ನವೆಂಬರ್ ೮, ೨೦೨೦ರಂದು ವಿಜಯ ಕರ್ನಾಟಕದ ‍ಭವಿಷ್ಯಕ್ಕಾಗಿ ಕನ್ನಡ ಕಹಳೆ ಭಾಗ-8 ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ ಡಿಜಿಟಲ್ ಅಂಗಳಕ್ಕೆ ಕನ್ನಡ ವಿಷಯದ ವಿಷಯ ಹಾಗೂ ವಿಡಿಯೋ ಇಲ್ಲಿದೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ. ಮತ್ತಷ್ಟು ಕನ್ನಡದ ಕೆಲಸಗಳಿಗೆ ಜೊತೆಯಾಗಿ.

 

೨೧ನೆಯ ಶತಮಾನ, ಸಧ್ಯಕ್ಕೆ ಕರೋನಾದ ನಡುವೆ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಕನ್ನಡ ಹಬ್ಬಕ್ಕೆ ನಮ್ಮೆಲ್ಲರ ಸಮಾಗಮ ಡಿಜಿಟಲ್ ಮಾಧ್ಯಮದ ಮೂಲಕ ಆಗುತ್ತಿದೆ. ಈ ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಎಲ್ಲಿ ಮನೆ ಮಾಡಿದೆ ಎಂದು ಕೇಳುವುದ‍ರಿಂದ ಮುಂದುವರೆದು, ಜಗತ್ತಿನಾದ್ಯಂತ ಇಂದು ಕನ್ನಡ ಡಿಜಿಟಲ್ ಅಂಗಳದಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ ಎಂದು ಬೀಗುವ ಕಾಲ ಬಂದಿದೆ. ಇದೆಲ್ಲದರ ನಡುವೆ ಜಾಗತಿಕ ಮಟ್ಟದಲ್ಲಿ ಕನ್ನಡದ ಸ್ಥಿತಿಗತಿಗಳನ್ನು ವಿವಿಧ ಅಯಾಮದಿಂದ ‌ನೋಡುವ ತುರ್ತು ಅವಶ್ಯಕತೆ ಇದೆ.

 

ಕನ್ನಡ ಭಾಷೆ ಎಂದರೆ ಅದು ಅನ್ನದ ಭಾಷೆ ಆಗಬೇಕು, ಬದುಕಿನ ಭಾಷೆ ಆಗಬೇಕು – ಇದು ಘೋಷ ವಾಕ್ಯ. ಹೇಗೆ, ಇದುವರೆಗೆ ಅನ್ನದ ಭಾಷೆ ಆಗಿರಲಿಲ್ಲವೇ ನಮ್ಮ ಕನ್ನಡ? ‍ಇದಕ್ಕೆ ಹೊಸ ಪರಿಭಾಷೆ ಬರೆಯಬೇಕೆ? ಎಂಬ ಪ್ರಶ್ನೆಗಳು ಹಲವರಿಗೆ ಬಂದಿರಲೂಬಹುದು.  ಡಿಜಿಟಲ್ ಅಂಗಳದಲ್ಲಿ ಇದು ಒಂದುಮಟ್ಟಕ್ಕೆ ನಿಜ. ಕನ್ನಡಿಗರು ತಂತ್ರಜ್ಞಾನದ ಮಟ್ಟಿಗೆ ಬಳಕೆದಾರರು. ಕನ್ನಡಿಗನಿಗೆ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಹೀಗೆ ಎಲ್ಲ ಡಿಜಿಟಲ್ ಪರದೆಗಳ ಮೇಲೆ ಇಂದು ಕನ್ನಡ ಮೂಡುತ್ತಿದ್ದು, ತನ್ನ ಭಾಷೆಯಲ್ಲಿ ಸೇವೆಯನ್ನು ಕೇಳುವ ಮತ್ತು ಪಡೆಯುವ ಅವಕಾಶಗಳಿವೆ. ಈ ಅವಕಾಶಗಳು ಕೆಲವೊಮ್ಮೆ ಪೂರ್ವನಿಯೋಜಿತವಾಗಿಯೂ (Default), ಕೆಲವೊಮ್ಮೆ ಒತ್ತಾಯದ ಕೋರಿಕೆಯ ಮೇರೆಗೂ ಕನ್ನಡಕ್ಕೆ ದೊರಕುತ್ತಾ ಬಂದಿವೆ ಎಂಬುದನ್ನು ಇಲ್ಲಿ ನಾವು ಗಮನಿಸಬೇಕು. ಇದು ಶಾಲೆಯಲ್ಲಿ ಕಲಿಯುವ ಮಗುವಿನಿಂದ ಹಿಡಿದು, ದಿನನಿತ್ಯ ಕನ್ನಡದಲ್ಲಿ ವ್ಯವಹರಿಸಲು ಬಯಸುವ ಪ್ರತಿಯೊಬ್ಬನೂ ಈಗಾಗಲೇ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಕಂಡುಕೊಂಡಿರಬಹುದಾದ ಸತ್ಯ.  ಇಲ್ಲಿ ಒತ್ತಾಯದ ಮೇರೆಗೆ ಎನ್ನುವ ಮಾತನ್ನು ಪುನರುಚ್ಚರಿಸುವುದು ಅವಶ್ಯಕವೆನಿಸುತ್ತದೆ. ಡಿಜಿಟಲ್ ಲೋಕದಲ್ಲಿ ಕನ್ನಡವನ್ನು ಒಂದು ಆಯ್ಕೆಯಾಗಿ ಕೊಡಲಾಗುತ್ತಿದೆಯೇ ಹೊರತು ಅದು ಪೂರ್ವನಿಯೋಜಿತವಲ್ಲ – ಸರ್ಕಾರದಿಂದ ಮೊದಲುಗೊಳಿಸಿ, ಕನ್ನಡ ನೆಲದಲ್ಲಿ ಬೇರೂರಿರುವ ಸಂಘ ಸಂಸ್ಥೆಗಳು, ಉದ್ದಿಮೆಗಳು ಎಲ್ಲಕ್ಕೂ ಇದು ಅನ್ವಯಿಸುತ್ತದೆ. ‍ಇದು ಬದಲಾಗಲೇ ಬೇಕಾದ ಕಾಲ ಬಂದಿದೆ. ‍ಇದರೊಟ್ಟಿಗೆ ಕನ್ನಡಿಗನಿಗೆ ತಂತ್ರಜ್ಞಾನದ ಅರಿಮೆ ಹೆಚ್ಚಿಸುವ, ತಂತ್ರಜ್ಞಾನದ ಕೌಶಲ್ಯ ವೃದ್ಧಿಸುವ, ತಂತ್ರಜ್ಞಾನದ ಹೊಸ ಪರಿಭಾಷೆಯನ್ನು ಕಲಿಸುವ, ತಂತ್ರಜ್ಞಾನದ ಮೂಲಕ ಅನ್ನ ಹಾಗೂ ಬದುಕನ್ನು ಕನ್ನಡದಲ್ಲೇ ಕಟ್ಟಿಕೊಳ್ಳುವ/ಕಂಡುಕೊಳ್ಳುವ ಸಾಧ್ಯತೆಗಳನ್ನು ನನಸಾಗಿಸಿಕೊ‌ಳ್ಳಬೇಕಿದೆ. ಈ ‍ಕಲೆಯನ್ನು ಮೂಲದಲ್ಲೇ ಕಲಿಸುವ ಅವಕಾಶಗಳನ್ನು ಕನ್ನಡಿಗರಾಗಿ, ಒಂದು ಸಮುದಾಯವಾಗಿ, ಸಮಾಜವಾಗಿ ನಾವು ಹುಟ್ಟುಹಾಕಬೇಕಿದೆ. ಇದಕ್ಕೆ ಮಕ್ಕಳೂ, ಸಾಮಾನ್ಯನೂ, ಅರಿತ ಹಿರಿಯರೂ,  ಸರ್ಕಾರವೂ ಒಟ್ಟಿಗೆ ಕೆಲಸ ಮಾಡಬೇಕಿದೆ. ‌ಜ್ಞಾನದ ಆಗರವನ್ನು ಕನ್ನಡದಲ್ಲಿ ಕಟ್ಟುವ ಮುಖಾಂತರ,  ಉದ್ಯೋಗ ಉದ್ದಿಮೆಗಳು ಎರಡನ್ನೂ ಕನ್ನಡದಲ್ಲಿ ಕಟ್ಟಬೇಕಿದೆ. ‍

