ಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳನೋಟ

ಸಿಂಗಾಪುರದ ನ್ಯಾಷನಲ್ ಲೈಬ್ರರಿ ಒಳಹೊಕ್ಕು ನೋಡುವುದೇ ಪುಸ್ತಕ ಪ್ರಿಯರಿಗೆ ಒಂದು ರೀತಿಯ ರೋಮಾಂಚನ. ನಾವು ಇಲ್ಲಿಗೆ ಬಂದಿಳಿದ ದಿನ, ಮಕ್ಕಳಿಗೆಂದೇ ಪುಸ್ತಕ ಓದಿ ಹೇಳುವ ಕಾರ್ಯಕ್ರಮವಿತ್ತು. ಮಕ್ಕಳು ಸಿದ್ಧಪಡಿಸಿದ ಚಿತ್ರಗಳು, ಮಾಡೆಲ್ ಇತ್ಯಾದಿ, ಅವರು ನೆಡೆಸಿಕೊಟ್ಟ ಕಥೆ ಹೇಳುವ ಕಾರ್ಯಕ್ರಮ ಇತ್ಯಾದಿಗಳ ಜೊತೆಗೆ ಅಲ್ಲಿದ್ದ ವ್ಯವಸ್ಥಿತ ಪುಸ್ತಕ ಬಂಡಾರವನ್ನು ನೋಡುತ್ತಾ ಸಮಯ ಕಳೆದಿದ್ದೆವು. ಏರ್‌ಕಂಡೀಷನ್ ಕಟ್ಟದ ಪೂರಾ ಪುಸ್ತಕಗಳು, ಡ್ರಾಮಾ ವೇದಿಕೆ ಇತ್ಯಾದಿಗಳು. ಜೊತೆಗೆ ಬೆಳಗ್ಗೆ ಇಂದ ರಾತ್ರಿ ೯:೩೦ ವರೆಗೆ ಕಾಲ ಕಳೆಯಲು ಅದರ ಜೊತೆಗೇ ಬೆಸೆದಿರುವ ಕ್ಯಾಫಿಟೇರಿಯ ಇತ್ಯಾದಿಗಳು ಓದುಗರನ್ನು ಆಲ್ಲೇ ಸೆರೆ ಹಿಡಿಸಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. 

ಬೇಂದ್ರ ಅವರ ವಿಮರ್ಶೆ ಪುಸ್ತಕದ ಮಾಹಿತಿ
ಇದೆಲ್ಲಕ್ಕಿಂತ ತುಂಬಾ ಮೆಚ್ಚುಗೆ ಆದದ್ದು, ಬುಕ್ ಎಕ್ಸ್ಚೇಂಜ್ ಸೌಲಭ್ಯ. ನೀವು ಓದಿ ಮುಗಿಸಿದ ಪುಸ್ತಕವನ್ನು (ಲೈಬ್ರರಿ ಇಂದ ಪಡೆದದ್ದನ್ನಲ್ಲ!) ಬೇರೆಯವರಿಗೆ ಓದಲು ಉಚಿತವಾಗಿ ನೀಡುವ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ರಮ. ಪ್ರತಿ ದಿನವೂ ಅನೇಕರು ಇಲ್ಲಿ ಪುಸ್ತಕಗಳನ್ನು ಪೇರಿಸಿದರೆ, ಅದನ್ನು ತೆಗೆದುಕೊಂಡು ಓದುವ ಜನರೂ ಅಷ್ಟೇ ಮಂದಿ. ನೂಕು ನುಗ್ಗಲಿಲ್ಲ. ವ್ಯವಸ್ಥಿತವಾದ ೬x4 ರ ಪುಟ್ಟ ಕಪಾಟು ಪುಸ್ತಕಗಳನ್ನು ಜೋಡಿಸಿಡಲು ಹೇಳಿ ಮಾಡಿಸಿದ್ದಂತ್ತಿದೆ. 
