ಬರೆದದ್ದು ೫-ಜನವರಿ-೨೦೧೯
ವಿಜಯಕರ್ನಾಟಕದಲ್ಲಿ ೨೪ ಫೆಬ್ರವರಿಯಂದು ಪ್ರಕಟವಾದ ಲೇಖನ‍ ‍

ಸಾಮಾನ್ಯವಾಗಿ ನಾವು ಇಂಟರ್ನೆಟ್ ನ ಬಗ್ಗೆ ಕೇಳುವ ಸುದ್ದಿ ಗಳು ಯಾವುವು?  ಯಾವುದೋ ಪಾಪ್ ಗಾಯಕಿ ಹಾಡು ವೈರಲ್ ಆಯಿತು, ಈ ವರ್ಷ ಭಾರತದ ನೆಟ್ಟಿಗರು ಈ ಪದಗಳನ್ನು ಸರ್ಚು ಮಾಡಿದರು,ಈ ಚಲನಚಿತ್ರದ ತುಣುಕುಗಳನ್ನು ಕೋಟಿ ಜನ ನೋಡಿದ್ದಾರೆ, ಇತ್ಯಾದಿ. ಆದರೆ ಈ ವರ್ಷ ದ ಸುದ್ದಿ ಯೇ ಬೇರೆ ‌. ಅದು ಪುಸ್ತಕ ಗಳ ಸುದ್ದಿ ಇ-ಬುಕ್/ಇ-ಪುಸ್ತಕ ಅಥವಾ ವಿದ್ಯುನ್ಮಾನ ಪುಸ್ತಕಗಳು ಪುಸ್ತಕ ಪ್ರೇಮಿಗಳಿಗೂ, ಅಂಗೈನಲ್ಲೇ ವಿಶ್ವದ ಜ್ಞಾನವನ್ನೆಲ್ಲಾ ಜಾಲಾಡುವ ನೆಟ್ಟಿಗರಿಗೂ ಚಿರಪರಿಚಿತ. ಈ ವರ್ಷಾರಂಭದ ಸಂಭ್ರಮಾಚರಣೆಗೆ ಎನ್ನುವಂತೆ ಅಮೇರಿಕಾದಲ್ಲಿ ‍೧೯೨೩-೧೯೭೭ರಲ್ಲಿ ಪ್ರಕಟಗೊಂಡ ಪುಸ್ತಕಗಳು ೯೫ ವರ್ಷಗಳ ನಂತರ ಸಾರ್ವಜನಿಕ ಸ್ವತ್ತಾಗಿವೆ (public domain). ಅಗಾಥಾ ಕ್ರಿಸ್ಟಿ, ಪಿ.ಜಿ ವುಡ್‌ಹೌಸ್, ಕಾರ್ಲ್‌ ಸ್ಯಾಂಡ್‌ಬರ್ಗ್ ರಂತಹ ಮಾಹಾನ್ ಲೇಖಕರ ಪುಸ್ತಕಗಳು ಈಗ ಓದುಗರಿಗೆ ಮುಕ್ತವಾಗಿ ಲಭ್ಯ. ಹಾಥಿ ಟ್ರಸ್ಟ್ ಒಂದೇ ೧೯೨೩ರಲ್ಲಿ ಪ್ರಕಟಗೊಂಡ ೫೩,೦೦೦ ಕೃತಿಗಳನ್ನು, ಹಾಗೇ ಪ್ರಾಜೆಕ್ಟ್ ಗುಟೆನ್‌ಬರ್ಗ್ ೫೮,೦೦೦ ಕೃತಿಗಳನ್ನು ಬಿಡುಗಡೆ ಮಾಡಿವೆ. ರೆಡಿಟ್‌‌ನ ಬಳಕೆದಾರ ನಿಮೋಬಿಸ್ (nemobis) ಪಾವತಿಸಿ ಪಡೆಯ ಬೇಕಿದ್ದ ೧೯೨೩ಕ್ಕೂ ಹಿಂದಿನ ೧.೫ ಮಿಲಿಯನ್ ದಾಖಲೆಗಳನ್ನು ೮೦೦ ಜಿ.ಬಿ ಟಾರೆಂಟ್‌ಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಿಸಿದ್ದಾರೆ. ಮುಕ್ತ ಜ್ಞಾನ ಚಳುವಳಿಗೆ ಇದೊಂದು ಮಹತ್ವದ ಹಂತವೇ ಸರಿ. ಆದರೆ ಇಂತಹದ್ದೊಂದು ಸಾಧ್ಯತೆ ಕನ್ನಡಕ್ಕೆ ಸಾಧ್ಯವಾಗಿಲ್ಲ. ಡಿಜಿಟಲೀಕರಣದ ಮಟ್ಟಿಗೆ ನಾವು ಇನ್ನೂ ಬಹಳ ಹಿಂದಿದ್ದೇವೆ.

ಪ್ರಮುಖ ಇ-ಪುಸ್ತಕ ತಾಣಗಳ‍ಲ್ಲಿ ಲಭ್ಯವಿರುವ ಕನ್ನಡ ಇ-ಪುಸ್ತಕಗಳ/ಡಿಜಿಟಲೀಕರಿಸಿರುವ ಪುಸ್ತಕಗಳ ಅಂದಾಜು ಅಂಕಿ-ಅಂಶಗಳು:


ಗೂಗಲ್ ಪ್ಲೇ ಬುಕ್
212‍
‍ಐ-ಬುಕ್ಸ್
0
ಕಿಂಡಲ್
0
ಪೋ‍ತಿ
30
ಪುಸ್ತಕ.ಕೊ.ಇನ್
200
ಡೈಲಿ ಹಂಟ್‍‍‍‍
1,000
‍ಇಂಟರ್ನೆಟ್ ಆರ್ಕೈ‍ವ್
‍7665 
ಕಣಜ
837
ಭಾರತವಾಣಿ
523
ಮೇರಾ ಲೈಬ್ರರಿ
413

(ಫೆಬ್ರವರಿ ೨೦೧೯ರ ಮಾಹಿತಿಯ ಪ್ರಕಾರ)

ಕನ್ನಡ ಪುಸ್ತಕ ಪ್ರಿಯರಿಗೆ – ಇ-ಪುಸ್ತಕಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೈಗೆಟುಗಬೇಕಷ್ಟೇ. ಇದಕ್ಕೆ ಕಾರಣಗಳನು ತಿಳಿಯುವ

ಮುನ್ನ, ನಮಗೆ ಇ-ಪುಸ್ತಕಗಳ ರೂಪುರೇಷೆಯ ಪರಿಚಯವಾಗಬೇಕಿರುವುದು ಬಹಳ ಮುಖ್ಯವಾಗುತ್ತದೆ.

ಇ-ಪುಸ್ತಕ – ನಿಮಗೆಷ್ಟು ಗೊತ್ತು?

ಎಲ್ಲ ಪಿ.ಡಿ.ಎಫ್ ಪುಸ್ತಕಗಳೂ – ಇ-ಪುಸ್ತಕವಲ್ಲ!

ಕನ್ನಡ ಪುಸ್ತಕಗಳನ್ನು ಇಂಟರ್ನೆಟ್/ಅಂತರಜಾಲದಲ್ಲಿ ಹುಡುಕುವವರಿಗೆ ಅ) ಸಾಮಾನ್ಯ ಪುಸ್ತಕ ಮಾದರಿಯಲ್ಲಿ ಕೊಳ್ಳಲು ಸಪ್ನ,
ದಟ್ಸ್ ಕನ್ನಡ, ಅಮೇಜಾನ್, ಫ್ಲಿಪ್ ಕಾರ್ಟ್ ಗಳಲ್ಲಿ ದೊರೆಯುತ್ತವೆ ಆ) ಇ-ಪುಸ್ತಕಗಳು(?) ಗೂಗಲ್ ಪ್ಲೇ ಸ್ಟೋರ್, ಅಮೇಜಾನ್ ಕಿಂಡಲ್(?), ಇಂಟರ್ನೆಟ್ ಆರ್ಕೈವ್ (archive.org), ಡೈಲಿ ಹಂಟ್, ಕಣಜ, ಭಾರತವಾಣಿ ಇತ್ಯಾದಿಗಳಲ್ಲಿ ದೊರೆಯುತ್ತವೆ
ಎಂದು ಹೇಳುವುದು ರೂಡಿಯಲ್ಲಿದೆ. ಆದರೆ ಹೀಗೆ ದೊರೆಯುವ ಕನ್ನಡ ಪುಸ್ತಕಗಳು ಡಿಜಿಟಲೀಕರಿಸಿದ ದತ್ತಾಂಶ ಮಾತ್ರ ಆಗಿದ್ದು, ನಿಜವಾದ/ನೈಜವಾದ ಇ-ಪುಸ್ತಕಗಳಲ್ಲ.

