ವರ್ಣಮಯ | |
---|---|
ಲೇಖಕ | ವಸುಧೇಂದ್ರ |
ಚಿತ್ರಕಾರ | ಪ ಸ ಕುಮಾರ್ |
ಮುಖಪುಟ ಚಿತ್ರಕಾರ | ಶ್ವೇತಾ ಅಡುಕಳ |
ಶೈಲಿ (ಗಳು) | ಸುಲಲಿತ ಪ್ರಬಂಧಗಳು |
ಪ್ರಕಾಶಕ | ಛಂದ ಪುಸ್ತಕ |
ಪ್ರಕಾಶನ ದಿನಾಂಕ | ಡಿಸೆಂಬರ್ ೧೬, ೨೦೧೨ |
ಪುಟಗಳು | ೨೨೬ |
ಐ ಎಸ್ ಬಿ ಎನ್ | ISBN819261132-9 |
ಹೆಸರಿನ ಮೂಲಕವೇ ತನ್ನ ಇರುವನ್ನು ಸಾರುವ ‘ಬಣ್ಣ’ದ ಮೂಲಕ ಪ್ರಾರಂಭವಾಗುವ ಪ್ರಬಂಧಗಳ ಸಾಲುಗಳು, ಇಂಗ್ಲೆಂಡಿನ ರೈಲಿನ ಒಂದು ಚಿತ್ರಣವನ್ನು ನಮ್ಮ ಮುಂದಿಡುತ್ತವೆ. ವರ್ಣಭೇದದ ಕಹಿಘಟನೆಗಳನ್ನು, ಮುಲಾಜಿಲ್ಲದೆ ನಾವೂ ಅದರಲ್ಲಿ ಭಾಗವಹಿಸುವ ಪರಿಯನ್ನು ಇಲ್ಲಿ ನೋಡಬಹುದು.
ಕಾರು ಕೊಂಡ ಒಡೆಯನೊಬ್ಬ ಬೆಂಗಳೂರಿನ ದಟ್ಟ ಟ್ರಾಫಿಕ್ ಅರಣ್ಯದಲ್ಲಿ ದಿನದ ದಣಿವಿನಿಂದ ತಪ್ಪಿಸಿಕೊಳ್ಳಲು ನೇಮಿಸಿಕೊಳ್ಳುವ ನಂಜುಂಡಿಯ ಪ್ರಸಂಗಗಳು, ಕಾರ್‌ಡೆಂಟ್ ಮಾಡಿಕೊಂಡ, ಮೊದಮೊದಲಿಗೆ ಕಾರ್‌ನಿಂದಿಳಿದು ಗುದ್ದಿದವನಿಗೆ ಬಯ್ಯಲೂ ಬಾರದೆ, ಸುಮ್ಮನೆ ಇರಲೂ ಮನಸಾಗದೆ ತಡವರಿಸಿದ, ನಂತರದ ದಿನಗಳಿಗೆ ಒಂದಲ್ಲಾ ಒಂದು ರೀತಿಯಿಂದಾದ ಕಾರ್ ಮೇಲಿನ ಗೆರೆಗಳನ್ನೂ ನೋಡಿದರೂ ನೋಡದಂತೆ ನೆಡೆಯುವ ನನ್ನ ಬದಲಾದ attitude ನೆನೆಯುವಂತೆ ಮಾಡಿದವು. ಜೊತೆಗೆ, ನಮ್ಮದೇ ಲೋಕದಲ್ಲಿರುವ ಐ.ಟಿ ಜನರಿಗೆ ಪ್ರಪಂಚದ ಜ್ಞಾನವನ್ನು ಸ್ವಲ್ಪವಾದರೂ ಮಾಡಿಕೊಳ್ಳಲು ಸಹಾಯ ಮಾಡುವ ಡ್ರೈವರ್ರುಗಳ, ಕ್ಯಾಬ್‌ನವರ, ಆಗಾಗ್ಗೆ ಹೋಗಿ ಬಂದ ಟ್ರಿಪ್‌ಗಳಲ್ಲಿದ್ದ್ದ್ದ ಟ್ರಾವೆಲ್ಸ್‌ನ ಡ್ರೈವರ್ರುಗಳ ಮಾತುಗಳನ್ನು ನಂಜುಂಡಿಯ ಮಾತುಗಳಲ್ಲಿ ಕೇಳುವಂತಾಯ್ತು.
