ಗಂಗಾವತಿಯಲ್ಲಿ ನೆಡೆದ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಧುನಿಕ ಜಗತ್ತು ಮತ್ತು ಕನ್ನಡ ಗೋಷ್ಠಿಯಲ್ಲಿ  ನಾನು ಮಾಡಿದ ಭಾಷಣದ ಪ್ರತಿ ಇಲ್ಲಿದೆ. ನನ್ನ ಅನುಭವವನ್ನು ಮತ್ತೊಂದು ಬ್ಲಾಗ್ ಫೋಸ್ಟ್ ನಲ್ಲಿ ಹಂಚಿಕೊಳ್ಳುತ್ತೇನೆ.

೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೧ ಗಂಗಾವತಿ, ಕೊಪ್ಪಳ
ಗೋಷ್ಠಿ – ಆಧುನಿಕ ಜಗತ್ತು ಮತ್ತು ಕನ್ನಡ
ವಿಷಯ – ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಇಂದು ಮತ್ತು ಮುಂದು

— —

ನಮಸ್ಕಾರ ಗಂಗಾವತಿ. ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಇಂದು ಮತ್ತು ಮುಂದು, ಈ ವಿಷಯವನ್ನು ಮಂಡಿಸುವ ಮುನ್ನ ಒಂದು ಸಣ್ಣ ರಿಯಾಲಿಟಿ ಚೆಕ್. ತಂತ್ರಜ್ಞಾನ ನಮಗೆಲ್ಲಿ ಅರ್ಥವಾಗುತ್ತದೆ ಎನ್ನುವಿರಾ? ಕನ್ನಡದಲ್ಲಿ ವಿಷಯವನ್ನು ಪ್ರಸ್ತಾಪಿಸಿದಲ್ಲಿ ರಾಕೆಟ್ ತಂತ್ರಜ್ಞಾನವನ್ನೂ ಕೂಡ ನೀವು ಅರ್ಥ ಮಾಡಿಕೊಳ್ಳಬಲ್ಲಿರಿ. ಆದ್ದರಿಂದ ಚಿಂತೆ ಬೇಡ. ನಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಫೋನ್ ಇದೆ? ಅದರಲ್ಲಿ ಕನ್ನಡ ಬರುತ್ತಾ? ಕನ್ನಡದಲ್ಲಿ ಎಸ್.ಎಂ.ಎಸ್ ಬರುತ್ತಾ? ನೀವು ಕನ್ನಡದಲ್ಲಿ ಕಳಿಸಿದ ಎಸ್.ಎಂ.ಎಸ್ ಬೇರೆಯವರ ಮೊಬೈಲ್ ನಲ್ಲಿ ಓದ್ಲಿಕ್ಕಾಗುತ್ತಾ? ಹೌದು / ಇಲ್ಲ  ಎಂಬ ಉತ್ತರ ನಮ್ಮದು.

ಮಾಹಿತಿ ತಂತ್ರಜ್ಞಾನ ನಮ್ಮೆಲ್ಲರ ಜೀವನಗಳಲ್ಲಿ ಇಂದು ಹಾಸು ಹೊಕ್ಕಾಗಿದೆ. ಕಿಸೆಯಲ್ಲಿ ಕೂರುವ ಆ ಮೊಬೈಲ್ ಫೋನ್ ಕೂಡ ಮಾಹಿತಿ ತಂತ್ರಜ್ಞಾನದ ಮಹಾಪೂರವನ್ನು ನಿಮ್ಮ ಬೆರಳಂಚುಗಳಲ್ಲಿ ಹರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರಲ್ಲಿ ಕನ್ನಡ ಒಂದು ಪ್ರಶ್ನೆ. ಮೊಬೈಲ್‌ಗಳಿಂದ ಹಿಡಿದು ಹತ್ತಾರು ವಿಷಯಗಳಲ್ಲಿನ ಶಿಷ್ಟತೆ/ಸ್ಟಾಂಡರ್ಡ್ಸ್ ನ ಕೊರತೆಯಿಂದಾಗಿ ತಂತ್ರಜ್ಞಾನದಲ್ಲಿ ಕನ್ನಡದ ಬಳಕೆಗೆ ಬಹಳಷ್ಟು ತೊಡಕುಗಳಿವೆ. ಆದರೂ, ಕನ್ನಡ ಮಾಹಿತಿ ತಂತ್ರಜ್ಞಾನದ ಸುತ್ತ ಬೆಳದಿದೆ. ನಿಮಗೆ ಈ ವಿಷಯಗಳನ್ನು ಸುಲಭವಾಗಿ ವಿವರಿಸಲು ಒಂದೆರಡು ಕಥೆಗಳನ್ನು ಹೇಳುತ್ತೇನೆ.

ನಮ್ಮೆಲ್ಲರ ಮೆಚ್ಚಿನ ಪೂಚಂತೇ (ಪೂರ್ಣ ಚಂದ್ರ ತೇಜಸ್ವಿಯವರು) ವರ್ಷಾನುವರ್ಷಗಳ ಹಿಂದೆಯೇ ಕಂಪ್ಯೂಟರ್ ಬಳಸುತ್ತಿದ್ದರಂತೆ. ನಾನು ಕಾಲೇಜು ಮೆಟ್ಟಿಲನ್ನು ಹತ್ತಿ ಕಂಪ್ಯೂಟರ್ ಮುಂದೆ ಕೂರುವುದರೊಳಗೆ ಅವರು ಬಳಸುತ್ತಿದ್ದ ವಿಂಡೋಸ್ ‌ ತಂತ್ರಾಂಶದ ಆವೃತ್ತಿ ಮ್ಯೂಸಿಯಂ ಪೀಸ್ ಆಗಿದ್ದರೂ, ನಮಗದು ಹೊಸದು. ದಿನ ಕಳೆಯುತ್ತಿದ್ದಂತೆ ಕಂಪ್ಯೂಟರ್ ದಿನನಿತ್ಯದ ಆಟಿಕೆಯಾಯಿತು. ಮುಂದೊಮ್ಮೆ ಇದರಲ್ಲಿ ಕನ್ನಡ ಬರುವುದಿಲ್ಲವೇ ಎಂಬ ಪ್ರಶ್ನೆ. ಕುತೂಹಲ. ಕಂಪ್ಯೂಟರ್ ನಮ್ಮ ಜೀವನಕ್ಕೆ ಅಣಿ ಇಟ್ಟ ಮೊದಲ ದಿನಗಳಲ್ಲೇ ಪೂಚಂತೇ ಕನ್ನಡ ಓದಲು ಬರೆಯಲು ಸಾಧ್ಯ, ಅದು ಹೇಗೆ, ಎತ್ತ ಎಂಬ ಹತ್ತಾರು ವಿಷಯಗಳ ಬಗ್ಗೆ ಅಭ್ಯಸಿಸಿದ್ದರು. ಅನೇಕರನ್ನು ಒಟ್ಟುಗೂಡಿಸಿ ಕನ್ನಡಕ್ಕೆ ಬೇಕಾದ ತಂತ್ರಜ್ಞಾನ, ತಂತ್ರಾಂಶ, ಫಾಂಟುಗಳು ಇತ್ಯಾದಿ ಕೆಲಸಗಳಿಗೆ ಮುನ್ನುಡಿ ಬರೆದರು. ಈಗ ವಿಂಡೋಸ್, ಲಿನಕ್ಸ್ ಜೊತೆಗೆ ಮೊಬೈಲ್ ನಲ್ಲೂ ಕನ್ನಡ ಓದುವ ಮತ್ತು ಬರೆಯುವ ಸಾಧ್ಯತೆಗಳಿವೆ. ಯುನಿಕೋಡ್‌ನ ಶಿಷ್ಟತೆಯನ್ನು ಬಳಸಿ ಕನ್ನಡದಲ್ಲಿ ವ್ಯವಹರಿಸಿದರೆ, ಎಲ್ಲರೂ ಕನ್ನಡದ ಸವಿಯನ್ನು ಸುಲಭವಾಗಿ ಸವಿಯಬಹುದು ಎಂಬುದನ್ನು ನಾವೂ, ಸರ್ಕಾರ ಇಬ್ಬರೂ ಅರಿತುಕೊಂಡಿದ್ದೇವೆ.

