ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು ಗೊಣಗಲಾರಂಭಿಸಿದ.
ಬೆಳಿಗ್ಗೆ ಎದ್ದು ಮೇಲ್ ಚೆಕ್ ಮಾಡಿದರೆ ಗೆಳೆಯನ ಮೇಲ್. ಸಬ್ಜೆಕ್ಟ್ ಲೈನ್‌ನಲ್ಲಿದ್ದ ವಿಷಯ ನೋಡಿ ಗಾಬರಿಯಾಗಿ ಮೇಲ್ ತೆರೆದರೆ ‘ನಾನು ನಿನ್ನೆಯಷ್ಟೇ ಲಂಡನ್‌ಗೆ ಬಂದೆ. ನಿನಗೆ ತಿಳಿಸಲೂ ಸಾಧ್ಯವಾಗಿರಲಿಲ್ಲ. ನನ್ನ ಬ್ಯಾಗ್ ಕಳೆದು ಹೋಗಿದೆ. ಪಾಸ್‌ಪೋರ್ಟ್, ಕ್ರೆಡಿಟ್ ಕಾರ್ಡ್ ಎಲ್ಲವೂ ಅದರಲ್ಲೇ ಇತ್ತು. ನನ್ನ ಕಿಸೆಯಲ್ಲಿದ್ದ ಸ್ವಲ್ಪ ದುಡ್ಡು ಬಿಟ್ಟರೆ ಬೇರೆ ದುಡ್ಡೂ ಇಲ್ಲ. ಅದೃಷ್ಟವಶಾತ್ ನನ್ನ ಒಂದು ಡೆಬಿಟ್ ಕಾರ್ಡ್ ಪರ್ಸ್‌ನಲ್ಲೇ ಇದೆ. ದಯವಿಟ್ಟು ನನ್ನ ಅಕೌಂಟಿಗೆ 100 ಪೌಂಡ್ ಟ್ರಾನ್ಸ್‌ಫರ್ ಮಾಡು. ಬಂದ ತಕ್ಷಣ ಕೊಡುತ್ತೇನೆ’.
ನಿನ್ನೆ ರಾತ್ರಿ ಪಾರ್ಟಿಯಲ್ಲಿ ಸಿಕ್ಕವನು ಇಂದು ಬೆಳಗಾಗುವ ಹೊತ್ತಿಗೆ ಲಂಡನ್ ತಲುಪಿರಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದ ನಾನು ತಕ್ಷಣ ಅವನಿಗೆ ಫೋನ್ ಮಾಡಿದರೆ ನಿದ್ರೆಗಣ್ಣಿನಲ್ಲೇ ಫೋನ್ ಎತ್ತಿಕೊಂಡು ಬೆಳ್ಳಂಬೆಳಗ್ಗೆ ಏನು ನಿನ್ನ ಕಿರಿಕಿರಿ ಎಂದು ಗೊಣಗಲಾರಂಭಿಸಿದ. ಅವನ ಗೊಣಗಾಟದ ಮಧ್ಯೆಯೇ “ನಿನ್ನ ಇ-ಮೇಲ್ ಹ್ಯಾಕ್ ಆಗಿದೆ. ನಿನ್ನ ಅಡ್ರೆಸ್ ಬುಕ್‌ನಲ್ಲಿದ್ದ ಎಲ್ಲರಿಗೂ ನೀನು ಲಂಡನ್‌ನಲ್ಲಿ ಬ್ಯಾಗು, ಪಾಸ್‌ಪೋರ್ಟ್ ಕಳೆದುಕೊಂಡು ಅನಾಥನಾಗಿದ್ದೀಯ ಎಂಬ ಸಂದೇಶ ಹೋಗಿದೆ. 
