೨೯ ಭಾನುವಾರ, ಜನವರಿ ೨೦೧೨ ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನ:
ವ್ಯಂಗ್ಯಚಿತ್ರ ಕೃಪೆ: ಉದಯವಾಣಿ
ಮಾಹಿತಿ ವಿನಿಮಯ ಮಾಡಿಕೊಳ್ಳಲು ಇಂಟರ್‌ನೆಟ್ ೨೧ನೆಯ ಶತಮಾನದ ಆಧುನಿಕ ಜಗತ್ತಿಗೆ ಹೇಳಿ ಮಾಡಿಸಿದ ವೇದಿಕೆ. ಮುಕ್ತವಾಗಿ, ಸರಾಗವಾಗಿ ಯಾವುದೇ ವಿಷಯವನ್ನು ಮೊಬೈಲ್, ಕಂಪ್ಯೂಟರ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಇತ್ಯಾದಿಗಳ ಮುಖೇನ ಕೈಬೆರಳಿನ ಕೆಲವೇ ಕ್ಲಿಕ್‌ಗಳಲ್ಲೇ ಜಗತ್ತಿನ ಎಲ್ಲರ ಕಂಪ್ಯೂಟರ್ ಪರದೆಗಳ ಮೇಲೆ ಮೂಡಿಸಬಹುದು. ಪಠ್ಯ, ಬ್ಲಾಗ್, ಸುದ್ದಿ, ದೃಶ್ಯ, ಶ್ರಾವ್ಯ, ಚಿತ್ರ ಹೀಗೆ ಹತ್ತು ಹಲವು ಮಾದರಿಯಲ್ಲಿ ಇಂಟರ್‌ನೆಟ್‌ನ ಮಾಹಿತಿ ನಮಗೆ ಲಭ್ಯ. ಈ ಮಾಹಿತಿ ಬಂದದ್ದಾದರೂ ಎಲ್ಲಿಂದ? – ನಾವು ದಿನನಿತ್ಯ ಇಂಟರ್‌ನೆಟ್‌ನಲ್ಲಿ ಕಾಣುವ ಎಲ್ಲ ವಿಷಯಗಳು ಆಯಾ ವೆಬ್‌ಸೈಟ್ನದ್ದೇ ಅಥವಾ ‘ಪೈರಸಿ’ಯೋ?
ಈ ಪ್ರಶ್ನೆಗೆ ಉತ್ತರಿಸುವ ಮುನ್ನ ಇಂಟರ್‌ನೆಟ್ ಅನ್ನು ಅರಿಯುವ ಒಂದು ಸಣ್ಣ ಪ್ರಯತ್ನ ಮಾಡೋಣ. ಮಿಲಿಟರಿ ಸಂಬಂಧಿತ ವಿಷಯಗಳನ್ನು ಒಂದು ಪ್ರದೇಶದಿಂಡ ಮತ್ತೊಂದು ಪ್ರದೇಶಕ್ಕೆ ರವಾನಿಸುವಾಗ ತಗುಲುತ್ತಿದ್ದ ಸಮಯವನ್ನು ಕಡಿಮೆ ಮಾಡಲು ಅಮೇರಿಕಾದಲ್ಲಿ ಹುಟ್ಟಿದ ‘ಆರ್ಪಾನೆಟ್‘ (ARPANET) ಎಂಬ ಕಂಪ್ಯೂಟರ್‌ಗಳನ್ನು ಒಂದಕ್ಕೊಂದು ಸಂಪರ್ಕದಲ್ಲಿರುವಂತೆ ಮಾಡುವ ತಂತ್ರಜ್ಞಾನ, ಇಂದು ಬೃಹದಾಕಾರದಲ್ಲಿ ಬೆಳೆದು ನಮಗೆಲ್ಲ ‘ಇಂಟರ್‌ನೆಟ್’ ಅಥವ ‘ಅಂತರ್ಜಾಲ‘ ಎಂದೇ ಚಿರಪರಿಚಿತವಾಗಿದೆ. ಮಾಹಿತಿ ವಿನಿಮಯವೇ ಮುಖ್ಯವಾದ ಇಂಟರ್‌ನೆಟ್ ಜಗತ್ತಿನ ಅತಿದೊಡ್ಡ ವಿಶ್ವಕೋಶ. ಎಲ್ಲ ವಿಷಯಗಳ ಮಾಹಿತಿಗಳನ್ನು ಸುಲಭವಾಗಿ ಯಾರು ಬೇಕಾದರೂ ಹಂಚಿಕೊಳ್ಳುವ ಮುಕ್ತ ವೇದಿಕೆ ಇದಾಗಿದೆ.
