ಫೆಬ್ರವರಿ ೨೪, ೨೦೧೨ – ಸಂಯುಕ್ತ ಕರ್ನಾಟಕ ಅಂಕಣ
ಟೆಕ್ ಕನ್ನಡದಲ್ಲಿ ಇದುವರೆಗೂ ಓದಿದ ಲೇಖನಗಳಲ್ಲಿನ ಅನೇಕ ಟೆಕ್ನಾಲಜಿ ಜಾರ್ಗನ್ (ಸಾಮಾನ್ಯನಿಗೆ ಅರ್ಥವಾಗದ ತಂತ್ರಜ್ಞಾನ ಪದಗಳ) ಬಳಕೆ ನೋಡಿ ಹೆದರಿದಿರೇ? ಹಾಗಿದ್ದಲ್ಲಿ ಕ್ಷಮಿಸಿ. ಈ ಲೇಖನದಲ್ಲಿ ತಂತ್ರಜ್ಞಾನವನ್ನು ನಿಮ್ಮ ಅಂಗೈ ಬೆರಳುಗಳ ಅಳತೆಗೆ ತಕ್ಕಂತೆ ತಿರುವಲು ಪ್ರಯತ್ನಿಸುತ್ತೇನೆ. ತಂತ್ರಜ್ಞಾನವೆಂದರೆ ಆಂಗ್ಲ / ಇಂಗ್ಲೀಷ್ ಭಾಷೆ ಗೊತ್ತಿದ್ದರೆ ಮಾತ್ರವೇ ಅದರ ಬಳಕೆ ಸಾಧ್ಯ ಎನ್ನುವುದು ನಿಜವಲ್ಲ. ತಂತ್ರಜ್ಞಾನಕ್ಕೆ ಯಾವುದೇ ಭಾಷೆಯ ತೊಡಕು ಇಲ್ಲ. ಒಂದು ಉದಾಹರಣೆ ನೋಡೋಣ. ಮೊನ್ನೆ ಪಾಂಡಿಚೆರಿಗೆ ಹೋಗಿದ್ದಾಗ ದೋಣಿ ವಿಹಾರದ ಸಮಯದಲ್ಲಿ ತೆಗೆದ ಚಿತ್ರವಿದು. ಅಪ್ಪ , ಅಮ್ಮ, ಅಜ್ಜ , ಅಜ್ಜಿ ಎಲ್ಲರೂ ಇದ್ದರು ಈ ಹುಡುಗಿಯ ಕೈನಲ್ಲಿದ್ದ ಮೊಬೈಲ್ ಸಂತಸದ ಗಣಿಯಾಗಿತ್ತು. 
ಇದರಿಂದ ನಾವು ಕಲಿಯುವುದೇನೆಂದರೆ ತಂತ್ರಜ್ಞಾನವನ್ನು ಕಲಿಯುವ ಆಸ್ತೆ, ಕುತೂಹಲದಿಂದ ಮೊದಲಾಗಿ, ಹೊಸ ವಿಷಯಗಳನ್ನು ಕಲಿಯಲು ಮುಕ್ತ ಮನಸ್ಸು ಹೊಂದಿದ್ದರೆ ಯಾರು ಬೇಕಾದರೂ ಏನನ್ನಾದರೂ ಕಲಿಯಲು ಸಾಧ್ಯ. ಅದಕ್ಕೆ ಬೇಕಿರುವ ಸಹಾಯ ತಂತಾನೇ ನಿಮ್ಮ ಮುಂದೆ ಬರಲು ಪ್ರಾರಂಭಿಸುತ್ತದೆ. 
