ಗಣರಾಜ್ಯೋತ್ಸವ….
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕಿಂದು
ಹಬ್ಬದ ಸಂಭ್ರಮ, 

೬೦ ವರ್ಷಗಳಾಗಿಯೇ ಹೋಯ್ತಲ್ವೇ
ನಮ್ಮ ಸಂವಿಧಾನ ಶಿಲ್ಪಿಯು ರಚಿಸಿದ ಆ ಕಲಂಗಳಿಗೆ…

ಬೆಳಗ್ಗೆ ಎದ್ದು, ಬಿಳುಪಿನ ಉಜಾಲಾ ಉಡುಪು,
ಅದೇ ಬಣ್ಣದ, ಕೆಲವೊಮ್ಮೆ ನೀಲಿ ಹೆಚ್ಚಾದ ಶೂ ಧರಿಸಿ
ಜೇಬಿಗೊಂದು ಪುಟ್ಟ ರೋಜ್ ತೊಟ್ಟು, 
ಕಿಸೆಯಲ್ಲಿ, ದೊಡ್ಡಾ ರಾಜಕಾರಣಿಯಂತೆ ಭಾಷಣದ
ಚೀಟಿ ಇಟ್ಟು ನೆಡೆದಿದ್ದ ನೆನಪು ಇಂದು ಮರುಕಳಿಸಿದೆ…

ಸೋಮಾರಿ ಡಬ್ಬದ ಮುಂದೆ ಕೂತು
ಎಡ ಬಲ ಎಣಿಸುತ್ತ ಸರತಿಯ ಸಾಲಿನಲ್ಲಿ
ಸೈನಿಕರು ಒಬ್ಬರ ಹಿಂದೊಬ್ಬರು ಮಾರ್ಚ್ ಫಾಸ್ಟ್ 
ಮಾಡುತ್ತಿರುವುದನ್ನು ಕಾಣುತ್ತಿದ್ದ ದಿನವಿತ್ತು..
ನಾನೂ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಿದ್ದದ್ದಿದೆ..

ಇಲ್ಲಿ ನಾವು ಹಬ್ಬದ ಸಂಭ್ರಮದಲ್ಲಿದ್ದರೆ, 
ದೇಶದ ಮತ್ತೊಂದು ಮೂಲೆಯಲ್ಲಿ 
ಗುಂಡಿನ ಸುರಿಮಳೆ, ‘ಕೆಣಕದಿರಿ ನಮ್ಮನ್ನು’ ಎಂದಿದ್ದಾರೆ
ನಮ್ಮ ಮಿನಿಸ್ಟರು, ಎಚ್ಚರಿಕೆಯ ಗಂಟೆ ಬಾರಿಸಿಯಾಗಿದೆ
ನಮ್ಮ ಜವಾನರ ನಿಷ್ಟೆಯ ಸೇವೆಯೂ ಸಾಗಿದೆ…

೬೦ ವರ್ಷಗಳಾದರೂ ಇನ್ನೂ ನಮಗೆ ಪ್ರಜಾಪ್ರಭುತ್ವದ ಕಲೆ
ಕರಗತವಾಗಬೇಕಾಗಿದೆ…
ನಾನೂ, ನೀವೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿ,
ಬೆಳವಣಿಗೆಗೆ ಅಡೆತಡೆಯಾಗಿರುವ ಕೊಳಕನ್ನು ತೆಗೆಯಬೇಕಿದೆ..
ಇದೂ ನನ್ನ ಭಾಷಣ ನಿಮ್ಮ ಮುಂದೆ ಇಂದು ಕವನವಾಗಿದೆ….

ಯೋಚಿಸಿ, ಮತ್ತೊಮ್ಮೆ ಮಗದೊಮ್ಮೆ ಈ ಹಿಂದಿನ 
ಸಾಧನೆಗಳನ್ನು, ಸವಾಲುಗಳನ್ನು, ತಪ್ಪು ಒಪ್ಪುಗಳನ್ನು
ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ 
ಸರ್ಕಾರವನ್ನು ಪ್ರಜೆಗಳು ಮತ್ತೆ ಮತ್ತೆ ಕಟ್ಟುವ ಬಲ,
ಹೊಸದನ್ನು ಸಾಧಿಸುವ ಛಲ ಹೀಗೇ ಹೆಚ್ಚಿತ್ತಿರಲಿ
ದಬ್ಬಾಳಿಕೆಗಳಿಂದ ಇರೋಣ ನಾವು ಎಂದಿಗೂ ದೂರ