ಕಳೆದ ಕೆಲವು ವರ್ಷಗಳ ಕೆಳಗೆ ೭೮ ವರ್ಷದ ಯುವಕರೊಬ್ಬರು… ತಂತ್ರಜ್ಞಾನದ ಮೂಲಕ ಕನ್ನಡದ ಬಳಕೆಗೆ ಬಹಳ ಉತ್ಸುಕರಾಗಿ ಕೆಲಸ ಮಾಡುತ್ತಿರುವುದು, ನನ್ನ ಹಾಗೂ ನನ್ನ ಗೆಳೆಯರ ಕಣ್ಣಿಗೆ ಬಿತ್ತು. ಸರ್ಕಾರಿ ಕೆಲಸದಿಂದ ನಿವೃತ್ತಿಯ ಬಳಿಕ  ಇವರಿಗೆ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಅನೇಕರ ಕಂಪ್ಯೂಟರೀಕರಣದ ದಿನಗಳ ನೆನಪು. ರಾಶಿ ರಾಶಿ ಕಡತಗಳನ್ನು ಕೀಲಿಮಣೆಯಿಂದ ದಿನವಿಡೀ ಕುಟ್ಟುತ್ತಿದ್ದ ಜನರ ಕೈ ಬೆರಳುಗಳ ನೋವು ನಿವಾರಿಸುವ ಬಗೆ ಹೇಗೆ ಎಂಬ ಪ್ರಶ್ನೆ ತಲೆಯಲ್ಲಿ ಮೂಡಿದ್ದರೂ, ಸುಮ್ಮನೆ ಕೂರಲಿಲ್ಲ. ಇಂಟರ್ನೆಟ್ ನ ಮೂಲಕ ತಮ್ಮ ಪ್ರಶ್ನೆಗೆ ಉತ್ತರ ಹುಡುಕಲು ಪ್ರಾರಂಭಿಸಿದರು.  ಕಡತಗಳನ್ನು ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ಕಂಪ್ಯೂಟರ್ ಗೆ ಅದು ರವಾನೆಯಾದ ನಂತರ, ಅವನ್ನು ನಮಗೆ ಬೇಕಾದ ರೂಪದಲ್ಲಿ ಕ್ರೂಡೀಕರಿಸಲು ಸಾಧ್ಯವೇ ಎಂಬ ಒಂದು ಸಣ್ಣ ಅಧ್ಯಯನವನ್ನು ಪ್ರಾರಂಭಿಸಿದರು. ೭೮ ವಯಸ್ಸು, ಹಲವು ಹೃದಯಾಘಾತ, ಕಣ್ಣಿಗೆ ಮತ್ತು ಕಿವಿಗೆ ಮುಪ್ಪಿನ ನಂಟು. ಆದರೂ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಛಲ. ಛಲಬಿಡದ ತಿವಿಕ್ರಮನಂತೆ ಕನ್ನಡಕ್ಕೆ ಓ.ಸಿ.‌ಆರ್ ಮಾಡಬಲ್ಲೆನೇ ಎಂಬ ಸಾಧ್ಯಾಸಾಧ್ಯತೆಗಳ ಜೊತೆ ಸೆಣೆಸಲಾರಾಂಭಿಸಿದರು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅರಿವು ಮತ್ತು ಅದರ ಸುತ್ತಲಿನ ಸಮುದಾಯ ತನ್ನ ಆಸೆಯನ್ನು ನೆರವೇರಿಸಿಕೊಳ್ಳಲು ಸಹಾಯ ಮಾಡಬಲ್ಲದು ಎಂಬ ವಿಶ್ವಾಸವಿದ್ದ ಇವರನ್ನು ಕಂಡು ಮೊದಲ ಬಾರಿಗೆ ನಮಗೂ ಆಶ್ಚರ್ಯ, ಸಂತಸ ಹಾಗೆಯೇ ಒಳಗೊಳಗೇ ತುಸು ಬೇಸರ. ಕನ್ನಡದ ತಂತ್ರಜ್ಞಾನದ ಬೆಳವಣಿಗೆಗೆ ಮಾಡಬೇಕಿರುವುದು ಏನು ಎಂಬ ಉತ್ತರ ಇವರಲ್ಲಿತ್ತು.    ವಯಸ್ಸಿನಲ್ಲಿ ಚಿಕ್ಕವರಾದರೂ ನಾವುಗಳು ಅವರಿಗೆ ಸಹಾಯ ಮಾಡಬಲ್ಲೆವು ಎಂದೆಣಿಸಿ ತಮ್ಮ ಅರಿವನ್ನು ಹಂಚಿಕೊಂಡಿದ್ದಲ್ಲದೇ, ನಮ್ಮಿಂದ ಆಗಬಹುದಾದ ಕಾರ್ಯಗಳನ್ನು ಕೂಲಂಕುಷವಾಗಿ ವಿವರಿಸಿ ಹೇಳಿದರು. ಎಲ್ಲ ಕನ್ನಡಿಗರಿಗೂ ಬೇಕಾದ ಕನ್ನಡ ಓ.ಸಿ.‌ಆರ್ (ನುಡಿ ಜಾಣ) ತಂತ್ರಜ್ಞಾನವನ್ನು ಸಂಪೂರ್ಣ ಕಾರ್ಯರೂಪಕ್ಕೆ ತರಲು ಏನೆಲ್ಲ ಮಾಡಬೇಕು, ಹೇಗೆ ಎಂಬುದನ್ನು ಚರ್ಚಿಸಿದರು. ಕೆಲಸದ ಒತ್ತಡದ ಮಧ್ಯೆ ನಾವುಗಳು ಈ ಯೋಜನೆಗೆ ನಮ್ಮ ಕೈಲಾದಷ್ಟು ತಾಂತ್ರಿಕ ವಿವರ, ಸಹಾಯಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಟ್ಟರು.