ಅರ್ಜೆಂಟ್ ಈ  ಅಕೌಂಟ್‌ಗೆ ಕಳುಹಿಸಿ ಎಂದ ಒಂದು ನಂಬರ್ ಕೂಡಾ ಕೊಟ್ಟಿದ್ದಾರೆ” ಎಂದು ವಿವರಿಸಿದಾಗ ಅವನ ನಿದ್ರೆ ಸಂಪೂರ್ಣ ಬಿಟ್ಟು ಹೋಯಿತು. ಅದೃಷ್ಟವಶಾತ್ ಅವನಲ್ಲಿ ಅಡ್ರೆಸ್ ಬುಕ್‌ನ ನಕಲೊಂದು ಕಂಪ್ಯೂಟರ್‌ನಲ್ಲೇ ಇದ್ದುದರಿಂದ ತನ್ನ ಇನ್ನೊಂದು ಇ-ಮೇಲ್ ಐಡಿ ಬಳಸಿ ಎಲ್ಲರಿಗೂ ತನ್ನ ಮೇಲ್ ಹ್ಯಾಕ್ ಆಗಿದೆ. ಯಾರೂ ದುಡ್ಡು ಕಳುಹಿಸಬೇಡಿ ಎಂಬ ಸಂದೇಶ ಕಳುಹಿಸಿದ. ಯಾರೂ ಹಣ ಕಳೆದುಕೊಳ್ಳುವ ಸಂದರ್ಭ ಎದುರಾಗಲಿಲ್ಲ.
ಭಯೋತ್ಪಾದಕ ಇ-ಮೇಲ್

ಮುಂಜಾನೆ 4:30 ರ ಸಮಯ, ಹೊರಗೆ ಯಾರೋ ಬಾಗಿಲು ತಟ್ಟುತ್ತಿರುವ ಸದ್ದು. ಬಾಗಿಲ ಬಳಿಯ ಕಿಟಕಿ ತೆಗೆದು ನೋಡುತ್ತಿದ್ದವನಿಗೆ ಮನೆಯಿಂದಾಚೆ ನಿಂತಿದ್ದ ಪೋಲೀಸ್ ಪೇದೆ ಕಂಡು ಭಯವಾಯಿತು. ಈ ಹೊತ್ತಿಗೆ ನಮ್ಮ ಕಂಪೆನಿಯ ಮುಖ್ಯಸ್ಥರ ಆದೇಶವೂ ಫೋನ್‌ನಲ್ಲೇ  ಬಂತು ‘ಪೊಲೀಸಿನವರಿಗೇನೋ ಹೆಲ್ಪ್ ಬೇಕಂತೆ ಸ್ವಲ್ಪ ಹೋಗಿ ಬನ್ನಿ’.
ಸ್ಟೇಷನ್‌ಗೆ ಹೋದ ಮೇಲೆ ವಿಷಯ ಬಹಳ ಸರಳ ಎಂದು ಅರ್ಥವಾಯಿತು. ಸ್ಫೋಟವೊಂದರ ಬೆದರಿಕೆ ಇರುವ ಇ-ಮೇಲ್ ನಮ್ಮ ಪ್ರದೇಶದ ಯಾವುದೋ ಕಂಪ್ಯೂಟರ್‌ನಿಂದ ಹೋಗಿತ್ತು. ಇಂಟರ್ನೆಟ್ ಸೇವೆ ಒದಗಿಸುವ ಕಂಪೆನಿಯವರು ಐ.ಪಿ. ನಂಬರ್ ಕೊಟ್ಟು ಪ್ರದೇಶ ಹೇಳಿದ್ದರೇ ಹೊರತು ಯಾವ ಕಂಪ್ಯೂಟರ್‌ನಿಂದ ಹೋಯಿತು ಎಂಬುದನ್ನು ಕಂಡು ಹಿಡಿಯುವುದು ನಮ್ಮಿಂದಾಗದ ವಿಷಯ ಎಂದು ಕೈಚೆಲ್ಲಿದ್ದರು. ಅವರು ಹಾಗೆ ಮಾಡಿದ್ದಕ್ಕೂ ಕಾರಣವಿತ್ತು. ಹಿಂದೊಮ್ಮೆ ತಪ್ಪು ಐ.ಪಿ.ಕೊಟ್ಟು ಕೈ ಸುಟ್ಟುಕೊಂಡಿದ್ದ ಕಂಪೆನಿಯದು. ಆಗ ನಿರಪರಾಧಿಯೊಬ್ಬ ಹಲವು ತಿಂಗಳು ಜೈಲಿನಲ್ಲಿ ಇರಬೇಕಾದ ಸ್ಥಿತಿ ಬಂದಿತ್ತು. 