ವಿಜ್ಞಾನ, ತಂತ್ರಜ್ಞಾನಗಳು ಜನರ ಕೈಗೆ ಎಟುಕುವಂತಾದ ತಕ್ಷಣ ನಾವು ಅದರ ಉಪಯೋಗ ಹಾಗೂ ದುರುಪಯೋಗ ಎರಡನ್ನೂ ಕಾಣಲು ಸಾಧ್ಯವಾಗುತ್ತದೆ. ಇಂಟರ್‌ನೆಟ್ ಮಾನವನಿಗೆ ತನ್ನ ದಿನಚರಿಯನ್ನು ಊರು ಕೇರಿಗಳ ಆಚೆಗೆ, ದೇಶ ವಿದೇಶಗಳ ಗಡಿಯಾಚೆಗೂ ವಿಸ್ತರಿಸಿ ತನ್ನ ಪ್ರಪಂಚವನ್ನು ಹಿರಿದಾಗಿಸಿಕೊಳ್ಳುವ ದಿಕ್ಕನ್ನು ತೋರಿಸಿತು. ಒಂದು ಊರಿನ ಮೂಲೆ ಮೂಲೆಗಳಲ್ಲೂ ಕಂಡು ಬರುವ ಕಿರಾಣಿ ಅಂಗಡಿಗಳಂತೆ ಇಂಟರ್‌ನೆಟ್‌ನಲ್ಲಿ ಡಾಟ್ ಕಾಮ್ ಕಂಪೆನಿಗಳು ತಮ್ಮ ವೆಬ್‌ಸೈಟ್ ಅಥವಾ ಜಾಲತಾಣಗಳನ್ನು ತೆರೆದು ಮಾಹಿತಿ ವಿನಿಮಯಕ್ಕೆ ಮೀಸಲಾದ ಜಾಗದಲ್ಲಿ ವ್ಯಾಪರ ವಹಿವಾಟುಗಳಿಂದ ಹಿಡಿದು ಬ್ಯಾಂಕಿಂಗ್, ಅನ್ವೇಷಣೆ, ವಿದ್ಯಾಭ್ಯಾಸ, ಮನರಂಜನೆ ಮುಂತಾದ ಎಣಿಸಲಾಗದಷ್ಟು ಜೀವನದ ಭಾಗಗಳಿಗೆ ತಂತ್ರಜ್ಞಾನದ ಟಚ್ ಕೊಟ್ಟರು. ಜೊತೆ ಜೊತೆಗೆ ಬೆಳೆದ ಮೊಬೈಲ್ ಮತ್ತು ಕಂಪ್ಯೂಟರ್ ಗಳು ಅಂಗೈಅಗಲದ ಪರದೆಯ ಮೇಲೆ ವಿಶ್ವದರ್ಶನವನ್ನು ಮಾಡಿಸಲು ಅಣಿಯಾದವು. ಮಹಾಭಾರತದ ಕಥೆಯಲ್ಲಿನ ಕೃಷ್ಣನ ನೆನಪಾಗುತ್ತಿಲ್ಲವೇ? ಯಶೋಧೆ ಕೂಪದಲ್ಲಿ ಮಣ್ಣನ್ನು ತಿನ್ನುತ್ತೀಯ ಎಂದಾಗ ಇಲ್ಲ ನೋಡು ಎಂದು ತನ್ನ ಬಾಯನ್ನೇ ತೆರೆದು ವಿಶ್ವದರ್ಶನ ಮಾಡಿಸಿದ ಆ ಗೋಪಾಲ ಈ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹೊಕ್ಕಿದನೇ?
ವ್ಯಾಪಾರ ವಾಣಿಜ್ಯಗಳಿಂದಾಚಗೆ ಇಂಟರ್‌ನೆಟ್ ಅಂದರೆ ಅದು ಸಾಮಾನ್ಯ ಮನುಷ್ಯನ ಪ್ರಪಂಚ. ತನ್ನ ಸುಖದುಖ:ಗಳನ್ನು ತನ್ನ ಬ್ಲಾಗ್ ಬರಹಗಳಿಂದಲೂ, ತಾನು ಮೊಬೈಲ್, ಕ್ಯಾಮೆರಾದಿಂದ ತೆಗೆದ ಚಿತ್ರಗಳು, ವಿಡಿಯೊ ಇತ್ಯಾದಿಗಳ ಜೊತೆ ಇರುವ ಮತ್ತು ಇಲ್ಲದ ಗೆಳೆಯರ ಜೊತೆಗೆ ಹೊಸ ಗೆಳೆಯರನ್ನು ಪಡೆಯುತ್ತ ತನ್ನ ‘ನೆಟ್‌ವರ್ಕ್’ ಬೆಳೆಸಿಕೊಳ್ಳಲು ಹಂಬಲಿಸುವ ಎಲ್ಲರಿಗೂ ಇಂಟರ್‌ನೆಟ್ ತನ್ನ ‘ಸೋಸಿಯಲ್ ಮೀಡಿಯಾ’ ಎಂಬ ತಂತ್ರಜ್ಞಾನದ ತಂತ್ರಾಂಶಗಳ ಆವಿಷ್ಕಾರದಿಂದ ಮರಳುಮಾಡುತ್ತದೆ. ಬರೀ ಈ–ಮೈಲ್ ಮತ್ತು