ನಾನು ಈಗ ಹೇಳಿದ ಎರಡು ಕತೆಗಳು, ಕನ್ನಡ ಮತ್ತು ತಂತ್ರಜ್ಞಾನದ ಎರಡು ಮಜಲುಗಳನ್ನು ನಿಮ್ಮ ಮುಂದೆ ಇಡುತ್ತವೆ. ಪೂಚಂತೇ ಯವರ ಕಾಲದಿಂದಲೇ ಕನ್ನಡವನ್ನು ಓದಲು ಬರೆಯಲು ಸಾಧ್ಯವಾಯಿತು. ಇಂದು ನಾವು ಕನ್ನಡದಲ್ಲೇ ಕಂಪ್ಯೂಟರ್ ಮೂಲಕ ವ್ಯವಹರಿಸುವುದು ಸಾಧ್ಯವಿದೆ. ದೈನಂದಿನ ಕಾರ್ಯಚಟುವಟಿಕೆಗಳಲ್ಲಿ, ಇಂಟರ್ನೆಟ್ ಮೂಲಕ ಹರಟುವಾಗ, ಪತ್ರವ್ಯವಹಾರ ನೆಡೆಸುವಾಗ, ವಾಣಿಜ್ಯ, ಸರ್ಕಾರಿ ಹಾಗೂ ಇತರೆ ಕಾರ್ಯಚಟುವಟಿಕೆಗಳಲ್ಲಿ ಕನ್ನಡದ ಬಳಕೆ ಆಗುತ್ತಿದೆ. ಅನೇಕ ತಂತ್ರಾಂಶಗಳು ಕನ್ನಡಕ್ಕೆ ಲಿಪ್ಯಂತರವಾಗಿವೆ. ಫೈರ್‌ಫಾಕ್ಸ್, ಗೂಗಲ್ ಕ್ರೋಮ್, ಲಿಬ್ರೆ ಆಫೀಸ್, ಲಿನಕ್ಸ್ ನ ಕೆಲವು ತಂತ್ರಾಂಶಗಳು ಇತ್ಯಾದಿ ಕನ್ನಡದಲ್ಲಿ ಲಭ್ಯವಿವೆ. (translatation). ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬರೆಯಲು ಹತ್ತು ಹಲವಾರು ಸಾಧನಗಳು ಮತ್ತು ವಿಧಾನಗಳು ಪ್ರಸ್ತುತ. ಕನ್ನಡ ಮುದ್ರಣ ರಂಗದಲ್ಲಿ ಬೆಳದು ಬಂದ ದಾರಿ, ನಂತರ ಅದು ಕಂಪ್ಯೂಟರ್ ಅನ್ನು ಹೊಕ್ಕು ತನ್ನದೇ ಕೀಬೋರ್ಡ್ ಲೇಔಟ್ ಇತ್ಯಾದಿಗಳನ್ನು ಕೆ.ಪಿ ರಾವ್ ಅವರಿಂದ ಮೊದಲುಗೊಂಡು   ಬಹುವಾಗಿ ಬೆಳದಿದೆ. ಕಂಪ್ಯೂಟರ್ ಅನ್ನು ಚಾಲೂ ಮಾಡಿದ ತಕ್ಷಣವೇ ಕನ್ನಡದಲ್ಲಿ ಪ್ರವೇಶ  ಪದ ಕೇಳುವ ಸುಂದರ ಪರದೆ ನಿಮ್ಮ ಮುಂದೆ ಬರುತ್ತದೆ. ಕನ್ನಡದಲ್ಲಿ ಸಾವಿರಾರು ಬ್ಲಾಗುಗಳಿವೆ. ಗಂಗಾವತಿಗೆ ಬರುವ ಮುಂಚೆಯೇ ಇಲ್ಲಿ ನೆಡೆದಿರುವ ತಯಾರಿ ಇತ್ಯಾದಿಗಳನ್ನು ಕನ್ನಡದಲ್ಲಿ ಚಿತ್ರ ಸಮೇತ ಗಂಗಾವತಿಯ ಕನ್ನಡಿಗರೇ ಜಗತ್ತಿಗೆ ರವಾನಿಸಿದ್ದಾರೆ. ಕನ್ನಡ ವಿಕಿಪೀಡಿಯಾದಲ್ಲಿ ಕನ್ನಡಿಗರು ಕನ್ನಡಿಗರಿಗಾಗಿ ೧೧ ಸಾವಿರಕ್ಕೂ ಹೆಚ್ಚಿನ ಲೇಖನಗಳನ್ನು ಸಂಪಾದಿಸಿದ್ದಾರೆ. ಜನರೇ ಸಂಪಾದಿಸಿದ ಪದಕೋಶ ೧ಲಕ್ಷ ೫೦ ಸಾವಿರ ಪದಗಳನ್ನು  ಹೊಂದಿದ್ದು ವಿಕಿಪೀಡಿಯಾದ ವಿಕ್ಷನರಿಯಲ್ಲಿ ಲಭ್ಯವಿದೆ. ಕನ್ನಡ ಪತ್ರಿಕೆಗಳು, ವಿದ್ವಾಂಸರು, ಸಿನಿಮಾ ನಟ/ನಟಿಯರು, ರಾಜಕಾರಣಿಗಳು, ಇಂಟರ್ನೆಟ್ ನಲ್ಲಿ ಸೋಶಿಯಲ್ ಮೀಡಿಯಾ ಬಳಸುವ ಇತರ ಕನ್ನಡಿಗರೊಂದಿಗೆ ಸೇರಿಕೊಂಡಿದ್ದು, ಕನ್ನಡವನ್ನು ಕನ್ನಡಿಗ ತಾನಿರುವಲ್ಲಿಯೇ ಅನುಭವಿಸುವಂತೆ ಮಾಡಿದ್ದಾರೆ. ಫೇಸ್‌ಬುಕ್, ಅರ್ಕುಟ್ , ಗೂಗಲ್ ಹೀಗೇ ಯಾವುದೇ ಪುಟವಿರಲಿ ಅವುಗಳನ್ನೆಲ್ಲ ಕನ್ನಡಕ್ಕೆ  ತರಲೇ ಬೇಕು ಎಂದೆಣಿಸಿ ಕನ್ನಡದ ಕಂಪನ್ನು ಪಸರಿಸುವ ಬಳಗಗಳೂ ನಿಮಗೆ ಇಲ್ಲಿ ಸಿಗಬಹುದು.

ಆದರೆ, ಭಾಷೆ ಬೆಳೆದಂತೆ ತಂತ್ರಜ್ಞಾನದ ಬೆಳವಣಿಗೆ ಭಾಷೆಯ ಜೊತೆ ಬೆಳದಿಲ್ಲ ಎಂಬುದನ್ನು ಎರಡನೆಯ ಕತೆ ನಿಮ್ಮ ಮುಂದಿಡುತ್ತದೆ. ಸರ್ಕಾರಿ ನೌಕರನೊಬ್ಬ, ತನ್ನ ಕಚೇರಿಯಲ್ಲಿ ಸಹವರ್ತಿಗಳು ಪಡುತ್ತಿದ್ದ ಕಷ್ಟವನ್ನು ನಿವಾರಿಸಲು ತಾನೇ ಖುದ್ದಾಗಿ ಉತ್ತರ ಹುಡುಕಲು ಹೊರಟಿದ್ದೇಕೆ? ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ, ಅದರ ಸುತ್ತಲಿನ ಸಮುದಾಯ ಇವೆಲ್ಲ ಏಕೆ?  ಸರ್ಕಾರ ಇದರತ್ತ ಕಣ್ಣು ಹಾಯಿಸಿಲ್ಲವೇ?  ಕನ್ನಡಕ್ಕೆ ಇಂತದೊಂದು ಬಹುಮುಖ್ಯ ತಂತ್ರಜ್ಞಾನ ಇಲ್ಲದಿರಲು ಕಾರಣವಾದರೂ ಏನು? ಇದನ್ನು ಅಭಿವೃದ್ಧಿ ಪಡಿಸಬಲ್ಲ ಯಾವುದೇ ಕಂಪೆನಿ, ದೇಶದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿಯೂ ಇಲ್ಲವೇ? ಸಮುದಾಯಕ್ಕೆ ಸಂಬಂಧಪಟ್ಟ ಯೋಜನೆಗಳಿಗೆ ಯಾರ ಮನವೊಲಿಸಬೇಕಾಗಿದೆ? ಭಾಷೆಯ ಬೆಳವಣಿಗೆಗೆ ಅದರ ಸುತ್ತಲಿನ ಪರಿಸರ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ತಂತ್ರಜ್ಞಾನದ ಬೆಳವಣಿಗೆಯೂ ಆಗಬೇಕಲ್ಲ? ವರ್ಷವರ್ಷ ಅದೆಷ್ಟೋ ಜನ ಇಂಜಿನಿಯರ್‌ಗಳನ್ನು ದೇಶಕ್ಕೆ ನೀಡುತ್ತಿರುವ ಕಾಲೇಜುಗಳಲ್ಲಿ ಇಂತದ್ದೊಂದು ಸಂಶೋದನೆಯನ್ನು ನೆಡೆಸುವ ಸಣ್ಣ ಯೋಚನೆ ಬರಲಿಲ್ಲವೇಕೆ? ಕನ್ನಡವನ್ನು ಕಂಪ್ಯೂಟರಿನಲ್ಲಿ ಓದಲು, ಬರೆಯಲು ಕಲಿತ ನಂತರ ನಿಮಗೂ ಇಂತಹ ಅನೇಕ ಸವಾಲುಗಳು ಕಾಡಬಹುದು ಮತ್ತು ಕಾಡಬೇಕು.

