ಕನ್ನಡ ಸಾಹಿತ್ಯ ಪರಿಷತ್ ತನ್ನ ಶತಮಾನೋತ್ಸವ ಆಚರಣೆಯ ಅಂಗವಾಗಿ ಹೊರತರುತ್ತಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೆಯದಾದ “ವಿಜ್ಞಾನ ತಂತ್ರಜ್ಞಾನ” ಸಂಪುಟ ಶ್ರವಣ ಬೆಳಗೊಳದಲ್ಲಿ ನೆಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಶ್ರೀ ಟಿ.ಆರ್. ಅನಂತರಾಮು ಸಂಪಾದಕತ್ವದಲ್ಲಿ ಅಚ್ಚುಕಟ್ಟಾಗಿ ಹೊರಬಂದಿರುವ ಈ ಪುಸ್ತಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದು ಈ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುತ್ತಿರುವ ಅನೇಕ ಲೇಖಕರ ಬರಹಗಳನ್ನು ಒಳಗೊಂಡಿದ್ದು, ೭೦೦ ಪುಟಗಳಲ್ಲಿ ೪೦೦ಕ್ಕೂ ಹೆಚ್ಚು ಚಿತ್ರಗಳಿಂದ ಕಣ್ಮನ ಸೆಳೆಯುವಂತಿದೆ.

ಚಿತ್ರಗಳು: ಅವಿನಾಶ್ ಬಿ

ಬೇಳೂರು ಸುದರ್ಶನ, ಡಾ. ಯು.ಬಿ  ವೈ ಸಿ ಕಮಲ, ಟಿ.ಜಿ ಶ್ರೀನಿಧಿ, ಅವಿನಾಶ್ ಬಿ, ಜಿ.ಎನ್ ನರಸಿಂಹ ಮೂರ್ತಿ ಮುಂತಾದವರ ಲೇಖನಗಳ ಜೊತೆಗೆ, ‘ವಿಕಿಪೀಡಿಯ‘ ಹಾಗೂ ‘ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಚಳುವಳಿ – ಹಿನ್ನೆಲೆ-ಸ್ವರೂಪ-ಪ್ರಸಕ್ತ ಪರಿಸ್ಥಿತಿ‘ ಬಗ್ಗೆ ನನದೂ ಎರಡು ಲೇಖನಗಳು ಸ್ವತಂತ್ರ ಸಂಸ್ಕೃತಿಯ (Free Culture) ಇತಿಹಾಸ ಹಾಗೂ ಪ್ರಸಕ್ತ ಪರಿಸ್ಥಿತಿಯ ಮಾಹಿತಿಗಳನ್ನು ಹಂಚಿಕೊಳ್ಳುತ್ತವೆ. 
ಚಳುವಳಿಗಳ ಇತಿಹಾಸದ ಜೊತೆಗೆ ಕನ್ನಡ ಮತ್ತು ತಂತ್ರಜ್ಞಾನದ ಅಭಿವೃದ್ದಿಯಲ್ಲಿ ನೆಡೆದಿರುವ ಕೆಲಸಗಳ ಬಗ್ಗೆ ಈ ಲೇಖನಗಳಲ್ಲಿ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ. ಮಾಹಿತಿಯನ್ನು ಒದಗಿಸಲು ಮೊದಲು ಮಿತಿಯನ್ನು ಒದಗಿಸಿದ್ದರೂ, ನಂತರ ಅದನ್ನು ಸ್ವಲ್ಪ ಸಡಿಲಿಸಿದ್ದರಿಂದ ಇತ್ತೀಚಿನ ಕಾರ್ಯಗಳ ಬಗ್ಗೆ ಬರೆಯಲು ಸಾಧ್ಯವಾಗಿದೆ. ತಂತ್ರಾಂಶ ಬಳಕೆ ಹಾಗೂ ಅಭಿವೃದ್ದಿಯ ಬಗ್ಗೆ ವಿವಿಧ ಮಾಹಿತಿ ಆಕರಗಳ ಮೂಲಕ ಕನ್ನಡದ ಬೆಳವಣಿಗೆಯನ್ನು ಒಂದೆಡೆ ದಾಖಲಿಸ ಬೇಕಾಗಿರುವ ಅವಶ್ಯಕತೆ ನನಗೆ ಈ ಲೇಖನಗಳನ್ನು ಬರೆಯುವಾಗ ಎದ್ದು ಕಂಡಿತು. ಮುಂದಿನ ದಿನಗಳಲ್ಲಿ ಈ ಕೆಲಸಕ್ಕೆ ಮುಂದಾಗುವ ಆಲೋಚನೆಯೂ ಇದೆ. ಇದು ಖಂಡಿತವಾಗಿಯೂ ಸಮುದಾಯವೇ ಸೇರಿ ಮಾಡ ಬೇಕಿರುವ ಕೆಲಸ ಕೂಡ.

ಈ ಪುಸ್ತಕಕ್ಕೆ ಲೇಖನ ಬರೆಯಲು ಪ್ರೇರೇಪಿಸಿ, ನಿರಂತರವಾಗಿ ನಮ್ಮ ಬೆನ್ನ ಹಿಂದಿದ್ದು ಪ್ರೋತ್ಸಾಹಿಸಿದ ಶ್ರೀ ಟಿ.ಆರ್.ಅನಂತರಾಮು ಅವರಿಗೂ, ಇಂತಹ ಪ್ರಯತ್ನವೊಂದಕ್ಕೆ ಕೈ ಹಾಕಿ, ವಿಜ್ಞಾನ ಹಾಗೂ ತಂತ್ರಜ್ಞಾನದ ಬರವಣಿಗೆಗಳಿಗೂ ಮಹತ್ವವನ್ನು ಕೊಡಲು ಮುಂದಾದ ಕನ್ನಡ ಸಾಹಿತ್ಯ ಪರಿಷತ್ತಿಗೂ ನನ್ನ ಧನ್ಯವಾದಗಳು. ಈ ಪುಸ್ತಕ ಸಾಹಿತ್ಯ ಪರಿಷತ್ತಿನಲ್ಲೀಗ ಖರೀದಿಗೆ ಲಭ್ಯವಿದೆ.