ಬೆಳಗ್ಗೆ ಎದ್ದು ಅಫೀಸಿನೆಡೆಗೆ ಮುಖ ಮಾಡಿದರೆ ಮತ್ತೆ ಸಂಜೆ ಬಂದು ಬೇಯಿಸಿ ತಿನ್ನುವ ಗೋಜಿಗೆ ಮುಖ ಸಿಂಡರಿಸುತ್ತಿದ್ದ ದಿನಗಳನ್ನು, ಮೂರು ದಾರಿ ಆಚೆ ಇರುವ ಆ ಇಡ್ಲಿ, ದೋಸೆಯವನ ಅಂಗಡಿಯ ತಕ್ಷಣದ ನೆನಪು ಬಂದದ್ದು ‘ಗೌರಮ್ಮ’ನ ಪ್ರಬಂಧ ಓದುತ್ತಿದ್ದಾಗ. ಮನೆಕೆಲಸದವರು ಹೇಗೆ, ಎತ್ತ, ಅವರ ಜೀವನ ಹೇಗೆ, ಅವರ ನಮ್ಮ ನಡುವಣ ಸಂಬಂಧ ಪ್ರಾರಂಭವಾಗುತ್ತಿದ್ದಂತೆಯೆ ನಿಧಾನವಾಗಿ ಅವರ ಪ್ರಪಂಚವನ್ನು ನಮ್ಮೆದುರಿಗಿಡುವ ಅವರ ಮಾತುಗಳು ಇಲ್ಲಿ ನಮಗೆ ಕಾಣಸಿಗುತ್ತವೆ. ಮನೆ ಶುಚಿ ಇಡಲು, ಹೊಟ್ಟೆಯ ಕಿರಿಕಿರಿ ತಡೆಯಲು, ಹಬ್ಬ ಹರಿದಿನದ ಸಿಹಿ ಅಡುಗೆಗೂ ಈಗ ಇವರ ಅಗತ್ಯತೆ ನಮಗೆ ಇದ್ದೇ ಇದೆ. ನನ್ನಾಕೆ ನಮ್ಮ ಮನೆಗೆ ಬರುವ ಅಡುಗೆಯಾಕೆಯನ್ನು ನಂಬುವ ಪರಿ, ವಸುಧೇಂದ್ರರು ತಮ್ಮ ಅಪಾರ್ಟ್‌ಮೆಂಟಿನ ಕೀಲಿ ಕೈ ಅವರಿಗೆ ಕೊಡುವ ಹಿಂದಿನ ಕಥೆ, ಕೆಲಸದವರು ಬರದಿದ್ದಾಗ ಅವರನ್ನು ಬೈದೇ ಬಿಡಬೇಕು ಎನಿಸುವ ಮಾತು ಇತ್ಯಾದಿಗಳು ನಮ್ಮ ದಿನನಿತ್ಯದ ಆ ಎರಡು ಕ್ಷಣಗಳನ್ನು ಜ್ಞಾಪಿಸಿಕೊಳ್ಳುವಂತೆ ಮಾಡುತ್ತದೆ. ಕೊನೆಗೆ ಬೈದರೆ ಎಲ್ಲಿ ನಾಳೆಯಿಂದ ಕೆಲಸಕ್ಕೇ ಬರುವುದಿಲ್ಲವೋ ಎಂಬ ಭಯದಿಂದ ‘ಎಚ್ಚರಿಕೆ’ ಎನ್ನುವ ಘಂಟಾನಾದವನ್ನು ಉಪಯೋಗಿಸುವ ಚತುರತೆಯನ್ನು ಕಾಲವೇ ನಮಗೆ ಕಲಿಸುವ ಅದನ್ನು ಪ್ರಯೋಗಿಸುವ ಪರಿಯೂ ನಿಮಗೆ ನೆನಪಾಗುವುದು ಖಂಡಿತ.
ಮಹಾಭಾರತ, ರಾಮಾಯಣ ಇತ್ಯಾದಿಗಳನ್ನು ಧಾರಾವಾಹಿಗಳಲ್ಲಿ, ಮತ್ತು ಶಾಲೆಯ ಪುಸ್ತಕಗಳಲ್ಲಿ ಓದಿದ ನನಗೆ ಕಥೆಗಳು ಅಲ್ಪಸ್ವಲ್ಪ ತಿಳಿದಿದೆ ಅಷ್ಟೇ. ಆದರೂ ಅವುಗಳ ಪ್ರಸಂಗಗಳನ್ನು ಹೇಳುವಾಗ ಎಲ್ಲಿ, ಯಾವಾಗ ಯಾರು ಎನ್ನುವುದನ್ನು ಕಲ್ಪಿಸಿಕೊಳ್ಳುತ್ತಾ, ನಿಷ್ಠೆಯಿಂದ ಕೇಳಲು ಅಡ್ಡಿಯಿಲ್ಲ… ‘ವರ್ಣಮಯ’ದಲ್ಲಿ ಕೃಷ್ನ ಮತ್ತು ಕರ್ಣರನ್ನು ಮಹಾಭಾರತದ ಕಥೆಯನ್ನಾಡಿದ ವ್ಯಾಸರು, ಕುಮಾರವ್ಯಾಸ, ಎಸ್.ಎಲ್ ಭೈರಪ್ಪ ಹೇಗೆಲ್ಲ ಚಿತ್ರಿಸಿದ್ದಾರೆ, ಅವರ ಮನಸ್ಸಿನಲ್ಲಿ ಯಾರು ನಿಜವಾಗಿಯೂ ಮನೆಮಾಡಿದವರು, ಅವರ ಚಿತ್ರಣವನ್ನು ಲೋಕಕ್ಕೆ ಮಾಡಿಕೊಟ್ಟ ಇವರ ಲೆಕ್ಕಾಚಾರಗಳೇನಿದ್ದಿರಬಹುದು ಎಂದು ಮೂರು ನಾಲ್ಕು ಮಹಾಗ್ರಂಥಗಳ ಚಿತ್ರಣವನ್ನು ವಸುಧೇಂದ್ರ ನಮಗೆ ಮಾಡಿಕೊಡುತ್ತಾರೆ.
