಈ ತಾಣಗಳು ತೆರೆದುಕೊಳ್ಳುವುದೂ ಇಲ್ಲ. ‌ಇವುಗಳ ಬಗ್ಗೆ ಹಲವಾರು ಬಾರಿ ವಿಚಾರಿಸಿದರೂ, ತಾಂತ್ರಿಕ ನೆರವು ನೀಡಲು ಮುಂದೆ ಬಂದರೂ ಕೆಳುವ ಸ್ಥಿತಿಯಲ್ಲಿ ಯೋಜನೆ ಇಲ್ಲ ಎನಿಸುತ್ತದೆ. ಸಾರ್ವಜನಿಕರಿಗೆ ಮುಕ್ತವಾಗಿಸಿದ ಪುಸ್ತಕಗಳಿಗೆ ಕ್ರಿಯೇಟೀವ್ ಕಾಮನ್ಸ್ ಪರವಾನಗಿ ಬಳಸುವ ಶಿಷ್ಠತೆಯನ್ನು ವಿಶ್ವದ ಅನೇಕ ದೇಶಗಳ ಸರ್ಕಾರಗಳು, ವಿಶ್ವವಿದ್ಯಾನಿಲಯಗಳು, ಜೊತೆಗೆ ನಮ್ಮ ದೇಶದ ಐಐಟಿ, ಒಡಿಸ್ಸಾ, ಕೇರಳ ಸರ್ಕಾರಗಳಂತೆ ಕರ್ನಾಟಕ ಸರ್ಕಾರವೂ ಬಳಸುವ ಮನಸ್ಸು ಮಾಡಬೇಕಿದೆ. ಇದು ಡಿಜಿಟಲ್ ರೂಪದಲ್ಲಿರುವ ಪುಸ್ತಕಗಳನ್ನು ಬಳಸುವವರು ಯಾವ ಹಕ್ಕು ಹೊಂದಿರುತ್ತಾರೆ ಎನ್ನುವುದನ್ನು ಸೂಚ್ಯವಾಗಿ ತಿಳಿಸುವ ಹಾಗೂ ಅದನ್ನು ಕಾನೂನು, ಸಾಮಾನ್ಯರ ಪರಿಭಾಷೆ ಹಾಗೂ ಯಾಂತ್ರಿಕ ಪರಿಭಾಷೆಯಲ್ಲೂ ತಿಳಿಸುವ ಸಾಧ್ಯತೆಗಳನ್ನು ನಮ್ಮ ಸರ್ಕಾರೀ ಯೋಜನೆಗಳಿಗೆ ಒದಗಿಸುತ್ತದೆ. 

ಕೊನೆಯ ಹನಿ:

ಭಾಷಾ ತಂತ್ರಜ್ಞಾನಗಳು ಭಾಷೆಯ ‌ಗುರುತು ಹಿಡಿಯುವಿಕೆಯನ್ನು ಸಾಧ್ಯವಾಗಿಸಿವೆ. ಜೊತೆಗೆ, ಈ ಹಿಂದೆ ಬಂದಿದ್ದ ಎಲ್ಲ ಕೃತಿಗಳನ್ನು ಜನ ಸಾಮಾನ್ಯ ತಂತ್ರಜ್ಞಾನದ ಸಹಾಯದ ಮೂಲಕ ಹುಡುಕಲು, ಭಾಷೆಯ ಬೆಳವಣಿಗೆಯ ಬಗ್ಗೆ ಅರಿಯಲು, ಅದರಲ್ಲಿನ ಜ್ಞಾನದ ಹರಿವನ್ನು ತನ್ನದಾಗಿಸಿಕೊಳ್ಳುವುದಕ್ಕೆ ಹೊಸ ಆಯಾಮಗಳನ್ನು ಹುಡುಕಿ ಕೊಡುತ್ತಿವೆ.  ಲೇಖಕರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತಷ್ಟು ಉತ್ತಮ ಲೇಖನಗಳನ್ನು ಕನ್ನಡದಲ್ಲಿ ಒದಗಿಸಲು ಸಹಕಾರಿಯಾಗುತ್ತಿವೆ. ಈಗಾಗಲೇ ಇರುವ ನಿಘಂಟುಗಳನ್ನು ತ್ವರಿತವಾಗಿ ಯುನಿಕೋಡ್‌ಗೆ ಪರಿವರ್ತಿಸಲು ಮತ್ತು ಅವುಗಳನ್ನು ಬಳಕೆಗೆ ಅನುವು ಮಾಡಿಕೊಡಲು, ಡಿ.ಟಿ.ಪಿ ಪ್ರೂಫ್ ರೀಡ್ ಇತ್ಯಾದಿಗಳ ಬದಲು ಓ.ಸಿ.‌ಆರ್ ಬಳಸಿದರೆ ಫೂಫ್ ರೀಡ್ ಮಾಡುವ ವ್ಯಕ್ತಿಯೇ ಇಡೀ ನಿಘಂಟನ್ನು ಯುನಿಕೋಡ್‌ಗೆ ತರಲು ತಗಲುವ ಸಮಯ ಕಡಿಮೆ ಆಗುತ್ತದೆ.  ಪಿ.ಡಿ.ಎಫ್ ‌ನಲ್ಲಿ ಹುಡುಕು ಸಾಧ್ಯವಾದರೆ ಇಡೀ ಪುಸ್ತಕವನ್ನು ನಿಮಗೆ ಬೇಕಿರುವ ಪದ ಹುಡುಕಲು, ಮುಂದೆ ಇದೇ ಪುಸ್ತಕ ಇ-ಪುಸ್ತಕವಾದಲ್ಲಿ ಪದದ ಜೊತೆಗೆ ನಿಘಂಟುವಿನಿಂದ ಇತರೆ ಅರ್ಥಗಳೂ ‍ಸಿಗುವಂತಾದರೆ ವಿಜ್ಞಾನ ಓದಿನ ಮಜವೇ ಬೇರೆ ಅಲ್ಲವೇ? ಗೂಗಲ್ ಮಾಡುವಾಗಲೇ ಈ ಪುಸ್ತಕಗಳ ಇರುವು ಮತ್ತು ಅದರ ಪ್ರಯೋಗದ ಮಾಹಿತಿ ಕೂಡ ಮುನ್ನೋಟದ (‌preview) ಮೂಲಕ ದೊರೆತರೆ ನಿಮ್ಮ ಬರಹ, ‍ಸಂಶೋಧನೆಯ ವೇಗ ಇತ್ಯಾದಿಗಳಿಗೆ ಹೊಸ ಎಂಜಿನ್ ಅಳವಡಿಸಿದಂತಾಗುತ್ತದೆ.