 

ಕನ್ನಡವನ್ನು ‍ಓದುವುದು, ಬರೆಯುವುದು ಡಿಜಿಟಲ್ ಅಂಗಳದಲ್ಲಿ ಸುಲಭ ಸಾಧ್ಯ – ಇನ್ನೂ ಇದಕ್ಕೆ ಒಗ್ಗಿಕೊಳ್ಳುತ್ತಿರುವವರಿಗೆ ಅವಶ್ಯವೆನಿಸುವಷ್ಟು ಸಹಾಯ ಕನ್ನಡದಲ್ಲಿ ಲಭ್ಯವಾಗಿದೆ. ಈ ಸಾಧ್ಯತೆಯನ್ನು ಒದಗಿಸಿಕೊಡುವ ನುಡಿ, ಬರಹ, ಪದ, ಜಸ್ಟ್ ಕನ್ನಡಗಳಂತಹ ತಂತ್ರಾಂಶಗಳು ಎಲ್ಲರ ಮನೆಮಾತಾಗಿವೆ. ಕಳೆದ ಎರಡು ದಶಕಗಳಲ್ಲಿ ನೋಡುನೋಡುತ್ತಿದ್ದಂತೆ ಕನ್ನಡದ ಮಾಹಿತಿ ಇಂಟರ್ನೆಟ್‌ನ ಪ್ರತಿದಿಕ್ಕಿನಲ್ಲೂ ರಾರಾಜಿಸುತ್ತಿದೆ. ಡಿಟಿಪಿ ಡೆಸ್ಕ್‌ನಿಂದ ಹಿಡಿದು, ಪತ್ರಿಕೆ, ದೃಶ್ಯವಾಹಿನಿಗಳು ಕನ್ನಡಿಗರನ್ನು ರಂಜಿಸುವ ಹಲವಾರು ಮಾಧ್ಯಮಗಳನ್ನು ನೀಡಿವೆ. ಹಾಗೆ ನೋಡಿದಲ್ಲಿ ಬಹುತೇಕ ಇವೆಲ್ಲವೂ ಕನ್ನಡಿಗರಿಗೆ ಅನ್ನ ನೀಡಿದ ಮಾಧ್ಯಮಗಳೇ. ‍ಆದರೆ…. ಇವುಗಳನ್ನು ಮೀರಿ ಕನ್ನಡ ಡಿಜಿಟಲ್ ಲೋಕವನ್ನು ತನ್ನದಾಗಿಸಿಕೊಂಡಿಲ್ಲ. ಅದು ವ್ಯಾಪಿಸಿಕೊಳ್ಳಬಹುದಾದ ಸಾಧ್ಯತೆಗಳು ಬಹಳಷ್ಟಿವೆ. ಈ ಕೊರತೆಗಳನ್ನು ಒಂದೊಂದಾಗಿ ನೋಡಿ, ಅವುಗಳನ್ನು ಬಗೆಹರಿಸಲು ನಾವು ಏನು ಮಾಡೋಣ ಎಂಬುದನ್ನೂ ನೋಡೋಣ.

 

ಕೊರತೆಗಳು:- ಕನ್ನಡದ ನೆರೆಯ ಭಾಷೆಗಳಾದ ತಮಿಳು, ಮಲಯಾಳಂ, ತೆಲುಗಿನಷ್ಟು ಪ್ರೀತಿಯನ್ನು ನಾವು ಡಿಜಿಟಲ್ ಮಾಧ್ಯಮದ ಮೂಲಕ ಕನ್ನಡಿಗರು ನೀಡುತ್ತಿಲ್ಲ.

 

1.     ಎಲ್ಲೆಡೆಯೂ ಸಂಪೂರ್ಣ ಕನ್ನಡದ ಬಳಕೆ – ಸಾಧ್ಯವಾಗಿಲ್ಲ – ಆದರೆ ಇದು ಸಾಧ್ಯವಿದೆ

2.     ನಾವು ಕಂಗ್ಲೀಷ್‌ನಲ್ಲಿ ಬರೆಯುವುದನ್ನು ಇನ್ನೂ ನಿಲ್ಲಿಸಿಲ್ಲ. ಕಾರಣ ಕೀಬೋರ್ಡ್ ಸರಿ ಇಲ್ಲ, ಟೈಪಿಸಲಿಕ್ಕೆ ಬರಲ್ಲ, ಮೊಬೈಲ್‌ನಲ್ಲಿ ನುಡಿ ಇಲ್ಲ ಇತ್ಯಾದಿ ಪ್ರಶ್ನೆ/ಉಡಾಫೆ. ಇವುಗಳಿಗೆ ಉತ್ತರವೂ ಇದೆ, ಸುಲಭವಾಗಿ ಕಲಿಯಲೂ ಸಾಧ್ಯವಿದೆ.