ಕುವೆಂಪುರವರ Meenakshi’s Private Tutor ಇಂಗ್ಲೀಷ್ ಅನುವಾದದ ಮಾಹಿತಿ
ಲೈಬ್ರರಿಯಿಂದ ಪಡೆದ ಪುಸ್ತಕಗಳನ್ನು ಹಿಂಪಡೆಯಲು ದಿನದ ೨೪ ತಾಸೂ ಅದಕ್ಕೇ ಮೀಸಲಾದ ಕಲೆಕ್ಷನ್ ಬಾಕ್ಸುಗಳಿವೆ. ಆಡಿಯೋ/ವಿಡಿಯೋ, ಮಕ್ಕಳಿಗೆಂದೇ ಗ್ರೀನ್ ಜೋನ್‌ನಲ್ಲಿ ಸುಸಜ್ಜಿತ ಮಕ್ಕಳ ಗ್ರಂಥಾಲಯ. ಅವರೇ ಪುಸ್ತಕಗಳನ್ನು ಹುಡುಕಿಕೊಳ್ಳಲು ಪುಟಾಣಿ ಕಂಪ್ಯೂಟರ್‌ಗಳು ಅವರ ಕೈಗೆಟುಕುವಂತೆ ಲಭ್ಯ. 
ಇದೆಲ್ಲದರ ಮಧ್ಯೆ ಕನ್ನಡದ ಪುಸ್ತಕಗಳನ್ನು ಹುಡುಕಿದಾಗ ಸಿಕ್ಕ ಈ ಪುಸ್ತಕಗಳ ಮಾಹಿತಿಯನ್ನೊಮ್ಮೆ ಗಮನಿಸಿ ನೋಡಿ. ಮಾಹಿತಿಯನ್ನು ತಮಿಳು ಹಾಗೂ ಇಂಗ್ಲೀಷ್ ಎರಡರಲ್ಲೂ ನೀಡಲಾಗಿದೆ. ಕನ್ನಡವನ್ನು ತಂತ್ರಜ್ಞಾನದ ಜೊತೆ ಬಳಸಿಕೊಳ್ಳಲು ಹೆಣಗುತ್ತಿರುವಾಗ, ಇಂತಹ ದ್ವಿಭಾಷಾ ಸೂತ್ರ ಅಳವಡಿಸಿಕೊಳ್ಳಲು ಜಗತ್ತಿನ ಬೇರೆಡೆಗಳಲ್ಲಿ ಹೇಗೆ ಮತ್ತು ಏಕೆ ಆಲೋಚಿಸಲಾಗುತ್ತಿದೆ ಎನ್ನುವುದನ್ನು ನಾವು ನೋಡಿ ಕಲಿಯಬೇಕಿದೆ. 
ಪುಸ್ತಕಗಳನ್ನು ಅಲ್ಲಲ್ಲಿ ಜನರಿಗೆ ಲಭ್ಯವಾಗುವಂತೆ ಮಾಡುವುದು, ಜನರು ಅದನ್ನು ಸದುಪಯೋಗ ಪಡಿಸಿಕೊಂಡು, ಮತ್ತೆ ಬೇರೆಯವರಿಗೆ ನೀಡುತ್ತಾರೆ ಎಂದು ಇಲ್ಲಿನ ವ್ಯವಸ್ಥೆಗಿರುವ ನಂಬಿಕೆ – ನಂಬಿಕೆಯನ್ನು ಉಳಿಸಿಕೊಳ್ಳುವ ನಡವಳಿಕೆ. ಇವು ನಮ್ಮಲ್ಲೂ ಸಾಧ್ಯವಾಗಬೇಕು. ನಾವದನ್ನು ಸಾಧ್ಯವಾಗಿಸಬೇಕು. 
ಸಿಂಗಾಪುರದ ವಿಕ್ಟೋರಿಯಾ ಬೀದಿಯಿಂದ…