ಕನ್ನಡದ ಇ-ಪುಸ್ತಕ ಎಂದರೆ ಸಾಮಾನ್ಯವಾಗಿ ಕೈಗೆಟಕುವವು, ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿದ ಅಥವಾ ಪ್ರಿಂಟ್ ಆವೃತ್ತಿಯ ಮೂಲವನ್ನು ಪಿಡಿಎಫ್ ರೂಪದಲ್ಲಿ ಸಂಗ್ರಹಿಸಿರುವ/ಡಿಜಿಟಲೀಕರಿಸಿರುವ ಪುಸ್ತಕಗಳು. ಇವುಗಳನ್ನು ಇ-ಪುಸ್ತಕ/ಇ-ಬುಕ್ ಎನ್ನಲು ಬರುವುದಿಲ್ಲ.


ಇ-ಪುಸ್ತಕಗಳು ಇ-ಪಬ್ (.epub, .mobi) ಅಥವಾ ಇ-ಪುಸ್ತಕ ಓದುಗಗಳ (ebook readers) ಸ್ವರೂಪದಲ್ಲಿರಬೇಕು. ಇ-ಪಬ್ ಸ್ವರೂಪದ ಪುಸ್ತಕಗಳು – ನಮ್ಮ ಇ-ಪುಸ್ತಕ ಓದುಗ ಇರುವ ತೆರೆಯ ಅಳತೆಗೆ ಅನುಗುಣವಾಗಿ ಪುಸ್ತಕದ ಮಾಹಿತಿಯನ್ನು ಅಳವಡಿಸಿ ಕೊಡುವುದರೊಂದಿಗೆ ಮೊದಲು ಮಾಡಿ (ಫಾಂಟಿನ/ಅಕ್ಷರ ಶೈಲಿಯ ಗಾತ್ರ ಹಿಗ್ಗಿಸುವ/ಕುಗ್ಗಿಸುವ ಸೌಲಭ್ಯ), ಪುಸ್ತಕದ ಮಾಹಿತಿ ಯಾವುದೇ ಸಾಧನದಲ್ಲಿ ಮೂಡುವಂತೆ ಮಾಡುವ ಶಿಷ್ಠಾಚಾರಗಳನ್ನು (Standards)
ಉದಾ: ಯುನಿಕೋಡ್ ಬಳಕೆ, ಯುನಿಕೋಡ್ ನಲ್ಲಿ ಮಾಹಿತಿ ಹುಡುಕಾಟ, ಪುಸ್ತಕ ಓದುವ ಸಮಯದಲ್ಲಿ ಬೇಕಾಗುವ
ನಿಘಂಟುವಿನೊಂದಿಗೆ ಪುಸ್ತಕದ ಮಾಹಿತಿ ಬೆಸೆಯುವ ಸೌಲಭ್ಯ. ಅವಶ್ಯ ಬಿದ್ದಲ್ಲಿ ಓದುಗ ತನ್ನದೇ ಆದ ನಿಘಂಟುವನ್ನು
ಸೃಷ್ಟಿಸಿಕೊಳ್ಳುವ ಸೌಲಭ್ಯ, ಓದುವ ಸಮಯದಲ್ಲಿ ಟಿಪ್ಪಣಿ, ಪುಟಗುರುತುಗಳು, ಸಾಧ್ಯವಾದೆಡೆ ಹೊರಗಿನ/ಬಾಹ್ಯ ಮಾಧ್ಯಮವನ್ನು (ಆಡಿಯೋ, ವಿಡಿಯೋ, ಆನಿಮೇಷನ್) ತನ್ನಲ್ಲಿ ಅಡಗಿಸಿಕೊಳ್ಳುವ/ಎಂಬೆಂಡ್ ಮಾಡಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ..txt ಹೊರತು ಪಡಿಸಿ ಮತ್ತೆಲ್ಲವೂ ವಿದ್ಯುನ್ಮಾನ ಹಕ್ಕುಗಳನ್ನು ಸಂರಕ್ಷಿಸುತ್ತವೆ. ಈ ಕೆಲವೊಂದು ಸಾಧ್ಯತೆಗಳನ್ನು ಕೆಲವು ಇ-ಪುಸ್ತಕ ಸ್ವರೂಪಗಳು ಕೊಡದೇ ಹೋಗಬಹುದು.