ಹಾಗಾಗಿ ಅವರು ಈ ಬಗೆಯ ಐಡೆಂಟಿಟಿ ಕಳ್ಳತನ ಕಂಡುಹಿಡಿಯುವ ಪರಿಣತರು ಬೇರೆಯೇ ಇರುತ್ತಾರೆಂದು ಹೇಳಿದ್ದರು. ಅದು ಸುತ್ತಿ ಬಳಸಿ ನಮ್ಮ ಬಳಿಗೆ ಬಂದಿತ್ತು. ಪೊಲೀಸರಿಗೂ ಮತ್ತೊಮ್ಮೆ ತಪ್ಪು ಮಾಡಿ ಟೀಕೆಗೆ ಗುರಿಯಾಗುವ ಮನಸ್ಸಿರಲಿಲ್ಲ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ಇಮೇಲ್ ಕಳುಹಿಸಿರಬಹುದೆಂದು ಭಾವಿಸಲಾಗಿದ್ದ ವ್ಯಕ್ತಿ ಮುಗ್ಧ ಎಂದು ತಿಳಿದುಬಂದಿತ್ತು. ಆದರೆ ಅವನನ್ನು  ಪೂರ್ಣ ನಂಬಲು ಸಾಧ್ಯವಿಲ್ಲದ ಸ್ಥಿತಿ ಪೊಲೀಸರದ್ದು. ತಾಂತ್ರಿಕ ವಿವರಗಳನ್ನು ಸಂಗ್ರಹಿಸುತ್ತಾ ಹೋದಂತೆ ಆತ ಮುಗ್ಧ ಎಂದು ತಿಳಿಯಿತು.
ಆತ ಬಳಸುತ್ತಿದ್ದ ಕಂಪ್ಯೂಟರ್ ಯಾವ ರೀತಿಯಲ್ಲೂ ಸುರಕ್ಷಿತವಾಗಿರಲಿಲ್ಲ.  ಅಷ್ಟೇನೂ ತಂತ್ರಜ್ಞಾನ ತಿಳಿಯದ ಆತ ತನ್ನ ವೈರ್‌ಲೆಸ್ ಲ್ಯಾನ್ ಸೌಲಭ್ಯವಿರುವ ಲ್ಯಾಪ್‌ಟಾಪ್ ಬಳಕೆಗೆ ಅನುಕೂಲವಾಗುವಂತೆ ವೈರ್‌ಲೆಸ್ ಮೋಡೆಮ್ ಖರೀದಿಸಿದ್ದ ಆತ ಅದನ್ನು ಪಾಸ್‌ವರ್ಡ್ ಹಾಕಿ ಸುರಕ್ಷಿತವಾಗಿಟ್ಟರಲಿಲ್ಲ. ಸುತ್ತಮುತ್ತಲಿನ ಮನೆಯವರೆಲ್ಲರೂ ಅದನ್ನು ಆರಾಮವಾಗಿ ಬಳಸಬಹುದಿತ್ತು. ಅನ್‌ಲಿಮಿಟೆಡ್ ಚಂದಾದಾರನಾಗಿದ್ದರಿಂದ ಇಂಟರ್ನೆಟ್ ಬಿಲ್‌ನಲ್ಲೂ ಆತನಿಗೆ ದುರ್ಬಳಕೆ ಗೊತ್ತಾಗುವಂತಿರಲಿಲ್ಲ. 