ಚಾಟ್‌ಗಳನ್ನು ಮಾಡುತ್ತಿದ್ದ, ಅದೇ ವಿಜ್ಞಾನದ ದೊಡ್ಡ ಆವಿಷ್ಕಾರ ಎಂದು ಹೇಳುತ್ತಾ, ವಿದೇಶದಲ್ಲಿರುವ ನಿಮ್ಮ ಗೆಳೆಯರನ್ನು ಸುಲಭವಾಗಿ ಸಂಪರ್ಕಿಸಿ ಎನ್ನುವ ಪಾಠವನ್ನು ಹೇಳುತ್ತಿರುವಾಗಲೇ. ನನ್ನೆಲ್ಲ ಗೆಳೆಯ ಗೆಳೆತಿಯರು ನನ್ನ ಅಂಗೈನ ಈ ಬ್ಲಾಕ್ ಬೆರಿ, ಆಂಡ್ರಾಯ್ಡ್ , ಐ–ಫೋನ್ ಎಂಬ ಮಾಯಪೆಟ್ಟಿಗೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಸಾಮಾಜಿಕ ಸಮುದಾಯಗಳಲ್ಲಿ ದಿನನಿತ್ಯವೂ, ಪ್ರತಿಗಳಿಗೆಯೂ ನಮ್ಮೊಂದಿಗಿದ್ದಾರೆ ಎಂಬ ಮಾತನ್ನು ಈಗ ಎಲ್ಲರೂ ನಿಸ್ಸಂಕೋಚವಾಗಿ ಹೇಳುತ್ತಾರೆ. ‘ಪ್ರಪಂಚ ಚಿಕ್ಕದಾಗಿದೆ’ ‘ನೀ ಎಲ್ಲೋದ್ರೂ ಇಲ್ಲೇ ಬರ್ತೀಯಾ’ ಎಂಬ ಮಾತುಗಳು ಈಗ ಸಾಮಾನ್ಯನಿಗೂ ಸಾಮಾನ್ಯ.
ಚಿಕ್ಕ ಪ್ರಪಂಚದಲ್ಲಿ ಒಬ್ಬ ವ್ಯಕ್ತಿ ಸೃಷ್ಟಿಸಿದ ಭಾವನೆ, ಆಕಾಂಕ್ಷೆ, ಕನಸುಗಳಿಗೆ ಬಣ್ಣ ಕಟ್ಟಲು ಅವನ ಸುತ್ತಲಿನ ವ್ಯಕ್ತಿಗಳು, ಗೆಳೆಯರು, ಹಿತವರು, ಹಿತಶತೃಗಳು ಇರುವಂತೆ ಇಂಟರ್‌ನೆಟ್‌ನಲ್ಲೂ ಕೂಡ ನಮ್ಮ ಬದುಕು ಬೆಳೆದು ಬಂದಿದೆ. ನೀವು ಬರೆದ ಲೇಖನಗಳನ್ನು ಮೆಚ್ಚುವ ಎಲ್ಲರೂ ಅದನ್ನು ಫೇಸ್‌ಬುಕ್‌ನ ಮೂಲಕ್ ಲೈಕ್ ಮಾಡುವ ಮುಖಾಂತರವೋ, ಇಲ್ಲ ಗೂಗಲ್ ಪ್ಲಸ್‌ನ +1 ಮಾಡುವ ಮೂಲಕ ಹೊಗಳುತ್ತಾರೆ. ಮನುಷ್ಯನ ಮಾತಿಗಿಂತ ಈ ಯಾಂತ್ರಿಕ ಲೇಪಗಳು ಇಂದು ‘ವರ್ಚುಯಲ್’ ಖುಷಿ ಕೊಡುತ್ತವೆ. ನೀವು ಇತರರೊಡನೆ ಹಂಚಿಕೊಂಡ ಮಾಹಿತಿ ಬಹಳ ಚೆನ್ನಾಗಿದ್ದರೆ ಅಥವಾ ಅದನ್ನು ನಿಜವಾಗಿಯೂ ತೆಗೆದು ಓದಿದವರು ಅದರಲ್ಲಿನ ವಿಷಯವನ್ನು ಮೆಚ್ಚಿಕೊಂಡರೆ, ಅದು ಅವರ ಗೆಳೆಯರ ಗುಂಪಿಗೆ ರವಾನೆಯಾಗುತ್ತದೆ. ಅದಕ್ಕೂ ಮತ್ತೊಂದು ಗುಂಡಿ ನಿಮ್ಮ ಸಾಮಾಜಿಕ ತಾಣದಲ್ಲಿ – ‘Share’. ಹೀಗೆ ಹಂಚಿಕೆಯಾದ ವಿಚಾರ ಹತ್ತಾರು, ಸಾವಿರಾರು ಮಂದಿಗೆ ಕ್ಷಣಾರ್ಧದಲ್ಲಿ ತಲುಪುತ್ತಾ ಹೋಗುತ್ತದೆ. ಇಲ್ಲಿಂದ ನಮ್ಮ ಮೊದಲ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಶುರು ಮಾಡಬಹುದು.