ಟೆಸ್ಸರಾಕ್ಟ್ (Tesseract) ಗೂಗಲ್ ಬೆಂಬಲಿತ ಒ.ಸಿ.ಅರ್ ತಂತ್ರಾಂಶದ ಮೂಲಕ ಡಿಜಿಟಲೀಕರಿಸಿದ ಪುಸ್ತಕಗಳನ್ನು ಈಗ ಯುನಿಕೋಡ್‌ಗೆ ಪರಿವರ್ತಿಸುವಲ್ಲಿ ಆಗಿರುವ ಸುಧಾರಣೆಗಳಿಂದ ಹಳೆಯ ಪುಸ್ತಕಗಳನ್ನು ಇ-ಪುಸ್ತಕ ಸ್ವರೂಪದಲ್ಲಿ ನೀಡಲು,
ಇತರೆ ವಿದ್ಯುನ್ಮಾನ ಸ್ವರೂಪಗಳಿಗೆ/ಯೋಜನೆಗಳಿಗೆ ಬಳಸಿಕೊಳ್ಳಲು ಸಾಧ್ಯವಿದೆ. ಕಳೆದೆರಡು ತಿಂಗಳಿನಿಂದ ಪರೀಕ್ಷಿಸಿ ನೋಡಿದಂತೆ ಇದರ ಫಲಿತಾಂಶ (ಕನ್ನಡ ಮತ್ತು ಕನ್ನಡ-ಇಂಗ್ಲೀಷ್ ಪರಿವರ್ತನೆ) ೯೮ ಪ್ರತಿಶತ ಸರಿಯಾಗಿದೆ. ಗೂಗಲ್ ಡ್ರೈವ್ ಬಳಸಿ ಕೆಲವೊಂದೇ ಪುಟಗಳನ್ನು ಯುನಿಕೋಡ್ ಪರಿವರ್ತನೆ ಮಾಡಿರುವವರಿಗೆ ಇದು ಹೊಸತೆಂದು ಅನಿಸದಿದ್ದಲ್ಲಿ ಅಚ್ಚರಿ ಏನಿಲ್ಲ – ಕಾರಣ ಇದು ಗೂಗಲ್ ಬೆಂಬಲಿತ ಮತ್ತು ಗೂಗಲ್ ವಿಷನ್ ಎ.ಪಿ.‌ಐ ಉತ್ತಮ ಕೆಲಸ ಮಾಡಲಿಕ್ಕೆ ಇದು ಮುಖ್ಯ ಕಾರಣ. ಟೆಸರಾಕ್ಟ್‌ಗೆ ೨೫ ಕನ್ನಡ ಫಾಂಟ್‌/ಅಕ್ಷರ ಶೈಲಿಗಳ ಮೂಲಕ ತರಬೇತಿ ನೀಡಲಾಗಿದ್ದು, ಎಂ.ಎಲ್ (ಮಷೀನ್ ಲರ್ನಿಂಗ್) ಸಾಮರ್ಥ್ಯವನ್ನೂ ಅಳವಡಿಸಲಾಗಿದೆ. 

ಇ-ಬುಕ್ ಪಬ್ಲಿಕೇಶನ್ ಕನ್ನಡದಲ್ಲಿ ಈಗ ಹೇಗಿದೆ? ಆಗಬೇಕಾದ ಪ್ರಮಾಣದಲ್ಲಿ ಆಗ್ತಾ ಇದೆಯೇ? ಈ ಕ್ಷೇತ್ರದಲ್ಲಿ ಏನಾಗಬೇಕಿದೆ?