3.     ನಾವು ಯುನಿಕೋಡ್ ಬಳಸುತ್ತಿಲ್ಲ – ಪ್ರತಿವರ್ಷ ಯುನಿಕೋಡ್ ಶಿಷ್ಠತೆಯನ್ನು ಜಾರಿಗೊಳಿಸುತ್ತೇವೆ ಎನ್ನುವ ಘೋಷಣೆ ಮಾತ್ರ ಆಗುತ್ತದೆ – ಸರ್ಕಾರೀ ಮಟ್ಟದಲ್ಲಿ – ಜನರು ಮತ್ತು ಉದ್ಯಮಶೀಲರು, ವಿಶ್ವವಿದ್ಯಾನಿಲಯಗಳು, ವಿದ್ಯಾರ್ಥಿಗಳು, ಸಂಶೋಧಕರು ಇದರತ್ತ ಇನ್ನೂ ಗಮನ ಹರಿಸಿಲ್ಲ. – ಇನ್ನೂ ಯುನಿಕೋಡ್ ಎಂದರೇನು? ಅದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಆದರೆ ಪ್ರತಿನಿತ್ಯ ಲಕ್ಷಾಂತರ ಸಂದೇಶಗಳನ್ನು ಕನ್ನಡದಲ್ಲಿ ವಾಟ್ಯಾಪ್, ಫೇಸ್‌ಬುಕ್ ಇತ್ಯಾದಿಗಳ ಮೂಲಕ ನಾವು ಹಂಚಿಕೊಳ್ಳುತ್ತಿದ್ದು, ಅದನ್ನು ಲಕ್ಷಾಂತರ ಕನ್ನಡಿಗರು ಓದಲಿಕ್ಕೆ ಸಾಧ್ಯವಾಗಿರುವುದು ಯುನಿಕೋಡ್ ಎಂಬ ಸ್ಟಾಂಡರ್ಡ್ ಎನ್ನುವ ಅರಿವನ್ನು ಕಲಿಸಲು ನಾವು ಎಡವಿದ್ದೇವೆ. ಲೇಖನ, ಪುಸ್ತಕ ಇತ್ಯಾದಿಗಳನ್ನು ಬರೆಯುವಾಗ ಮಾತ್ರ ಈ ಪ್ರಶ್ನೆ ಎದುರಾಗುತ್ತದೆಯೇ ಹೊರತು ಸಾಮಾನ್ಯ ಡಿಜಿಟಲ್ ಕನ್ನಡಿಗನಿಗೆ ಯುನಿಕೋಡ್ ಬಳಕೆ ಸ್ವಾಭಾವಿಕವಾಗಿಯೇ ಬಂದಿದೆ. ಸರ್ಕಾರೀ ಹಂತದಲ್ಲಿ ಇಆಫೀಸ್ ಮೂಲಕ ಯುನಿಕೋಡ್ ಮಾತ್ರ ಬಳಸುವಂತೆ ಮಾಡಲಾಗುತ್ತಿದೆ, ಆದರೆ ಅನುಷ್ಠಾನಕ್ಕೆ ಸಮಯ ಬೇಕು. ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಯುನಿಕೋಡ್ ಫಾಂಟುಗಳನ್ನು ಬಳಸುವ ಶಿಸ್ತು/ಭಾಷಾ ತಂತ್ರಜ್ಞಾನದ ಶಿಷ್ಠತೆಗಳನ್ನು ಬಳಸುವ ರೂಢಿ ಇಲ್ಲ. ಇದು ನಿಧಾನವಾಗಿ ನಮ್ಮ ಮುದ್ರಣ, ಮಾಧ್ಯಮಗಳಿಗೂ ಹರಿದು ಬಂದಿದ್ದು ಪ್ರಶ್ನೆ ಲಭ್ಯವಿರುವ ಚೆಂದದ ಕನ್ನಡ ಫಾಂಟುಗಳ ನಡುವೆ ನಿಲ್ಲುತ್ತದೆ.

4.     ಕನ್ನಡದ ಮತ್ತು ಕನ್ನಡಕ್ಕೆ ಬೇಕಿರುವ ತಂತ್ರಜ್ಞಾನಗಳಿಗೆ ಪರರನ್ನು ಅವಲಂಭಿಸುವ ಅಗತ್ಯತೆ

(1) ಡೆಸ್ಕ್ಟಾಪ್ ಪಬ್ಲಿಷಿಂಗ್, ಕೀಬೋರ್ಡ್, ಇತ್ತೀಚಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇವುಗಳಿಗೆ ಅಡೋಬ್, ಗೂಗಲ್, ಆಫಲ್ ನಂತಹ ತಂತ್ರಾಂಶಗಳನ್ನು ನೆಚ್ಚಿ ಕುಳಿತಿದ್ದೇವೆ, ಇವುಗಳು ಉಚಿತವಾಗಿ ಸಿಗಲಿ ಎನ್ನುತ್ತೇವೆ

(2) ಹಣಕೊಟ್ಟು ಕೊಂಡರೂ ಇವುಗಳಲ್ಲಿನ ಕನ್ನಡ ಸಂಬಂಧಿತ ತೊಂದರೆಗಳನ್ನು ಎತ್ತಿ ತೋರಿಸುವಲ್ಲಿ ಸೋತಿದ್ದೇವೆ. ಉತ್ತರ ಕಂಡುಕೊಳ್ಳಲಿಕ್ಕೆ ಹಿಂಜರಿಯುತ್ತೇವೆ. ಗ್ರಾಹಕ ಚಳುವಳಿಯಿಂದ ಕಲಿತದ್ದನ್ನು ಈಗ ಕನ್ನಡ ಡಿಜಿಟಲ್ ಚಳುವಳಿಗೆ ಅಳವಡಿಸುವ ಅವಶ್ಯಕತೆ ಇದೆ.