ಒಮ್ಮೆ ಇಂಟರ್‌ನೆಟ್‌ನಲ್ಲಿ ನೀವು ಹಂಚಿಕೊಂಡ ವಿಷಯ ಬೇರೆಯವರ ಬ್ಲಾಗಿಗೋ, ಪುಸ್ತಕಕ್ಕೋ, ಮತ್ಯಾರದೋ ಲೇಖನದ ಚಿತ್ರವಾಗಿಯೋ ಇತ್ಯಾದಿ ನಿಮಗೆ ಮುಂದೆ ಕಂಡರೆ ಆಶ್ಚರ್ಯಪಡಬೇಕಿಲ್ಲ. ಟಿ.ವಿ ಸೀರಿಯಲ್‌ಗಳು, ರಿಯಾಲಿಟಿ ಶೋಗಳು, ಸಿನೆಮಾಗಳು, ಅದೆಷ್ಟೋ ಕಾಪಿರೈಟ್ ಮುರಿದ ಪುಸ್ತಕದ ಪೂರ್ಣ ವಿದ್ಯುನ್ಮಾನ ಪ್ರತಿಗಳು ಯಾವ ಕಾಯ್ದೆ ಕಾನೂನಿನ ಹಂಗಿಲ್ಲದೆ ಇಂದು ಹರಿದಾಡುತ್ತಿವೆ. ಇಂತಹ ಮಾಹಿತಿಯನ್ನು ಹೊಂದಿರುವ ವೆಬ್‌ಸೈಟ್‌ಗಳ ಸಂಖ್ಯೆ ಕೂಡ ಯಥೇಚ್ಚವಾಗಿ ಬೆಳೆಯುತ್ತಿದೆ. ಇದು ಕಂಟೆಟ್ ಪೈರಸಿ ಅಥವಾ ಮಾಹಿತಿ ಚೋರತನದ ಒಂದು ಮುಖ. ಒಮ್ಮೆ ಇಂಟರ್‌ನೆಟ್‌ನಲ್ಲಿ ಕಂಡ ಚಿತ್ರ ಅಥವಾ ಮಾಹಿತಿಯನ್ನು ತಮ್ಮ ಕೆಲಸಕ್ಕೆ ಉಪಯೋಗವಾಗುವಂತೆ ಬಳಸಿಕೊಳ್ಳುವ ಜಾಣತನ ಹೆಚ್ಚುತ್ತಿದೆ. ಅದೇ ಸಮಯದಲ್ಲಿ ಮೂಲ ಮಾಹಿತಿ ಪಡೆದದ್ದಾದರೂ ಎಲ್ಲಿಂದ ಎಂದು ನಮೂದಿಸುವ ಕನಿಷ್ಠ ಪ್ರಜ್ಞೆಯೂ, ಅದರ ಬಗ್ಗೆ ಚಿಂತಿಸುವ ಕಿಂಚಿತ್ತು ವ್ಯವದಾನವೂ ಶರವೇಗದ ಜಗತ್ತಿನಲ್ಲಿ ಇಲ್ಲವಾಗಿದೆ. ಕೃತಿಚೌರ್ಯದ ಬಗ್ಗೆ ಸಾಹಿತ್ಯ ಕ್ಷೇತ್ರದಲ್ಲಿ ಆಗಬಹುದಾದ ಚರ್ಚೆಗಳಿಗಿಂತಲೂ ದೊಡ್ಡ ಚರ್ಚೆಗಳು ಇಂಟರ್‌ನೆಟ್‌ನಲ್ಲಿ ಆಗಬಹುದಾದರೂ ತಂತ್ರಜ್ಞಾನದ ಜಾಣತನದಿಂದ ಮುಚ್ಚಬಹುದಾದ ಕುರುಹುಗಳನ್ನು ಕೆದಕಿ ತೆಗೆಯುವುದು ಅಷ್ಟು ಸುಲಭವಲ್ಲ.
ಹಾಗಿದ್ದರೆ ಇಂಟರ್‌ನೆಟ್‌ನಲ್ಲಿ ಇರುವುದೆಲ್ಲವೂ ಪೈರಸಿಯ ಸರಕೇ ಎಂದರೆ, ಇಲ್ಲ! ಅದು ನಿಜವಲ್ಲ. ಓಪನ್ ಕಾಂಟೆಂಟ್ (Open Content) ಅಥವಾ ಓಪನ್ ಕಲ್ಚರ್ (Open Culture) ಮುಕ್ತ ಮಾಹಿತಿ ಅಥವಾ ಮುಕ್ತ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ಇಂಟರ್‌ನೆಟ್‌ನಲ್ಲಿ ಸಮುದಾಯಗಳು ಒಟ್ಟಿಗೆ ಕುಳಿತು ಕಟ್ಟಿದ ಮಾಹಿತಿಯ ಭಂಡಾರವಾದ ವಿಕಿಪೀಡಿಯದಂತಹ ವೆಬ್‌ಸೈಟುಗಳೂ ಇವೆ. ಪ್ರತಿಯೊಂದೂ ವೆಬ್‌ಸೈಟ್ ಕೂಡ ತನ್ನಲ್ಲಿರುವ ಮಾಹಿತಿಯ ಕಾಪಿರೈಟ್ ಅಥವ ಕೃತಿಸಾಮ್ಯದ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ. ಅನೇಕ ಸಾಮಾಜಿಕ ತಾಣಗಳ ಪ್ರೈವಸಿ ಪಾಲಿಸಿ ಇತ್ಯಾದಿಗಳು, ಯಾವುದೇ ಬಳಕೆದಾರ ಅಪ್ಲೋಡ್ ಮಾಡಿದ ಮಾಹಿತಿ ಯಾವ ಲೈಸೆನ್ಸ್‌ನಡಿ ಇತರರಿಗೆ ಲಭ್ಯಎಂಬುದನ್ನು ಬಿಂಬಿಸುತ್ತವಲ್ಲದೆ, ಬಳಕೆದಾರನಿಗೆ ಅದನ್ನು ಅಪ್ಲೋಡ್ ಮಾಡುವಾಗಲೇ ಅದರ ಲೈಸೆನ್ಸ್ ಅನ್ನು ಕೂಡ ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಕೊಡುತ್ತವೆ. ಇದೇನೇ ಇದ್ದರೂ ಎಲ್ಲ ಕೃತಿಸಾಮ್ಯದ ವಿಷಯಗಳನ್ನು ಗಾಳಿಗೆ ತೂರಿಬಿಟ್ಟು ಮಾಹಿತಿ ತನ್ನದೇ ಎಂದು ಮತ್ತೊಬ್ಬರು ವಿಷಯವನ್ನು ಹಂಚಿಕೊಂಡಾಗ ಮಾತ್ರ ಪೈರಸಿಯ ಭೂತ ಬೆನ್ನು ಹತ್ತುತ್ತದೆ.
