ವಿಕಿಪೀಡಿಯ ನೀವೂ ಎಡಿಟ್ ಮಾಡಬಹುದು ಎಂದು, ಅದು ಹೇಗೆ ಎಂದು ತೋರಿಸಿದ ನಂತರದ ಪ್ರಶ್ನೆ – ನಾನು ಸಂಪಾದನೆ ಶುರು ಮಾಡುವುದಾದರೂ ಎಲ್ಲಿಂದ ಎಂಬುದು. ಫೇಸ್‌ಬುಕ್‌ನ ಕನ್ನಡ ವಿಕಿಪೀಡಿಯ ಗುಂಪು, ಸಮ್ಮಿಲನಗಳು ಹಾಗೂ ಇತ್ತೀಚಿಗಿನ ಗೂಗಲ್ ಹ್ಯಾಂಗ್‌ಔಟ್ ಸಂವಾದದಲ್ಲೂ ಇದೇ ಪ್ರಶ್ನೆ. ಇವುಗಳನ್ನು ಉತ್ತರಿಸಲು ಈ ಕೆಳಗೆ ಪ್ರಯತ್ನಿಸಿದ್ದೇನೆ. ಇವು ನಿಮ್ಮ ಸಹಾಯಕ್ಕೆ ಬರಬಲ್ಲವು.
ವಿಕಿಪೀಡಿಯ ಸಂಪಾದನೆ/ಎಡಿಟ್ ಪ್ರಾರಂಭಿಸಲು: ಕನ್ನಡ ವಿಕಿಪೀಡಿಯದ ಜಾಲತಾಣದಲ್ಲಿ (http://kn.wikipedia.org) ನಿಮ್ಮದೊಂದು ಬಳಕೆದಾರನ ಖಾತೆ(User Account) ಒಂದನ್ನು ತೆರೆಯಿರಿ. ಖಾತೆ ಇಲ್ಲದೆಯೂ ವಿಕಿಪೀಡಿಯ ಎಡಿಟ್ ಮಾಡಬಹುದು, ಆದರೆ ಖಾತೆಯೊಂದರ ಮೂಲಕ ನೀವು ಸಂಪಾದಿಸುವ ಲೇಖನ, ವಿಕಿಪೀಡಿಯಕ್ಕೆ ನಿಮ್ಮ ಕೊಡುಗೆ ಇತ್ಯಾದಿಗಳನ್ನು ಮುಂದೊಂದು ದಿನ ಪರಿಶೀಲಿಸಲು ಸಹಾಯಕವಾಗುತ್ತದೆ.
ಈಗಾಗಲೇ ವಿಕಿಪೀಡಿಯದಲ್ಲಿ ಖಾತೆ ಹೊಂದಿದ್ದಲ್ಲಿ, ನಿಮ್ಮ ಇಷ್ಟದ ವಸು, ವಿಚಾರ, ವಿಷಯ ಇತ್ಯಾದಿಗಳನ್ನು ವಿಕಿಯಲ್ಲಿ ಹುಡುಕಲು ಮೊದಲು ಮಾಡಿ. ನೀವು ಹುಡುಕುತ್ತಿರುವ ವಿಷಯ ವಿಕಿಪೀಡಿಯದಲ್ಲಿ ಈಗಾಗಲೇ ಇದ್ದರೆ, ನಿಮಗೆ ಆ ಪುಟದ ನಿಮ್ಮ ಬ್ರೌಸರ್ ಪರದೆಯ ಮೇಲಿರುವುದು. ಈಗ ನಿಮ್ಮ ಮುಂದಿರುವ ಪುಟದ ಮಾಹಿತಿ ಸರಿ ಇದೆಯೇ, ಅಥವಾ ಇದಕ್ಕಿಂತ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದಲ್ಲಿ ಅದನ್ನು ಸೇರಿಸಲು ಪ್ರಯತ್ನಿಸಬಹುದು. ‘ಸಂಪಾದಿಸಿ’ ಅಥವಾ ‘ಬದಲಾಯಿಸಿ’ ಎಂಬ ಕೊಂಡಿಗಳನ್ನು ಕ್ಲಿಕ್ ಮಾಡುವ ಮೂಲಕ ಇದು ಸಾಧ್ಯ. ನೀವು ಹುಡುಕುತ್ತಿದ್ದ ಲೇಖನ ವಿಕಿಪೀಡಿಯದಲ್ಲಿ ಈಗಾಗಲೇ ಇಲ್ಲವಾದಲ್ಲಿ, ಅದನ್ನು ಸೇರಿಸುವಂತೆ ಕೋರುವ ಕೆಂಪು ಬಣ್ಣದ ಕೊಂಡಿ ನಿಮ್ಮ ಬ್ರೌಸರ್ ಪರದೆಯಲ್ಲಿರುತ್ತದೆ. ಅದನ್ನು ಕ್ಲಿಕ್ ಮಾಡಿ, ನಿಮ್ಮ ಹೊಸ ಲೇಖನದ, ಹೊಸ ಸಂಪಾದನೆಯ ಕೆಲಸವನ್ನು ಶುರುವಿಟ್ಟುಕೊಳ್ಳಬಹುದು. ಇದು ವಿಕಿಪೀಡಿಯದಲ್ಲಿ ಹೊಸದೊಂದು ಲೇಖನವನ್ನು ಸೇರಿಸುವ ಅತಿ ಸುಲಭದ ವಿಧಾನ.