ಮೊದಲನೆಯದಾಗಿ ತಂತ್ರಜ್ಞಾನ ಎಂದರೆ ನಮ್ಮ ಮನಸ್ಸಿಗೆ ಬರುವುದು ಕಂಪ್ಯೂಟರ್ ಇತ್ಯಾದಿ. ಹಾಗಿದ್ದಲ್ಲಿ ಇಂದು ಯಾರಿಗೆ ಕಂಪ್ಯೂಟರ್ ಬರುತ್ತದೆ ಎಂದರೆ ನಿಮ್ಮಲ್ಲಿ ಅನೇಕರು ಒಬ್ಬರ ಮುಖ ಒಬ್ಬರು ನೋಡಬಹುದು. ಮತ್ತೊಂದು ಸಣ್ಣ ಪ್ರಶ್ನೆ. ನಿಮ್ಮಲ್ಲಿ ಎಷ್ಟು ಜನರ ಬಳಿ ಮೊಬೈಲ್ ಇದೆ? ಅಥವಾ ಎಷ್ಟು ಜನರ ಮನೆಯಲ್ಲಿ ರಿಮೋಟ್ ಇರುವ ಟಿ.ವಿ ಇದೆ? ಬಹಳಷ್ಟು ಜನರ ಉತ್ತರ ‘ನನ್ನಲ್ಲಿ’ ಎಂಬುದೇ ಆಗಿರುತ್ತದೆ ಅಲ್ಲವೇ? ಹಾಗಿದ್ದಲ್ಲಿ ನಿಮ್ಮೆಲ್ಲರಿಗೂ ಕಂಪ್ಯೂಟರ್ ನೊಂದಿಗೆ ಕೂಡ ಮಾತನಾಡಲು/ ವ್ಯವಹರಿಸಲು ಬರುತ್ತದೆ ಎಂದಾಯಿತು. ಇನ್ನು ಇವೆರಡೂ ಇಲ್ಲದವರು ನಿಮ್ಮ ಕೈಗಡಿಯಾರವನ್ನು ನೋಡಿಕೊಳ್ಳಿ. ಅನೇಕರು ಇಂದಿಗೂ ಎಲೆಕ್ಟ್ರಾನಿಕ್ ಗಡಿಯಾರ ಅಂದರೆ ಮುಳ್ಳಿನ ಬದಲು ಪರದೆಯ ಮೇಲೆ ಕಪ್ಪು ಅಕ್ಷರದಲ್ಲಿ ಅಂಕಿಗಳನ್ನು ಬಳಸಿ ಸಮಯವನ್ನು ತೋರಿಸುವ ಗಡಿಯಾರ / ವಾಚ್ ಬಳಸುತ್ತೀರಲ್ಲವೇ? ನೀವೂ ಕೂಡ ಮೇಲಿನ ಪಟ್ಟಿಗೇ ಅಂದರೆ ಕಂಪ್ಯೂಟರ್ ಅಕ್ಷರಸ್ತರು ಅಥವಾ ತಂತ್ರಜ್ಞಾನ ಬಳಸುವವರ ಪಟ್ಟಿಗೆ ಸೇರುತ್ತೀರಿ. 
ಈಗ ಸ್ವಲ್ಪ ಯೋಚಿಸೋಣ. ನೀವು ಟಿ.ವಿ, ಮೊಬೈಲ್ , ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲು ಪ್ರಾರಂಭಿಸಿದ್ದು ಹೇಗೆ? ನಿಮಗಿದ್ದ ಯಾವುದೋ ಒಂದು ಅವಶ್ಯಕತೆಯ ಸಲುವಾಗಿ, ಕೆಲಸಗಳನ್ನು ಬೇಗ ಬೇಗ ಮಾಡಿಕೊಳ್ಳುವಂತಾಗಲು ನಾವೆಲ್ಲ ಯಂತ್ರಗಳ ಬಳಕೆಗೆ ಮುನ್ನುಡಿ ಬರೆದೆವು. ಒಮ್ಮೆ ಮಾರುಕಟ್ಟೆಯ ಚೆಂದದ ಅಂಗಡಿಗಳಲ್ಲಿ ನೋಡಿದ ಯಂತ್ರೋಪಕರಣಗಳು ಮನೆಗೆ ಬರುತ್ತಿದ್ದಂತೆಯೇ, ಅದು ಕಾರ್ಯನಿರ್ವಹಿಸಲು ಏನು ಮಾಡಬೇಕು, ಹೇಗೆ ಅದನ್ನು ಕೆಲಸಕ್ಕೆ ಹಚ್ಚುವುದು ಎಂಬ ಬಗ್ಗೆ ಸ್ವಲ್ಪ ತಲೆ ಕೆಡಿಸಿಕೊಳ್ಳುತ್ತೀವಲ್ಲವೇ? ಅದೂ ಕಷ್ಟವಾದಾಗ ಪಕ್ಕದ ಮನೆಯವರನ್ನೋ, ನಿಮ್ಮ ಗುಂಪಿನ ಬುದ್ದಿವಂತ ಎನಿಸಿಕೊಂಡ ಗೆಳೆಯನಿಗೋ ಕರೆ ಹಚ್ಚುತ್ತೀರಲ್ಲವೇ? ಅಂತೂ ಅದೇ ದಿನ ನಿಮ್ಮ ಮನೆಗೆ ಬಂದ ಹೊಸ ಯಂತ್ರ ಪೂಜೆಯ ಜೊತೆಗೆ ಕಾರ್ಯನಿರ್ವಹಿಸಲೇಬೇಕು. ಮರುದಿನದಿಂದ ಅವುಗಳ ಸಂಪೂರ್ಣ ಬಳಕೆಗೆ ಮನೆಯ ಎಲ್ಲರೂ ತಯಾರು. ಕಲಿಕೆ ಸುಲಭ ಅಲ್ಲವೇ?