ಸಸ್ಯಕಾಶಿಯ ನಡುವೆ ಒಂದು ಮುಂಜಾನೆ
ನಾಲ್ಕು ಹೆಜ್ಜೆಯ ಹಾಕಿ ಪ್ರಕೃತಿಯ ಸವಿದೆ
ಪಕ್ಷಿ ಸಂಕುಲದ ಚಿಲಿಪಿಲಿಯ ಜೊತೆಗೆ
ನಲಿದಿತ್ತು ಅಳಿಲಿನ ಮರಿಯೂ ಕೆಳಗೆ

ಕಣ್ಣಿಗೆ ತಂಪೆರೆವ ಹೂ, ಚಿಗುರ ಜೊತೆಗೆ
ಅಲ್ಲಲ್ಲಿ ತಂಪೆರೆವ ಎಲೆಗಳ ದಟ್ಟಹೊದಿಗೆ
ಹಸಿರು ಹಾಸಿನ ಗರಿಕೆಯಾ ಸೊಬಗು
ರವಿಯ ಕಿರಣಗಳೋ ಅದು ತಂದಿತ್ತು ಬೆರಗು

ಕೆರೆ ನೀರ ನರ್ತನವ ನೋಡಿಯೇ ಸವಿಯೋ
ಮೀನು, ಬಾತುಗಳಿವೆ ಇಲ್ಲಿ ನೀ ಆಟವಾಡೋ
ಮೂಡಣದ ರವಿಯಾ ಬೆಳ್ಳಿಕಿರಣಕೆ ಇಲ್ಲಿ
ಮೈ ಒಡ್ಡಿ ನಿಂತಿವೆ ಕೊಕ್ಕರೆ , ಬೆಳ್ಳಕ್ಕಿ ನೋಡೋ

ಬೆಳ್ಳಂಬೆಳಗೆ ಚಳಿಗೆ ಹೆದರದೆ ಬಂದೆ
ಚಳಿಬಿಟ್ಟ ಎಷ್ಟೋ ಮಂದಿಯ ಕಂಡೆ
ಲವಲವಿಕೆ ಮೈಗೂಡಿ ಒಡನಾಡಿಯಾಯ್ತು
ಮತ್ತಷ್ಟು ಹೊಸಬೆಳಗ ಸೆರೆಹಿಡಿದೂ ಆಯ್ತು

ತಿಳಿದು ತಿಳಿಯದೆಯೋ  ಇಲ್ಲಿ ಬರದಿದ್ದೆ ನಾನು
ಎಳೆದೊಯ್ದುದವರಿಗೆ ಈ ನಾಲ್ಕು ಸಾಲು
ಸಾಗಿತ್ತು ಪಾಠ ಬಾಗಿಲೆಡೆ ಸಾಗುವವರೆಗೆ
ವಿಖ್ಯಾತ ಈ ಸ್ಥಳ ತಿಳಿದಿದೆಯೆ ನಿಮಗೆ?