ವಾರಾಂತ್ಯದಲ್ಲಿ ಬೀದರ್‌ನಲ್ಲಿದ್ದಾಗ ಅಲ್ಲಿನ ಯುವ ಫೋಟೋಗ್ರಫಿ ಸೊಸೈಟಿಯ ಸದಸ್ಯರೊಡನೆ ಮಾತನಾಡುವ ಅವಕಾಶ ಸಿಕ್ಕಿತು. ಅವರಲ್ಲಿ ಕೆಲವರು ಈಗಾಗಲೇ ವಿಕಿಪೀಡಿಯ, ವಿಕಿಮೀಡಿಯ ಕಾಮನ್ಸ್‌ಗೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುವುದನ್ನು ಕೇಳಿ ಖುಷಿಯೂ ಆಯಿತು. ಅವರ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ ಬೀದರ್ ವಿಕಿಪೀಡಿಯ ಗುಂಪಿನಲ್ಲಿ ಒಂದಾಗುವಂತೆ ಹೇಳುತ್ತಿದ್ದಾಗ ರಿಷಿಕೇಷ್ ಬಹಾದ್ದೂರ್ ದೇಸಾಯಿ ಅವರು ತೆಗೆದ ಚಿತ್ರ. Wikipedians discussing with members of Bidar photography society ಬೀದರ್ ಇತಿಹಾಸ, ಕಲೆ, ಪರಿಸರ ಇತ್ಯಾದಿಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ವಿಕಿ ಕಾಮನ್ಸ್‌ನಲ್ಲಿ ಈ ತಂಡ ಇನ್ಮುಂದೆ ತಮ್ಮ ಕೊಡುಗೆಗಳನ್ನು ನೀಡಲಿದೆ. ಪ್ರಜಾವಾಣಿಯಲ್ಲಿ ಭಾನುವಾರ ೬, ಡಿಸೆಂಬರ್ ೨೦೧೫ ರಂದು ಪ್ರಕಟಗೊಂಡ ಲೇಖನ‘ಕನ್ನಡದಲ್ಲೇ ಮಾಹಿತಿ ಹಂಚಿಕೊಳ್ಳಿ’ Sun, 12/06/2015 – 15:29 ಬೀದರ್: ಪ್ರತಿಯೊಬ್ಬರು ಇಂದು ತುರ್ತು ಹಾಗೂ ಅಗತ್ಯ ಮಾಹಿತಿಗೆ ವಿಕಿಪಿಡಿಯಾದ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ಪ್ರಾದೇಶಿಕ ಭಾಷೆಗಳಲ್ಲೂ ಮಾಹಿತಿ ಲಭಿಸುವಂತಾಗಲು ಸ್ಥಳೀಯರು ವಿಕಿಪಿಡಿಯಾದಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಬೇಕು ಎಂದು ವಿಕಿಪಿಡಿಯಾದ ಸಂಚಾಲಕ ಓಂಶಿವಪ್ರಕಾಶ ಹೇಳಿದರು. ಶನಿವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹಿಂದಿ ಹಾಗೂ ಮಳಿಯಾಳಿಯಲ್ಲಿ ಮಾತ್ರ ಹೆಚ್ಚು ಮಾಹಿತಿ ಲಭ್ಯ ಇದೆ. ಕನ್ನಡದಲ್ಲೂ ಎಲ್ಲ ಬಗೆಯ ಹಾಗೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವಂತಾಗಬೇಕು. ಈ ದಿಸೆಯಲ್ಲಿ ಇನ್ನು ಸಾಕಷ್ಟು ಕಾರ್ಯ ಆಗಬೇಕಿದೆ. ಅಂಗೈಯಲ್ಲಿ ಮಾತೃ ಭಾಷೆಯಲ್ಲೇ ಎಲ್ಲ ಬಗೆಯ ಮಾಹಿತಿ ದೊರೆಯುವಂತಾಗಲು ಸ್ಥಳೀಯರು ಸಹಕಾರ ನೀಡಬೇಕು ಎಂದು ಹೇಳಿದರು. ವಿಕಿಪಿಡಿಯಾದಲ್ಲಿ ಎಲ್ಲ ಸಂದರ್ಭದಲ್ಲೂ ಹೆಚ್ಚಿನ ಮಾಹಿತಿ ಸೇರಿಸುವ, ತಪ್ಪು ಮಾಹಿತಿ ತೆಗೆದು ಹಾಕುವ ಹಾಗೂ ವ್ಯಾಕರಣವನ್ನೂ ಸರಿಪಡಿಸುವ ಅವಕಾಶ ಇರುತ್ತದೆ. ಒಂದೇ ವಿಷಯದ ಬಗೆಗೆ ಹೆಚ್ಚು ಜನರು ಮಾಹಿತಿ ಹಂಚಿಕೊಳ್ಳುವುದರಿಂದ ಅಪ್‌ಲೋಡ್‌ ಮಾಡುವುದರಿಂದ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ತಿಳಿಸಿದರು. ವನ್ಯಜೀವಿ ಛಾಯಾಗ್ರಾಹಕರು ಸಹ ಅಪರೂಪದ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ತಮ್ಮ ಹೆಸರಿನಲ್ಲೇ ವಿಕಿಪಿಡಿಯಾದಲ್ಲಿ ಅಪ್‌ಲೋಡ್‌ ಮಾಡಬಹುದು. ವಿಕಿಪಿಡಿಯಾ ವೀಕ್ಷಿಸುವ ಪಕ್ಷಿತಜ್ಞರು ಅವುಗಳ ಬಗೆಗೆ ಉಲ್ಲೇಖಿಸುವುದರಿಂದ ಅಲ್ಲಿ ಮಾಹಿತಿ ಹಂಚಿಕೊಳ್ಳುವ ಸಮೂಹವೇ ನಿರ್ಮಾಣವಾಗುತ್ತದೆ. ಎಲ್ಲ ವಯೋಮಾನವದವರೂ ಪಕ್ಷಿಗಳ ಬಗೆಗೆ ಚಿತ್ರ ಸಹಿತ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.