ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪರಿವರ್ತಕ ಅಥವಾ ಕನ್ವರ್ಟರ್ ತಂತ್ರಾಂಶಗಳು ವಿಂಡೋಸ್ ಬಳಕೆದಾರರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ರೂಪಿಸಿರುವಂತಿದೆ. 
ಕನ್ನಡವನ್ನು ಲಿನಕ್ಸ್ ಮತ್ತು ಐ–ಓಎಸ್‌ನಲ್ಲಿ ಬಳಸುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ. ಇದನ್ನೆಲ್ಲಾ ಮರೆತು ಇದನ್ನು ವಿಂಡೋಸ್‌ನಲ್ಲಿಯೇ ಬಳಸಲು ಹೊರಟರೂ ಈ ತಂತ್ರಾಂಶದ ಜೊತೆಗಿರುವ ಸಹಾಯ ಕಡತಗಳು ಯಾವ ಸಹಾಯವನ್ನೂ ಮಾಡುವುದಿಲ್ಲ. ದತ್ತ ನಿರ್ಮಾಣ ಎಂಬ ಆಯ್ಕೆ ಮೊದಲಿಗೆ ಈ ತಂತ್ರಾಂಶ ನೋಡುವವರನ್ನು ತಬ್ಬಿಬ್ಬುಗೊಳಿಸುತ್ತದೆ. GOK (Kuvempu NUDI Baraha) ಎಂಬ ಆಯ್ಕೆ ಬಳಸಿ, ನುಡಿ ಅಥವಾ ‘ಆಸ್ಕಿ’ಯಲ್ಲಿರುವ ಕಡತವನ್ನು ಯೂನಿಕೋಡ್‌ಗೆ ಪರಿವರ್ತಿಸಿ ಕೊಳ್ಳಬಹುದು ಎಂಬುದನ್ನು ಅರಿಯುವಲ್ಲಿ ಸುಸ್ತಾದರೂ, ಅದರ ಫಲಿತಾಂಶ ಮೊದಲ ಟೆಸ್ಟ್‌ನಲ್ಲಿ ಪಾಸ್ ಆಗಿದೆ. ಬ್ರೈಲ್ ಕನ್ವರ್ಟರ್ ಬಳಕೆ, ಅದನ್ನು ಬಳಸುವ ತಂತ್ರಾಂಶ ಇತ್ಯಾದಿಗಳ ಬಗ್ಗೆ ಉಲ್ಲೇಖಗಳಿಲ್ಲ, ಇವನ್ನು ಟೆಸ್ಟ್ ಮಾಡುವ ಅವಕಾಶ ಕೂಡ ಇಲ್ಲ. 
ಪರೀಕ್ಷೆಗಾಗಿ ಕೊಟ್ಟಿರುವ ಮಾದರಿಗಳಲ್ಲಿ ಇಂಗ್ಲಿಷ್ ಅಕ್ಷರಗಳು, ಸಂಖ್ಯೆಗಳು ಇತ್ಯಾದಿಗಳನ್ನು ಬಳಸಿಲ್ಲವಾದ್ದರಿಂದ ಅವನ್ನು  ಪರೀಕ್ಷಿಸುವ ಸಾಧ್ಯತೆಗಳೇ ಇಲ್ಲ. ಇನ್ನು ಈ ಎಲ್ಲ ಸಾಫ್ಟ್‌ವೇರ್‌ಗಳನ್ನು ಹುಡುಕಿ ತಂದು ಇನ್‌ಸ್ಟಾಲ್ ಮಾಡಿಕೊಂಡು ಪರೀಕ್ಷೆ ಮಾಡಲು ಯಾರು ಸಿದ್ಧರಿರುತ್ತಾರೆ?
ಸಂರಕ್ಷಣ ಕಡತ (ನಿಮಗೆ ಸಿಗುವ ಫಲಿತಾಂಶವನ್ನು ಉಳಿಸಿಕೊಳ್ಳುವ ಫೈಲ್‌ನ ಹೆಸರು ಮತ್ತು ವಿಳಾಸ) ಇದರಲ್ಲಿ ಫೈಲ್ ಹೆಸರು ಜೊತೆಗೆ ಫೈಲ್ ಎಕ್ಸ್‌ಟೆನ್ಷನ್ ಕೊಡುವುದನ್ನು ಮರೆತರೆ ಆ ಕಡತಗಳನ್ನು ತೆಗೆಯಲು ಹರಸಾಹಸ ಪಡಬೇಕಾಗುತ್ತದೆ. ಸಾಮಾನ್ಯನೊಬ್ಬ ಬಳಸುವ ತಂತ್ರಾಂಶ ಎಷ್ಟು ಚೊಕ್ಕ ಮತ್ತು ಸುಲಭವಾಗಿರಬೇಕು ಎಂದು ತಿಳಿಸುವ ವಿನ್ಯಾಸ ಸಂಬಂಧೀ ವಿಚಾರಗಳನ್ನು ಅಭಿವೃದ್ಧಿ ಮಾಡಿದ ತಂಡ ನಿರ್ಲಕ್ಷಿಸಿರುವುದಕ್ಕೆ ಇದು ಸಾಕ್ಷಿಯಾಗುತ್ತದೆ. ರಾಶಿ ರಾಶಿ ಕಡತಗಳು ಆಸ್ಕಿಯಲ್ಲಿ ಕೊಳೆಯುತ್ತಿರುವಾಗ ಒಂದೊಂದೇ ಫೈಲ್ ಬಳಸಿ ಕನ್ವರ್ಟ್ ಮಾಡುವಂತೆ ಮಾಡುವ ತಂತ್ರಾಂಶದ ಅವಶ್ಯಕತೆ ಮತ್ತು ಅದರ ಭವಿಷ್ಯದ ಬಗ್ಗೆ ಈಗಲೇ ಕೊರಗಿದೆ. ಹತ್ತಾರು ಕಡತಗಳನ್ನು ಒಟ್ಟಿಗೆ ಪಡೆದು, ಅವನ್ನು ಅದರ ಎಕ್ಸ್‌ಟೆನ್ಷನ್ ಅಥವಾ ಕಡತದ ಮಾಹಿತಿಗಳನ್ನು ಬಳಸಿ ಅರ್ಥಮಾಡಿಕೊಂಡು ಅವನ್ನು ಸುಲಭವಾಗಿ ಕನ್ವರ್ಟ್ ಮಾಡಿಕೊಡುವಂತೆ ಅಭಿವೃದ್ಧಿ ಪಡಿಸುವ ಸಾಧ್ಯತೆಯನ್ನು ಸರ್ಕಾರ ಮರೆತಿರುವಂತಿದೆ.
ಈ ತಂತ್ರಾಂಶ ಬಳಸಿ ಮೈಕ್ರೋಸಾಫ್ಟ್ ಆಫೀಸ್‌ಗೆ ಸಂಬಂಧಪಟ್ಟ ಕಡತಗಳನ್ನು ಮಾತ್ರ ಯೂನಿಕೋಡ್‌ಗೆ ಬದಲಾಯಿಸಬಹುದೇ ಹೊರತು ಡಿ.ಟಿ.ಪಿ ಆಪರೇಟರ್‌ಗಳು ಬಳಸುವ ಅಡೋಬಿಯ ತಂತ್ರಾಂಶಗಳಿಗೆ ಇದು ಪ್ರಯೋಜನಕ್ಕೆ ಬಾರದು.
(ಲೇಖಕರು ವಚನ ಸಂಚಯದ ರೂವಾರಿಗಳಲ್ಲೊಬ್ಬರು. ಐ.ಟಿ. ಉದ್ಯೋಗಿ)