ಓಂಶಿವಪ್ರಕಾಶ್ | ೭ ಡಿಸೆಂಬರ್ ೨೦೧೯‍ | ವಿಕ ಕನ್ನಡ ಹಬ್ಬ


ಡಿಜಿಟಲ್ ಜಗತ್ತು – ಭಾಷೆ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುವನ್ನು ವೇಗ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ‍ಕನ್ನಡವೂ ಈ ವಿಚಾರದಲ್ಲಿ ಹೊಸ ಧನಾತ್ಮಕ ಬೆಳವಣಿಗೆಗಳನ್ನು ಇತ್ತೀಚಿನ ಕಾಣುತ್ತಿರುವುದನ್ನು ನೀವೆಲ್ಲಾ ಗಮನಿಸುತ್ತಿದ್ದೀರಿ. 
ಕನ್ನಡ ಡಿಜಿಟಲೀಕರಣದ ಕ್ರಾಂತಿಗೆ ಹೊಸ ಪ್ರಯೋಗಗಳನ್ನು, ವಿಚಾರಗಳನ್ನು, ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ.  ಕನ್ನಡದ ಡಿಜಿಟಲ್ ಜಗತ್ತು ಇಂಟರ್ನೆಟ್ ವ್ಯಾಪ್ತಿಗೆ ಒಳಪಡುವ ಹಳ್ಳಿಗರ, ನಗರವಾಸಿಗಳ, ‍ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಹೊರನಾಡ ಕನ್ನಡಿಗರ ಕಲರವ – ೧೪೦ ಪದಗಳ ಟ್ವಿಟರ್ನಿಂದ, ಫೇಸ್‌ಬುಕ್ ಸಾಹಿತ್ಯ, ಸಾಹಿತ್ಯ ಪ್ರಕಟಣೆ, ಕಲೆ, ಇತಿಹಾಸ, ಸಂಸ್ಕೃತಿಯ ಜಾಗತಿಕ ಅನಾವರಣಕ್ಕೆ, ಸಾಮಾಜಿಕ ಚಳುವಳಿಗೆ, ಮುಕ್ತ ಜ್ಞಾನ, ಡಿಜಿಟಲ್ ಉಳಿವಿಗೆ ಹೊಸ ಡಿಜಿಟಲ್ ಹೆಜ್ಜೆಗುರುತನ್ನು (ಡಿಜಿಟಲ್ ಫುಟ್‌ಪ್ರಿಂಟ್) ಮೂಡಿಸುತ್ತಿವೆ. ಈ ಹೆಜ್ಜೆ ಗುರುತಿನ ಜೊತೆಗೆ, ಅದನ್ನು ಆವರಿಸುವ ಡಿಜಿಟಲ್ ಕರಿನೆರಳಿನ ಇರುವು ಕೂಡ ಸಾಮಾನ್ಯವೇ ಎಂಬಂತೆ ಜೊತೆಗಿದೆ. 

ಕನ್ನಡವನ್ನು ಕನ್ನಡದಲ್ಲೇ ಟೈಪಿಸುವ, ಡಿಟಿಪಿ, ಸ್ಕ್ಯಾನ್ ಮಾಡಿ ಪುಸ್ತಕಗಳನ್ನು ಎಲ್ಲರಿಗೂ ಸಿಗುವಂತೆ ಮಾಡುವುದು, ಜಾಲತಾಣಗಳನ್ನು (ವೆಬ್‌ಸೈಟ್‌ಗಳನ್ನು) ಕನ್ನಡದಲ್ಲಿ ಸಿಗುವಂತೆ ಮಾಡುವುದು ಇಂದು ಸಾಮಾನ್ಯ. ಆದರೆ ಇಷ್ಟೇ  ಡಿಜಿಟಲೀಕರಣವೇ ಎಂದರೆ, ಇದು ಪ್ರಾರಂಭದ ಹಂತ ಮಾತ್ರ. ತಂತ್ರಜ್ಞಾನ ಇವೆಲ್ಲವನ್ನೂ ಇಂದು ಸುಲಭ ಸಾಧ್ಯವಾಗಿಸಿದೆ. ‌

