ನಿರಂಜನರ ಕೃತಿಗಳು CC-BY-SA 4.0 ಪರವಾನಗಿಯೊಂದಿಗೆ ಮರುಪ್ರಕಟಗೊಳ್ಳಲಿವೆ ಎಂದು ೨೦೧೪ರ ನವೆಂಬರ್‌ನಲ್ಲಿ ತೇಜಸ್ವಿನಿ ನಿರಂಜನರು ೫೫ ಪುಸ್ತಕಗಳನ್ನು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್‌ನಡಿಯಲ್ಲಿ ಬಿಡುಗಡೆ ಮಾಡುತ್ತಿರುವ ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. ನಂತರದ ದಿನಗಳಲ್ಲಿ ನಿರಂಜನರ ಕೃತಿಗಳನ್ನು ಹುಡುಕುವ, ಅವನ್ನು ಡಿಜಿಟೈಸ್ ಮಾಡುವ ಅನೇಕ ಇಮೇಲ್‌ಗಳನ್ನು ಕನ್ನಡ ವಿಕಿಪೀಡಿಯ ಸಮುದಾಯದ ಅನೇಕರ ಮಧ್ಯೆ ಹಂಚಿಕೊಳ್ಳಲಾಗಿತ್ತು. ತೇಜಸ್ವಿನಿಯವರೊಡನೆ ಅವರ ಬಳಿಯಿರುವ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕೆಲಸದ ಬಗ್ಗೆಯೂ ಚಿಂತಿಸಲಾಗುತ್ತಿತ್ತು. ಒಂದೆರೆಡು ವಾರಗಳ ಹಿಂದೆ ಚಿರಸ್ಮರಣೆ ಮತ್ತು ಕಲ್ಯಾಣ ಸ್ವಾಮಿ ಪುಸ್ತಕಗಳನ್ನು ಜಯನಗರದ ಸಪ್ನಬುಕ್ಸ್ ಪುಸ್ತಕಮಳಿಗೆಯಿಂದ ಕೊಂಡು ತಂದಿದ್ದೆ ಕೂಡ. ಕೆಲವರನ್ನು ನಿರಂಜನರ ಪುಸ್ತಕಗಳ ಪ್ರತಿ ಇದ್ದಲ್ಲಿ ತಿಳಿಸಿ ಎಂದೂ ಕೇಳಿದ್ದೆ.
ನಾಲ್ಕು ದಿನಗಳ ಕೆಳಗೆ ಇಮೇಲ್ ಮಾಡಿದ ಶ್ರೀನಿಧಿ ಟಿ.ಜಿ. ನಮ್ಮ ಪುಸ್ತಕ ಸಂಚಯದಲ್ಲೇ ಲಭ್ಯವಿದ್ಧ ೬ ನಿರಂಜನರ ಪುಸ್ತಕಗಳ ಬಗ್ಗೆ ತಿಳಿಸಿದ್ದರು. ಈ ಇಮೇಲ್ ನೋಡಿದ ತಕ್ಷಣ “ಕಂಕುಳಲ್ಲೇ ಮಗು ಹಿಡಿದು ಊರೆಲ್ಲ ಹುಡುಕಿದರಂತೆ” ಎನ್ನುವ ಮಾತು ತಕ್ಷಣ ನೆನಪಾಯಿತು. ನಿರಂಜನ ಎಂದು ಪುಸ್ತಕಸಂಚಯದಲ್ಲಿ ಹುಡುಕಿದಾಕ್ಷಣ ಸಿಕ್ಕ ಪುಸ್ತಕಗಳ ಪಟ್ಟಿ ಈ ರೀತಿ ಕಂಡು ಬಂದಿತು. ಈ ಎಲ್ಲ ಪುಸ್ತಕಗಳು ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿಯಲ್ಲಿ ಇದ್ದದ್ದು ಇನ್ನೊಂದು ವಿಶೇಷ.