ಪಾಸ್‌ವರ್ಡ್ ಕದಿಯುವುದು ಹೀಗೆ

ಮೊದಲ ಪ್ರಕರಣದಲ್ಲಿ ಇ-ಮೇಲ್ ಹ್ಯಾಕ್ ಮಾಡಿದ್ದರು. ಎರಡನೇ ಪ್ರಕರಣದಲ್ಲಿ ಅಸುರಕ್ಷಿತ ಇಂಟರ್ನೆಟ್ ಸಂಪರ್ಕವನ್ನು ಭಯೋತ್ಪಾದಕರು ಬಳಸಿಕೊಂಡಿದ್ದರು. ತಂತ್ರಜ್ಞಾನ ಮಾಹಿತಿಯ ಹೆಬ್ಬಾಗಿಲನ್ನು ತೆರೆದಿಟ್ಟಿರುವಂತೆಯೇ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಅವಕಾಶವನ್ನೂ ಒದಗಿಸಿಕೊಟ್ಟಿದೆ. ಪಾಸ್‌ವರ್ಡ್ ಹೇಗೆ ಕದಿಯುವುದು…? ಈ ಪ್ರಶ್ನೆಯನ್ನು ಗೂಗ್ಲ್‌ನಲ್ಲಿ ಹಾಕಿದರೆ ಯಾವ ಇ-ಮೇಲ್ ಅನ್ನೂ ಬೇಕಾದರೂ ಹ್ಯಾಕ್ ಮಾಡುವ ತಂತ್ರಾಂಶಗಳು ನಮ್ಮಲ್ಲಿ ಲಭ್ಯ ಎಂಬ ನೂರೆಂಟು ಲಿಂಕ್‌ಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ. ತಮಾಷೆ ಎಂದರೆ ಇದೂ ಸುಳ್ಳು. ಅಕ್ಷರ, ಚಿಹ್ನೆ, ಸಂಖ್ಯೆಗಳ ಅಗಣಿತ ಜೋಡಣೆಯನ್ನು ಒಂದೊಂದಾಗಿ ಪ್ರಯತ್ನಿಸುತ್ತಾ ಹೋಗುವ ತಂತ್ರಾಂಶ ರೂಪಿಸಲು ಸಾಧ್ಯ. ಆದರೆ ಅದು ಎಲ್ಲಾ ಪಾಸ್‌ವರ್ಡ್‌ಗಳನ್ನೂ ಭೇದಿಸುತ್ತದೆ ಎಂಬುದು ಸಂಪೂರ್ಣ ನಿಜವಲ್ಲ. ಕಳ್ಳರು ಈ ಬಗೆಯ ಸಾಫ್ಟ್‌ವೇರ್‌ಗಳಿಗಿಂತ ಹೆಚ್ಚು ಸುಲಭವಾಗಿ ಮತ್ತು ಕರಾರುವಕ್ಕಾಗಿ ಪಾಸ್‌ವರ್ಡ್ ಭೇದಿಸುವ ತಂತ್ರಗಳನ್ನು ಬಳಸುತ್ತಾರೆ.
ಸೋಷಿಯಲ್ ನೆಟ್‌ವರ್ಕಿಂಗ್ ತಾಣಗಳಾದ ಫೇಸ್‌ಬುಕ್, ಆರ್ಕುಟ್ ನಂಥವುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಾಹಿತಿ ನೀಡುವವರ ಪಾಸ್‌ವರ್ಡ್‌ಗಳನ್ನು ಕದಿಯುವುದು ಸುಲಭ. ಈ ತಾಣಗಳ ಪ್ರೈವಸಿ ಪಾಲಿಸಿ ಅಥವಾ ಖಾಸಗಿ ವಿವರಗಳ ನಿರ್ವಹಣೆಯ ವಿಧಾನಗಳನ್ನು ತಿಳಿದುಕೊಳ್ಳದೆ ನಾವು ಓದಿದ ಶಾಲೆ, ಗೆಳೆಯರು, ಹುಟ್ಟಿದ ದಿನಾಂಕ, ಹುಟ್ಟೂರು, ಕೆಲಸ ಮಾಡಿದ, ಮಾಡುತ್ತಿರುವ ಸಂಸ್ಥೆಗಳ ವಿವರಗಳನ್ನೆಲ್ಲಾ ಅಲ್ಲಿ ಬರೆದಿಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ. ಫೇಸ್‌ಬುಕ್‌ನಂಥ ತಾಣಗಳು ಇದ್ದಕ್ಕಿದ್ದಂತೇ ತಮ್ಮ ಪ್ರೈವಸಿ ಪಾಲಿಸಿಗಳನ್ನು