ಬ್ಲಾಗ್ ಮಾಡಲು ಬಳಸುವ ವರ್ಡ್‌ಪ್ರೆಸ್ ತಂತ್ರಾಂಶದಿಂದ ಹಿಡಿದು, ದಿನನಿತ್ಯದ ಸಂದೇಶ ರವಾನೆಗೆ ಬಳಸುವ ಮೆಸೆಂಜರ್, ಫೇಸ್‌ಬುಕ್ ಇತ್ಯಾದಿಗಳನ್ನು ಕನ್ನಡದ ಸಮುದಾಯ‍ಗಳು ಕನ್ನಡೀಕರಿಸಿಕೊಂಡಿವೆ. ಪುಸ್ತಕದ ಕನ್ನಡವನ್ನು ಪುಸ್ತಕದಿಂದಾಚೆ ತರುವ ಕಮ್ಮಟಗಳು, ಕಾರ್ಯಕ್ರಮಗಳು, ಪಾಡ್‌ಕಾಸ್ಟ್, ಟ್ವಿಟರ್/ಫೇ‌ಸ್‌ಬುಕ್ ಲೈವ್‌ ಕಾರ್ಯಕ್ರಮಗಳು ಸೆಲೆಬ್ರಿಟಿ ನಟನಟಿಯರು, ರೇಡಿಯೋ ಜಾಕಿಗಳಿಂದ ಹಿಡಿದು ಸಾಮಾನ್ಯನಿಗೂ ಇದು ಸಾಮಾನ್ಯವೇ ಎನ್ನುವಷ್ಟು ಕೈಗೆಟುಕಿವೆ. ಸಾವಿರಾರು ಗಂಟೆಗಳಷ್ಟು ಕನ್ನಡದ ಕಾರ್ಯಕ್ರಮಗಳು ವೂಟ್, ಜೀ೫, ಯುಟ್ಯೂಬ್ ನಂತಹ OTT ಪ್ಲಾಟ್‌ಫಾರ್ಮ್‌ಗಳಿಲ್ಲಿ ಲಭ್ಯವಿವೆ. ಮುಕ್ತ ಜ್ಞಾನ ಹರಿವಿಗೆ ಮಾಧ್ಯವಾಗಿರುವ ವಿಕಿಪೀಡಿಯಾದ ಯೋಜನೆಗಳು ಸಮುದಾಯವೊಂದು ತನ್ನ ಭಾಷೆಯ ಆಳವನ್ನು ಗುರುತಿಸಿಕೊಳ್ಳಲು ಬೇಕಿರುವ ವಿಶ್ವಕೋಶವನ್ನು ತಯಾರಿಸಿಕೊಳ್ಳುವುದರ ಜೊತೆಗೆ, ಅದನ್ನು ನಂಬಿಕೆಗೆ ಅಱಗೊಳಿಸಲು ಉಲ್ಲೇಖಗಳನ್ನು, ವಿಕಿಸೋರ್ಸ್‌ನಲ್ಲಿ ಮುಕ್ತವಾಗಿ ಲಭ್ಯವಿರುವ ಪುಸ್ತಕಗಳ ಮೂಲವನ್ನೂ ಜನಸಾಮಾನ್ಯರಿಗೆ ಸಿಗುವಂತೆ ಮಾಡುತ್ತಿವೆ. ಮೊಬೈಲ್ ಗಳು ಕನ್ನಡ ಟೈಪಿಸಲು ಸಾಧ್ಯವಾಗಿಸುವುದರ ಜೊತೆಗೆ, ಧ್ವನಿ ಪುಸ್ತಕಗಳನ್ನು ಆಲಿಸುವ, ಇ-ಪುಸ್ತಕಗಳನ್ನು ಒದಗಿಸುವುದಷ್ಟೇ ಅಲ್ಲದೇ, ಇವುಗಳ ಮೂಲಕ ಕನ್ನಡಿಗರಿಗೆ ಸಾಹಿತ್ಯ ಲೋಕದ ಹೊರಗಿನ ಹೊಸ ತಂತ್ರಜ್ಞಾನ ಮಾರುಕಟ್ಟೆಯನ್ನೂ ತೆರೆದಿಡುತ್ತಿವೆ. ಹೊಸ ಉದ್ಯಮಗಳನ್ನು ಕನ್ನಡ ಭಾಷೆಯ ಸುತ್ತ ಕಟ್ಟಲು ಸಾಧ್ಯವೇ ಎಂಬ ಪ್ರಶ್ನೆಯ ಜೊತೆಗೆ ಈ ಪ್ರಯತ್ನಗಳು ಅದನ್ನು ಸಾಧ್ಯವಾಗಿಸಿ ತೋರಿಸುವ ಛಲ ತೊಟ್ಟಂತಿದೆ. ಆರ್ಟಿಫಿಷಿಯಲ್ ಇಂಟೆಲಿಜನ್ಸ್, ಮಶೀನ್ ಲರ್ನಿಂಗ್ ಕಂಪ್ಯೂಟರ್ ಜಗತ್ತಿನ ಸಾಧ್ಯತೆಗಳನ್ನು ಭಾಷೆಗೆ ಅಳವಡಿಸಲು ಅದರದ್ದೇ ಆದ ಮೂಲ ಸೌಕರ್ಯಗಳ ಖರ್ಚುವೆಚ್ಚಗಳನ್ನು ಸಂಭಾಳಿಸುತ್ತಾ, ಗ್ರಾಹಕನು ಬಯಸುವ ತಂತ್ರಜ್ಞಾನಗಳನ್ನು ಕಡಿಮೆ ಬೆಲೆಗೆ ದೊರಕಿಸಿಕೊಡುವತ್ತ ಕೂಡ ಪರಿಶ್ರಮಗಳನ್ನು ನೆಡೆದಿರುವುದನ್ನು ನೋಡಬಹುದು. ತಂತ್ರಜ್ಞಾನಕ್ಕಾಗಿ ಕನ್ನಡ ಬೇಕು ಎಂದು ತಂತ್ರಾಂಶಗಳನ್ನು ಅನುವಾದಿಸುವ ಕಾಲದಿಂದ ಕನ್ನಡಕ್ಕಾಗಿ ತಂತ್ರಜ್ಞಾನ ಬೇಕು ಎಂದು ನಾವೆಲ್ಲ ಹೇಳುತ್ತಿರುವುದು ಈ ದಿಶೆಯಿಂದಲೇ. 