ಕಾಂಕ್ರೀಟ್ ನಗರದಲ್ಲೇ ಬೆಳೆದ ನನಗೆ ಅಮ್ಮನೊಡನೆ ಹಳ್ಳಿಯಲ್ಲಿದ್ದ ಪ್ರಸಂಗಗಳು ಇಲವೇ ಇಲ್ಲ ಎನ್ನಬಹುದು. ಇದೇ ಜಾತ್ರೆ, ಸಾಮಾನುಗಳನ್ನು ಕೊಡು ಕೊಳ್ಳುವ ಅನೇಕ ಸಂದರ್ಭಗಳನ್ನು ಕಳೆದು ಹಾಕಿದೆ ಎನ್ನಲಡ್ಡಿಇಲ್ಲ. ಅಮ್ಮನ ನೆನಪುಗಳನ್ನು, ಅಮ್ಮನ ವ್ಯಕ್ತಿತ್ವವನ್ನು, ಅವಳ ಹಾಸ್ಯ ಪ್ರಜ್ಞೆ ಇತ್ಯಾದಿಗಳು ‘ಅಮ್ಮ ಎನ್ನುವ ಸಂಭ್ರಮ’ ಮತ್ತು ‘ತಾಯಿ ದೇವರಲ್ಲ’ ಎನ್ನುವ ಪ್ರಬಂಧಗಳ ಮೂಲಕ ನಮ್ಮ ಮುಂದೆ ಬರುತ್ತವೆ. ಚಿಕ್ಕಂದಿನ ನೆನಪುಗಳನ್ನು ತರುವ ಈ ಚೆಂದದ ಪ್ರಬಂಧಗಳನ್ನು ಓದಿಯೇ ಆಸ್ವಾದಿಸಬೇಕು.
ಅಪಾರ್ಟ್‌ಮೆಂಟಿನೊಳಗಿನವರ, ಗಾರ್ಮೆಂಟ್ಸ್ ನಿಂದ ಹಿಡಿದು ಬಹುರಾಷ್ಟ್ರಿಯ ಕಂಪೆನಿಗಳ ಚುಕ್ಕಾಣಿ ಹಿಡಿದ ಮಹಿಳೆಯರ ಶಕ್ತಿ, ನಮ್ಮೆದುರಿಗಿರುವ ಅವರ ಜೀವನದ ಕಷ್ಟ ಸುಖಗಳನ್ನುಕೂಡ ನಮಗೆ ವಸುಧೇಂದ್ರ ಮಾಡಿಕೊಡುತ್ತಾರೆ.
ಮನಕಲಕುವ ಘಟನಾವಳಿಗಳಿಗೆ ಪ್ರೇಕ್ಷಕನಾದ ೨೦೧೨ರ ಅಂಚಿನಲ್ಲಿ ಗಾಂಧಿ ಎಂಬೊಬ್ಬ ಮಾಹಾತ್ಮನ ಮಾತುಗಳನ್ನು, ನಮ್ಮ ಅವಶ್ಯಕತೆಗೆ ನುಣುಚುತ್ತಾ, ಅವರ ಪ್ರತಿಮೆ ಅಷ್ಟನ್ನೇ ಒಂದು ಮೂಲೆಯಲ್ಲಿಟ್ಟು ಕೂರುತ್ತಿರುವ ಇಂದಿನ ಪೀಳಿಗೆಗೆ ‘ಸತ್ಯ’ ಎನ್ನುವುದರ, ‘ಶಾಂತಿ ಮಂತ್ರ’ದ, ‘ಅಹಿಂಸೆ’ಯ, ‘ಜಾತ್ಯಾತೀತ ಮಾನೋಭಾವ’ದ ಗಂಧ ಎಷ್ಟಿದೆ ಎನ್ನುವುದರೊಂದಿಗೆ ಮುಕ್ತಾಯವಾಗುವ ಪ್ರಬಂಧಗಳು ಒಂದಾದ ನಂತರ ಮತ್ತೊಂದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಮಿತವಾದ ಹಾಸ್ಯ ಪ್ರಸಂಗಗಳು ನಗುನಗುತ್ತಲೇ, ನಮಗೆ ಘಟನೆಗಳ ಮತ್ತೊಂದು ಮುಖದ ಪರಿಚಯವನ್ನು ಯಶಸ್ವಿಯಾಗಿ ಮಾಡಿಕೊಡುತ್ತವೆ.
ಎಲ್ಲರಿಗೂ ಹೊಸವರ್ಷ ‘ವರ್ಣಮಯ’ವಾಗಿರಲಿ…