ನಮ್ಮ ಸಮೂಹ ಸಂಚಯ ಯೋಜನೆಯ ಮೂಲಕ ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ ಹಾಗೂ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಲಭ್ಯವಿರುವ ಸ್ಕ್ಯಾನ್ ಮಾಡಿದ ಪುಸ್ತಕಗಳ ಹೆಸರು, ಅವುಗಳ ಪ್ರಕಾಶಕರು ಹಾಗೂ ಲೇಖಕರ ಮಾಹಿತಿಗಳನ್ನು ಕನ್ನಡೀಕರಿಸುವ ಕೆಲಸಕ್ಕೆ ಸಮುದಾಯದ ಸಹಾಯ ಪಡೆದುಕೊಂಡಿದ್ದೆವು. ಈಗಲೂ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಮತ್ತಷ್ಟು ಪುಸ್ತಕಗಳ ಹೆಸರಿನ ಕನ್ನಡೀಕರಣ ಇಲ್ಲಿ ನೆಡೆದಿದೆ.
ನಿರಂಜನರ ಕೃತಿಗಳನ್ನು ವಿಕಿಮೀಡಿಯ ಕಾಮನ್ಸ್ಗೆ ಸೇರಿಸಲಾಗಿದ್ದು, ಇವುಗಳನ್ನು ಕನ್ನಡ ವಿಕಿಸೋರ್ಸ್‌ನಲ್ಲಿ ಡಿಜಿಟಲೀಕರಣ ಮಾಡಲು ಅನುವು ಮಾಡಿಕೊಡಲಾಗಿದೆ. ಆಸಕ್ತರು ಈ ಕೆಲಸದಲ್ಲಿ ನಮ್ಮೊಡನೆ ಕೈ ಜೋಡಿಸಬಹುದಾಗಿದೆ.
ವಿಮೋಚನೆ (1953) ಪುಸ್ತಕವನ್ನು ಡಿಜಿಟಲೀಕರಿಸಲು ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಕೆಳಕಂಡ ಚಿತ್ರದಲ್ಲಿರುವಂತೆ ನಿಮಗೆ ಪುಸ್ತಕ ಕಂಡು ಬರುತ್ತದೆ.
ಕನ್ನಡ ವಿಕಿಸೋರ್ಸ್‌ಗೆ ಲಾಗಿನ್ ಆಗಿ ಕೆಂಪುಬಣ್ಣದ ಸಂಖ್ಯೆಗಳ ಮೇಲೆ ಕ್ಲಿಕ್ಕಿಸಿ.
ನಂತರ ಬಲಬದಿಯಲ್ಲಿ ಕಾಣುವ ಪುಸ್ತಕದ ಪುಟವನ್ನು ಎಡಬದಿಯ ಖಾಲಿ ಜಾಗದಲ್ಲಿ ತುಂಬಿ. ಪುಟದ ಕೆಳಗೆ ಕಾಣುವ ಬಣ್ಣದ ಪುಟ ಸ್ಥಿತಿಯ ಮಾಹಿತಿಯಲ್ಲಿ ಅನ್ವಯವಾಗುವುದನ್ನು ಆಯ್ಕೆ ಮಾಡಿಕೊಂಡು, ಪುಟವನ್ನು ಉಳಿಸಿ. ( ಪುಟದಲ್ಲಿನ ಮಾಹಿತಿ ಸರಿಯಾಗಿದ್ದು, ಪರಿಶೀಲನೆ ಮಾಡಲಾಗಿದ್ದಲ್ಲಿ ಕಡೆಯ ಹಳದಿ ಬಣ್ಣದ ಗುಂಡಿಯನ್ನು ಆಯ್ಕೆ ಮಾಡಿಕೊಂಡು, ಪುಟ ಉಳಿಸಬೇಕು.
ಕನ್ನಡ ಪುಸ್ತಕಗಳನ್ನು ಓದುವ ಜೊತೆಗೆ, ಅವುಗಳ ಡಿಜಿಟಲೀಕರಣ, ಪರಿಶೀಲನೆ ಇತ್ಯಾದಿಗಳ ಮೂಲಕ ಭಾಷಾ ಸಂಶೋಧನೆಗೆ ನಿಮ್ಮ ಕೊಡುಗೆ ನೀಡಿ. ಕನ್ನಡ ಸಂಚಯ, ಸಮೂಹ ಸಂಚಯ, ಪುಸ್ತಕ ಸಂಚಯ, ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಈ ಕೆಲಸ ಮಾಡಲು ಸಾಧ್ಯವಿರುವ ಕೆಲವು ವೇದಿಕೆಗಳಷ್ತೇ. ಈ ಕೆಲಸ ಸಾಧ್ಯವಾಗಿಸುವುದು ಕನ್ನಡಿಗರ ಕೈಯಲ್ಲಿದೆ.