(3) ಕಿಂಡಲ್ ಇತ್ಯಾದಿಗಳಲ್ಲಿ ಕನ್ನಡ ಕೇಳುತ್ತೇವೆಯೇ ಹೊರತು, ಅದಕ್ಕೆ ಅವಶ್ಯವಿರುವ ಮೂಲ ಸಂಪನ್ಮೂಲ ಸೃಷ್ಟಿಯ ಕಡೆ ಗಮನ ಹರಿಸುತ್ತಿಲ್ಲ. – ಇತ್ತೀಚೆಗೆ ಪುಸ್ತಕಗಳ ಮಟ್ಟಿಗೆ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾ ಬಂದಿದ್ದೇವೆ – ನಮ್ಮದೇ ಉದ್ಯೋಗ ಸೃಷ್ಟಿಯ ಕೆಲಸ ಪ್ರಾರಂಭವಾಗಿರುವುದು ಸಮಾಧಾನಕರ ಸಂಗತಿ

(4)  ಕನ್ನಡ ಬರೆಯುವವರಿಗೆ, ಓದುಗರಿಗೆ ಭಾಷೆಯ ಎಲ್ಲ ಪರಿಕರಗಳು ಇನ್ನೂ ಲಭ್ಯವಾಗಿಲ್ಲ. – ಗೂಗಲ್ ಬಳಸಿ ಮಾತಿನ ಮೂಲಕವೇ ಕನ್ನಡ ಮೂಡಿಸುತ್ತೇವೆ. ಆದರೆ ನಮಗೆ ಅವಶ್ಯವಿರುವ ನಿಘಂಟುಗಳು, ಸ್ಪೆಲ್‌ಚೆಕರ್, ಗ್ರಾಮರ್ ಚೆಕರ್ – ಪದಜಾಣ, ನುಡಿ ಜಾಣ ಇತ್ಯಾದಿಗಳು ಲಭ್ಯವಾಗಿಲ್ಲ.

5.     ಸಮುದಾಯ ಸಹಭಾಗಿತ್ವದ, ಸಂಶೋಧನೆಯಲ್ಲಿಯ ಕೊರತೆ

1.     ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು (Free & Open Source) ಕನ್ನಡೀಕರಿಸಿ, ಕನ್ನಡದ ತಂತ್ರಾಂಶಗಳನ್ನು ಸೃಷ್ಟಿಕೊಳ್ಳುವ ಬದಲು ಬಹುರಾಷ್ಟ್ರೀಯ ಸಂಸ್ಥೆಗಳ ತಂತ್ರಾಂಶಗಳನ್ನು ಕನ್ನಡದಲ್ಲಿ ನೋಡುವ ಆಸೆ ವ್ಯಕ್ತಪಡಿಸುತ್ತೇವೆ. ಕೆಲಸವನ್ನೂ ಮಾಡುತ್ತೇವೆ.

2.     ‍ಭಾಷಾ ಸಂಶೋಧನೆ ‍ವಿಶೇಷಚೇತನರಿಗೆ, ಜನಸಾಮಾನ್ಯರಿಗೆ, ಪ್ರವಾಸಿಗರಿಗೆ, ಪರ ಊರಿನ ಕೆಲಸಗಾರರಿಗೆ ಕನ್ನಡ ಕಲಿಸಿ, ಕನ್ನಡದಲ್ಲೇ ಸೇವೆ ಓದಗಿಸುವ, ಕನ್ನಡದಲ್ಲೇ ಸೇವೆ ಪಡೆದುಕೊಳ್ಳುವ ಅವಕಾಶಗಳನ್ನು ಸಂಶೋಧಿಸಿ ಅಳವಡಿಸುವಲ್ಲಿನ ಕೊರತೆ ಎದ್ದು ಕಾಣುತ್ತಿದೆ.

6.     ಒಟ್ಟಾರೆ ಕನ್ನಡದಲ್ಲಿ ಭೌದ್ದಿಕ ಆಸ್ತಿ ಮಹಾಪೂರವೇ ಇದ್ದರೂ – ಮೂಲದಲ್ಲಿ ಮಾಹಿತಿಯ, ಜ್ಞಾನದ ಆಕರಗಳ ಕೊರತೆ ಪೂರೈಯಲ್ಲಿದೆ – ಜೊತೆಗೆ ಜನಸಾಮಾನ್ಯನಿಗೆ ಅದು ಎಟುಕುವ ಹಾಗಿದೆಯೇ ಎನ್ನುವ ಪ್ರಶ್ನೆಯನ್ನೂ ನಾವು ಹಾಕಿಕೊಳ್ಳಬೇಕಿದೆ. – ಸಮುದಾಯ ಸಹಭಾಗಿತ್ವಕ್ಕೆ ಇದು ಮುಖ್ಯವಾಗುತ್ತದೆ.

7.     ಕನ್ನಡದ ತಂತ್ರಜ್ಞಾನ ಸಂಬಂಧಿ ಉದ್ಯೋಗ ಸೃಷ್ಟಿ ಹಾಗೂ ಉದ್ದಿಮೆಗಳ ಸೃಷ್ಟಿಗೆ – ಸರ್ಕಾರ ಬೆನ್ನೆಲುಭಾಗಿ ನಿಲ್ಲಬೇಕು – ಭಾಷೆಗೆ ಸಂಬಂಧಿಸಿದ ಸಂಶೋಧನೆಗೆ ಮುಕ್ತ ಅವಕಾಶಗಳನ್ನೂ, ಸಂಪನ್ಮೂಲಗಳನ್ನೂ, ವಿಶ್ವವಿದ್ಯಾನಿಯಗಳು, ಭಾಷಾ ಸಂಸ್ಥೆಗಳ ಜೊತೆ ಸೇರಿ ಲಭ್ಯವಾಗಿಸಬೇಕು.

 

ಡಿಜಿಟಲ್ ಅಂಗಳ ಈ ಎಲ್ಲಾ ಕೊರತೆಗಳನ್ನು ನೀಗಿಸಿಕೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿದ್ದರೂ, ಅದನ್ನು ಸಮಗ್ರವಾಗಿ ಅಪ್ಪಿಕೊಳ್ಳುವೆಡೆಗೆ ಕನ್ನಡಿಗ ತನ್ನನ್ನು ತಾನು ದುಡಿಸಿಕೊಳ್ಳಬೇಕಿದೆ.

ನಾವು ಮಾಡಬೇಕಿರುವುದು ಏನು? ಎಲ್ಲಿಂದ ಪ್ರಾರಂಭಿಸೋಣ?

 

ವಿದ್ಯಾರ್ಥಿಗಳು -> ಶಾಲಾಕಾಲೇಜುಗಳು ->  ವಿಶ್ವವಿದ್ಯಾನಿಲಯಗಳು -> ಸಂಘಸಂಸ್ಥೆಗಳು -> ಸರ್ಕಾರಜನಸಾಮಾನ್ಯರು 


ಎಲ್ಲರೂ ಸೇರಿ ಡಿಜಿಟಲ್ ಕನ್ನಡ ಕಟ್ಟೋಣ


ಜನಸಾಮಾನ್ಯ‌ರು


#ಬರೆಯಿರಿ ಕನ್ನಡದಲ್ಲೇ ಬರೆಯಿರಿ. kanglish ನಲ್ಲಿ ಬೇಡ! ಯುನಿಕೋಡ್ ಬಳಸಿ ಬರೆಯಿರಿ. ನೆನಪಿರಲಿ ಯುನಿಕೋಡ್ ಸಾಫ್ಟ್‌ವೇರ್ ಅಲ್ಲ.!