ಆದರೆ, ಅವುಗಳ ಅಭಿವೃದ್ಧಿಯ ಹಾದಿ, ಸಧ್ಯದ ಪರಿಸ್ಥಿತಿಯನ್ನು ಕಂಡರೆ ಹೆದರಿ ಓಡುವವರೇ ಜಾಸ್ತಿ. ಇಲ್ಲವಾದಲ್ಲಿ, ಅದನ್ನು ಮತ್ತೊಂದು ಪ್ರಯೋಗ ಶಾಲೆಯ ಶಿಶುವಾಗಿ, ಹಣ ಚೆಲ್ಲುವ ಕುದುರೆಯನ್ನಾಗಿ ಮಾಡುವವರೇ .

ಬಹಳಷ್ಟು ಪ್ರಶ್ನೆಗಳು ನಮ್ಮನ್ನು ಮತ್ತೆ ಮತ್ತೆ ಕಾಡುತ್ತವೆ. ಅದರ ಮಧ್ಯದಲ್ಲೇ ನಮ್ಮ ಕನ್ನಡ ತಂತ್ರಜ್ಞಾನದ ಹಾದಿಯಲ್ಲಿ ಮುನ್ನೆಡೆಯಲು ಹತ್ತಾರು ದಾರಿಗಳೂ ತೆರೆದುಕೊಳ್ಳುತ್ತಿವೆ. ಉತ್ತರಗಳೂ ಇವೆ. ಅದರ ಒಂದು ಉತ್ತರ ಸ್ವತ: ಕನ್ನಡಿಗರೇ ಆಗಿದ್ದಾರೆ. ಉದಾಹರಣೆಗೆ :

ಕನ್ನಡದಲ್ಲಿ ಇಂಟರ್ನೆಟ್ ಪುಟಗಳನ್ನು ಆಲಿಸಲಿಕ್ಕೆ ಸಾಧ್ಯವಾದದ್ದು ಶಿವಮೊಗ್ಗದ ತಜ್ಞ ಶ್ರೀಧರ್ ಅವರಿಂದ.  ತಮ್ಮ ಅಂಧತ್ವಕ್ಕೆ ಉತ್ತರ ಹುಡುಕಿಕೊಳ್ಳಲು ಹೊರಟು, ಸಫಲರಾಗಿ ತಮ್ಮ ಫಲಶ್ರುತಿಯನ್ನು GPL ಲೈಸೆನ್ಸಿನಡಿ ಬಿಡುಗಡೆ ಮಾಡಿರುವುದು ಇತ್ತೀಚಿನವಿಶ್ವ ಕನ್ನಡ ಸಮ್ಮೇಳನದ ಸಮಯದಲ್ಲಿ ಬೆಳಕಿಗೆ ಬಂತು. ಅದನ್ನೇ ಈಗ ಕರ್ನಾಟಕ ಸರ್ಕಾರದ ಕಣಜ ಯೋಜನೆಯಲ್ಲಿ ಬಳಸಿಕೊಂಡಿರುವುದು. ಇಂತದ್ದೊಂದು ತಂತ್ರಜ್ಞಾನದ ಸಂಶೋಧನೆ ಕನ್ನಡಕ್ಕಾಗಿ ೨೦೦೨ರ
ಆಸುಪಾಸಿನಲ್ಲೇ ನೆಡೆದರೂ, ಅದರ ಫಲಶ್ರುತಿಯನ್ನು ಇದುವರೆಗೂ ನಾವು ಪಡೆಯದಿದ್ದದ್ದು ಕನ್ನಡದ ದುರಾದೃಷ್ಟವೇ ಸರಿ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು ಜನರ ಬೇಡಿಕೆಗೆ ಅನುಗುಣವಾಗಿ, ಜನರಿಂದಲೇ ಜನರಿಗಾಗಿ ಅಭಿವೃದ್ಧಿ ಪಡಿಸಲಾದಂತಹವು. ಪರಿಣಿತರ ತಂಡಗಳು ತಂಡೋಪತಂಡವಾಗಿ, ಸಮುದಾಯದ ಮುಖೇನ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಇಂತಹ ಯೋಜನೆಗಳ ಫಲಿತಾಂಶಗಳು ಸಮುದಾಯಕ್ಕೆ  ಯಾವಾಗಲೂ ದೊರೆಯಲಿ ಎಂಬ ಉದ್ದೇಶದಿಂದ ಅವುಗಳನ್ನು ಜನರಲ್ ಪಬ್ಲಿಕ್ ಲೈಸೆನ್ಸ್ (GPL)  ಪರವಾನಗಿಯಡಿ ಬಿಡುಗಡೆ ಮಾಡಲಾಗುತ್ತದೆ.  ಈ ತಂತ್ರಾಂಶಗಳನ್ನು ಉಚಿತವಾಗಿ ಪಡೆಯಬಹುದಾದ್ದರಿಂದ ನಮಗೆ  ತಂತ್ರಾಂಶ ಪೈರಸಿಯ ಭೂತದಿಂದ ದೂರ ಇರಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಈ ಕತೆ ಕೇಳಿ.

ಮೊನ್ನೆ ಮೈಸೂರಿನ ಕೆಲವು ಡಿ.ಟಿ.ಪಿ ಕೇಂದ್ರಗಳ ಮೇಲೆ ಐ.ಟಿ ಕಂಪೆನಿಗಳ ದಾಳಿ ನೆಡೆಯಿತು. ಪುಸ್ತಕ, ಛಾಯಾಚಿತ್ರಗಳ ಸಂಸ್ಕರಣೆ ಮತ್ತು ಪರಿಷ್ಕರಣೆಗೆ ಬೇಕಾದ ತಂತ್ರಾಂಶಗಳನ್ನು ಪರವಾನಗಿ ಪಡೆಯದೆ ಬಳಸುತ್ತಿದ್ದುದ್ದು ಈ ದಾಳಿಗೆ ಮುಖ್ಯ ಕಾರಣ.

ಡಿ.ಟಿ.ಪಿ/ಮುದ್ರಣ ವ್ಯವಸ್ಥೆಗೆ ಬೇಕಾದ ತಂತ್ರಜ್ಞಾನ ಕೆಲವೊಮ್ಮೆ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಬಯಸುತ್ತದೆ. ಕೇವಲ ಸಾವಿರಗಳಲ್ಲಿ ದೊರೆಯುವ ಆಪರೇಟಿಂಗ್ ಸಿಸ್ಟಂಗಳನ್ನೇ ಕೊಳ್ಳಲು ಹಿಂಜರಿದು ಪೈರಸಿಯ ಮೊರೆ ಹೋಗುವ ನಾವುಗಳು, ಲಕ್ಷಾಂತರ ರೂಪಾಯಿ ಕೊಟ್ಟು ಫೋಟೊಶಾಪ್, ಕೋರಲ್ ಡ್ರಾ ನಂತಹ ತಂತ್ರಾಂಶಗಳನ್ನು ಕೊಳ್ಳುತ್ತಿದ್ದೇವೆಯೇ?  ಇಲ್ಲ . ಹಾಗಿದ್ದಲ್ಲಿ ಇವುಗಳಿಗೆ ಪರ್ಯಾಯ ತಂತ್ರಾಂಶಗಳು ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳು. ಅವುಗಳ ಸ್ಥಿತಿಯೂ ಆಷ್ಟೇನೂ ಚೆನ್ನಾಗಿಲ್ಲ. ಗಿಂಪ್, ಇಂಕ್‌ಸ್ಪೇಸ್ , ಲಿಬ್ರೆ ಅಥವಾ ಓಪನ್ ಆಫೀಸ್‌ಗಳಲ್ಲಿ ಕನ್ನಡವನ್ನು ಬಳಸಬಹುದಾದರೂ ಡಿ.ಟಿ.ಪಿಗೆ ಬೇಕಾದ ಸ್ಕ್ರೈಬಸ್ ಎಂಬ ತಂತ್ರಾಂಶದಲ್ಲಿ ಕನ್ನಡ ಬಳಸಲಿಕ್ಕೆ ಸಾಧ್ಯವಿಲ್ಲ. ಹೀಗೆ ಪಟ್ಟಿ ಮಾಡುತ್ತಾ ಹೋದಲ್ಲಿ ಕನ್ನಡಿಗ ತನ್ನ ದಿನನಿತ್ಯದ ಕೆಲಸಗಳಿಗೆ ಬಳಸಲು ಬೇಕಿರುವ ತಂತ್ರಜ್ಞಾನದ ಮತ್ತು ತಂತ್ರಾಂಶಗಳ ದೊಡ್ಡ ಪಟ್ಟಿಯೇ ನಮ್ಮ ಮುಂದೆ ಬರುತ್ತದೆ.

