ಪ್ರಜಾವಾಣಿಯಲ್ಲಿ 04/04/2015 ರಂದು ಅಂತರಾಳದಲ್ಲಿ ಪ್ರಕಟಗೊಂಡ ಲೇಖನ

ಮನುಷ್ಯ ಆದಿಮಾನವನ ಕಾಲದಿಂದಲೂ ತನ್ನ ಇರವಿನ ಸುತ್ತ ಕೋಟೆ ಕೊತ್ತಲೆಗಳ ಜೊತೆಗೆ ಕಟ್ಟಳೆಗಳನ್ನೂ ಕಟ್ಟಿಕೊಂಡು ಬಂದಿದ್ದಾನೆ. ಸ್ವಾತಂತ್ರ್ಯ, ಪ್ರಾಬಲ್ಯ ಹಾಗೂ ಸಹಬಾಳ್ವೆಯ ಬದುಕು ಇದರ ಉದ್ದೇಶವಾಗಿತ್ತು. ಭಾಷೆ, ಸಂಸ್ಕೃತಿಯ ಬೆಳವಣಿಗೆ, ಹೊಸ ಭೂಪ್ರದೇಶಗಳ ಅನ್ವೇಷಣೆಯು ಪ್ರಾದೇಶಿಕ, ಭಾಷಿಕ ಹಾಗೂ ವಿದೇಶಿ ಕಾನೂನು ರಚನೆಗೆ ನಿಧಾನವಾಗಿ ಅಡಿಗಲ್ಲುಗಳಾದವು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯು ಕಾನೂನು ಸುವ್ಯವಸ್ಥೆಯ ಸಲುವಾಗಿ, ಇಂಟರ್ನೆಟ್ ಜಗತ್ತಿನಲ್ಲೂ ತನ್ನದೇ ನಿಯಂತ್ರಣ ಹೊಂದಲು ಇದೇ ವರ್ಗೀಕರಣದ ಮಾದರಿ ಅನುಸರಿಸುವುದನ್ನು ನೋಡಬಹುದು.

ಒಬ್ಬ ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದಲ್ಲಿ ತನ್ನಿಚ್ಛೆಯಂತೆ ಇರುವುದರ ಜೊತೆಗೆ, ಮಾನವ ಸಹಜ ಗುಣಗಳಿಂದ ಬಂದಿರುವ ಎಲ್ಲ ರೀತಿಯ ಭಾವನೆಗಳನ್ನೂ ಹೊರಗೆಡವುತ್ತಾನೆ. ಕ್ರೋಧ, ಮದ, ಮಾತ್ಸರ್ಯ ಇತ್ಯಾದಿಗಳನ್ನು ತನ್ನ ನಡೆ ನುಡಿಯಿಂದ, ಬರಹಗಳಿಂದ   ತೋರ್ಪಡಿಸಿದರೂ ತನ್ನ ಅಸ್ತಿತ್ವವನ್ನು, ಅಂತಸ್ತನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ತನ್ನೆಲ್ಲ ಹೆಜ್ಜೆಗಳಲ್ಲೂ ಮಾಡುತ್ತಲೇ ಇರುತ್ತಾನೆ. ಇದೆಲ್ಲದರ ಜೊತೆಗೆ ಯಾರಿಗೂ ಅರಿವಾಗದಂತಹ, ಬೇರೆಯವರಿಗೆ ತೋರ್ಪಡಿಸಿಕೊಳ್ಳಲು ಇಚ್ಛಿಸದ ಮುಖವಾಡವನ್ನೂ ಹೊಂದಿರುತ್ತಾನೆ. ಬಹುಶಃ ಜಗತ್ತಿನಲ್ಲಿ ನಡೆಯುತ್ತಿರುವ ಅದೆಷ್ಟೋ ಕಳ್ಳತನ, ಕಪಟತನದಂತಹ ಸಂಗತಿಗಳು ಈ ಎರಡನೇ ಮುಖಕ್ಕೆ ಸಂಬಂಧಿಸಿದವು. ಹೀಗಾಗಿ ಕಾನೂನಿನ ಅಗತ್ಯ  ನಮಗೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎನಿಸುತ್ತದೆ.