1.     ತಮ್ಮಲ್ಲಿನ ಜ್ಞಾನವನ್ನು ಜಗತ್ತಿಗೆ ತೆರೆದಿಡ ಬಹುದು – ಬ್ಲಾಗಿಂಗ್, ಪುಸ್ತಕಗಳನ್ನು ಬರೆಯುವುದು, ತಮ್ಮಲ್ಲಿರುವ ಪುಸ್ತಕಗಳನ್ನು, ‌ಹಸ್ತಪ್ರತಿಗಳನ್ನು, ಡಿಜಿಟಲ್ ಆರ್ಕೈವ್‌ ಪ್ರಾಜೆಕ್ಟ್‌ಗಳಿಗೆ ಒದಗಿಸುವುದು – ಅವುಗಳು ಮುಂದಿನ ತಲೆಮಾರಿಗೆ ದೊರೆಯುವಂತೆ ನೋಡಿಕೊಳ್ಳುವುದು.

2.     ಡಿಜಿಟಲ್ ಲೋಕದಲ್ಲೂ ಕನ್ನಡದಲ್ಲಿ ವ್ಯವಹರಿಸಲು ಹಿಂಜರಿಯಬಾರದು

3.     ಸೇವೆಗಳನ್ನು ಪಡೆದಾಗ ನಮ್ಮ ಭಾಷೆಯ ಬಳಕೆ ಮತ್ತು ಉಪಯೋಗದಲ್ಲಿ ಇರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು 

4.     ಕನ್ನಡಕ್ಕೆ ಇರಲೇ ಬೇಕು ಎನಿಸುವ ತಾಂತ್ರಿಕ ಸೌಲಭ್ಯಗಳನ್ನು ಕೇಳಿ ಪಡೆಯಲು ಮುಂದಾಗಬೇಕು 

5.     ಭಾಷೆಗೆ ಸಂಬಂಧಿಸಿದ ಸೇವೆಗಳನ್ನು, ಸೌಕರ್ಯಗಳನ್ನು ಒದಗಿಸುವ ಉದ್ದಿಮೆಗಳನ್ನು ಸ್ಥಾಪಿಸಬೇಕು – ಪ್ರವಾಸೋಧ್ಯಮ, ಶಿಕ್ಷಣ ಇತ್ಯಾದಿ – ನಮ್ಮ ಲೋಕಲ್ ವೋಕಲ್ ಮಂತ್ರದಲ್ಲಿ ಪ್ರಾಯೋಗಿಕವಾಗಿ ಕಲಿತವರಿಂದ ತಿಳಿಯುವುದು ಕಲಿಯುವುದು ಮತ್ತು ಕಟ್ಟುವುದು ಬಹಳಷ್ಟೇ ಇದೆ – ಇದಕ್ಕೆ ಈಗ ಕಾಲವೂ ಒದಗಿ ಬಂದಿದೆ ಎನ್ನಬಹುದು. 

6.     ‍ತಾವು ಕೆಲಸ ಮಾಡುವ ಕಡೆಯಿಂದಲೇ ಒಂದಷ್ಟು ಕನ್ನಡದ ಸಾಧ್ಯತೆಗಳನ್ನು ಹುಡುಕಿಕೊಳ್ಳಬಹುದು. 

7.     ಭಾಷೆ ಇತ್ಯಾದಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೆಡೆಸಿಕೊಂಡು ಬರುತ್ತಿರುವ ಚರ್ಚೆಗಳನ್ನು ಸಮುದಾಯದ ಯೋಜನೆಗಳನ್ನಾಗಿ ಪರಿವರ್ತಿಸಿ ಅವುಗಳನ್ನು ಸಾಕಾರಗೊಳಿಸುವ ಸಾಧ್ಯತೆಗಳನ್ನು ಮನಗಾಣಬೇಕು.‍

ಶಾಲಾ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು

1.     ಕನ್ನಡವನ್ನು ಕೇವಲ ಭಾಷೆಯಾಗಿ ಕಲಿಸದೆ, ಅದರ ಸುತ್ತಲಿನ ತಾಂತ್ರಿಕ ಸಾಧ್ಯತೆಗಳನ್ನು ಮನಗಂಡು ಸಮುದಾಯಿಕವಾಗಿ ತಮ್ಮ ಮೂಲಕ ಸಾಹಿತ್ಯದ ಹೊರಗೂ ಕನ್ನಡ ಕಟ್ಟುವ ಕೇಂದ್ರಗಳಾಗಬೇಕು

2.     ತಮ್ಮಲ್ಲಿರುವ ಭಾಷಾ, ಕಲೆ ಹಾಗೂ ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಭಾಷೆಗೆ ಸಂಬಂಧಿಸಿದ ‍ಸಮಸ್ಯೆಗಳನ್ನು ಬಿಡಿಸಲು ಶೈಕ್ಷಣಿಕ ವ್ಯವಸ್ಥೆಯಲ್ಲೇ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು

1.     ಉದಾಹರಣೆಗೆ – ಕಲಾ ವಿದ್ಯಾರ್ಥಿಗಳು ಕನ್ನಡದಲ್ಲಿ ಬಳಕೆಗೆ ಲಭ್ಯವಿಲ್ಲ ಎನ್ನಲಾಗುತ್ತಿರುವ ಫಾಂಟುಗಳನ್ನು ರಚಿಸುವಲ್ಲಿ ತೊಡಬಹುದು. ಚಿತ್ರಕಲಾ ಪರಿಷತ್, ಕಾವಾ ದಂತಹ ಶಿಕ್ಷಣ ಸಂಸ್ಥೆಗಳು ಫಾಂಟುಗಳನ್ನು ರೂಪಿಸುವ ಕಲೆಯನ್ನೇ ವಿಶೇಷ ತರಗತಿಗಳನ್ನೂ, ಶಿಬಿರಗಳನ್ನು ನೆಡೆಸಬಹುದು