ಬರೀ ಪೈರಸಿ ಅಷ್ಟೇ ಅಲ್ಲದೆ ಇದಕ್ಕಿಂತ ಎಷ್ಟೋ ವಿಕೃತಿಗಳೂ ಕೂಡ ಇಂಟರ್‌ನೆಟ್‌ನ ಮತ್ತೊಂದು ಮುಖದಲ್ಲಿ ಕಾಣುತ್ತವೆ. ಮಾಹಿತಿ ಹಂಚಿಕೆ ಸುಲಭ ಸಾಧ್ಯ, ಟ್ವಿಟರ್, ಫೇಸ್‌ಬುಕ್ ಗಳು ಮೊಬೈಲ್‌ನಂತಹ ಕಿರುಗಾತ್ರದ ಗೆಜೆಟ್‌ಗಳಲ್ಲಿ ಸಿಗಲು ಸಾಧ್ಯವಾದದ್ದೇ ಬಂತು ಚಿಕ್ಕಪುಟ್ಟ ಮಕ್ಕಳಿಂದ ಹಿಡಿದು ಬಿಗ್ ಬಿ ಅಮಿತಾಬ್ ಬಚ್ಚನರಂತಹ ದೊಡ್ಡ ನಟರೂ, ಶಶಿತರೂರ್‌ರಂತಹ ರಾಜಕಾರಣಿಗಳು, ಬರ್ಕಾ ದತ್ ರಂತಹ ಜರ್ನಲಿಸ್ಟ್‌ಗಳು ಟಿ.ವಿ ಪರದೆಯ ಹೊರಗೆ ಜನಸಾಮಾನ್ಯರ ಸಂಪರ್ಕದಲ್ಲಿರಲು ಸಾಧ್ಯವಾಯಿತು. ಒಂದೆಡೆ ತಮ್ಮ ಸೆನ್‌ಸೇಷನಲ್ ಕೆಲಸಗಳಿಂದ ಮನೆಮಾತಾಗಿದ್ದ ಇದೇ ಜನ ತಮ್ಮ ಸಣ್ಣ ಪುಟ್ಟ ಕಾಮೆಂಟುಗಳನ್ನು ಸೋಸಿಯಲ್ ಮೀಡಿಯಾಗಳಿಂದ ತೂರಿಬಿಟ್ಟು ಕಷ್ಟಕ್ಕೆ ತಗುಲಿಕೊಂಡದ್ದಿದೆ. ಅದೇ ರೀತಿ ಗ್ಲಾಮರ್ ಲೋಕದಲ್ಲಿ ಮಿನುಗುತ್ತಿದ್ದ ತಾರೆಗಳು ಇಂಟರ್‌ನೆಟ್ ಮತ್ತು ಇತರೆ ತಂತ್ರಜ್ಞಾನಗಳಿಂದ ಬೆತ್ತಲಾದದ್ದೂ ಇದೆ. ಕ್ಯಾಮೆರಾ ಕಾರ್ಯಾಚರಣೆಗೆ ಇಳಿದ ಅದೆಷ್ಟೋ ಜನ ದೊಡ್ಡದೊಡ್ಡವರ ಬಣ್ಣ ಬದಲು ಮಾಡಿದರೆ, ಅದೇ ವಿಷಯ ನಿಮಿಷ ಮಾತ್ರದಲ್ಲಿ ಎಸ್.ಎಮ್.ಎಸ್ , ಎಂ.ಎಂ.ಎಸ್ ಗಳ ಜೊತೆಗೆ ವಿಶ್ವದ ಎಲ್ಲರನ್ನೂ ತಲುಪುತ್ತದೆ. ಕೋಮುಗಲಭೆ, ಜಾತಿವಾದಗಳು ಇತ್ಯಾದಿಗಳಿಗೂ ಇದೇ ತಂತ್ರಜ್ಞಾನ ಬೆಂಕಿಗೆ ತುಪ್ಪ ಸುರಿದಂತೆ. ಇದೇ ಸರದಿ ಮುಂದುವರಿದಂತೆ ಮತ್ತೊಮ್ಮೆ ಇಡೀ ದೇಶದ ಜನರನ್ನು ಭ್ರಷ್ಟಾಚಾರದ ವಿರುದ್ದ ಕೂಡ ದನಿಯೆತ್ತುವಂತೆ ಎಲ್ಲರನ್ನೂ ಸಂಘಟಿಸುವ ಶಕ್ತಿ ಕೂಡ ಇದಕ್ಕಿದೆ. ಸರ್ಕಾರದೊಡನೆ ಸಂಪರ್ಕವಿರಿಸಿಕೊಳ್ಳಲು ಬಯಸುವ ಅನೇಕರಿಗೆ ಇದುವರೆಗೂ ಸರ್ಕಾರ ಹೇಳಿದ್ದನ್ನು ಮಾತ್ರ ಕೇಳುವ ಅವಕಾಶವಿತ್ತು. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯಗಳನ್ನು ಕೇಳದೇ ಹೋದ ಸರ್ಕಾರಗಳಿಗೆ ಪ್ರಜೆಗಳೂ ಕೂಡ ತಮ್ಮ ಮಾತನ್ನು ಕೇಳುವಂತೆ ಮಾಡಿದ್ದು ಇಂಟರ್‌ನೆಟ್.