ಈಗಾಗಲೇ ನೀವು ವಿಕಿಪೀಡಿಯದಲ್ಲಿ ಸಂಪಾದನೆ ಮಾಡುತ್ತಿದ್ದರೆ, ಕನ್ನಡ ವಿಕಿಪೀಡಿಯ ಸಮುದಾಯದ ಇತರೆ ಯೋಜನೆಗಳಲ್ಲಿ ನೀವೂ ಭಾಗಿಯಾಗಿ ಹೆಚ್ಚಿನ ಕೊಡುಗೆ ನೀಡಬಹುದು. ಸಮುದಾಯದ ಕೆಲವು ಯೋಜನೆಗಳನ್ನು ಈ ಕೆಳಗೆ ನಿಮಗಾಗಿ ಪಟ್ಟಿ ಮಾಡಿದ್ದೇನೆ:
ಗೂಗಲ್ ಕನ್ನಡ ವಿಕಿಪೀಡಿಯಕ್ಕೆ ತನ್ನ ಗೂಗಲ್ ಟ್ರಾನ್ಸ್‌ಲಿಟರೇಷನ್ ಟೂಲ್ ಪರೀಕ್ಷಿಸುವ ಸಂದರ್ಭದಲ್ಲಿ ಅನೇಕ ಲೇಖನಗಳನ್ನು ಕೆಲವು ಅನುವಾದಕರ ಸಹಾಯದಿಂದ ಸೇರಿಸಿತ್ತು. ಈ ಲೇಖನಗಳು ಉತ್ತಮವಾಗಿದ್ದರೂ, ವಿಕಿಪೀಡಿಯಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತಿಲ್ಲದೆ, ಕೆಲವು ನ್ಯೂನ್ಯತೆಗಳಿಂದ ಕೂಡಿವೆ. ಮೇಲಿನ ಕೊಂಡಿಯಲ್ಲಿ ಆ ನ್ಯೂನ್ಯತೆಗಳನ್ನೂ, ಅವುಗಳನ್ನು ಸರಿಪಡಿಸುವ ಪರಿ ಇತ್ಯಾದಿಗಳನ್ನು ಮತ್ತು ಈ ಕೆಲಸದಲ್ಲಿ ಒಂದಾಗಲು ಮುಂದು ಬಂದಿರುವ ವಿಕಿಪೀಡಿಯನ್ನರನ್ನೂ, ಗೂಗಲ್ ತಂಡ ಸೇರಿಸಿರುವ ಲೇಖನಗಳ ಪಟ್ಟಿಯೂ ಲಭ್ಯವಿದೆ. ಈ ಪಟ್ಟಿಯಲ್ಲಿರುವ ಲೇಖನಗಳನ್ನು ಸಂವರ್ಧನೆಗೊಳಿಸಿ, ಅವನ್ನು ಕನ್ನಡಿಗರ ಓದಿಗೆ ಸಿದ್ದಪಡಿಸಲು ಇಷ್ಟವಿದ್ದಲ್ಲಿ ನೀವು ಈ ಯೋಜನೆ ಸೇರಬಹುದು.
ಬ್ಲಾಗ್ ಬರೆಯುವ ಅನೇಕ ಗೆಳೆಯರು, ತಮ್ಮ ಜಿಲ್ಲೆಯ ಪುಟಗಳನ್ನಾದರೂ ಕನ್ನಡ ವಿಕಿಪೀಡಿಯದಲ್ಲಿ ಸಂಪೂರ್ಣ ಮಾಹಿತಿ ಕೊಡುವಂತೆ ಮಾಡಲು ಒಂದಾಗಿ ಸೇರಿಸಿದ ಈ ಯೋಜನೆ, ವಿಶ್ವಕೋಶಕ್ಕೆ ಅತ್ಯಮೂಲ ಕೊಡುಗೆ ನೀಡಬಲ್ಲದು. ನಿಮ್ಮ ಜಿಲ್ಲೆ, ಅದರ ಸುತ್ತಮುತ್ತಲಿನ ಪ್ರದೇಶ ಇತ್ಯಾದಿಗಳ ಬಗ್ಗೆ ಕನ್ನಡ ವಿಕಿಪೀಡಿಯಕ್ಕೆ ವಿಷಯಗಳನ್ನು ಸೇರಿಸುತ್ತಾ ಸಂಪಾದನೆ ತೊಡಗಲು ಇದು ಉತ್ತಮ ಯೋಜನೆ.