ಕನ್ನಡ ಡಿಕ್ಷನರಿ – ಸ್ಪೆಲ್‌ಚೆಕ್ – ಗ್ರಾಮರ್ ಚೆಕ್ – ಟೆಕ್ಸ್ ಟು ಸ್ಪೀಚ್ – ಸ್ಪೀಚ್ ಟು ಟೆಕ್ಸ್ಟ್ (ವ್ಯಾಕರಣ ಸಂಸ್ಕರಣೆಗೆ ಸಂಬಂಧಪಟ್ಟ ತಂತ್ರಾಂಶಗಳು) – ಭಾಷೆಗೆ ಇವು ಬಹುಮುಖ್ಯ. ಲಕ್ಷಾಂತರ ಪದಗಳ ಭಂಡಾರ ನಮ್ಮ ಕನ್ನಡ. ಅವುಗಳ ಉಪಯೋಗವಾಗಬೇಕಾದ್ದು ದೈನಂದಿನ ಬದುಕಿನಲ್ಲಿ. ಕನ್ನಡಿಗ ಟೈಪಿಸುವಾಗ. ಇಂದಿನ ದಿನದಲ್ಲಿ ಕಂಪ್ಯೂಟರ್ ನಲ್ಲಿ ವ್ಯವಹರಿಸುವ ಕನ್ನಡಿಗ, ಕನ್ನಡವನ್ನು ಮರೆಯದಿರುವಂತೆ ಮಾಡಲು ಕನ್ನಡ ನಿಘಂಟು, ಪದಗಳು ಮತ್ತು ವಾಕ್ಯಗಳನ್ನು ಪರೀಕ್ಷಿಸುವ ತಂತ್ರಜ್ಞಾನ, ಸುಲಭವಾಗಿ ಯಾರು ಬೇಕಾದರೂ ಕನ್ನಡ ಓದಲು ಮತ್ತು ಬರೆಯಲು – ಸಾಧ್ಯವಾಗಿಸುವ ತಂತ್ರಾಂಶಗಳು ಕಂಪ್ಯೂಟರಿನಲ್ಲಿ ಇರಬೇಕಿದೆ. ಇವುಗಳನ್ನು ಅಭಿವೃದ್ಧಿಪಡಿಸುವ ಕೆಲಸ ನಮ್ಮಿಂದ ಸಾಧ್ಯ. ಕನ್ನಡಿಗರ ಸಮುದಾಯ ಅನೇಕ ಗುಂಪುಗಳು, ಬಣಗಳು ಇತ್ಯಾದಿಯಾಗಿ ಒಡೆದಿದೆ. ಎಲ್ಲರಿಗೂ ಕನ್ನಡದ ಮೇಲೆ ಪ್ರೀತಿಯೇ. ಆದರೆ ತಂತ್ರಜ್ಞಾನದ ಮಟ್ಟಿಗೆ ಕನ್ನಡ ಬೆಳೆಯದಿದ್ದರೆ, ಮುಂದೊಂದು ದಿನ ಕನ್ನಡವನ್ನು ಮರೆಯ ಬೇಕಾದೀತು.

ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್ – ಅಂದರೆ ಸಹಜ ಭಾಷಾ ಪರಿಷರಣೆಯ ತಂತ್ರಜ್ಞಾನ ಅಭಿವೃದ್ಧಿ ಗೊಂಡಲ್ಲಿ ಮೇಲೆ ಹೇಳಿದ ಓ.ಸಿ.ಆರ್, ಕೈ ಲಿಪಿ ಪರಿಶೋಧಕ, ವ್ಯಾಕರಣದ ತಂತ್ರಾಂಶಗಳು ಇತ್ಯಾದಿಗಳು ನಮ್ಮೆದುರಿಗೆ ಬರುತ್ತವೆ.

ನಮ್ಮಲ್ಲಿ ಅದೆಷ್ಟೋ ಸಾಫ್ಟ್ವೇರ್ ಕಂಪೆನಿಗಳಿವೆ. ಅದರಲ್ಲಿ ಅದೆಷ್ಟೋ ಕಂಪೆನಿಗಳು ಕನ್ನಡಿಗರದ್ದೇ. ಅಲ್ಲಿ ಕೆಲಸ ಮಾಡುವ ಕನ್ನಡಿಗರ ಸಂಖ್ಯೆಯೂ ಬಹಳವಿದೆ. ಜೊತೆಗೆ, ಎಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಕಲೆ, ಸಾಹಿತ್ಯ, ಭಾಷೆ, ಇತಿಹಾಸ ಹೀಗೆ ವೈವಿಧ್ಯಮಯ ವಿಷಯಗಳ ಬಗ್ಗೆ ಅಧ್ಯಯನ ನೆಡೆಸುತ್ತಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿದ್ದಾರೆ. ಎಲ್ಲರೂ ತಿಂಗಳಿಗೊಮ್ಮೆ ಒಂದೆರಡು ತಾಸು ಕನ್ನಡಕ್ಕೆ ಸಮಯ ನೀಡಬಹುದಲ್ಲವೇ? ನೀಡಿದಲ್ಲಿ ವಿಶ್ವದಲ್ಲೇ ಅತಿದೊಡ್ಡ ಸಮುದಾಯದ ಶಕ್ತಿ ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆಗೆ ನಿಂತತಾಗುತ್ತದೆ.

ನಮ್ಮೆಲ್ಲರ ಹೆಮ್ಮೆಯ ಸಾಹಿತಿಗಳು, ಲೇಖಕರು, ಭಾಷಾ ತಂತ್ರಜ್ಞರು, ಅಧ್ಯಾಪಕರು ಮತ್ತು ಪುಸ್ತಕ ಪ್ರೇಮಿಗಳ ಸಮುದಾಯ ಕಂಪ್ಯೂಟರೀಕೃತ ಡಿಕ್ಷನರಿ ಇತ್ಯಾದಿಗಳಲ್ಲಿ ತಮ್ಮನ್ನು ತಾವೇ ಸ್ವಇಚ್ಚೆಯಿಂದ, ನಿಸ್ವಾರ್ಥಸೇವೆಗೆ ತೊಡಗಿರುವ ಕನ್ನಡಿಗರಿಗೆ ೧.೫೦ ಲಕ್ಷ ಪದಗಳ ದೊಡ್ಡ ಕೋಶವನ್ನೇ ಹೊಂದಿರುವ ವಿಕ್ಷನರಿ (ವಿಕಿಪೀಡಿಯಾದ ಮತ್ತೊಂದು ಯೋಜನೆ ), ವ್ಯಾಕರಣ ಸಂಬಂಧಿತ ತಂತ್ರಾಂಶ ಯೋಜನೆಗಳಲ್ಲಿ  ತಂತ್ರಜ್ಞಾನ ತಿಳಿದ ಯುವಜನಾಂಗದ ಜೊತೆಗೆ ಬೆರೆತು ಸಹಕರಿಸಬಹುದು. ಇತ್ತೀಚೆಗೆ ಗೂಗಲ್ ತನ್ನ ವೆಬ್‌ಸೈಟ್ ನಲ್ಲಿ ಬಿಡುಗಡೆಗೊಳಿಸಿದ ಕನ್ನಡ ಟ್ರಾನ್ಸ್ಲೇಷನ್ ‌ನಲ್ಲಿ ಕಂಡುಬರುತ್ತಿದ್ದ ತೊಂದರೆಗಳನ್ನು ತಪ್ಪಿಸಲು, ನಾವೆಲ್ಲ ಒಟ್ಟಿಗೆ ಕೂತು ಅಭಿವೃದ್ಧಿ ಪಡಿಸಬಹುದಾದ ತಂತ್ರಾಂಶ, ಪದಗುಚ್ಛಗಳು ಇತ್ಯಾದಿಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಒಂದೆಡೆ ಅಧಿಕೃತವಾಗಿ ಸಿಗುವಂತೆ ಮಾಡುವ ಮೂಲಕ ಎಲ್ಲರೂ ಮತ್ತೆ ಮತ್ತೆ ಅದೇ ಅಭಿವೃದ್ಧಿಕಾರ್ಯಗಳನ್ನು ಮಾಡುವುದನ್ನು ತಡೆದು ಮುಂದೆ ಹೆಜ್ಜೆ ಇಡುವಂತೆ ಮಾಡಲು ಸಹಕಾರಿಯಾಗುತ್ತದೆ.

