ಕರಡಿಯ ಕೂದಲಿಗಿಂತಲು ದಟ್ಟ
ಇತ್ತದು ತಲೆಯ ಮೇಗಣ ಸುತ್ತ
ಕಡಿದದನೆಸೆಯಲು ನನಗಾದ್ ಆಸೆ
ಕರೆದೊರಟಿತ್ತೆನ್ನ ಸಲೂನಿನ ಕಡೆಗೆ

ನಾಲ್ಕು ಗೋಡೆ ನಡುವಿನಲೊಬ್ಬ
ನಿಂತಿದ್ದ, ಜೊತೆಗೆ ನಿಲುಗನ್ನಡಿ ಸುತ್ತ
ಕಟ ಕಟ ಕತ್ತರಿ ಜಳಪಿಸಿ ಆತ
ಬನ್ರಿ ಕೂಡಿ….ನನಗೆ ಕೇಳಿಸಿತ್ತ

ಇವನಾರೋ ತಿಳೀದು ನನಗೆ
ಹಳಬರ ಬಾಯಿಗೆ ಕೆಳವರು ಇವರು
ಇವರಲೂ ಇಂದು ಕೆಲ ಮೇಲ್ಮನೆಯವರು
ಜಾವೇದ್ ಹಬೀಬ್ ಗೊತ್ತಿಲ್ಲವೆ ನಿಮಗೆ

ಕತ್ತರಿ ನೆಡೆಸಿತ್ ಕರಾಮತ್ ಅಲ್ಲಿ
ಮಾತಿನ ಸುತ್ತ ಹುಡುಗ ಮಾಡಿದ ಚೌರ
ಓದಿಲ್ಲಾ ಸಾರ್ ಜ್ಯಾಸ್ತಿ ನಾನು..
ನೀವು ದಿನಾ ಪೂರಾ ಮಾಡೋದ್ ಏನು?

ಮುಗಿವಷ್ಟರಲ್ಲಿ ಕತ್ತರಿ ಆಟ
ಹೇಳಿ ನೀವು ನಿಮಗೆ ಬೇಕಾದ್ದೇನು…
ಹೇಳದೆ ಮರೆತಿರೋ ಅಷ್ಟೇ ಮತ್ತೆ..
ವೆಂಕಟರಮಣನ ಬುರುಡೆಯೆ ಗಟ್ಟಿ

ಇಷ್ಟೇ ಅಲ್ಲ ಸಲೂನಿನ ಕಥೆ
ಕೇಳಲೆ ಇಲ್ಲ ಎಣ್ಣೆ ಮಸಾಜಿನ ಮಿತಿ
ತಟ ತಟ ಎಣ್ಣೆಯ ತಟ್ಟುವನೀತ
ತಲೆ ಬೇನೆಯ ಹೊರದೂಡುವನು

ಬರಿ ಚೌರವೆ ಅಲ್ಲ, ಇದು ಹೈಟೆಕ್ ಸಲೂನ್
ಮೈ ಕೈ ಜೊತೆಗೆ ನಿಮ್ಮ ಮುಖಕೂ ಮಸಾಜ್
ಪಿಂಪಲ್? ಇರುವುದು ಸಿಂಪಲ್ ಸೊಲ್ಯೂಶನ್
ನಿಮ್ಮ ಜೇಬಿಗೆ ಮಾತ್ರ ಸೂಪರ್ ಸೆನ್ಸೇಷನ್

ಸಲೂನ್ ಇರೋದ್ ಬರಿ ಸ್ಟೈಲಿಗೆ ಅಲ್ಲ…
ಸ್ಟೈಲ್, ನಿಮ್ಮ ವೇಷಕ್ಕಿದು ಭೂಷಣವು
ಕುರೂಪಿಯೂ ಕೊನೆಗಾಗುವ ಖಾನ್!
ಹೀರೋ ಆದರೂ ಅಡ್ಡಿಯೆ ಇಲ್ಲ

ತಾಸು ಮುಗಿಯಿತು ದೌಡಾಯಿಸು ಮನೆಗೆ
ಬಿಸಿ ಬಿಸಿ ನೀರು ಕಾದಿಹುದು
ಜಳಕದ ನಂತರ ಹೊರಡು ಯಾತ್ರೆ
ಕಣ್ ಕಣ್ ಬಿಟ್ಟಾರು ಲಲನೆಯರು