ಜಗತ್ತಿನಾದ್ಯಂತ ಇಂದು ಇಂಟರ್‌ನೆಟ್ ಲೋಕದ ಒಳಿತು ಕೆಡುಕುಗಳ ಚರ್ಚೆ. ನ್ಯಾಯದ ತಕ್ಕಡಿಯಲ್ಲಿ ಇಲ್ಲಿನ ತಪ್ಪಿತಸ್ಥರನ್ನು ಶಿಕ್ಷಿಸುವ ತವಕ ಎಲ್ಲರಿಗೂ ಇದ್ದಂತಿದೆ. ಪ್ರತಿಯೊಂದೂ ದೇಶವೂ ತನ್ನದೇ ಆದ ಸೈಬರ್ ಕಾಯ್ದೆಗಳನ್ನು ಕಾಲಕ್ಕೆ ತಕ್ಕಂತೆ ತರುವ ತಯಾರಿಯಲ್ಲಿವೆ. ಇವುಗಳ ಮುಖ್ಯ ಉದ್ದೇಶ ಇಂಟರ್‌ನೆಟ್‌ನಲ್ಲಿ ಹರಿದಾಡುವ ವಿಷಯಗಳನ್ನು ಹದ್ದುಬಸ್ತಿನಲ್ಲಿಡುವುದು. ಪೈರಸಿಯ ತಡೆ ಅದರಲ್ಲಿ ಒಂದು ಭಾಗ ಮಾತ್ರ.
ಅಮೇರಿಕಾ ಸಂಯುಕ್ತ ಸಂಸ್ಥಾನ ಸ್ಟಾಪ್ ಆನ್ಲೈನ್ ಪೈರಸಿ ಆಕ್ಟ್ (SOPA)ಮತ್ತು ಪ್ರೊಟೆಕ್ಟ್ ಐ.ಪಿ ಆಕ್ಟ್ (PIPA)ಕಾಯ್ದೆಗಳನ್ನು ಇಂಟರ್‌ನೆಟ್ ಪ್ರೈರಸಿ ಮತ್ತು ಆರ್ಥಿಕ ಕ್ರಿಯಾಶೀಲತೆಗೆ ವಿಘ್ನತರಬಲ್ಲ, ಕೃತಿಚ್ಯಾರ್ಯ ಇತ್ಯಾದಿ ಕಾರ್ಯಗಳನ್ನು ತಡೆಗಟ್ಟಲು ತನ್ನ ಸೆನೆಟ್‌ನಲ್ಲಿ ಮಂಡಿಸಿದೆ. ಭಾರತದಲ್ಲೂ ಕೂಡ ಐ.ಪಿ ಪ್ರೊಟೆಕ್ಟ್ ಆಕ್ಟ್ ತರುವ ಸಲುವಾಗಿ ನಮ್ಮ ಕೇಂದ್ರ ಸರ್ಕಾರದ ಮಂತ್ರಿ ಕಪಿಲ್ ಸಿಬಿಲ್ ಕಾರ್ಯಾರಂಭಿಸಿದ್ದಾರೆ. ಈಗಾಗಲೇ ಫೇಸ್‌ಬುಕ್, ಗೂಗಲ್, ಯಾಹೂ ನಂತಹ ದೊಡ್ಡದೊಡ್ಡ ಕಂಪೆನಿಗಳನ್ನು ಕರೆದು ಮಾತನಾಡಿಸುವ ಇವರ ಈ ನಡೆ ದೇಶದಾದ್ಯಂತ ದಿಕ್ಕಾರದ ಉತ್ತರವನ್ನು ಕೂಡ ಕಂಡಿದೆ. ಅದರಂತೆಯೇ ಅಮೇರಿಕಾದ ನಡೆ ಕೂಡ ವಿಶ್ವದಾದ್ಯಂತ ಇಂಟರ್‌ನೆಟ್ ಬಳಕೆದಾರರ ಆಕ್ರೋಶಕ್ಕೆ ಗುರಿಯಾಗಿದೆ.