2.     ಭಾಷೆ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳು ಕನ್ನಡದ ಉದ್ದಿಮೆಗಳಿಗೆ ಬೇಕಾದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಕಲಿಕೆಯ ಹಂತದಲ್ಲೇ ರೂಪಿಸಲು ಸಾಧ್ಯ ಮಾಡಿಕೊಡುವ ಸ್ಟಾರ್ಟಪ್ ಸಂಬಂಧಿತ ವರ್ಕ್ಸಾಪ್, ಇತ್ಯಾದಿಗಳನ್ನು ನೆಡೆಸಬಹುದು. ಈ ಮೇಲೆ ಹೇಳಿದ ಫಾಂಟುಗಳ ಡಿಸೈನ್‌ಗಳನ್ನು ಕೆಲಸ ಮಾಡುವಂತೆ ಮಾಡುವ ಯೋಜನೆಯೇ ಅನೇಕ ತಂತ್ರಜ್ಞರಿಗೆ ಬಹಳ ಕಾಲದವರೆಗೆ ಉದ್ಯೋಗವನ್ನೂ ನೀಡಬಲ್ಲದು. ಪ್ರಿಂಟ್ ಉದ್ಯಮದಲ್ಲಿ, ಇಪುಸ್ತಕಗಳ ಸೃಷ್ಟಿಯಲ್ಲಿ ವಿಶಿಷ್ಟ ಫಾಂಟುಗಳ ಬಳಕೆಯನ್ನು ತರಬಹುದು

3.     ವಿ.ಟಿ.ಯು, ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ ತಮ್ಮ ವಿದ್ಯಾರ್ಥಿಗಳಿಗೆ ನೀಡುವ ಪ್ರಾಜೆಕ್ಟ್‌ಗಳಲ್ಲಿ ಒಂದಷ್ಟು ನಿರ್ಧಿಷ್ಟ ಸಂಖ್ಯೆಯ ಪ್ರಾಜೆಕ್ಟ್‌ಗಳು ಭಾಷಾ ಸಂಶೋಧನೆಗೆ ಹಾಗೂ ಭಾಷೆಯ ತಾಂತ್ರಿಕ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿರಬೇಕು ಎನ್ನುವ ಪಾಲಿಸಿ ತರಬೇಕು.

4.     ಭಾಷಾ ಸಂಶೋಧನೆಗಳಿಂದ ಲಭ್ಯವಾಗುವ ಭೌದ್ಧಿಕ ಮೌಲ್ಯಗಳನ್ನು ಸಮಾಜದ ಬಳಕೆಗೆ ಸಾಧ್ಯವಾಗಿಸುವ ತಂತ್ರಜ್ಞಾನದ ಅಭಿವೃದ್ಧಿಗೆ ಬಳಸಿಕೊಳ್ಳಲು ಮುಂದಾಗಬೇಕು.

3.     ಇತಿಹಾಸದ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಕನ್ನಡದ ಇತಿಹಾಸ ಪರಂಪರೆಗಳನ್ನು ಉಳಿಸಲು, ಡಿಜಿಟಲ್‌ ರೂಪದಲ್ಲಿ ಕಾಪಿಡುವಂತೆ ಮಾಡಲು ಸಿದ್ಧಗೊಳಿಸಬೇಕಿದೆ. ಇದಕ್ಕೆ ಲೈವ್ ಉದಾಹರಣೆ ಎಂಬಂತೆ ಇನ್ಸ್ಕ್ರಿಪ್ಷನ್ ಆಫ್ ಬೆಂಗಳೂರು ಸಮುದಾಯ ಮಾಡುತ್ತಿರುವ ಕೆಲಸಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಮ್ಯಾಪಿಂಗ್ ತಂತ್ರಜ್ಞಾನ, ತ್ರೀಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಇತ್ಯಾದಿಗಳನ್ನು, ಡಿಜಿಟಲ್ ಆರ್ಕೈವಿಂಗ್ ತಂತ್ರಜ್ಞಾನಗಳನ್ನು ಇವರುಗಳಿಗೆ ಶೈಕ್ಷಣಿಕವಾಗಿ ಕಲಿಸಲು ಸಾಧ್ಯವಿದ್ದು – ಕನ್ನಡದಲ್ಲಿ ಅಗಬೇಕಿರುವ ಕೆಲಸಗಳನ್ನು ಕಲಿಕೆಯ ಹಂತದಲ್ಲೇ ಪ್ರಾಜೆಕ್ಟ್ ರೂಪದಲ್ಲಿ ಕೈಗೆತ್ತಿಕೊಳ್ಳಬಹುದಾಗಿದೆ. – ಸಮುದಾಯದ ಜೊತೆಗೆ ಕಲೆತು ಕೆಲಸ ಮಾಡುವ ಅವಕಾಶ ವಿಶ್ವವಿದ್ಯಾನಿಲಯಗಳಿಗೂ, ವಿದ್ಯಾರ್ಥಿಗಳಿಗೂ ಡಿಜಿಟಲ್ ಜಗತ್ತಿನಲ್ಲಿ ವಿಪುಲವಾಗಿವೆ.

4.     ಮುಖ್ಯವಾಗಿ ಮುಕ್ತ ಜಗತ್ತಿಗೆ ತೆರೆದುಕೊಳ್ಳಬೇಕಿದೆ – Open Educational Resources (OER), Open Knowledge initiatives ಮೂಲಕ ಜಗತ್ತು ಕನ್ನಡ ಕರ್ನಾಟಕದಿಂದ ಪಡೆದ ಮಹತ್ವದ ಜ್ಞಾನವನ್ನು ಜಗತ್ತಿನ ಇತರೆ ವಿಶ್ವವಿದ್ಯಾನಿಲಯಗಳು ಡಿಜಿಟಲ್ ಜಗತ್ತಿನಲ್ಲಿ ಕನ್ನಡಿಗರಿಗೆ ದೊರೆಯುವಂತೆ ಮಾಡುತ್ತಿದ್ದಾರೆ.