ಇ-ಬುಕ್ ಪ್ರಕಟಣೆ ಉತ್ತರ ಭಾರತದ ಇತರೆ ಭಾಷೆಗಳಿಗೆ (ತಮಿಳು, ತೆಲುಗು, ಮಲಯಾಳಂ) ಹೋಲಿಸಿದಲ್ಲಿ ಕನ್ನಡ ಅಷ್ಟೇನೂ ಬೆಳಕು ಕಂಡಿಲ್ಲ. ಅಮೇಜಾನ್‌ನ ಪುಸ್ತಕ ಓದುಗ ಕಿಂಡಲ್‌ನಲ್ಲಿ ಕಳೆದ ವರ್ಷದಿಂದ ಕ್ಲಿಷ್ಟ ಪದಗಳನ್ನು (Complex Characters
Support) ಬೆಂಬಲಿಸಿದ ನಂತರ ತಮಿಳು, ತೆಲುಗು ಸೇರಿದಂತೆ ಕನ್ನಡವೂ ಸುಲಭವಾಗಿ ಮೂಡುವಂತೆ ಮಾಡಲಾಗಿದ್ದರೂ, ಕನ್ನಡದ ಇ-ಪುಸ್ತಕ ಪ್ರಕಟಣೆಗೆ ಕಿಂಡಲ್‌ನ ಪ್ರಕಾಶಕರ ತಂತ್ರಾಂಶಗಳು ಕನ್ನಡದ ಆಯ್ಕೆ ಕೊಡುತ್ತಿಲ್ಲ. ಇದಕ್ಕೆಂದೇ ಆನ್ಲೈನ್
ಚಳುವಳಿಯನ್ನೂ ಕೈಗೊಳ್ಳಲಾಗಿತ್ತು.
(https://platonic.techfiz.info/2016/08/unable-to-read-kannada-on-kindle-ask-for-language-support-sign-the-petition/)

ಕನ್ನಡದ ಪುಸ್ತಕಗಳ ಇಲೆಕ್ಟ್ರಾನಿಕ್ ಮಾದರಿಯಲ್ಲಿ ಪ್ರಕಟಿಸುವ ಅನೇಕ ಕಂಪೆನಿಗಳು ಬಂದು ಹೋಗಿವೆಯಾದರೂ, ಪ್ರಕಾಶಕರು
ಇ-ಪುಸ್ತಕಗಳ ಕಡೆಗೆ ತೋರುವ ಆಸಕ್ತಿ ಕಡಿಮೆಯೇ. ಮೊದಲಿಗೆ ಇಂತಹ ಕೆಲಸಕ್ಕೆ ಕೈ-ಹಾಕಿದ್ದು ಶ್ರೀ ವಸುದೇಂದ್ರ. ಇದರ ಬಗ್ಗೆ ಸ್ವತ: ಪ್ರಕಾಶಕರೂ, ಲೇಖಕರೂ ಆಗಿರುವ ಶ್ರೀ ವಸುದೇಂದ್ರ ಅವರನ್ನು ತಮ್ಮ ಇ-ಪುಸ್ತಕ ಪ್ರೇಮದ ಬಗ್ಗೆ ಕೇಳುತ್ತಾ ಮಾತಿಗೆ ಎಳೆದಾಗ, ಮೊದಲು ನಾವುಗಳು ಆಡೋಬ್ ಟೂಲ್‌ಗಳಲ್ಲಿ ಕನ್ನಡ ಬರುವಂತೆ ಮಾಡಲು ಪಟ್ಟ ಪಾಡು, ನಂತರ ದಿನಗಳಲ್ಲಿ ತಂತ್ರಜ್ಞಾನದ ಬೆಂಬಲ ದೊರೆತದ್ದನ್ನು ನೆನೆಯುತ್ತಾರೆ. ಜೊತೆಗೆ ಪೈರಸಿ ಇತ್ಯಾದಿಗಳ ಬಗ್ಗೆ ಪ್ರಕಾಶಕರಿಗೆ ಮತ್ತು ಲೇಖಕರಿಗೆ ಇದ್ದ
ಭಯವನ್ನು ಹೋಗಲಾಡಿಸಲು ತಾವು ಎಲ್ಲರನ್ನೂ ಒಟ್ಟುಗೂಡಿಸಿ ನೆಡೆಸಿದ ವಿಚಾರದ ಸಂಕಿರಣ ಬಗ್ಗೆ ಹೇಳುತ್ತಾರೆ. ಪ್ರಕಾಶಕರಿಗೆ
ಮತ್ತು ಲೇಖಕರಿಗೆ ಪೈರಸಿ ಇತ್ಯಾದಿಗಳ ಬಗ್ಗೆ ಹಾಗೂ ಅವುಗಳನ್ನು ತಪ್ಪಿಸಲು ಲಭ್ಯವಿರುವ ಡಿಆರ್‌ಎಂ (ಡಿಜಿಟಲ್ ರೈಟ್ಸ್ ಮ್ಯಾನೇಜ್‌ಮೆಂಟ್) / ವಿದ್ಯುನ್ಮಾನ ಹಕ್ಕುಗಳ ನಿರ್ವಹಣೆ ಬಗ್ಗೆ ಮಾಹಿತಿ ಇರುವುದನ್ನು, ತಮ್ಮ ಪುಸ್ತಕಕ್ಕೆ ತಕ್ಕ ಬೆಲೆಯನ್ನು ತಂದುಕೊಡಬಲ್ಲ ದೊಡ್ಡಣ್ಣಗಳಾದ ಅಮೇಜಾನ್ ಕಿಂಡಲ್/ಗೂಗಲ್ ಪ್ಲೇ ಸ್ಟೋರ್/ಆಪಲ್ ಐ-ಬುಕ್ಸ್ ಇತ್ಯಾದಿ ಕನ್ನಡದ ಮಟ್ಟಿಗೆ ಬಂಡವಾಳ ಹೂಡುವುದು ಪ್ರಕಾಶಕರ ಮತ್ತು ಲೇಖಕರ ಬಳಗಕ್ಕೆ ಮುಖ್ಯವಾಗುತ್ತದೆ ಎಂದು ವಸು ತಿಳಿಸುತ್ತಾರೆ.