ಇಂಟರ್‌ನೆಟ್‌ನಲ್ಲಿಯ ಮಾಹಿತಿಯನ್ನು ಸಂರಕ್ಷಿಸುವ ಈ ಕಾಯ್ದೆಗಳಿಗೇಕೆ ಹೀಗೆ ವಿರೋಧ ಎಂದಿರಾ? ಮುಕ್ತ ಮಾಹಿತಿ ವಿನಿಮಯ ವೇದಿಕೆಯಾದ ಇಂಟರ್‌ನೆಟ್ ಸರ್ಕಾರಗಳ ಹಿಡಿತದಲ್ಲಿ ಬಂದು ವಾಕ್ ಸ್ವಾತಂತ್ರ್ಯ ನಮಗೆ ಕೊಟ್ಟಿರುವ ‘ಎಲ್ಲ ಪ್ರಜೆಗಳೂ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ’ ಹಂಚಿಕೊಳ್ಳುವ ಸ್ವಾತಂತ್ರ್ಯವನ್ನು ಕಿತ್ತುಕೊಂಡತಾಗುತ್ತದೆ ಎಂಬುದು ಇಂತಹ ವಿರೋಧಗಳ ಅಭಿಪ್ರಾಯ. ಯಾವುದೇ ಒಂದು ದೇಶದ ಸರ್ಕಾರ ತನ್ನ ಪ್ರಜೆಗಳು ಇಂತದ್ದೊಂದು ವಿಷಯ ಅಥವಾ ಮಾಹಿತಿಯನ್ನು ನೋಡಬಾರದು ಅಥವಾ ಪಡೆಯಬಾರದು ಎಂದು ಭಾವಿಸಿ ತನ್ನ ಸೈಬರ್ ಕಾಯ್ದೆಯಡಿ ಅಂತಹ ವಿಷಯಗಳನ್ನು ಹಂಚಿಕೊಳ್ಳುವ ಜಾಣತಾಣಗಳನ್ನು ನಿರ್ಬಂಧಿಸಿದರೆ ಏನಾಗಬಹುದು ಯೋಚಿಸಿ. ಮುಕ್ತವಾಗಿ ಯಾವುದೇ ವಿಷಯಗಳ ಮಾಹಿತಿಯನ್ನು ಹಂಚಿಕೊಳ್ಳುವ ಎಲ್ಲ ತಾಣಗಳು, ವಿಶ್ವದಾದ್ಯಂತ ಅನೇಕ ಭಾಷೆಗಳಲ್ಲಿ ಸಂಗ್ರಹಿಸಲ್ಪಟ್ಟ ವಿಕಿಪೀಡಿಯಾದಂತಹ ವಿಶ್ವಕೋಶಗಳು ನಮ್ಮಿಂದ ದೂರವಾದರೆ, ಜಗತ್ತಿನ ಜ್ಞಾನದ ಹರಿವಿನ ಗತಿಯೇನು? ಈಜಿಪ್ಟ್‌ನಲ್ಲಿ ಇತ್ತೀಚೆಗೆ ಆದ ಕ್ರಾಂತಿಗೆ ಪ್ರಭಲ ಅಸ್ತ್ರ ಇಂಟರ್‌ನೆಟ್‌ನ ಸಾಮಾಜಿಕ ತಾಣಗಳು. ಅಲ್ಲಿನ ಸರ್ಕಾರ ತಕ್ಷಣ ಇಡೀ ದೇಶದ ಇಂಟರ್‌ನೆಟ್ ಸಂಪರ್ಕವನ್ನೇ ಕಡಿದು ಹಾಕಿತು. ಬೆಳಕುಕಂಡ ಜನರಿಗೆ ಆ ಬೆಳಕಿನ ಕೊಂಡಿಯನ್ನೇ ಇದರಿಂದ ಕಿತ್ತಂತಾಯಿತು, ಆದರೆ ಆ ಒಂದು ಸಣ್ಣ ಬೆಳಕು ತನ್ನ ಪ್ರಭೆಯನ್ನು ಆಗಲೆ ಬೀರಿತ್ತೆನ್ನಿ.