ಬದಲಾಯಿಸಿ ನಿಮ್ಮ ಖಾಸಗಿ ವಿಷಯಗಳನ್ನು ರಾತ್ರೋರಾತ್ರಿ ಬಹಿರಂಗಗೊಳಿಸಿಬಿಡುವ ಅಪಾಯವೂ ಇರುತ್ತದೆ. ಫೇಸ್‌ಬುಕ್ ಇತ್ತೀಚೆಗಷ್ಟೇ ಇಂಥ ಕೆಲಸ ಮಾಡಿತ್ತು. ನಿರ್ದಿಷ್ಟ ವಿಷಯಗಳನ್ನು ನಿರ್ದಿಷ್ಟ ಜನರಿಗೆ ಮಾತ್ರ ತಿಳಿಸುವ ಸೌಲಭ್ಯದ ಸೂಕ್ಷ್ಮಗಳ ಅರಿವಿಲ್ಲದೆ ಹಲವರು ಎಲ್ಲವನ್ನೂ ಎಲ್ಲರೂ ನೋಡಲು ಬಿಟ್ಟು ಬಿಟ್ಟಿರುತ್ತಾರೆ.  ಬಹಳಷ್ಟು ಜನರು ತಮ್ಮ ಹುಟ್ಟಿದ ವರ್ಷ, ದಿನಾಂಕ, ಮಕ್ಕಳ ಹೆಸರು, ಪತ್ನಿ ಅಥವಾ ಪತಿಯ ಹೆಸರು, ಇಷ್ಟವಾಗುವ ಲೇಖಕ, ಪುಸ್ತಕದ ಶೀರ್ಷಿಕೆಯನ್ನೇ ಪಾಸ್‌ವರ್ಡ್ ಮಾಡಿಕೊಂಡಿರುತ್ತಾರೆ. ಪಾಸ್‌ವರ್ಡ್ ಕಳ್ಳರು ಬಯಸುವುದೂ ಇದನ್ನೇ. ಪರಿಣಾಮವಾಗಿ ನೀವು ಮನೆಯಲ್ಲಿ ಕುಳಿತಿರುವಾಗಲೇ ನಿಮ್ಮ ಇ-ಮೇಲ್‌ನಿಂದ ನಿಮ್ಮ ಗೆಳೆಯರಿಗೆಲ್ಲಾ ಅರ್ಜೆಂಟ್ ದುಡ್ಡು ಕಳುಹಿಸಿಕೊಡು ಎಂಬ ಸಂದೇಶಗಳು ಹೋಗಿಬಿಡಬಹುದು.
ಸಾಮಾನ್ಯವಾಗಿ ಇ-ಮೇಲ್ ಕಳ್ಳರು ಮೊದಲಿಗೆ ಮಾಡುವ ಕೆಲಸವೆಂದರೆ ನೀವು ಇ-ಮೇಲ್ ಖಾತೆ ಸೃಷ್ಟಿಸುವ ವೇಳೆ ನೀಡಿರುವ ಪರ್ಯಾಯ ಇ-ಮೇಲ್ ವಿಳಾಸವನ್ನು -ಬದಲಾಯಿಸುವುದು. ಇದರಿಂದಾಗಿ ನೀವು ಹೊಸ ಪಾಸ್‌ವರ್ಡ್‌ಗಾಗಿ ಅಪೇಕ್ಷಿಸಿದರೆ ಅದು ನಿಮಗೆ ದೊರೆಯುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಕೊನೆಗೆ ಉಳಿಯುವುದು ಒಂದೇ ಮಾರ್ಗ. ನೀವು ಇ-ಮೇಲ್ ಸೇವೆಯನ್ನು ಪಡೆದಿರುವ ಸಂಸ್ಥೆಯನ್ನು ಸಂಪರ್ಕಿಸಿ ಈ ಕುರಿತಂತೆ ದೂರು ಕೊಡುವುದು. ಮತ್ತೆ ನಿಮ್ಮ ಹಳೆಯ ಇ-ಮೇಲ್ ವಿಳಾಸವನ್ನು ಪಡೆಯಲು ಮತ್ತಷ್ಟು ಸರ್ಕಸ್‌ಗಳ ಅಗತ್ಯವೂ ಇದೆ. ನೀವು ನಿಯತವಾಗಿ ಸಂಪರ್ಕಿಸುತ್ತಿರುವ ನಾಲ್ಕಾರು ವಿಳಾಸಗಳು ಇತ್ಯಾದಿ ಹಲವು ವಿವರಗಳನ್ನು ನಿಮ್ಮಿಂದ ಪಡೆದು ನಿಮಗೆ ಮತ್ತೆ ಅದೇ ವಿಳಾಸವನ್ನು ಅವರು ಒದಗಿಸುತ್ತಾರೆ. ನೀವು ದೂರುಕೊಟ್ಟ ತಕ್ಷಣ ನಿಮ್ಮ ಹ್ಯಾಕ್ ಆದ ವಿಳಾಸವನ್ನು ಸ್ಥಗಿತಗೊಳಿಸುವುದರಿಂದ ಇ-ಮೇಲ್‌ನ ದುರ್ಬಳಕೆ ತಪ್ಪುತ್ತದೆ.