1.     ‍ಟ್ಯೂಬಿನ್ಗನ್ ಯುನಿವರ್ಸಿಟಿ ತನ್ನಲ್ಲಿನ ಎಪಿಗ್ರಾಫಿಯ ಕರ್ನಾಟಿಕ ಇತ್ಯಾದಿಗಳನ್ನು ಗುಟೆನ್ಬರ್ಗ್ ಸಂಗ್ರಹದಿಂದ ತೆಗೆದು ಡಿಜಿಟಲೀಕರಿಸಿ ಕನ್ನಡಿಗರಿಗೆ ಮುಕ್ತವಾಗಿ ದೊರೆಯುವಂತೆ ಮಾಡಿದೆ

2.     ‍ಗೂಗಲ್ ತನ್ನ ಟೆಸೆರಾಕ್ಟ್  ಓಸಿಆರ್ ತಂತ್ರಾಂಶದ ಕನ್ನಡದ ಟೆಸ್ಟ್ ಡೇಟಾ ಮುಕ್ತವಾಗಿರಿಸಿದೆ

3.     ‍ಕನ್ನಡದ ನಿಘಂಟುಗಳು ಭಾರತದ ಹೊರಗೂ ಅಭಿವೃದ್ಧಿಗೊಂಡಿದ್ದು ‍ಭಾಷಾ ಅಧ್ಯಯನಕಾರರಿಗೆ ಮುಕ್ತವಾಗಿರಿಸಿದ್ದಾರೆ – ಡಿಜಿಟಲ್ ಮಾಧ್ಯಮದ ಮೂಲಕ ಕನ್ನಡ ಭಾಷೆಯ ಆಳ ತಿಳಿಯುವ ಮತ್ತೊಂದು ಅವಕಾಶ ನಿಘಂಟುಗಳ ಮೂಲಕವೇ – ಸಮುದಾಯ ಜೊತೆಗಾದರೆ ಇದನ್ನು ಸಮಗ್ರವಾಗಿ ಭಾಷಾ ತಂತ್ರಜ್ಞಾನದ ಒಳಿತಿಗೆ ಬಳಸಿಕೊಳ್ಳುವಲ್ಲಿ ಮತ್ತಷ್ಟು ದಶಕಗಳನ್ನು ಕಳೆಯಬೇಕಿಲ್ಲ.

4.     ವಿಕಿಪೀಡಿಯ, ಆರ್ಕೈವ್.ಅರ್ಗ್ ನಂತಹ ಸಮುದಾಯಗಳು ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನ ಬೆಳವಣಿಗೆ ಹಾಗೂ ನೈಜ ಅಳವಡಿಕೆಯ ಉತ್ತಮ ಉದಾಹರಣೆಗಳು – ಸಂಸ್ಥೆಗಳು, ವಿದ್ಯಾರ್ಥಿಗಳು, ಸಮುದಾಯ ಹಾಗೂ ಸಮುದಾಯದ್ದೇ ಗವರ್ನೆನ್ಸ್ ಇರುವ ಈ ವೇದಿಕೆಗಳು ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಶಕ್ತಿ ಹಾಗೂ ಅದರ ಮೂಲಕ ಜಗತ್ತಿನಾದ್ಯಂತ ಭಾಷೆಯ ಸುತ್ತ ನಾವು ಮಾಡುವ ಕೆಲಸಗಳನ್ನು ಪಸರಿಸುವ ಅವಕಾಶಗಳನ್ನು ಕೊಡುತ್ತಿವೆ. ಈ ಸಹಭಾಗಿತ್ವಗಳ ಕಡೆಗೆ ಮುಕ್ತವಾಗಿ ಗಮನ ಹರಿಸಬಹುದು.

 

ಡಿಜಿಟಲ್ ಭಾಷೆಗೆ ಒಗ್ಗದ ಕನ್ನಡ ಬಹಳಷ್ಟಿದೆ 

ವಿದ್ಯಾರ್ಥಿಗಳಿಗೆ

1  . ಕನ್ನಡ ಕಲಿಯಲು, ಟೈಪಿಸಲು ಪ್ರೇರೇಪಣೆ ನೀಡಬೇಕಿದೆ‍

2  ಅವರಿಗೆ ಕಾಲಕ್ಕೆ ತಕ್ಕಂತೆ ಜ್ಞಾನದಾಸೋಹ ಏರ್ಪಡಿಸಲು ವಿಜ್ಞಾನ, ತಂತ್ರಜ್ಞಾನದ ಪುಸ್ತಕಗಳನ್ನು (ಅದರಲ್ಲೂ ಕನ್ನಡದ ಪುಸ್ತಕಗಳನ್ನು) ಅಂಗೈಯ್ಯಲ್ಲಿ ಸಿಗುವಂತೆ ಮಾಡಬೇಕಿದೆ – ಜಗತ್ತಿನ Open Knowledge Initiatives ಮಾದರಿ

3  ಭಾಷಾ ತಂತ್ರಜ್ಞಾನದ ಮೂಲಕ ಇತಿಹಾಸ, ಸಂಸ್ಕೃತಿ, ಪರಂಪರೆಯ ಮರುಸೃಷ್ಟಿಯ ಜೊತೆಗೆ ಬದುಕು ಕಟ್ಟಿಕೊಳ್ಳಲು ಬೇಕಿರುವ ಕನಸುಗಳ ಸಾಧ್ಯತೆಗಳನ್ನು ತೋರಿಸಿಕೊಡಬೇಕಿದೆ – ತಂತ್ರಜ್ಞಾನ ಇದಕ್ಕೆ ಉತ್ತಮ ವರ್ಚುಅಲ್ ಎಮ್ಯುಲೇಟರ್‌ಗಳನ್ನೂ, ಪ್ರಾಯೋಗಿಕ ಸವಾಲುಗಳನ್ನು ಶೈಕ್ಷಣಿಕವಾಗಿಯೂ ಇವು ಬದುಕುವುದನ್ನು ಕಲಿಸಬಲ್ಲವು.

4  ದಿನನಿತ್ಯದ ಭಾಷೆಗೆ ಸಂಬಂಧಿಸಿದ ಪ್ರಶೆಗಳಿಗೆ ಉತ್ತರ ಕಂಡುಕೊಳ್ಳಲು ತಾಂತ್ರಿಕವಾಗಿ ಸಂಶೋಧನೆಗೆ ಒಡ್ಡುವುದನ್ನು ರೂಡಿಸಿಕೊಳ್ಳಬೇ‌ಕು

 

ಸರ್ಕಾರ  – ಜನರಿಗಾಗಿ ಜನರೊಡನೆ ಕನ್ನಡದ ಕೆಲಸ ಮಾಡಬೇಕಿದೆ

 

        ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೆ ಇತ್ತೀಚೆಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದಾಗಿ ಹೇಳಿದೆ – ಇವುಗಳಲ್ಲಿ ಸಮುದಾಯದ ಪಾತ್ರ ಹೆಚ್ಚಿನದಾಗಿರಬೇಕು – ಮೊದಲಿಗೆ ಕನ್ನಡದ ಮಾಹಿತಿ ತನ್ನ ಹಂತದಲ್ಲೇ ಯುನಿಕೋಡ್ ನಲ್ಲಿ ಬರುವಂತೆ ನೋಡಿಕೊಳ್ಳಬೇಕು. – ಇದು ಸರ್ಕಾರ ಮುದ್ರಿಸುವ ಪುಸ್ತಕಗಳಿಗೂ ಅನ್ವಯಿಸಬೇಕು.