ಕನ್ನಡ ನಾಡಿನ ಸರ್ಕಾರಿ, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ  ಕನ್ನಡ ಬಳಕೆ – ತಂತ್ರಜ್ಞಾನದ ಅವಶ್ಯಕತೆ ಎಲ್ಲರಿಗೂ ಇದ್ದದ್ದೇ. ಕರ್ನಾಟಕದ ಸಂಘ ಸಂಸ್ಥೆಗಳು ತಮಗೆ ಬೇಕಿರುವ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬೇಡಿಕೆಯನ್ನು ಪೂರೈಸುವ ಕಂಪೆನಿಗಳಿಗೆ ಆಡಳಿತ ಭಾಷೆ ಕನ್ನಡದಲ್ಲೇ ಅವು ಕೆಲಸ ಮಾಡಬೇಕು ಎಂದು ಆಗ್ರಹಿಸಬಹುದು. ಅಥವಾ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ, ಕನ್ನಡ ಭಾಷೆಗೆ ಬೇಕಿರುವ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಅಭಿವೃದ್ಧಿಗೆ ಸ್ಪರ್ಧೆಗಳನ್ನು ಆಯೋಜಿಸಿ ಎಂ. ಐ.ಟಿ , ಹಾರ್ವರ್ಡ್ , ಸ್ಟಾಂಡ್‌ಫೋರ್ಡ್ ಇತ್ಯಾದಿ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಿರುವ ಸ್ಪರ್ಧಾಥ್ಮಕ ಜಗತ್ತನ್ನು ಸೃಷ್ಟಿಸಬಹುದು. ಇದರಿಂದ ಉಪಯೋಗ ಕನ್ನಡಿಗರಿಗೇ. ನಮ್ಮ ನೆಲದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಸೃಷ್ಟಿಗೆ ನಾವುಗಳೇ ಕಾರಣರಾಗುತ್ತೇವೆ. ನಮ್ಮಲ್ಲೂ ಗೂಗಲ್, ಆಫಲ್, ಮೈಕ್ರೋಸಾಫ್ಟ್ ನಂತಹ ಧೈತ್ಯ ಕಂಪೆನಿಗಳು ಮಾಡುತ್ತಿರುವ ‘ಇನೋವೇಷನ್’ಗಳನ್ನೂ ನಾಚಿಸುವ ಆವಿಷ್ಕಾರಗಳನ್ನು ಹುಟ್ಟುಹಾಕುವ ಉದ್ಯಮಿಗಳು ಮುಂದೆಬರಬಹುದು. ಕರ್ನಾಟಕದ ಕನ್ನಡ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ, ಕನ್ನಡದ ನೆಲದಲ್ಲಿ ಸಾಫ್ಟ್ವೇರ್ ತಂತ್ರಜ್ಞಾನ ಅಭಿವೃದ್ಧಿಗೆ ಇಳಿಯುವ ಕಂಪೆನಿಗಳಿಗೆ ಇಲ್ಲಿನ ನೆಲ ಜಲದ ಜೊತೆಗೆ ಭಾಷೆಯ ಬಗೆಗೂ ಸ್ವಲ್ಪ ಅಭಿಮಾನ ಬೆಳೆಸಿಕೊಳ್ಳುವ ವಾತಾವರಣ ಇದರಿಂದ ಸೃಷ್ಟಿಯಾಗಲಿದೆ.

ಯಾವುದೇ ಸರ್ಕಾರಿ ಹಾಗೂ ಸರ್ಕಾರೇತರ ಸಂಘಸಂಸ್ಥೆಗಳು, ಶಾಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ತಮಗೆ ಬೇಕಿರುವ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸ್ವಾವಲಂಬನೆಯನ್ನು ಕೂಡಾ ಹೊಂದಬಹುದು.  ಕೇರಳದ ರಾಜ್ಯ ವಿದ್ಯುತ್ ನಿಗಮ ತನ್ನ ಕಾರ್ಯಚಟುವಟಿಕೆಗಳಿಗೆ ಬೇಕಾದ ತಂತ್ರಾಂಶವನ್ನು  ೨೦೦೬ರಲ್ಲೇ ತನ್ನದೇ ತಾಂತ್ರಿಕ ವರ್ಗದಿಂದ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸಿಕೊಡು ಅಭಿವೃದ್ಧಿ ಪಡಿಸಿಕೊಂಡಿದೆ. ಕೇವಲ ೩೦ ಸಾವಿರಗಳನ್ನು ವ್ಯಯಿಸಿ ತನ್ನೆಲ್ಲ ಸಿಬ್ಬಂದಿಯನ್ನು ತರಬೇತುಗೊಳಿಸಿ, ಖಜಾನೆಯಿಂದ ತಂತ್ರಜ್ಞಾನ ಖರೀದಿಗೆ ಹರಿದು ಹೋಗಬಹುದಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ಉಳಿಸಿಕೊಂಡಿದೆ. ಇದಕ್ಕಿಂತಲೂ ಹೆಚ್ಚಾಗಿ ೭-೮ ಕೋಟಿ ರೂಪಾಯಿಗಳ ಉಳಿತಾಯ ಕೇವಲ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಬಳಸುವುದರಿಂದಲೇ ವಿದ್ಯುತ್ ನಿಗಮಕ್ಕೆ ಆಗುತ್ತಿದೆ. ನಷ್ಟದ ಲೆಕ್ಕಾಚಾರವನ್ನು ತೋರಿಸುವ ನಮ್ಮ ಕೆಲ ಸಂಘ ಸಂಸ್ಥೆಗಳು ಇದನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕನ್ನಡದ ತಾಂತ್ರಿಕ ವರ್ಗಕ್ಕೆ ಹೊಸ ಸ್ತರದ ಕೆಲಸವನ್ನು ವಹಿಸುವುದರ ಜೊತೆಗೆ ಕೋಟ್ಯಾಂತರ ರೂಪಾಯಿ ಹಣದ ಪೋಲನ್ನು ತಡೆಯಬಹುದು.