ಸುರಕ್ಷಾ ಮಾರ್ಗ

ಸುರಕ್ಷಿತ ಪಾಸ್‌ವರ್ಡ್‌ಗಳು ಹೇಗಿರಬೇಕು ಎಂಬುದಕ್ಕೆ ನೂರೆಂಟು ಸಲಹೆಗಳಿವೆ. ಸಾಮಾನ್ಯರು ಮಾಡಬಹುದಾದ ಕೆಲಸವೆಂದರೆ ನೀವು ಕೊಟ್ಟಿರುವ ಪಾಸ್‌ವರ್ಡ್‌ನಲ್ಲಿ ಅಕ್ಷರಗಳು, ಚಿಹ್ನೆಗಳು ಮತ್ತು ಅಂಕೆಗಳು ಇರುವಂತೆ ನೋಡಿಕೊಳ್ಳುವುದು. ಇವಕ್ಕೂ ಸಾರ್ವಜನಿಕವಾಗಿ ಲಭ್ಯವಿರುವ ನಿಮ್ಮ ವೈಯಕ್ತಿಕ ವಿವರಗಳಿಗೂ ಸಂಬಂಧವಿರಬಾರದು. ಹಾಗೆಂದು ಬ್ಯಾಂಕ್ ಅಕೌಂಟ್‌ನ ನಂಬರ್ ನಿಮ್ಮ ಪಾಸ್‌ವರ್ಡ್‌ನಲ್ಲಿ ಇರುವಂತೆ ನೋಡಿಕೊಳ್ಳುವುದಲ್ಲ….! ಹಾಗೆ ಮಾಡಿದರೆ ನಿಮ್ಮ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ.
ಇ-ಮೇಲ್‌ನಲ್ಲಿ ನಿಮಗೆ ಬರುವ ಸಂದೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ನಿಮ್ಮ ಬ್ಯಾಂಕ್‌ನಿಂದ ನಿಮಗೆ ಇ-ಮೇಲ್ ಬಂದಿದ್ದರೆ ಅದಕ್ಕೆ ಉತ್ತರಿಸುವ ಮೊದಲು ಅವರು ಯಾವ ವಿವರಗಳನ್ನು ಕೇಳಿದ್ದಾರೆ? ಆ ವಿವರಗಳು ಅವರಿಗೇಕೆ ಬೇಕಾಗಿರಬಹುದು ಎಂಬುದರ ಸ್ವಲ್ಪ ಯೋಚಿಸಿ. ಯಾವ ಬ್ಯಾಂಕ್ ಕೂಡಾ ನಿಮ್ಮಿಂದ ವೈಯಕ್ತಿಕ ವಿವರಗಳು, ಖಾತೆ ಸಂಖ್ಯೆ ಅದರ ಪಾಸ್‌ವರ್ಡ್ ಇತ್ಯಾದಿಗಳನ್ನಂತೂ ಇ-ಮೇಲ್‌ನಲ್ಲಿ ಕೇಳುವುದಿಲ್ಲ. ಈ ರೀತಿಯ ಸೂಕ್ಷ್ಮವಲ್ಲದ ವಿವರಗಳನ್ನು ಕೇಳಿದ್ದರೂ ಅದು ಬ್ಯಾಂಕ್‌ನಿಂದಲೇ ಬಂದಿದೆ ಎಂಬದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ಉತ್ತರಿಸಬೇಕು. ನಿಮ್ಮ ಬ್ಯಾಂಕ್‌ನ ಹೆಸರಿನಲ್ಲಿ ಒಂದು ಅಕ್ಷರಲೋಪವಾಗಿದ್ದರೂ ಅದು ಸುಳ್ಳು ಇ-ಮೇಲ್ ಸಂದೇಶ. 