ಇತ್ತೀಚೆಗೆ ಇ-ಪುಸ್ತಕಗಳೆಂದರೆ – ಆನ್ಲೈನ್ ತಾಣಗಳಲ್ಲಿ ಜನರು ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸಿಕೊಳ್ಳುವ ಮಟ್ಟಿಗೆ ತಂತ್ರಜ್ಞಾನದ ಅವಕಾಶಗಳು ದೊರೆತಿವೆ. ಆದರೆ ಇವ್ಯಾವೂ ಕನ್ನಡದ ಲೇಖಕರಿಗೆ ಹಣಗಳಿಸಿಕೊಡುವ ಮೂಲಗಳಾಗಿಲ್ಲ ಎನ್ನುವುದು ಮುಖ್ಯ ಅಂಶ.

ಇ-ಪುಸ್ತಕ ಸೃಷ್ಟಿ ಮತ್ತು ಪ್ರಕಟಣೆ

ಈ ಹಿಂದೆ ಕಂಪ್ಯೂಟರಿನಲ್ಲಿ ಡಿ.ಟಿ.ಪಿ ಮಾಡುವುದರಿಂದ ಹಿಡಿದು, ಪ್ರಿಂಟ್ ಹಾಗೂ ನಂತರದ ದಿನಗಳಲ್ಲಿ ಇ-ಪುಸ್ತಕಗಳನ್ನು ಮಾಡಿಕೊಡಿ ಎಂದು ಮೂರನೆ ವ್ಯಕ್ತಿಯನ್ನು ಆಶ್ರಯಿಸುವ ಅಗತ್ಯ ಬಹಳ ಇತ್ತು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಗಳ ಬೆಳವಣಿಗೆಯನ್ನು ನೋಡಿದರೆ, ಕಂಪ್ಯೂಟರ್ ಅಥವಾ ಮೊಬೈಲ್ ಬಳಸಿ ಬರೆದ ಮೈಕ್ರೋಸಾಫ್ಟ್ ವರ್ಡ್,
ಗೂಗಲ್ ಡಾಕ್ಸ್ ಇತ್ಯಾದಿ ಕಡತಗಳನ್ನು ಕ್ಷಣ ಮಾತ್ರದಲ್ಲಿ ಇ-ಪಬ್ ಆಗಿ ಮಾರ್ಪಡಿಸಲು ಅನೇಕ ಆನ್ಲೈನ್ ಅಥವಾ ಆಫ್
ಲೈನ್ ಸೌಲಭ್ಯಗಳಿವೆ. ಉದಾಹರಣೆಗೆ: ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಕಾಲಿಬ್ರೆ ( https://calibre-ebook.com/ ) ಬಳಸಿ
ಸುಲಭವಾಗಿ ಯಾವುದೇ ಕಂಪ್ಯೂಟರಿನ ಮೂಲಕ ಇ-ಪುಸ್ತಕ ಸೃಷ್ಟಿಸಬಹುದು. ಅದೂ ಯಾವುದೇ ಖರ್ಚಿಲ್ಲದೆ. ಆದೇ ರೀತಿ
ಆಪಲ್‌ನ ಮ್ಯಾಕ್‌ನಲ್ಲಿ ಐಬುಕ್ ಕ್ರಿಯೇಟರ್ ಜೊತೆಗೆ ಇ-ಪುಸ್ತಕ ತಯಾರಿಸುವುದು ಎಂದರೆ ಅದೇ ಒಂದು ವಿಶಿಷ್ಟ ಅನುಭವ.
ಕಿಂಡಲ್ ಕ್ರಿಯೇಟ್‌ ಮೂಲಕವೂ ಇ-ಪುಸ್ತಕ ಸೃಷ್ಟಿ ಸಾಧ್ಯವಿದ್ದು – ಅಮೇಜಾನ್ ನಮ್ಮ ಭಾಷೆಯನ್ನು ಇಲ್ಲಿಗೆ ಸೇರಿಸಬೇಕಷ್ಟೇ.