ಇದುವರೆಗೆ ಡಿಜಿಟಲೀಕರಣದ ಬಳಕೆಯ ಸಾಧ್ಯತೆಯ ‌ದೃಷ್ಟಿಯಿಂದ ನೋಡಿದ ನಮಗೆ, ಇನ್ನೇನು ‍ಸಾಧ್ಯವಾಗಿಸಬೇಕು ಎನ್ನುವ ಪ್ರಶ್ನೆಗೆ ಉತ್ತರವೂ ಬೇರೆ ಬೇರೆ ರೀತಿ ಭಾಷೆಗೆ ತಂತ್ರಜ್ಞಾನವನ್ನು ಬಳಸುವ ಈ ಲೇಖನ ಓದುತ್ತಿರುವ ನೀವೇ ಪಟ್ಟಿ ಮಾಡುತ್ತಾ ಬರಬಹುದು. ಕನ್ನಡದಲ್ಲಿ ಗ್ರಾಮರ್ ಮತ್ತು ಸ್ಪೆಲ್‌ಚೆಕ್ ತಂತ್ರಾಂಶಗಳು, ಇದನ್ನು ಅಭಿವೃದ್ಧಿಪಡಿಸಲು ಬೇಕಿರುವ ರಿವ್ಯೂಡ್ ವರ್ಡ್/ಲೆಕ್ಸಿಕನ್ ಕಾರ್ಪಸ್‌ನ ಮುಕ್ತ ಲಭ್ಯತೆ – ಮೊಜಿಲ್ಲಾ ಫೈರ್‌ಫಾಕ್ಸ್ ಹಾಗೂ ಲಿಬ್ರೆ ಆಫೀಸ್ ಸುತ್ತ ಅಭಿವೃದ್ಧಿ ಪಡಿಸಿದ ಪ್ಲಗಿನ್‌ಗಳನ್ನು ಮತ್ತಷ್ಟು ಉತ್ತಮ ಪಡಿಸಬಲ್ಲದು. ಈ ಕಾರ್ಪಸ್ ಅನ್ನು ಗೂಗಲ್, ಅಮೇಜಾನ್, ಮೈಕ್ರೋಸಾಫ್ಟ್ ಇತ್ಯಾದಿ ಬಹುರಾಷ್ಟ್ರೀಯ ಸಂಸ್ಥೆಗಳು ನಮ್ಮ ಬ್ಲಾಗ್, ವಿಕಿಪೀಡಿಯಾ, ಸೋಷಿಯಲ್ ಮೀಡಿಯಾದಲ್ಲಿ ನಾವು ಟೈಪಿಸುವ ಕನ್ನಡವನ್ನು ಬಳಸಿ ಮೊದಲ ಹಂತದ ಕಾರ್ಪಸ್ ಅನ್ನೂ, ನಂತರದ ಹಂತದಲ್ಲಿ ಅದನ್ನು ರಿವ್ಯೂ ಮಾಡಲು, ಉತ್ತಮ ಪಡಿಸಲು ತಮ್ಮದೇ ತಂಡಗಳನ್ನು ಅಥವಾ ಅದಕ್ಕೆಂದೇ ನೇಮಿಸಿದ ಕಂಪೆನಿಗಳನ್ನು ಅವಲಂಭಿತವನ್ನಾಗಿಸಿಕೊಂಡು ಮುಂದೆ ಸಾಗುತ್ತಿವೆ. ಇವುಗಳ ಕೆಲವೊಂದು ಸೇವೆಗಳು ಈಗ ಉಚಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಇವುಗಳಿಗೆ ನೇರವಾಗಿ ಅಥವಾ ಮತ್ತೊಂದು ರೀತಿಯಲ್ಲಿ ನಾವು ಹಣವನ್ನೋ ಅಥವಾ ನಮ್ಮ ಅಂತರಜಾಲದ ಒಡನಾಟದ ಮಾಹಿತಿಯನ್ನೋ ಈ ಕಂಪೆನಿಗಳ ಜೊತೆಗೆ ಹಂಚಿಕೊಳ್ಳುವುದು ಸಹಜ. ಈ ಕೆಲಸ ಬಹುರಾಷ್ಟ್ರೀಯ ಕಂಪೆನಿಗಳ ಯೋಜನೆಗಳು ಮಾತ್ರ ಆಗದೇ, ನಮ್ಮ ಜನರ ತಂತ್ರಜ್ಞಾನ ಭಾಷ್ಯವೂ, ವೃತ್ತಿಯೂ, ಪ್ರವೃತ್ತಿಯೂ ಆಗಬೇಕು. ಇದಕ್ಕೆ ನಾವೆಲ್ಲ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳ, ಯೋಜನೆಗಳ ಮೊರೆ ಹೋಗಬೇಕಿದೆ. 