ಇರಲಿ, ಯಾವುದೇ ಕಾಯ್ದೆ ಕಾನೂನಿನ ಮೂಲಕವೇ ಇಂತದ್ದಕ್ಕೆ ಉತ್ತರ ಕಂಡುಕೊಳ್ಳಬಹುದು ಎಂದೇ ಆದಲ್ಲಿ, ನಮ್ಮ ಬೆಂಗಳೂರಿನ ಯುವಕನೊಬ್ಬ ಪುಣೆಯ ಜೈಲಿನಲ್ಲಿ ೨ ವರ್ಷ ತಾನು ಇಂಟರ್‌ನೆಟ್‌ನಲ್ಲಿ ಮಾಡಿಲ್ಲದ ತಪ್ಪಿಗಾಗಿ ಶಿಕ್ಷೆಗೆ ಗುರಿಯಾದದ್ದನ್ನು ಮರೆಯಲು ಸಾಧ್ಯವೇ? ಶಿವಾಜಿಯವರನ್ನು ಹೀಯಾಳಿಸಿ ಬರೆಯಲಾಗಿತ್ತು ಅದೂ ಈತನಿಂದ ಎಂದು ಸೈಬರ್ ಪೋಲೀಸರು ಎರ್‌ಟೆಲ್ ಮೂಲಕ ಪಡೆದ ದತ್ತಾಂಶಗಳ ಮಾಹಿತಿ ಹಿಡಿದು ಈತನನ್ನು ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಗೆ ಗುರಿಪಡಿಸಿದ್ದು ನೆನಸಿಕೊಂಡರೆ, ಇಂಟರ್‌ನೆಟ್‌ನ ಮಾಹಿತಿಯ ಆಗರದಲ್ಲಿರುವ ಪ್ರತಿಯೊಂದೂ ಪದಗಳಿಗೂ ಅದನ್ನು ಬರೆದ ಮೂಲವ್ಯಕ್ತಿಯ ಚಹರೆಯನ್ನು ಗುರುತಿಸಲು ನಿಜವಾಗಲೂ ಸಾಧ್ಯವೇ, ಅಂತಹ ತಂತ್ರಜ್ಞಾನವೇ ಮಾನವನ ಕೈನಲ್ಲಿ ಇಲ್ಲದಿರುವಾಗ ತಪ್ಪಿತಸ್ಥರನ್ನು ಗುರುತಿಸುವ ವಿಚಾರ ಹಾಗು ಇಂತಹ ತಪ್ಪುಗಳು ಮತ್ತೆ ಆಗದಂತೆ ತಡೆಯುವುದು ನಿಜಕ್ಕೂ ಸಾಧ್ಯವೇ ಎಂಬ ಪ್ರಶ್ನೆ ಬಾರದಿರದು.
ಹಾಗಿದ್ದಲ್ಲಿ, ಇದಕ್ಕೆಲ್ಲ ಪರಿಹಾರವೇ ಇಲ್ಲವೇ? ನಮ್ಮ ಕ್ರಿಯಾಶೀಲ ಬರವಣಿಗೆಗಳು, ಚಟುವಟಿಕೆಗಳು, ಸಿನೆಮಾ, ಸಂಗೀತ, ಕಲೆ ಇತ್ಯಾದಿ ಬೇರೆಯವರ ಹೆಸರಿನಲ್ಲಿ ಹರಿದಾಡುತ್ತಾ ಇನ್ಯಾರಿಗೋ ಉಪಯೋಗವಾಗುತ್ತಲೇ ಹೋಗುವುದೇ ಎಂಬ ಪ್ರಶ್ನಾರ್ಥಕ ಚಿನ್ಹೆ ನಿಮ್ಮ ಮುಖದ ಮೇಲೆ ಬಂದಿರಲಿಕ್ಕೂ ಸಾಕು. ಪೂರ್ಣ ಪರಿಹಾರ ಎಂಬುದಕ್ಕಿಂತ ಇದೆಲ್ಲ ವಿಷಯಗಳಿಗೂ ಹಂತಹಂತವಾಗಿ ನಾವು ಉತ್ತರವನ್ನುಕಂಡುಕೊಳ್ಳಬೇಕಿದೆ. ಮೊದಲು ತಂತ್ರಜ್ಞಾನದ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಳಕೆದಾರರು ಪಡೆದುಕೊಳ್ಳಬೇಕಿದೆ. ಆನ್‌ಲೈನ್ ಜಗತ್ತಿನಲ್ಲಿ ಕೀಲಿಮಣೆ ಕುಟ್ಟುತ್ತಾ ಸಾಗುವುದಷ್ಟೇ ಅಲ್ಲ, ಅಲ್ಲಿ ತಾವು ಸೇರಿಸುವ ಮಾಹಿತಿಯನ್ನು ಸುರಕ್ಷಿತಗೊಳಿಸಿಕೊಳ್ಳುವುದು, ಅದರ ಜವಾಬ್ದಾರಿಯನ್ನು ಹೊರುವುದನ್ನೂ ಕೂಡ ನಾವು ಕಲಿತುಕೊಳ್ಳಬೇಕಿದೆ. ಬೇರೆಯವರ ಕಲೆ, ಸಾಹಿತ್ಯ, ಸಂಸ್ಕೃತಿ, ಮಾಹಿತಿ ಇತ್ಯಾದಿಗಳನ್ನು ನಮ್ಮ ಬಳಕೆಗೆ ತೆಗೆದುಕೊಳ್ಳುವ ಮುಂಚೆ ಮೂಲ ಕರ್ತೃವಿನ ಒಪ್ಪಿಗೆ ಪಡೆಯುವುದನ್ನು ರೂಢಿಸಿಕೊಳ್ಳಬೇಕಿದೆ. ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿರುವ ಮಾನವೀಯತೆಯನ್ನು ಇಂಟರ್‌ನೆಟ್‌ನ ವರ್ಚುಅಲ್ ವರ್ಲ್ಡ್‌ನಲ್ಲಿಯೂ ಅಳವಡಿಸಿಕೊಳ್ಳಬೇಕಿದೆ.