        ಮುಕ್ತ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿರುವ ಸರ್ಕಾರ ಅದರ ಲೈಸೆನ್ಸಿಂಗ್(ಪರವಾನಗಿ) ಇತ್ಯಾದಿಗಳ ಬಗ್ಗೆ ಜನರಿಗೆ ಮುಕ್ತ ಮಾಹಿತಿ ಕೊಟ್ಟು ಸಮುದಾಯ ಸಹಭಾಗಿತ್ವವನ್ನು ಬೆಂಬಲಿಸಬೇಕು

        ಸ್ಟಾರ್ಟಪ್ಗೆ ಬೆಂಬಲ ನೀಡುವ ಹಂತದಲ್ಲಿ ಅವು ನಮ್ಮ ಸ್ಥಳೀಯ ಸಂಸ್ಕೃತಿ, ಭಾಷೆ, ಜನಜೀವನದ ಬೆಳವಣಿಗೆಗೆ ಎಷ್ಟು ಪೂರಕವಾಗಿ ಕನ್ನಡ ಭಾಷೆಯ ಮೂಲಕವೇ ಸೇವೆ ನೀಡಬಲ್ಲವು ಎಂಬುದನ್ನೂ ಒಂದು ಮಾನದಂಡವಾಗಿ ನೋಡಬೇಕು

        ಕಾಲೇಜು/ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ  Open Educational Resources (OER), Open Knowledge initiatives ‌ಗಳನ್ನು ಮೊದಲುಗೊಂಡಂತೆ ಪ್ರಾಯೋಗಿಕ ಕಲಿಕೆಗೆ, ಜೊತೆಗೆ ಭಾಷಾ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾತಾವರಣ ರೂಪಿಸಬೇಕು – ಇದು ಭಾಷಾ ತಂತ್ರಜ್ಞಾನ ಸಂಬಂಧಿತ ಸವಾಲುಗಳನ್ನು ಕಾಲೇಜು/ವಿಶ್ವವಿದ್ಯಾನಿಲಯಗಳಲ್ಲಿ ಸ್ಪರ್ಧೆಗಳು, ಸ್ಟಾರ್ಟಪ್ ಹಬ್‌ಗಳ ಮೂಲಕವೂ ಉತ್ತರಗಳನ್ನು ಕಂಡುಕೊಳ್ಳುವ ಕೆಲಸ ಮಾಡಬೇಕು. ರಿಸರ್ಚ್ ಯೋಜನೆಗಳಿಗೆ ಸ್ಕಾಲರ್ ಶಿಪ್ ಕೊಡುವ ಆಯಾಮ  ನೀಡಬಹುದು.

        ಕನ್ನಡ ಕಾಯಕ ವರ್ಷವಾಗಿ ಸರ್ಕಾರ ಘೋಷಿಸಿದೆ – ಇದರ ಅಂಗವಾಗಿ ಸರ್ಕಾರದ ಜೊತೆಗೆ ನಾಗರೀಕರು ಹೇಗೆ ಭಾಗವಹಿಸಬಹುದು, ಅದಕ್ಕೆ ತಾನು ನೀಡುವ ಬೆಂಬಲ ಇತ್ಯಾದಿಗಳನ್ನು ಘೋಷಿಸಿ – ಕನ್ನಡದ ಕಾಯಕ ನಿತ್ಯದ ಕಾಯಕ ಮತ್ತು ಎಲ್ಲರ ಕಾಯಕ ಎನ್ನುವತ್ತ ಸಮುದಾಯದ ಜೊತೆಗೆ ನೆಡೆಯಬೇಕು.

        ಸ್ಟಾರ್ಟಪ್ / ಸ್ವಯಂ ಉದ್ಯೋಗಗಳನ್ನು ಸೃಷ್ಟಿಸುವ , ಶಿಕ್ಷಣ, ಸಾರಿಗೆ, ಆರೋಗ್ಯ ಇತ್ಯಾದಿ ಕಾನುನುಗಳನ್ನು ಸೃಷ್ಟಿಸುವ ಸರ್ಕಾರ ಇದೆಲ್ಲ ಮಾಹಿತಿಯನ್ನು ಕನ್ನಡದಲ್ಲೇ ಮೊದಲು ಸೃಷ್ಟಿಸಿ ನಂತರ ಅದನ್ನು ಬೇರೆ ಭಾಷೆಯಲ್ಲಿ ಹಂಚಿಕೊಳ್ಳಬೇಕು ಆಗ ಕನ್ನಡದ ತಾಂತ್ರಿಕ ತೊಂದರೆಗಳು ಅಲ್ಲಿ ಗೋಚರಿಸುತ್ತವೆ – ಅವುಗಳನ್ನು ಸರಿಪಡಿಸಲು ತಾನು ಬಳಸುವ ತಂತ್ರಾಂಶಗಳಲ್ಲಿ ಕನ್ನಡ ಕಂಡುಕೊಳ್ಳುವ ಮತ್ತದನ್ನು ಕನ್ನಡಿಗರಿಗೂ ತಲುಪಿಸುವ ಕೆಲಸವನ್ನು ಮಾಡಬೇಕು

        ತನ್ನ ಜಾಲತಾಣಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ, ಗೂಗಲ್ ಟ್ರಾನ್ಸ್ಲೇಟ್ ಇತ್ಯಾದಿಗಳನ್ನು ಬಳಸುವುದನ್ನು ನಿಲ್ಲಿಸಬೇಕು – ಇದು ಸಂಘ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಕಡತಗಳನ್ನು ಯುನಿಕೋಡ್‌ನಲ್ಲೇ ಸಿದ್ಧಪಡಿಸಬೇಕು .


ಭಾಷಾ ತಂತ್ರಜ್ಞಾನದ ಕೃಷಿ ಹಾಗೂ ಭಾಷಾ ಸಂಶೋಧನೆಯ ಕೃಷಿಗಳ ಮೂಲಕ 

ಭಾಷೆಗೆ ಸಂಬಂಧಿತ ಉದ್ಯೋಗಗಳನ್ನೂ, ಉದ್ದಿಮೆಗಳನ್ನೂ ಕಟ್ಟಿ ಬೆಳೆಸೋಣ. 


ಡಿಜಿಟಲ್ ಕನ್ನಡದ ಸುತ್ತ 

ನವೋದಯದ ಕಾವ್ಯ

#ಬರೆಯೋಣ


ವಿಜಯ ಕರ್ನಾಟಕದ ವರದಿ