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯಗಳು ಹಾಗೂ ತಂತ್ರಜ್ಞಾನ

ಮುಕ್ತ ಮತ್ತು ಸ್ವತಂತ್ರ ತಂತ್ರಾಂಶದ ಜೊತೆಗೆ ಬಹುವರ್ಷಗಳಿಂದ ಒಡನಾಡುತ್ತಾ, ಇದು ನಮಗೆ ತಂತ್ರಜ್ಞಾನ ಬಳಕೆ, ಅಭಿವೃದ್ಧಿ ಹಾಗೂ ಅವಲಂಬನೆಗೆ ಕೊಡುವ ಸ್ವಾತಂತ್ರ್ಯ ಹಾಗೂ ಸ್ವಾವಲಂಭನೆಯ ಅನುಭವದ ಆಧಾರದ ಮೇಲೆ – ನನಗೆ  ಇಂತಹ ತಂತ್ರಜ್ಞಾನದ ಬೆಳವಣಿಗೆಗಳು ಮುಕ್ತವಾಗಿ ಲಭ್ಯವಾಗಲೇಬೇಕು ಎಂದೆನಿಸುತ್ತದೆ. ಏಕೆಂದರೆ, ತಂತ್ರಾಂಶ/ತಂತ್ರಜ್ಞಾನವನ್ನು ನೇರವಾಗಿ ಬಳಕೆದಾರನಿಗೆ ತಲುಪಿಸಲು, ವಿದ್ಯಾರ್ಥಿಗಳಿಗೆ, ಪ್ರೋಗ್ರಾಮಿಂಗ್‌ನಲ್ಲಿ ಎಂಜಿನಿಯರ್ಗಳು, ಸಾಮಾನ್ಯರೂ, ಕಡೆಗೆ ಮಕ್ಕಳಿಗೂ  ಆಸಕ್ತಿ ಇರುವ ತಂತ್ರಜ್ಞಾನದ ಅರಿವು ಮೂಡಿಸಿ – ಅವರು ತಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿಕೊಳ್ಳಲು ಬೇಕಿರುವ ಅವಕಾಶಗಳನ್ನು, ಸೋರ್ಸ್ ಕೋಡ್ ಮುಕ್ತವಾದ ಪರವಾನಗಿಗಳಡಿ ನೀಡುವುದು, ಅದರ ಬೆಂಬಲಕ್ಕೆ ಬೇಕಾದ ಸಮುದಾಯದ ಸಹಕಾರ ಇತ್ಯಾದಿ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳಿಂದ, ಸಮುದಾಯಗಳಿಂ‍ದ ಮಾತ್ರ ಸಾಧ್ಯ. ಕನ್ನಡಿಗರು ಈ ಸಮುದಾಯಗಳಲ್ಲಿ ಭಾಷಾ ತಂತ್ರಜ್ಞಾನದ ಸುತ್ತ ಸ್ವಯಂಸೇವಕರಾಗಿಯೂ, ನಂತರ ತಮ್ಮದೇ ಹೊಸ ಯೋಜನೆಗಳು, ಆವಿಷ್ಕಾರಗಳು, ಸೇವಾ ಸೌಲಭ್ಯಗಳು, ಉತ್ಪನ್ನಗಳನ್ನು ಅಭಿವೃಪಡಿಸಲು ಶ್ರಮಿಸಬೇಕಿದೆ. ಇದು ಭಾಷಾ ತಂತ್ರಜ್ಞಾನವನ್ನು ಬಲಪಡಿಸುವುದಲ್ಲದೇ, ಅನೇಕ ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸಬಲ್ಲದು. 

ಒತ್ತಾಸೆ
‍‍
‍ಕನ್ನಡ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಸಂಬಂಧಿಸಿದಂತೆ ಒಂದು ‍Vision Roadmap – ಭವಿಷ್ಯದ ಭಾಷಾ ಬೆಳವಣಿಗೆಯ ದೃಷ್ಟಿಯಿಂದ – ಇದರಲ್ಲಿ ಸರ್ಕಾರ, ಅಧಿಕಾರಿಗಳು, ಪ್ರಾಧಿಕಾರಗಳ ಹೊರತಾಗಿ – ಸಾಮಾನ್ಯ ಜನರನ್ನೂ ಒಳಗೊಳ್ಳುವ ಸಮುದಾಯ ಯೋಜನೆಗಳ ಬೆಂಬಲ, ಪ್ರಸರಣೆ ಹಾಗೂ ಭಾಗವಹಿಸುವಿಕೆಗೆ ಮುಂದಾಗಬೇಕು. ‍‍ಯೋಜನೆಗಳು ಮರುಕಳಿಸುವುದು, ಅದರ ಜೀವನ ಚಕ್ರವನ್ನು (Life Cycle) ಮತ್ತೆ ಮತ್ತೆ ಹೊಸದಾಗಿ ತಿರುವಿಹಾಕುವುದನ್ನು ಇದರಿಂದ ತಡೆಗಟ್ಟಿ ಹೆಚ್ಚು ಕನ್ನಡ ಕಟ್ಟುವ ಕೆಲಸವನ್ನು ಮುಂದುವರೆಸಬಹುದು. 

ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಷಾ ತಂತ್ರಜ್ಞಾನದ ಬೆಳವಣಿಗೆಗೆ ಕೈಜೋಡಿಸಲು ಬೇಕಿರುವ ಮುಕ್ತ ಪರಿಸರ ಹಾಗೂ ಸಾಧ್ಯತೆಗಳನ್ನು – ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ (Free and Open Source Software) ಯೋಜನೆಗಳು, ಸಮುದಾಯಗಳ ಮೂಲಕ ಕಂಡುಕೊಳ್ಳಬೇಕಿದೆ. ಭಾಷಾ ಸಂಶೋಧನೆ/ಪ್ರಾಯೋಗಿಕ ಯೋಜನೆಗಳನ್ನು ವಿದ್ಯಾರ್ಥಿಗಳು ಕೈಗೆತ್ತಿಕೊಳ್ಳುವಂತೆ ಪ್ರೇರೇಪಿಸಿ, ಮುಂದೆ ಅವೇ ಕನ್ನಡದ ಸ್ಟಾರ್ಟಪ್‌ಗಳನ್ನೂ ಬೆಳಸುವ ಮಟ್ಟಿಗೆ ಕೊಂಡೊಯ್ಯಬೇಕಿದೆ. 

ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಗಳು ಸಾರ್ವಜನಿಕ ಹಣದಲ್ಲಿ ಹಮ್ಮಿಕೊಂಡಿರುವ ಯೋಜನೆಗಳಿಂದ ಬಂದ ಫಲಿತಾಂಶಗಳು ಮುಕ್ತವಾಗಿ ಸಾರ್ವಜನಿಕ ಬಳಕೆಗೆ – ಅಮೇರಿಕಾ ಸರ್ಕಾರ, ನಾಸಾ ಸಂಸ್ಥೆ, ಒಡಿಸ್ಸಾ ಹಾಗೂ ಕೇರಳ ಸರ್ಕಾರಗಳು ಬಳಸುವ ಕ್ರಿಯೇಟೀವ್ ಕಾಮನ್ಸ್ ಲೈಸನ್ಸ್ ನಡಿ – (ಪೂರ್ಣ ಪ್ರಮಾಣದ ಪಬ್ಲಿಕ್ ಡೊಮೇನ್ ಪರವಾನಗಿ) ಲಭ್ಯವಾಗುವಂತೆ ಮಾಡಬೇಕು.

ಭಾಷೆ ಮತ್ತು  ತಂತ್ರಜ್ಞಾನದ ಬೆಳವಣಿಗೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬಲ್ಲ ಒಂದು ಕಾರ್ಯಪಡೆಯ ಅವಶ್ಯಕತೆ ಇದೆ. ಸಮಾವೇಶಗಳಾಚೆ – ಫಲಿತಾಂಶವನ್ನು ನಿರ್ದಿಷ್ಟಕಾಲದಲ್ಲಿ ಜನರ ಮುಂದಿಡುವ ಕೆಲಸ ಇದರದ್ದಾಗಬೇಕಿದೆ.

ಹೊರಗಿನ ಕೊಂಡಿಗಳು