ಇ-ಪುಸ್ತಕಗಳನ್ನು ಪ್ರಕಟಿಸಿ ಮಾರಲು ಗೂಗಲ್ ಪ್ಲೇ ಬುಕ್ಸ್, ಇಟ್ಯೂನ್ಸ್, ಅಮೇಜಾನ್ ಕಿಂಡಲ್, ಮೇರಾ ಲೈಬ್ರರಿ, ಪೋತಿ ಬುಕ್ಸ್,
ಜೊತೆಗೆ ಲುಲು.ಕಾಮ್ ನಂತಹ ಅನೇಕ ತಾಣಗಳಿವೆ. ಕೇವಲ ಕನ್ನಡಿಗರೇ ಅಲ್ಲ, ಕನ್ನಡ ಭಾಷೆಗೆ ತಮ್ಮ ಕೃತಿಗಳನ್ನು ತಂದು ಮಾರಲೂ – ಇಲ್ಲಿ ಮುಕ್ತ ಅವಕಾಶವಿದೆ. ಗಾಂಧಿ ಚಳುವಳಿಯನ್ನು ‍ಸ್ಪೂರ್ತಿಯಾಗಿರಿಸಿಕೊಂಡು ಸರ್ಕಾರಗಳ ಹಿಡಿತದಲ್ಲಿರುವ ಮಾಹಿತಿಯ ಆಗರವನ್ನು ಪ್ರಜಾಪ್ರಭುತ್ವಗೊಳಿಸುವ/ ಮುಕ್ತ ಜ್ಞಾನವನ್ನಾಗಿ ಲಭ್ಯವಾಗಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕಾರ್ಲ್ ಮಲಾಮದ್ ಅವರ ಕೋಡ್ ಸ್ವರಾಜ್‌ನ ಇ-ಪುಸ್ತಕ ಕನ್ನಡದಲ್ಲಿ ಉಚಿತ/ಮುಕ್ತವಾಗಿ ಲುಲು‌ನಲ್ಲಿ ಲಭ್ಯವಿರುವುದನ್ನು ಇಲ್ಲಿ ಕಾಣಬಹುದು.

http://www.lulu.com/shop/carl-malamud-and-sam-pitroda/code-swaraj-kannada/paperback/product-23852179.html

ಲೇಖಕರು ಮತ್ತು ಪ್ರಕಾಶಕರು ವಿಶ್ವದಾದ್ಯಂತ ತಮ್ಮ ಓದುಗರಿಗೆ ತಮ್ಮ ಕೃತಿಗಳನ್ನು ಸುಲಭವಾಗಿ ತಲುಪಿಸಲು ಇ-ಪುಸ್ತಕ ಸುಲಭ ಮಾಧ್ಯಮ. ಇ-ಪುಸ್ತಕ ಓದುಗಗಳನ್ನು ಬಿಡಿ – ಮೊಬೈಲ್‌ನಲ್ಲೇ ಕನ್ನಡ ಪುಸ್ತಕಗಳು ಸಿಕ್ಕರೆ ಸಾಕು ಎನ್ನುವ ಅನೇಕ ಹೊರನಾಡ ಕನ್ನಡಿಗರಿಗೆ ಇದ್ದಲ್ಲೇ ಪುಸ್ತಕಗಳನ್ನು ಒದಗಿಸುವ ಮತ್ತು ಪುಸ್ತಕ ಮಾರುಕಟ್ಟೆಗೆ ಪರ್ಯಾಯವಾಗಿ ಕೆಲಸ ಮಾಡುವ ವ್ಯವಸ್ಥೆ ಕಾರ್ಯರೂಪಕ್ಕೆ ಬರಬೇಕಿದೆ. ‍‍

ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ
ಪಬ್ಲಿಕ್ ಡೊಮೇನ್‌ನಲ್ಲಿರುವ ಕನ್ನಡ ಪುಸ್ತಕಗಳನ್ನು ಉತ್ತಮ ತಾಂತ್ರಿಕ ಶಿಷ್ಠಾಚಾರಗಳನ್ನು ಅಳವಡಿಸಿಕೊಂಡಿರುವ ವೇದಿಕೆಗಳ ಮೂಲಕ (ಉದಾ: ಇಂಟರ್ನೆಟ್ ಆರ್ಕೈವ್) ಲಭ್ಯವಾಗಿಸಲು ನಮ್ಮ ಸರ್ಕಾರೀ ಯೋಜನೆಗಳು ಖಂಡಿತವಾಗಿಯೂ ಆಲೋಚಿಸಬೇಕಿದೆ. ಕಣಜ ಹಾಗೂ ಭಾರತವಾಣಿಯಲ್ಲಿ ಲಭ್ಯ ಪುಸ್ತಕಗಳ ಸಂಖ್ಯೆಯನ್ನು ತಿಳಿದುಕೊಳ್ಳುಲು ತಡಕಾಡಬೇಕಾಗಿದೆ. ಪುಸ್ತಕಗಳನ್ನು ಹುಡುಕಿ ಓದುವುದು ಮತ್ತೊಂದು ಸಾಹಸ. ಕೆಲವೊಮ್ಮೆ ಈ ತಾಣಗಳು ತೆರೆದುಕೊಳ್ಳುವುದೂ ಇಲ್ಲ. 

ಇದ್ದೂ ಇಲ್ಲದಂತಾಗಿದ್ದ ಮತ್ತಷ್ಟು ಕನ್ನಡ ಪುಸ್ತಕಗಳು

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ, ಓಸ್ಮಾನಿಯಾ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿದ್ದ ೫,೫೦೦ ಡಿಜಿಟಲೀಕರಿಸಿದ ಪುಸ್ತಕಗಳನ್ನು ಸುಲಭವಾಗಿ ಈಗ ಕನ್ನಡದಲ್ಲೇ ಹುಡುಕಿ ಪಡೆಯಬಹುದಾಗಿದೆ. ಪುಸ್ತಕ ಸಂಚಯದಲ್ಲಿ ಇದಕ್ಕೆ ಹುಡುಕು ವ್ಯವಸ್ಥೆ ಮಾಡಲಾಗಿದೆ ( https://pustaka.sanchaya.net). ಈ ಕಾರ್ಯವನ್ನು ಸಂಚಯದ ಸಮುದಾಯ ಸಹಭಾಗಿತ್ವದೊಂದಿಗೆ ಸಾಧ್ಯವಾಗಿಸಲಾಗಿದೆ. ಜೊತೆಗೆ ಈ ಪುಸ್ತಕಗಳ ಮೂಲ ಯೋಜನೆಯ ತಾಣಗಳು ಈಗ ಸಾರ್ವಜನಿಕರಿಗೆ ಲಭ್ಯ ಇಲ್ಲದಿರುವುದನ್ನು ಮನಗಂಡು ಇಷ್ಟೂ ಪುಸ್ತಕಗಳನ್ನು ಇಂಟರ್ನೆಟ್ ಆರ್ಕೈವ್‌ನಲ್ಲಿ ಸಿಗುವಂತೆ ಮಾಡಲಾಗಿದೆ. ಇಲ್ಲೂ ಸಹ ಪುಸ್ತಕಗಳ ಮೆಟಾಡೇಟಾ ಕನ್ನಡದಲ್ಲಿರುವುದರಿಂದ ನೇರವಾಗಿ ಗೂಗಲ್ ಸರ್ಚ್ನಲ್ಲಿ ಕೂಡ ಈ ಕೊಂಡಿಗಳು ಸಿಗುವುದು ಸಾಧ್ಯವಾಗಿದೆ.