ಬೆಳ್ಳಕ್ಕಿ ಜೋಡಾಗಿ ಹಾಡಿ ಕುಣಿದಾವೆ
ಬಾನಲ್ಲಿ ತಮ್ಮದೇ ಆಟ ನೆಡೆಸಾವೆ
ಹಾರುತ್ತ, ಹಾಡುತ್ತಾ ಕೂಡಾಗಿ ಜಿಗಿಯುತ್ತ,
ಮೂಡಣದಿ ಚಿತ್ತಾರ ಬರೆದಾವೆ…
ಕಂದಮ್ಮ ಗಳಿಗೆ ಕಾಳನುಣಿಸ್ಯಾವೆ
ಅವ ನೋಡು, ಎಲ್ಲರೊಳಗೊಂದಾಗಿ
ಆಡ್ಯಾವೆ….
ದಿನದಿನವು ಕಾದಾಡ್ವ ಮನುಜ ಜನ್ಮಕೆ ಇವು
ದೂರದಲ್ಲೇ ನಿಂತು ತಿಳಿಯ ಹೇಳ್ಯಾವೆ…
ಸೂರ್ಯ ಹುಟ್ಟಿದ ಒಡನೆ, ಜಳಕವೆಲ್ಲವ ಮುಗಿಸಿ
ನಿತ್ಯದಾ ಕಾರ್ಯಕ್ಕೆ ತೊಡಗ್ಯಾವೆ…
ಶಿಸ್ತಿಗೆ ಉದಾಹರಣೆ, ಘನಗಾಂಭೀರ್ಯದ ನೆಡೆಯು
ಲೋಕ ಸಂಚಾರಿಗಳ ಜೊತೆಗೆ ಸೆಣೆಸ್ಯಾವೆ…
ವಿಮಾನಗಳೇ ಅದುರುವವು, ಇವುಗಳಾ ಕಂಡೊಡನೆ
ಹಾರಿದರೂ ನರರು ಸಾಟಿಯಿಲ್ಲ…
ವರುಷಕೊಮ್ಮೆ ಇವುಗಳ ವಿಶ್ವ ಪರ್ಯಟನೆ
ಖರ್ಚು ವೆಚ್ಚವು ಇಲ್ಲ, ಸುಖಕೆ ಸಾಟಿಯೆ ಇಲ್ಲ
ದೂರ ದೂರಿನ ಮನೆಯ ಹಿತ್ತಲಲೆ ವಾಸ
ಕಾವೇರಿ ನೀರ ಜೊತೆ ಕೆಲದಿನದ ಸಹವಾಸ
ಕಾಲ ಕಳೆವುದರಲ್ಲಿ ಮತ್ತೊಂದು ಹೊಸ ದೇಶ
ಮರಿಹಕ್ಕಿ ಜೊತೆಗೂಡಿ ಹೊರಟು ನಿಂತಾವು
ರಂಗನತಿಟ್ಟಿಗೆ ಇಂದೇ ಭೇಟಿ ಕೊಡಿ ಒಮ್ಮೆ
ಮತ್ತೆ ಸಿಗದೆ ಹೊರಟು ಹೋದಾವು…
ಚಿತ್ರ: ಗುರು ಪ್ರಸಾದ್, ಶೃಂಗೇರಿ