ನಗರಾಭಿವೃದ್ದಿ, ಪಟ್ಟಣ ನಿರ್ಮಾಣ, ನೈರ್ಮಲ್ಯ ಸುಧಾರಣೆ, ರಸ್ತೆ ಅಗಲೀಕರಣ ಹೀಗೆ ಹತ್ತು ಹಲವು ವಿಷಯಗಳನ್ನು ಮುಂದಿಟ್ಟುಕೊಂಡು, ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರಿನ ರಸ್ತೆಬದಿಯ ಅಂಗಡಿಗಳನ್ನು ಎತ್ತಂಗಡಿ ಮಾಡಿದ್ದು ನೆನಪಿರಬಹುದು. ನೆರೆ, ಬರದ ನಡುವೆಯೂ ವಿದೇಶ ಪ್ರವಾಸಮಾಡಿ ನಮ್ಮ ಮುಂದಿರುವ ಅನೇಕ ಸಮಸ್ಯೆಗಳನ್ನು ಭವಿಷ್ಯದಲ್ಲಿ ತೊಡೆದು ಹಾಕಲು ನಮ್ಮ ನಾಯಕರು ಬಹಳ ಶ್ರಮ ಕೂಡ ಪಡುತ್ತಿದ್ದಾರೆ.
ತಿಂಗಳ ಮೊದಲಲ್ಲಿ, ಗೆಳೆಯನ ಮದುವೆಗೆಂದು ಕುಂದಾಪುರದೆಡೆಗೆ ಸಾಗಿದ್ದ ನಮ್ಮಿಬ್ಬರಿಗೆ ಅಲ್ಲಿನ ಹೂವಿನ ಮಾರುಕಟ್ಟೆ ಸ್ವಲ್ಪ ವಿಶೇಷವೆನಿಸಿತು. ಅಗಲವಾದ ರಸ್ತೆಗಳು, ರಸ್ತೆಯ ನಡುವೆ ಇರುವ ಮರಗಳನ್ನು ಕಡಿಯದೆ, ರಸ್ತೆಗಳನ್ನು ಬೇರ್ಪಡಿಸುವ ಜಾಗದಲ್ಲಿ ಚೊಕ್ಕವಾಗಿ ನಿರ್ಮಿಸಿದ್ದ ಸಾಲುಸಾಲು ಅಂಗಡಿಗಳು. ಅಲ್ಲಿ ಶಿಸ್ತಾಗಿ ಕುಳಿತು ಹೂವು ಕಟ್ಟುತ್ತಾ, ಮಾರುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಜನ. ಇವೆಲ್ಲವೂ ನಮಗೆ ಕೇಳಿದ ಪ್ರಶ್ನೆಗಳು ಅನೇಕ.
ನಮ್ಮೂರಿನಲ್ಲೇ ಸಿಗದ ಉತ್ತರ ಬೇರೆಡೆ ಸಿಕ್ಕೀತೇ? ರಸ್ತೆಬದಿಯ ಅಂಗಡಿಗಳನ್ನು ತೆಗೆಯುವುದೊಂದೇ ಉಪಾಯವಾದರೆ, ಅಂತಹ ಅಂಗಡಿಗಳನ್ನು ಉಳಿಸಲೂ ಉಪಾಯವಿರಬೇಕಲ್ಲವೇ? ಹಾಗೆಯೇ ಮೇಲೆ ಹೇಳಿದ ಅನೇಕ ಸಮಸ್ಯೆಗಳಿಗೂ ನಾವು ನಮ್ಮ ಸುತ್ತಮುತ್ತಲಿನ ಹಳ್ಳಿ, ನಗರಗಳಲ್ಲೇ ಏಕೆ ಉತ್ತರ ಹುಡುಕಬಾರದು?
ಈ ಲೇಖನ ಕೇವಲ ‘ನನ್‌ಮನ’ದ ಮೆಲುಕುಗಳ ದಾಖಲು ಮಾತ್ರ.