ಸರ್ಕಾರವೂ ಕನ್ನಡ ಜನತೆ ಕನ್ನ್ನಡದಲ್ಲೇ ಬಳಸ ಬಹುದಾದಂತಹ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು, ಯುನಿಕೋಡ್ ಶಿಷ್ಟತೆಯನ್ನು ಅಳವಡಿಸಲು ಕನ್ನಡಿಗರ  ಪರವಾಗಿ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ  ಮೈಕ್ರೋಸಾಫ್ಟ್ ಹಾಗೂ ಇತರೆ ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವ  ಒತ್ತಡ ಹೇರಲು ಸಾಧ್ಯವಿದೆ. ಈಗಾಗಲೇ ಖರೀದಿಸಿರುವ ತಂತ್ರಾಂಶಗಳಿಗೂ ಇದು ಅನ್ವಯವಾಗುವಂತೆ ಮಾಡಬಹುದು. ವೆಬ್, ಮೊಬೈಲ್, ನೆಟ್ ಬುಕ್, ಟಚ್‌ಪ್ಯಾಡ್ ಹೀಗೆ ದಿನೇ ದಿನೇ ಬದಲಾಗುತ್ತಿರುವ ತಂತ್ರಜ್ಞಾನಗಳಲ್ಲಿ ಒಮ್ಮತದ ಶಿಷ್ಟತೆಗಳನ್ನು / ಏಕರೂಪತೆಗಳನ್ನು ತರಲು ಸಮುದಾಯ ಹಾಗೂ ಪರಿಣಿತರ ಸಂಘಟನೆಗೆ ಮುಂದಾಗ ಬೇಕು , ಸ್ವಾಯತ್ತ ಸಮಿತಿಯ  ರಚನೆಯಾಗಬೇಕು. ಇದು ವರ್ಷಾನು ವರ್ಷಗಳಿಂದ ಮುಂದು ಕಾಡುತ್ತಿರುವ ಯುನಿಕೋಡ್, ಮೊಬೈಲ್ ಹಾಗು ವೆಬ್ ನಲ್ಲಿನ ತೊಂದರೆ ಇತ್ಯಾದಿಗಳ ಶೀಘ್ರ ಪರಿಶೀಲನೆ ಮತ್ತು ಪರಿಹಾರಕ್ಕೆ ಮುಂದಾಗಲು ಸಹಾಯಕವಾಗುತ್ತದೆ.  ಸರ್ಕಾರೀ ವೆಬ್‌ಸೈಟ್ ಗಳು ಯುನಿಕೋಡ್ ನಲ್ಲಿ ಬಂದರೆ ಸುಲಭವಾಗಿ ಅದು ಜನರನ್ನು ತಲುಪಲಿದೆ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ (ಓಪನ್ ಸೋರ್ಸ್) ತಂತ್ರಾಂಶಗಳ ಬಳಕೆಗೆ ಉತ್ತೇಜನ ನೀಡುವುದಲ್ಲದೆ. ಪ್ರಾಯೋಗಿಕ ಬಳಕೆಗೆ ಮತ್ತು ಕಲಿಕೆಗೆ ಮುನ್ನುಡಿ ಬರೆಯಬೇಕು. ಈ ಕೆಲಸಗಳು ಕನ್ನಡಿಗರ ಸಮುದಾಯಗಳನ್ನು ಒಳಗೊಂಡರೆ, ಸರ್ಕಾರದ ಕಾರ್ಯಗಳು ಸುಲಭವಾಗಿ, ವೇಗವಾಗಿ ನೆರವೇರುವ ಸಾಧ್ಯತೆಗಳಿವೆ. ಸಮುದಾಯ ಮಟ್ಟದಲ್ಲಿ ಕನ್ನಡ ನಾಡು, ನುಡಿಗೆ ಕೆಲಸಮಾಡುವವರ ಜೊತೆಗೆ ತಂತ್ರಜ್ಞಾನದ ಮೇಲೆಯೂ ಆಸಕ್ತಿವಹಿಸಿ ಕೆಲಸ ಮಾಡುವವರಿಗೆ ಮತ್ತು ಅಂತಹ ಸಮುದಾಯಗಳನ್ನು ಗುರುತಿಸಿ ತಂತ್ರಜ್ಞಾನ ಅಭಿವೃದ್ಧಿಗೆ ಬೇಕಾದ ಸಹಾಯ ಹಸ್ತ ಚಾಚುವುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಳವಡಿಕೆ ಮತ್ತು ತಂತ್ರಾಂಶ ಅಭಿವೃದ್ಧಿಯನ್ನು ರೂಢಿಸಿಕೊಳ್ಳುವುದರಿಂದ ಜನ ಸಮುದಾಯಗಳನ್ನು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಾಡಬಹುದು. ಈ ಮೂಲಕ ಯುವಕರನ್ನು ಕನ್ನಡಕ್ಕೆ ಮಾಹಿತಿ ತಂತ್ರಜ್ಞಾನದ ಮೂಲಕ ಸೇವೆಸಲ್ಲಿಸಲು ಹುರಿದುಂಬಿಸಬಹುದು. ಹಳೆಯ, ಮತ್ತು ಇನ್ಮುಂದೆ ಉಪಯೋಗಕ್ಕೆ ಬಾರದ ತಂತ್ರಜ್ಞಾನಗಳ ಬಳಕೆಯನ್ನು ಕಾಲಕಾಲಕ್ಕೆ ತಡೆಗಟ್ಟಿ, ಅತ್ಯಾಧುನಿಕ ಮತ್ತು ಸುರಕ್ಷಿತ ತಂತ್ರಜ್ಞಾನಗಳನ್ನು ಆಡಳಿತದಲ್ಲಿ ಬಳಸಿಕೊಳ್ಳಲು ಕೂಡ ಸಮುದಾಯದೊಡಗಿನ  ಬಾಂಧವ್ಯ ಸರ್ಕಾರಕ್ಕೆ ನೆರವಾಗಲಿದೆ.

ಜೊತೆಗೆ ಇತ್ತೀಚೆಗೆ ICAAN ತರಲಿಚ್ಚಿಸುತ್ತಿರುವ ಇಂಟರ್ನ್ಯಾಷನಲ್ ಡೊಮೈನ್ ನೇಮ್ (IDN) ನಲ್ಲಿ ಕನ್ನಡವಿಲ್ಲ. ಭಾರತೀಯ ಭಾಷೆಗಳ ಡೊಮೈನ್ ಹೆಸರುಗಳನ್ನು ಹೊರತರುವ ಮೊದಲ ಪಟ್ಟಿಯಲ್ಲಿ ಕನ್ನಡವಿದ್ದು, ನಂತರದ ಪಟ್ಟಿಗಳಲ್ಲಿ ಕನ್ನಡವನ್ನು ಕೈ ಬಿಡಲಾಗಿದೆ. ಕನ್ನಡ ತಂತ್ರಜ್ಞಾನ, ಭಾಷೆ ಇತ್ಯಾದಿಗಳ ಅಭಿವೃದ್ಧಿಗೆ ಎಲ್ಲ ಸಂಘಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವಂತಿದ್ದಿದ್ದರೆ, ಇಂತಹ ಒಂದು ಅಚಾತುರ್ಯವನ್ನು ಮೊದಲ ಹಂತದಲ್ಲೇ ತಪ್ಪಿಸಬಹುದಿತ್ತೇನೋ.