ಸೋಷಿಯಲ್ ನೆಟ್‌ವರ್ಕಿಂಗ್ ತಾಣಗಳಲ್ಲಿ ನೀವು ಸಕ್ರಿಯರಾಗಿದ್ದರೆ ನಿಮ್ಮ ವ್ಯವಹಾರಗಳಿಗೆ ಬಳಸುವ ಇ-ಮೇಲ್ ವಿಳಾಸವನ್ನು ಅಲ್ಲಿ ನೀಡಲೇಬೇಡಿ. ಅದಕ್ಕಾಗಿ ಬೇರೆಯೇ ವಿಳಾಸ ಸೃಷ್ಟಿಸಿಕೊಳ್ಳಿ. ಮೇಲ್‌ನಲ್ಲಿ ಬರುವ ಕೊಂಡಿಗಳನ್ನೆಲ್ಲಾ ಕ್ಲಿಕ್ಕಿಸುವ ಮೊದಲು ಎರಡೆರಡು ಬಾರಿ ಯೋಚಿಸಿ. ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡುವ ಮೊದಲು ಅದು ವಿಶ್ವಾಸಾರ್ಹವೇ ಎಂಬುದನ್ನು ಪರಿಶೀಲಿಸಿ. ಒಮ್ಮೆ ಅಂತರ್ಜಾಲಕ್ಕೆ ನೀವು ಸೇರಿಸುವ ಮಾಹಿತಿಯನ್ನು ಸುಲಭದಲ್ಲಿ ಅಲ್ಲಿಂದ ತೆಗೆದು ಹಾಕಲು ಸಾಧ್ಯವಿಲ್ಲ. ಅದರ ಅಗಣಿತ ಪ್ರತಿಗಳು ಎಲ್ಲೆಲ್ಲೋ ಅಡಗಿರಬಹುದು. ಆದ್ದರಿಂದ ಯಾವ ವಿವರ ಅಂತರ್ಜಾಲದಲ್ಲಿರಬೇಕು ಯಾವುದು ಇರಬಾರದು ಎಂಬ ವಿವೇಕ ನಿಮ್ಮದಾಗಿರಬೇಕು.
ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸಂಪರ್ಕದ ಸುರಕ್ಷತೆಗೆ ಹೆಚ್ಚಿನ ಗಮನಹರಿಸಿ. ವಿಂಡೋಸ್ ಬಳಕೆದಾರರಾಗಿದ್ದರೆ ಒಳ್ಳೆಯ ಆ್ಯಂಟಿ ವೈರಸ್ ಇರಲಿ. ಜೊತೆಗೆ ಸಾಫ್ಟ್‌ವೇರ್ ಗಳ ಸುರಕ್ಷತಾ ಪ್ಯಾಚ್‌ಗಳನ್ನು ಅಪ್‌ಡೇಟ್ ಮಾಡಿ. ಮಾಲ್‌ಗಳಲ್ಲಿ ಉಚಿತವಾಗಿ ದೊರೆಯುವ ಇಂಟರ್ನೆಟ್ ಸಂಪರ್ಕ ಬಳಸುವಾಗ ಮಾಹಿತಿ ಕದಿಯಲು ಅವಕಾಶವಿಲ್ಲದಂತೆ ನಿಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ. 
ಮಾಹಿತಿಯನ್ನು ಎನ್ಕ್ರಿಪ್ಟ್ ಅಥವಾ ಬೀಗಹಾಕಿಡುವ ವಿಧಾನಗಳನ್ನು ಬಳಸಿ. ನಿಮ್ಮ ಕಂಪ್ಯೂಟರ್ ಮಾಹಿತಿಯ ಹೆಬ್ಬಾಗಿಲನ್ನು ತೆರೆದಿಟ್ಟಿದೆ ಎಂಬುದು ನಿಜ. ಈ ಬಾಗಿಲಿನ ಮೂಲಕ ಒಳ್ಳೆಯವರು ಒಳ ಬರುವಂತೆ ಕಳ್ಳರೂ ಬರಬಹುದು ಎಂಬುದನ್ನು ಮರೆಯದಿರಿ.

– ಓಂ ಶಿವಪ್ರಕಾಶ್