ಕರ್ನಾಟಕದ ಬಗ್ಗೆ ಇರಬೇಕಾದ ಮುಖ್ಯ ವಿಷಯಗಳನ್ನು ವಿಕಿಪೀಡಿಯದಲ್ಲಿ ಸೇರಿಸಲು ಪ್ರಯತ್ನಿಸುತ್ತಿರುವ ಯೋಜನೆಗಳಲ್ಲಿ ‘Karnataka 1000’ ಮುಖ್ಯವಾದುದು. ಈ ಯೋಜನೆ ಇಂಗ್ಲೀಷ್ ವಿಕಿಪೀಡಿಯದಲ್ಲಿದ್ದು, ಕರ್ನಾಟಕದ ಬಗ್ಗೆ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಅಲ್ಲದೇ ಇತರ ಭಾಷೆಗಳಲ್ಲೂ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸಲು ಇಲ್ಲಿ ಪ್ರಯತ್ನಿಸಲಾಗುತ್ತಿದೆ. ಸಧ್ಯಕ್ಕೆ ಈ ಪುಟದಲ್ಲಿ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಸಮುದಾಯಕ್ಕೆ ಬೇಕಾದ ಯೋಜನಾ ನಿರ್ವಹಣೆಯ ಪುಟಗಳನ್ನು ಸಿದ್ದಪಡಿಸಲಾಗುತ್ತಿದೆ. ನಂತರದ ಹಂತದಲ್ಲಿ ಸಮುದಾಯವೇ ತನಗೆ ಬೇಕಿರುವ ವಿವಿಧ ವಿಷಯಗಳ ೧೦೦೦ ಲೇಖನಗಳನ್ನು ಗುರುತಿಸಿ, ಅದನ್ನು ವಿಷಯ ಪರಿಣಿತರಿಂದ ವಿಮರ್ಷೆಗೆ ಒಳಪಡಿಸಲಾಗುತ್ತದೆ. ಕೊನೆಗೆ ಸಮುದಾಯ ಒಟ್ಟುಗೂಡಿ, ಈಗಾಗಲೇ ಇರುವ ಲೇಖನಗಳನ್ನು ಉತ್ತಮ ಪಡಿಸುವುದರಲ್ಲಿ, ಹೊಸದಾಗಿ ಬೇಕಿರುವ ಲೇಖನಗಳನ್ನು ಸಂಪಾದಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಿದೆ. ಕನ್ನಡ ಮತ್ತು ಕನ್ನಡ ನಾಡಿನ ಉತ್ತಮ ಲೇಖನಗಳನ್ನು ಕನ್ನಡಿಗರಿಗೆ ನೀಡುವ ಈ ಯೋಜನೆಗೆ ಕೂಡ ನೀವು ಜೊತೆಯಾಗಬಹುದು.
ಈ ಮೇಲ್ಕಂಡ ಯೋಜನೆಗಳ ಮೂಲಕವೂ ನಿಮ್ಮ ವಿಕಿಪೀಡಿಯದ ಚಟುವಟಿಕೆಗಳು ಮತ್ತು ಸಂಪಾದನೆ ಕನ್ನಡ ವಿಕಿಪೀಡಿಯದಲ್ಲಿ ಪ್ರಾರಂಭವಾಗಬಹುದು. ವಿಕಿಯಲ್ಲಿ ಸಂಪಾದನೆಗೆ ತೊಡಗಿಕೊಂಡಾಗ ಯಾವುದೇ ವಿಚಾರವಾಗಿ ಪ್ರಶ್ನೆಗಳು ಇತ್ಯಾದಿ ಇದ್ದಲ್ಲಿ,
ಕನ್ನಡ ವಿಕಿಪೀಡಿಯದ ಫೇಸ್‌ಬುಕ್ ಬಳಗ, ಕನ್ನಡ ವಿಕಿಪೀಡಿಯದ ಮೇಲಿಂಗ್ ಲಿಸ್ಟ್ ಮೂಲಕ ಸಮುದಾಯದಲ್ಲಿನ ಇತರ ಸಹಾಯ ಪಡೆಯಬಹುದು. ತಿಂಗಳಿಗೊಮ್ಮೆ ಅಥವಾ ಆಗ್ಗಾಗ್ಗೆ ನೆಡೆಯುವ ಸಮುದಾಯ ಸಮ್ಮಿಲನ, ಕಾರ್ಯಾಗಾರ, ಗೂಗಲ್ ಹ್ಯಾಂಗ್‌ಔಟ್ ಸಂವಾದದಲ್ಲೂ ನೀವು ಕನ್ನಡ ವಿಕಿಪೀಡಿಯ ಸಂಪಾದನೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.