ಕಮ್ಯೂನಿಟಿ ಪಾರ್ಟಿಸಿಪೇಷನ್ / ಸಮುದಾಯ ಸಹಭಾಗಿತ್ವ , ನಮಗೆ ಬೇಕಿರುವ ಸಾಫ್ಟವೇರ್ ನಾವೇ ಸೃಷ್ಟಿಸಿಕೊಳ್ಳುವುದು , ಅದನ್ನು ನಮ್ಮದೇ ಉದ್ಯೋಗಗಳಿಗೆ ಬಳಸಿಕೊಳ್ಳುವುದು, ಟೆಕ್ನಾಲಜಿಯನ್ನು ಬೆಳಸಿ ದೊಡ್ಡ ಕಂಪೆನಿಗಳಿಗೆ ಅದನ್ನು ಕನ್ನಡದ ನೆಲದಿಂದಲೇ ಕೊಡುವಂತೆ ಮಾಡುವುದು. ಜಿ.ಪಿ.ಎಲ್ ಲೈಸೆನ್ಸ್ ಮೂಲಕ ಕನ್ನಡಿಗರ ತಂತ್ರಜ್ಞಾನವನ್ನು ಕನ್ನಡಿಗರ ಕೈ ನಲ್ಲೇ ಇರುವಂತೆ ಮಾಡಿ ನಮ್ಮನ್ನು ನಾವೇ ಸದೃಡಗೊಳಿಸಿಕೊಳ್ಳುವುದು. ಒಡೆದು ಹಂಚಿಹೋಗಿರುವ ಕನ್ನಡದ ಅನೇಕ ಬಣಗಳು ಒಂದಾಗಿ , ಕನ್ನಡಕ್ಕೆ ಬೇಕಿರುವ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಒಕ್ಕೊರಲಿನ ದನಿ ಎತ್ತಿ, ಅವುಗಳ ಅಭಿವೃದ್ಧಿಗೆ ನಾಂದಿ ಹಾಡುವುದು. ಕನ್ನಡ ವಿಕ್ಷನರಿ – ವಿಕಿಪೀಡಿಯಾ ಗಳಂತಹ ಸಮುದಾಯ ಆಧಾರಿತ ಯೋಜನೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು, ಅದರ ಬಹುಮುಖ ಉಪಯೋಗವನ್ನು ಪಡೆಯುವುದು. ಹಳೆಯ ಪುಸ್ತಕಗಳು , ಕಾಪಿರೈಟ್ ಮುಗಿದ ಕನ್ನಡ ಪಠ್ಯ ಇತ್ಯಾದಿ , ಯುನಿವರ್ಸಿಟಿಯ ಯಾವುದೋ ಕಪಾಟಿನಲ್ಲಿರುವುದಕ್ಕಿಂತ ಅಮೇಜಾನ್ ಕಿಂಡಲಿನಲ್ಲಿ ದೊರೆಯುವ ಯಾವುದೋ ಶತಮಾನದ ಪುಸ್ತಕವಾದರೆ, ಕನ್ನಡಿಗ ತನ್ನ ಮೊಬೈಲ್ , ಕಂಪ್ಯೂಟರುಗಳಲ್ಲಿ ತನಗೆ ಬೇಕೆನಿಸಿದ ಸಾಹಿತ್ಯವನ್ನು ಅಭ್ಯಸಿಸಲು ಅನುವು ಮಾಡಿಕೊಟ್ಟಂತಾಗುತ್ತದೆ. ಗುಟೆನ್ ಬರ್ಗ್ ಪ್ರಾಜೆಕ್ಟ್ ನಂತಹ ಯೋಜನೆಗಳನ್ನು ಕನ್ನಡಿಗ ಕೈಗೆತ್ತಿ ಕೊಂಡು, ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಮರುಮುದ್ರಣ ಕಾಣದೆ ಕಳೆದು ಹೋಗುತ್ತಿರುವ ಜ್ಞಾನದ ಆಗರವನ್ನು ಜಗತ್ತಿಗೆ ತೆರೆದಿಡಬಹುದು. ಹೀಗೆ ಹತ್ತು ಹಲವಾರು ವಿಧಗಳಲ್ಲಿ ಕನ್ನಡಿಗರು ಸಂಘಟಿತರಾಗಿ ತಮಗೆ ತಾವೇ ತಂತ್ರಜ್ಞಾನ ಮಟ್ಟದಲ್ಲಿ ಆಸರೆಯಾಗಬಹುದು.

ಈ ಸಂದರ್ಭದಲ್ಲಿ ನಿಮಗೊಂದು ಮಾಹಿತಿ – ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಇದುವರೆಗೂ ೨೫ ಸಾವಿರಕ್ಕೂ ಹೆಚ್ಚು  ಕನ್ನಡ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಾಕಲಾಗಿತ್ತು. ಆದರೆ ಇತ್ತೀಚೆಗೆ ಅದರ ಸಂಖ್ಯೆ ೩೩೦೦ ರ ಆಸು ಪಾಸಿಗೆ ಇಳಿದಿದೆ. ಕನ್ನಡಿಗರೇ ಇಂತಹ ಯೋಜನೆಗಳ ಲಾಲನೆ ಪಾಲನೆಗೆ ಮುಂದಡಿ ಇಟ್ಟರೆ ಇಂತಹ ನಷ್ಟಗಳನ್ನು ತಪ್ಪಿಸಬಹುದಲ್ಲವೇ?

ನಾವು ಒಟ್ಟಾಗ ಬೇಕು, ಮಕ್ಕಳಿಂದ ಹಿಡಿದು ಮುದುಕರವರೆಗೆ. ನಾವು ಉಪಯೋಗಿಸುವ ಗಡಿಯಾರದಿಂದಿಡಿದು ಟಚ್‌ಪ್ಯಾಡಿನವರೆಗೆ ಎಲ್ಲದರಲ್ಲೂ ಕನ್ನಡ ಕೆಲಸ ಮಾಡುತ್ತದೆಯೇ ಕೇಳಬೇಕು. ಇಲ್ಲವಾದಲ್ಲಿ ಅದನ್ನು ನಾವೇ ಅಳವಡಿಸುವ ಕೆಲಸ ಮಾಡಬೇಕು. ತಂತ್ರಜ್ಞಾನ ಕಲಿಕೆ ಕಲಿಯುವಷ್ಟು ದಿನ ಕಷ್ಟ ನಂತರ ಬಹಳ ಸುಲಭವೇ. ಕನ್ನಡಕ್ಕೆ ಬೇಕಾದ ತಂತ್ರಾಂಶಗಳು ಮತ್ತು ತಂತ್ರಜ್ಞಾನ ನುಡಿ, ಬರಹದಂತಹ ತಂತ್ರಾಂಶಗಳ ಚೌಕಟ್ಟನ್ನು ಮೀರಿದ್ದು. ಇವುಗಳನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ನಮ್ಮದು. ಕನ್ನಡಿಗರ ಸಮುದಾಯ ಇದಕ್ಕಾಗಿ ಯಾರನ್ನೋ ಕಾಯುತ್ತಾ ಕೂರುವುದರ ಬದಲು, ಮುಂದಡಿ ಇಡುವುದು ಒಳಿತು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅದೆಷ್ಟೋ ಯೋಜನೆಗಳು ನಮ್ಮ ಭಾಷೆಗೆ ಬೇಕಿರುವ ತಂತ್ರಾಂಶಗಳ ಆಗರವನ್ನೇ ಒಂದಿವೆ. ಅವುಗಳನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕಷ್ಟೇ. ಕಂಪ್ಯೂಟರ್ ಕಲಿಯಬೇಕೆಂದಿರುವ  ಹೊಸಬ ರಿಂದ   ಹಿಡಿದು ತಂತ್ರಜ್ಞಾನ ನಿಪುಣರವರೆಗೆ ಎಲ್ಲರೂ ಒಂದಲ್ಲಾ ಒಂದು ಕೆಲಸವನ್ನು ವಹಿಸಿಕೊಂಡು, ಭಾಷಾ ತಂತ್ರಜ್ಞರು, ವಿದ್ವಾಂಸರು ಇತರರ ಜೊತೆಗೂಡಿ ಕನ್ನಡಕ್ಕೆ ಬೇಕಿರುವ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದು ಮತ್ತು ಅವುಗಳ ಉಪಯೋಗವನ್ನೂ ಪಡೆಯಬಹುದು. ತಂತ್ರಜ್ಞಾನದಲ್ಲೂ ಸ್ವಾವಲಂಭನೆ ಹೊಂದಬಹುದು. ಮುಂಬರುವ ದಿನಗಳಲ್ಲಿ ಕನ್ನಡಕ್ಕೆ ಇಂತಹ ತಂತ್ರಜ್ಞಾನ ಇಲ್ಲ ಎಂದೆನ್ನದಿರುವ ದಿನವೂ ಬರಬಹುದು.

ಛಾಯಾಗ್ರಹಣ – ಪವಿತ್ರ ಹೆಚ್

%d bloggers like this: