ಕನ್ನಡ ವಿಕಿಪೀಡಿಯಕ್ಕೆ (http://kn.wikipedia.org) ಲೇಖನಗಳನ್ನು ಸೇರಿಸಿ ಎಂದಾಗ ತಕ್ಷಣ ಯಾವ ವಿಷಯ ಸೇರಿಸಬಹುದು ಜೊತೆಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಸಾಮಾನ್ಯ. ಈಗಾಗಲೇ ಕನ್ನಡಲ್ಲೇ ಲಭ್ಯವಾಗಿಸಿರುವ ವಿಕಿ ಸಂಪಾದನೆಯ ಮಾಹಿತಿ, ವಿಡಿಯೋ ಇತ್ಯಾದಿಗಳನ್ನು ತೋರಿಸಿದಾಗ ಕೂಡ ನಮ್ಮಿಂದ ಇದು ಸಾಧವೇ ಎನ್ನುವ ಪ್ರಶ್ನೆಯೊಂದಿಗೆ ಅನೇಕರು ವಿಕಿಪೀಡಿಯದಿಂದ ದೂರ ಉಳಿಯುವುದೇ ಹೆಚ್ಚು. ಇನ್ನು ಕೆಲವರು ಮುಂದುವರೆದು ಸಂಪಾದನೆಗೆ ಕೈ ಹಾಕಿದರೂ, ವಿಕಿ ತಾಂತ್ರಿಕ ಭಾಷೆ ಕೆಲವೊಮ್ಮೆ ಅವರನ್ನೂ ದಿಕ್ಕುತಪ್ಪಿಸುವುದುಂಟು.
ವಿಕಿಪೀಡಿಯವನ್ನು ಸುಭದ್ರವಾಗಿ ಮುನ್ನೆಡೆಸುತ್ತಿರುವ ಲಾಭರಹಿತ ಸಂಸ್ಥೆ ವಿಕಿಮೀಡಿಯ ಫೌಂಡೇಷನ್ ಇಂತಹ ತೊಂದರೆಗಳನ್ನು ನಿವಾರಿಸಲು ತನ್ನ ತಾಂತ್ರಿಕ ಅಭಿವೃದ್ದಿ ತಂಡದ ಜೊತೆ ಅನೇಕ ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿದೆ. ಸುಲಭ ವಿಕಿ ಸಂಪಾದನೆಗೆ ಸಹಾಯಕವಾಗುವಂತೆ Visual Editor ರಚಿಸಲಾಗುತ್ತಿದ್ದು, ಇದನ್ನು ಈಗಾಗಲೇ ಬೀಟಾ ಆವೃತ್ತಿಯ ಮೂಲಕ ಕನ್ನಡ ವಿಕಿಪೀಡಿಯದಲ್ಲಿ ಬಳಸಿ ನೋಡಬಹುದು.
ವಿಕಿಪೀಡಿಯ ಸಂಪಾದನೆ ಮಾಡುತ್ತಿರುವ ಹಾಗೂ ಮಾಡಲು ಮುಂದಾಗುವವರಿಗೆ ಈಗಾಗಲೇ ಇಂಗ್ಲೀಷ್ ಅಥವಾ ಇತರೆ ಭಾಷೆಗಳಲ್ಲಿ ತಮ್ಮ ಇಷ್ಟದ, ಇಚ್ಛೆಯ ಮಾಹಿತಿ ಇರುವುದು ಮತ್ತು ಅದನ್ನು ಯಥಾವತ್ತಾಗಿ ಕನ್ನಡ ವಿಕಿಪೀಡಿಯಕ್ಕೆ ಹಾಕುವುದು ಸುಲಭದ ಕೆಲಸ. ಈ ಸಂಪಾದನೆಯನ್ನು ಪೂರ್ಣ ಮಾಡದೆ, ಅರ್ಧ ಇಂಗ್ಲೀಷ್ ಮಾಹಿತಿಯನ್ನು ಹಾಗೆಯೇ ಬಿಟ್ಟು ಹೋಗಿರುವ ಪುಟಗಳೇ ಇದಕ್ಕೆ ಸಾಕ್ಷಿ. ಜೊತೆಗೆ ಇಂಗ್ಲೀಷ್ ಅಥವಾ ಇತರೆ ವಿಕಿಪೀಡಿಯಗಳಲ್ಲಿ ವಿಶ್ವಕೋಶದ ನೀತಿಗನುಸಾರವಾಗಿ ಬೇಕಿರುವ ಉಲ್ಲೇಖಗಳು, ಚಿತ್ರಗಳು ಇತ್ಯಾದಿ ಈಗಾಗಲೇ ಲಭ್ಯವಿರುವುದು ಕೂಡ ಸಂಪಾದನೆಯನ್ನು ಸುಲಭಗೊಳಿಸುತ್ತದೆ. ಆದರೆ, ಈ ಸಂಪಾದನೆಯ ಕೆಲಸ ದೊಡ್ಡ ಲೇಖನಗಳಿಗೆ ಅಥವಾ ವಿಕಿಯನ್ನು ಅರ್ಥ ಮಾಡಿಕೊಳ್ಳದವರಿಗೆ ಒಂದಲ್ಲಾ ಒಂದು ರೀತಿ ಕ್ಲಿಷ್ಟ ಅನಿಸಬಹುದು.
ವಿಕಿಪೀಡಿಯಕ್ಕೆ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಲೇಖನಗಳನ್ನು ಅನುವಾದದ ಮೂಲಕ ಸಂಪಾದಿಸಬಯಸುವವರಿಗೆ ವಿಕಿಮೀಡಿಯ ಫೌಂಡೇಷನ್ ತಾಂತ್ರಿಕ ಅಭಿವೃದ್ದಿ ತಂಡ ‘Content translation‘ ಅಥವಾ ವಿಷಯ ಅನುವಾದಕ ಸಲಕರಣೆಯೊಂದನ್ನು ಅಭಿವೃದ್ಧಿ ಪಡಿಸಿದ್ದು ಸ್ವಲ್ಪ ತಿಂಗಳ ಹಿಂದೆ ನನ್ನ ಗಮನಕ್ಕೆ ಬಂದಿತ್ತು. ನಾನೂ ಕೂಡ ಕೆಲವೊಮ್ಮೆ ಇಂಗ್ಲೀಷ್ ವಿಕಿಪೀಡಿಯದಿಂದ ಕನ್ನಡಕ್ಕೆ ಅನೇಕ ಲೇಖನಗಳನ್ನು ಅಥವಾ ಕೆಲವೊಂದು ಮಾಹಿತಿಯನ್ನಾದರೂ ಅನುವಾದ ಮಾಡಿ ಹಾಕಿದ್ದಿದೆ. ಆದ್ದರಿಂದ ಈ ಸಲಕರಣೆಯನ್ನು ಕನ್ನಡ ವಿಕಿಪೀಡಿಯಕ್ಕೂ ವಿಸ್ತರಿಸುವಂತೆ ಕೋರಿದ್ದ ಮನವಿಯ ಮೇರೆಗೆ ವಿಕಿಮೀಡಿಯ ತಂಡ ಕನ್ನಡ ವಿಕಿಪೀಡಿಯದಲ್ಲಿ ವಿಷಯ ಅನುವಾದಕವನ್ನು ಬೀಟಾ ಆವೃತ್ತಿಯಾಗಿ ಲಭ್ಯವಾಗಿಸಿದೆ.
ಕನ್ನಡ ವಿಕಿಪೀಡಿಯದಲ್ಲಿ ವಿಷಯ ಅನುವಾದಕ (Content Translator)

ಕನ್ನಡ ವಿಕಿಪೀಡಿಯದಲ್ಲಿ ವಿಷಯ ಅನುವಾದಕ (Content Translator)
ವಿಷಯ ಅನುವಾದಕ ಬಹುಭಾಷಾ ಸಂಪಾದನೆಯನ್ನು ಸಾಧ್ಯವಾಗಿಸುವ ಗುರಿ ಹೊಂದಿದ್ದು, ಮೂಲ ಭಾಷೆಯ ವಿಷಯದ ಪಕ್ಕದ ಬದಿಗೇ ಉದ್ದೇಶಿತ ಭಾಷೆಯ ಪಠ್ಯವನ್ನು ಟೈಪಿಸಲು ಅನುವು ಮಾಡಿಕೊಡುತ್ತದೆ. ವಿಷಯ ಸಂಪಾದನೆಯ ಜೊತೆಗೆ ವಿಷಯಕ್ಕೆ ಬೆಂಬಲವಾಗಿ ಬೇಕಿರುವ ಕೊಂಡಿಗಳು, ವರ್ಗಗಳು ಅಥವಾ ಪ್ರಾಥಮಿಕ ಅನುವಾದ ಇತ್ಯಾದಿಗಳನ್ನು ಯಾಂತ್ರಿಕವಾಗಿ ಲಭ್ಯವಾಗುವಂತೆ ಮಾಡಿ, ಬೋರು ಹೊಡೆಸುವ ಕೆಲಸಗಳನ್ನು ಕಡಿಮೆ ಮಾಡುತ್ತದೆ. ಇಂಗ್ಲೀಷ್ ಮಾತ್ರವಲ್ಲದೇ, ಇತರೆ ಭಾರತೀಯ ಹಾಗೂ ವಿಶ್ವದ ಭಾಷೆಗಳು ನಿಮಗೆ ತಿಳಿದಿದ್ದಲ್ಲಿ ಅವುಗಳ ವಿಕಿಯಲ್ಲಿರುವ ಮಾಹಿತಿಯನ್ನೂ ಕನ್ನಡಕ್ಕೆ ಸುಲಭವಾಗಿ ಈ ಸಲಕರಣೆಯ ಮೂಲಕ ಅನುವಾದ ಕಾರ್ಯ ನೆಡೆಸಬಹುದು.
ಒಂದು ಭಾಷೆಯ ಲೇಖನವನ್ನು ಇನ್ನೊಂದು ಭಾಷೆಗೆ ಅನುವಾದಿಸಬೇಕಾದಾಗ ಸ್ವಯಂಚಾಲಿತ ಅನುವಾದ ಸೇವೆ, ನಿಘಂಟುಗಳು, ಪಠ್ಯದ ಶೈಲಿಯನ್ನು ಬದಲಾಯಿಸುವುದು, ಕೊಂಡಿಗಳನ್ನು ಬದಲಯಿಸುವುದು ಮತ್ತು ಉಲ್ಲೇಖಗಳು ಇತ್ಯಾದಿಗಳ ಬಳಕೆ ಅವಶ್ಯವಾಗಿರುತ್ತದೆ. ಈ ಕಾರ್ಯವನ್ನು ನಿರ್ವಹಿಸುವವರು ಮತ್ತೆ ಮತ್ತೆ ಟ್ಯಾಬ್‌ಗಳನ್ನು ತಿರುವುತ್ತಾ ದೈಹಿಕ ಶ್ರಮಪಟ್ಟು,  ಅದೆಷ್ಟೋ ಸಮಯವನ್ನು ವ್ಯಯಿಸಿ  ಲೇಖನಗಳನ್ನು ಸಂಪಾದಿಸಿರುತ್ತಾರೆ. ಈ ಎಲ್ಲ ಪ್ರಕ್ರಿಯೆಗಳನ್ನು ವಿಷಯ ಅನುವಾದಕ ಅಚ್ಚುಕಟ್ಟಾಗಿ ಒಂದೆಡೆ ನಿರ್ವಹಿಸುತ್ತದೆ ಮತ್ತು ಅನುವಾದಕರು ತಮ್ಮ ಸಮಯವನ್ನು ಉತ್ತಮ ಗುಣಮಟ್ಟದ ವಿಷಯವನ್ನು ತಮ್ಮ ಭಾಷೆಯಲ್ಲಿ ನೈಜವಾಗಿ ಓದುವಂತೆ ಮಾಡುವತ್ತ ಗಮನಹರಿಸಲು ಸಹಾಯ ಮಾಡುತ್ತದೆ.
ವಿಷಯ ಅನುವಾದಕ(Content Translation) ಬಳಕೆ 
ಕನ್ನಡ ವಿಕಿಪೀಡಿಯದಲ್ಲಿ ವಿಷಯ ಅನುವಾದಕ ಬೀಟಾ ಆವೃತ್ತಿಯಲ್ಲೀಗ ಲಭ್ಯವಿದೆ. ಅಂದರೆ ಇದನ್ನು ಬಳಸುವ ಮುಂಚಿತವಾಗಿ ಇದನ್ನು ನೀವು ನಿಮ್ಮ ಬಳಕೆದಾರನ ಖಾತೆ ಅಡಿಯಲ್ಲಿ ಸಕ್ರಿಯಗೊಳಿಸಿಕೊಳ್ಳಬೇಕು:
  1. ವಿಕಿಪೀಡಿಯಕ್ಕೆ ಲಾಗಿನ್ ಆಗಿ (ಅಥವಾ ನಿಮ್ಮಲ್ಲಿ ಲಾಗಿನ್ ಇಲ್ಲದಿದ್ದಲ್ಲಿ ಹೊಸ ಖಾತೆ ಸೃಷ್ಟಿಸಿಕೊಳ್ಳಿ)
  2. ಬೀಟಾ ಸಿದ್ಧತೆಗಳನ್ನು ಪ್ರವೇಶಿಸಿ ಮತ್ತು ವಿಷಯ ಅನುವಾದಕ(Content Translation) ವನ್ನು ಸಕ್ರಿಯಗೊಳಿಸಿ
  3. ನಿಮ್ಮ “ನನ್ನ ಕಾಣಿಕೆಗಳು” ಪುಟವನ್ನು ಪ್ರವೇಶಿಸಿ, ಮತ್ತು “ಹೊಸ ಕಾಣಿಕೆಗಳು(New Contributions)” ಪಟ್ಟಿಯಿಂದ “ಅನುವಾದ”ಆಯ್ಕೆ ಮಾಡಿಕೊಳ್ಳಿ. ಕನ್ನಡ ವಿಕಿಪೀಡಿಯದಲ್ಲಿ ಇಲ್ಲದ ಲೇಖನವನ್ನೂ ಕೂಡ ಹುಡುಕುವ ಮತ್ತು ಅನುವಾದಿಸುವ ಸಾಧ್ಯತೆಯೂ ಇದೆ. ನಿಮ್ಮ ಅನುವಾದದ ಫಲಿತಾಂಶ ನಿಮಗೆ ಖುಷಿಕೊಟ್ಟಲ್ಲಿ, ನೀವು ಅದನ್ನು ವಿಕಿಯಲ್ಲಿ ಹೊಸ ಪುಟವಾಗಿ ಪ್ರಕಟಿಸಬಹುದು.
  4. ಒಮ್ಮೆ ಪ್ರಕಟಗೊಂಡ ಲೇಖನಗಳನ್ನು ವಿಕಿಯಲ್ಲಿರುವ ಇತರರಿಗೆ ತೋರಿಸಿ, ಅದನ್ನು ಉತ್ತಮಗೊಳಿಸಿ ಕನ್ನಡ ವಿಕಿಪೀಡಿಯವನ್ನು ಸಂಪಧ್ಬರಿತಗೊಳಿಸಬಹುದು.
  5. ವಿಷಯ ಅನುವಾದಕದ ಬಗ್ಗೆ ಹೆಚ್ಚಿನ ಸಹಾಯ ಅಥವಾ ತೊಂದರೆಗಳನ್ನು ತಾಂತ್ರಿಕ ತಂಡದೊಡನೆ ಹಂಚಿಕೊಳ್ಳುವ ಸವಲತ್ತೂ ಲಭ್ಯವಿದೆ Provide feedback

ವಿಷಯ ಅನುವಾದಕ ಬಳಕೆಯ ವಿಡಿಯೋ ಕೂಡ ನೋಡಿ:
ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿ ಇಲ್ಲ ಅಥವಾ ಮಾಹಿತಿ ಅಷ್ಟು ಸರಿಯಿಲ್ಲ ಎಂದು ಹೇಳುವ ಅನೇಕರಿಗೆ ಸುಲಭವಾಗಿ ಮುಕ್ತ ಕನ್ನಡ ವಿಶ್ವಕೋಶಕ್ಕೆ ಮಾಹಿತಿ ನೀಡಲು ವಿಷಯ ಅನುವಾದಕ ಉತ್ತಮ ಸಾಧನವಾಗಬಲ್ಲದು. ವಿಕಿಪೀಡಿಯ ಬಗ್ಗೆ ಕೇಳಿದ್ದು, ಇನ್ನೂ ನೀವು ಅದರ ಸಂಪಾದನೆಗೆ ಕೈ ಹಾಕಿಲ್ಲದಿದ್ದಲ್ಲಿ ಇಂದೇ http://kn.wikipedia.org ಯಲ್ಲಿ ನೊಂದಾಯಿಸಿಕೊಳ್ಳಿ ಹಾಗೂ ಸಂಪಾದನೆಗೆ ಮುಂದಾಗಿ. ಮುಕ್ತ ಜ್ಞಾನವನ್ನು ಕನ್ನಡಿಗರಿಗೆ ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ದೊರೆಯುವಂತೆ ಮಾಡಲು ನಿಮ್ಮ ಕೊಡುಗೆ ನೀಡಿ.
ಲಿನಕ್ಸಾಯಣ (Linuxaayana) by ಓಂಶಿವಪ್ರಕಾಶ್ ಎಚ್.ಎಲ್ is licensed under aCreative Commons Attribution 4.0 International LicenseBased on a work at http://linuxaayana.net.