ದಶಕಗಳ ಹಿಂದೆ ಗಣಕಯಂತ್ರಗಳನ್ನು ಒಟ್ಟುಗೂಡಿಸಲು ಸಾಧ್ಯವಾಗಿಸಿದ ತಂತ್ರಜ್ಞಾನದ ಆವಿಷ್ಕಾರವಾದ ಇಂಟರ್ನೆಟ್, ಮನುಷ್ಯನಿಗೆ ಯಾಂತ್ರಿಕ ಯುಗದಲ್ಲಿ ತನ್ನ ಇರುವಿಕೆಯನ್ನು ತೋರಿಸಿಕೊಳ್ಳಲು ಹೊಸತೊಂದು ಜಗತ್ತನ್ನೇ ಸೃಷ್ಟಿಸಿಕೊಟ್ಟಿದೆ. ಒಬ್ಬ ವ್ಯಕ್ತಿಗೆ ಒಂದೇ ಪಾಸ್‌ಪೋರ್ಟ್, ಆಧಾರ್, ಪ್ಯಾನ್‌ಕಾರ್ಡ್ ಎಂಬ ಸಂಕೋಲೆಗಳನ್ನು ಮುರಿದು, ಎಷ್ಟು ಬೇಕಾದರೂ ವೇಷ ಹಾಕಿಕೊಳ್ಳಬಹುದಾದ ಸಾಧ್ಯತೆಯನ್ನು ತೋರಿಸಿಕೊಟ್ಟಿದೆ.  ಜೀವನ ನಡೆಸಲು ಮಾತನಾಡುತ್ತಿದ್ದ, ಇತರರೊಂದಿಗೆ ವ್ಯವಹರಿಸುತ್ತಿದ್ದ ರೀತಿ ರಿವಾಜುಗಳಲ್ಲಿ ಅತಿ ವೇಗವಾದ ಬದಲಾವಣೆ ಸಾಧ್ಯವಾಗಿದ್ದೂ ಇದರ ಮೂಲಕವೇ.

ಹತ್ತಾರು ಸಾವಿರ ಜನ ಒಂದು ವಿಷಯವನ್ನು  ಕ್ಷಣಾರ್ಧದಲ್ಲೇ ಓದಿ, ಗ್ರಹಿಸಿ (ಸಾಧ್ಯವಾದಷ್ಟೂ), ನಮ್ಮೆದುರಿಗೆ ನಡೆಯುತ್ತಿರುವ ಘಟನೆಗಳ ಬಗ್ಗೆ ನಮ್ಮದೇ ಎನ್ನುವಂತಹ ವಿಮರ್ಶೆ ಮಾಡಲು, ಚರ್ಚಿಸಲು ಫೇಸ್‌ಬುಕ್‌, ವಾಟ್ಸ್ಆ್ಯಪ್‌, ಟ್ವಿಟರ್ ಸಾಧ್ಯವಾಗಿಸಿವೆ.

ಮೊಬೈಲ್ ರಸ್ತೆ ಬದಿಯ ವ್ಯಾಪಾರಿಗಳಿಗೂ ಎಟುಕುವಂತಾದಾಗ ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಅಮೆರಿಕದಂತಹ ದೊಡ್ಡಣ್ಣನಿಂದ ಹಿಡಿದು ಎಲ್ಲರಿಗೂ, ಸಂವಹನ ರೂಪದಲ್ಲಿರುವ ಸಂದೇಶಗಳ ಮೇಲೂ ಕಡಿವಾಣ ಹಾಕಬೇಕು ಎಂದೆನಿಸಿದ್ದು. ಕಮ್ಯುನಿಸ್ಟ್ ಸರ್ಕಾರಗಳಿರುವ ಚೀನಾದಂತಹ ದೇಶಗಳೂ ಇಂಟರ್ನೆಟ್ ಸೇವಾದಾತರ ಮೂಗಿಗೇ ದಾರ ಹಾಕಿರುವ ಉದಾಹರಣೆಗಳು ಇದಕ್ಕಿಂತ ವಿಭಿನ್ನವಲ್ಲ. ವ್ಯಕ್ತಿಗತವಾಗಿದ್ದ ವಾಕ್ ಸಮರಗಳು, ಫೇಸ್‌ಬುಕ್‌ ಪೋಸ್ಟ್, ಟ್ವೀಟ್, ವಾಟ್ಸ್ಆ್ಯಪ್‌ನಂತಹ  ಸಂದೇಶಗಳೂ ಲೇಖನಿಯ ಹರಿತವನ್ನು ಹೊಂದಿದ್ದು, ದೇಶ-ವಿದೇಶಗಳ ಎಲ್ಲೆಗಳನ್ನೂ ಮೀರಿ ಖ್ಯಾತನಾಮರು, ಸಂಸ್ಥೆ, ಸರ್ಕಾರಗಳಿಗೆ ಕಂಟಕವಾಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದನ್ನು ಮೊದಲೇ ಎಣಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿದ್ದವರಿಗೆ ಕಾನೂನು ಒಂದು ಮಂತ್ರದಂಡದಂತೆ ಕಾಣಿಸಿದ್ದಿರಬೇಕು.

ಎಡ್ವರ್ಡ್ ಸ್ನೋಡೆನ್‌ನಂತಹ ವಿಷಲ್ ಬ್ಲೋಅರ್‌ಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದು ತಾಯ್ನಾಡಿನಿಂದಲೇ ಅವರನ್ನು ದೂರ ಇಡುವ ಕಾನೂನು, ಸಾಮಾಜಿಕ ಜಾಲತಾಣದಲ್ಲಿ ಹೊರಹೊಮ್ಮಿದ ಅನಿಸಿಕೆಗಳ ಎಳೆಯೊಂದನ್ನೇ ಕಾರಣ ಮಾಡಿ ಮುಗ್ಧರನ್ನು, ಅಮಾಯಕರನ್ನು, ಇನ್ನೂ ವಾಸ್ತವ ಜಗತ್ತನ್ನು ಪೂರ್ಣ ಅರಿಯದ ನೆಟಿಜನ್‌ರನ್ನು  ಜೈಲಿಗೆ ದೂಡುವ, ಸಮಾಜದಿಂದ ತಿರಸ್ಕಾರಕ್ಕೊಳಗಾಗುವ ಸಂಕಷ್ಟಗಳಿಗೂ ಒಡ್ಡುತ್ತದೆ. ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆಯೂ ಚಿಕ್ಕದೇನಲ್ಲ.

ಮನುಷ್ಯ ಮುಕ್ತವಾಗಿ ಚಿಂತಿಸಬಲ್ಲ, ಮಾತನಾಡಬಲ್ಲ್ಲ. ಆದರೆ ಇಂಟರ್ನೆಟ್ ಎಂಬ ವಾಸ್ತವ ಜಗತ್ತಿನಲ್ಲಿ ಅದೃಶ್ಯನಾಗಿಯೂ ಇರಬಲ್ಲ. ಈ ಯೋಚನೆ ಅವನ ತೀಕ್ಷ್ಣ ಬುದ್ಧಿಗೆ ಒಂದೆಡೆ ಮುಗ್ಧನಾಗಿ, ಶ್ರಮಜೀವಿ, ಸೌಮ್ಯಜೀವಿ ಎಂದು ತೋರಿಸಿಕೊಳ್ಳುತ್ತಲೇ, ನಿಜ ಜೀವನದಲ್ಲಿ ಆಡದ ಮಾತುಗಳನ್ನು, ಬಿಚ್ಚಿಡದ ಗುಟ್ಟುಗಳನ್ನು, ಶಕ್ತಿ ಪ್ರದರ್ಶನಕ್ಕೆ ಸಾಧ್ಯವಾಗದೆಡೆ ಮಾತಿನ ಬಾಣವನ್ನು ಹರಿಯಬಿಡುವ, ಅದೂ ಅದೃಶ್ಯರೂಪದ ‘false identity’ಯ ಅಥವಾ ‘invisible man’ನಂತಹ ರೋಚಕ ಮುಖವಾಡಗಳು ಕಾದಂಬರಿಯ ಪುಸ್ತಕಗಳಿಂದ ಹೊರಬಂದ ಶಸ್ತ್ರಾಸ್ತ್ರಗಳಂತೆ ತೋರಿದವು. ಆತ  ನಿಧಾನವಾಗಿ ವಾಸ್ತವ ಬದುಕಿನ ಪ್ರಜೆಯಾಗುತ್ತಾ ಹೋದ. ಮರ್ಯಾದೆ, ಅಂತಸ್ತು, ಅಧಿಕಾರ ಇತ್ಯಾದಿಗಳೆಲ್ಲವುಗಳಿಗಿಂತ ಭಿನ್ನವಾದ ‘ಸೋಷಿಯಲ್ ಮೀಡಿಯಾ ಐಡೆಂಟಿಟಿ’ ಮತ್ತು ‘ಸ್ಟೇಟಸ್’ ಬದುಕಿನ ಅವಿಭಾಜ್ಯ ಅಂಗಗಳಾಗಿ ಬೆಳೆಯುತ್ತಾ ಬಂದವು. ಆದರೆ, ನಿಜ ಜೀವನದಲ್ಲಿರುವ ‘ಕಾನೂನು’ ಎಂಬ ಛಡಿ ಏಟಿನ ಭಯ ಇಲ್ಲದಿರುವುದು, ಮತ್ತೊಬ್ಬರ ಜೀವನದಲ್ಲಿ ನಾವು ಮೂಗುತೂರಿಸುವುದು, ಬೇರೆಯವರಿಗೆ ನೋವುಂಟು ಮಾಡುವುದು ತಪ್ಪು ಎನ್ನುವ ಭಾವನೆಗಳು ಶೂನ್ಯ ಎನ್ನುವಷ್ಟು ಕುರುಡು ಜಾಣ್ಮೆ ತೋರುವ ಸಾಧ್ಯತೆ ಇಂಟರ್ನೆಟ್‌ನಲ್ಲಿ ಸರ್ವೇ ಸಾಮಾನ್ಯ.

ಮಕ್ಕಳಿಗೆ ಮನೆಯಲ್ಲಿ, ಶಾಲೆಯಲ್ಲಿ ಕಲಿಸುವ, ಅವರೇ ಖುದ್ದು ಕಲಿಯಲು ಸಾಧ್ಯವಿರುವ ಸೂಕ್ಷ್ಮ ಸಂಗತಿಗಳನ್ನು ಇಂಟರ್ನೆಟ್ ಬಳಕೆದಾರರಿಗೆ ಕಲಿಸುವುದು ಸ್ವಲ್ಪ ಕಷ್ಟದ ಕೆಲಸವೇ. ಹೊಸದಾಗಿ ಇಂಟರ್ನೆಟ್ ಬಳಕೆಗೆ ಮುಂದಾಗುತ್ತಿರುವ ಮಾಹಿತಿ ತಂತ್ರಜ್ಞಾನ ಪೀಳಿಗೆಗೆ ವಾಸ್ತವದ ಅರಿವುಂಟು ಮಾಡುವುದು, ಕಾನೂನಿನ ಕಲಂಗಳ ಪರಿಭಾಷೆ ಕಲಿಸುವುದು, ಇಂಟರ್ನೆಟ್ ಸೇವಾದಾತರ ಪ್ರೈವೆಸಿ ಪಾಲಿಸಿಗಳನ್ನು ಓದುವ ಅಭ್ಯಾಸ ಬೆಳೆಸುವುದು… ಇಂತಹ ಅನೇಕ ಕೆಲಸಗಳು ಪ್ರಾಥಮಿಕ ಕಲಿಕಾ ಪಟ್ಟಿಯಲ್ಲಿ ಇರಬೇಕಾದ ಅಂಶಗಳು.

ನಮ್ಮ ನಾಯಕರುಗಳಂತೆ ಇಂಟರ್ನೆಟ್‌ನ ಸಮುದಾಯ, ಗುಂಪು ಇತ್ಯಾದಿಗಳನ್ನು ಕಟ್ಟುವ ಜನಸಾಮಾನ್ಯರು ಇಲ್ಲಿ ಸಮಾನ ಮನಸ್ಕರ ಸಮುದಾಯ ರೂಪಿಸುವಲ್ಲಿ ಶ್ರಮಿಸುವಾಗ ಮಾನವೀಯ ಸೂಕ್ಷ್ಮಗಳ ಬಗ್ಗೆ, ಪ್ರಾಥಮಿಕ ಶಿಕ್ಷಣದ ಬಗ್ಗೆ ಎಷ್ಟು ಗಮನ ಇರಿಸುತ್ತಾರೆ ಎಂಬುದು ಮತ್ತೊಂದು ಪ್ರಶ್ನೆ. ಇದು ಸೇವಾದಾತರ ಜವಾಬ್ದಾರಿ ಆಗಬೇಕು ಎಂಬುದು ನನ್ನ ವಾದ.

ಎಷ್ಟೋ ಬಾರಿ ಟೈಪಿಸಲ್ಪಟ್ಟ ಕೆಲವೇ ಕೆಲವು ಸಾಲುಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ, ಸಮುದಾಯವನ್ನು ಕಟ್ಟಿ ಹಾಕುವ, ಹಿಂಸೆ, ಶೋಷಣೆ, ತೆಗಳಿಕೆಯಂತಹ ಅಮಾನವೀಯ ಮಾನಸಿಕ ಹಿಂಸೆಯ  ಶಿಕ್ಷೆಗೆ ಗುರಿಪಡಿಸುವ ಪರಿಪಾಠ 300ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಇದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಎ) ಯ ಕರಿನೆರಳಿನ ಜೊತೆಗೇ ಸೇರಿದ ಇತಿಹಾಸ. ಈ ಕಾನೂನು ಈಗ ಇಲ್ಲವಾದರೂ, ಅದನ್ನು ಸೃಷ್ಟಿಸಲು ಕಾರಣವಾದ ಅಂಶಗಳು ಮತ್ತು ಅನಂತರ ಅದರ ದುರ್ಬಳಕೆಯ ಅಂಶಗಳು ನಮ್ಮ ಅಂತರ್ಜಾಲದ ಬದುಕಿಗೆ ಹೊಸ ಪಾಠಗಳಾಗಬೇಕಿದೆ.

ಸುಪ್ರೀಂಕೋರ್ಟ್ ಇಂತಹ ಕಾನೂನೊಂದನ್ನು ರದ್ದುಗೊಳಿಸಿದ್ದರೂ, ಇಂಟರ್ನೆಟ್‌ ಸೇವಾ ಸಂಸ್ಥೆಗಳ, ಬ್ಲಾಗುಗಳ, ಸಮುದಾಯಗಳ ಸೇವಾ ನಿಯಮಗಳನ್ನು ಎತ್ತಿ ಹಿಡಿಯುವ ಇದೇ ಕಾಯ್ದೆಯ ಕಲಂ 76  ಇನ್ನೂ ಜಾರಿಯಲ್ಲಿದೆ. ಜಾಲತಾಣಗಳು ತಮ್ಮ ಮಾರುಕಟ್ಟೆಯ ವಿಸ್ತಾರಕ್ಕಾಗಿ ಹೊರತರುವ ಸೇವೆಗಳು ಅವನ್ನು ಬಳಸುವ ಆಯ್ಕೆಯನ್ನು, ಸದ್ಬಳಕೆ ಆಲೋಚನೆಯನ್ನು ಬಳಕೆದಾರನಿಗೇ ಬಿಟ್ಟಿರುತ್ತವೆ. ಬಳಕೆಯನ್ನು ನಿಯಂತ್ರಿಸುವ ಕಾರ್ಯ, ಬಳಕೆದಾರನ ಖಾಸಗಿತನವನ್ನು, ಗೋಪ್ಯತೆಯನ್ನು ಉಲ್ಲಂಘಿಸುವ ಸಾಧ್ಯತೆಗಳಿದ್ದು, ಸರ್ಕಾರದ ಒತ್ತಡಕ್ಕೆ ಸೇವಾದಾತರು ಮಣಿಯುವ ಎಲ್ಲ ಸಾಧ್ಯತೆಗಳೂ ಇವೆ.

ಕಲಂ 69(ಎ) ಕಂಪ್ಯೂಟರ್‌ ಮಾಧ್ಯಮದ ಮೂಲಕ ಯಾವುದೇ ಮಾಹಿತಿ ಜನರಿಗೆ ತಲುಪದಂತೆ ತಡೆಹಿಡಿಯಲು ಸರ್ಕಾರಕ್ಕೆ ನಿರ್ದೇಶನ ನೀಡುವ ಅಧಿಕಾರ ನೀಡುತ್ತದೆ. ಹೊಸ ಕಾನೂನುಗಳ ಮಾಹಿತಿಯೇ ಜನರಿಗೆ ತಲುಪದಂತಾದರೆ? ಇತ್ತೀಚೆಗೆ ಸರ್ಕಾರ ನಿರ್ಬಂಧಿಸಿದ ಜಾಲತಾಣಗಳ ಪಟ್ಟಿ ನೋಡಿದಾಗ,  ಇಂತಹ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕ್ರಿಮಿನಲ್ ಅಫೆನ್ಸ್ ಅಥವಾ ಕೌಂಟರ್ ಟೆರರಿಸಂನಂತಹ ಪದಬಳಕೆಯ, ವಿದ್ಯುನ್ಮಾನವಾಗಿ ಇಂಟರ್ನೆಟ್‌ನಲ್ಲಿ ಹರಿದಾಡುವ ನಮ್ಮೆಲ್ಲ ಗೋಪ್ಯ ಮಾಹಿತಿಯನ್ನು, ಅದರಲ್ಲಿ ಬರುವ ಸ್ಪ್ಯಾಮ್  ಇತ್ಯಾದಿಗಳನ್ನು ವ್ಯಕ್ತಿಗತ ತಪ್ಪಿಗೆ ಕಾರಣವಾಗಿಸುವ ಸಾಧ್ಯತೆಗಳೂ ಇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಇರುವ ಪೊಲೀಸ್, ಕೋರ್ಟು ಕಚೇರಿಗಳಲ್ಲಿನ ಲಾಯರುಗಳಿಗೆ ನಿಜ ಜಗತ್ತಿನ ಆಗುಹೋಗುಗಳ ಅರಿವು ಇದ್ದು, ಕಾನೂನನ್ನು ಚಲಾಯಿಸುವ ಅಥವಾ ಅದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಪ್ರಬುದ್ಧತೆ ವರ್ಷಗಳ ಅನುಭವದಿಂದ ಬಂದಿರುತ್ತದೆ. ಇದನ್ನೇ ಇಂಟರ್ನೆಟ್‌ ಜಗತ್ತಿನಲ್ಲಿ ಬಳಸುವಾಗ, ತಂತ್ರಜ್ಞಾನದ ಜ್ಞಾನದ ಅಭಾವದಿಂದಾಗಿ ಸದ್ಬಳಕೆ ಸಾಧ್ಯವಾಗದಿರಬಹುದು. ಬಳಕೆದಾರ ಕೂಡ ತನ್ನ ಮಾತಿನ ಹರಿತವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜಾಣತನದಿಂದ ಬಳಸಿಕೊಳ್ಳಲು ಸೋತಲ್ಲಿ, ಕ್ಷಣಾರ್ಧದಲ್ಲಿ ಶಾಂತವಾದ ಒಂದು ವ್ಯವಸ್ಥೆಯನ್ನು ಹಾಳುಗೆಡವಿ, ಅಸ್ಥಿರತೆಯನ್ನು ತರಬಲ್ಲ.

ಒಟ್ಟಾರೆ ಹೇಳುವುದಾದರೆ, ಸುಂದರ ವಿಶ್ವದ ಕನಸೊಂದನ್ನು ಕಟ್ಟಿ, ಎಲ್ಲರನ್ನೂ ಸಮಾನರಾಗಿ ಕಾಣುವ ಸಮುದಾಯವನ್ನು ಸೃಷ್ಟಿಸುವ ಕೆಲಸ ಇಂಟರ್ನೆಟ್‌ನ ಸಾಮಾಜಿಕ ಜಾಲತಾಣಗಳಿಂದ ಸಾಧ್ಯ. ಶತಮಾನಗಳ ಕಳೆಯ ತೊಳೆದು, ಜಗತ್ತಿನ ಜ್ಞಾನ ಭಂಡಾರವನ್ನು ತಟಸ್ಥ ನಿಲುವಿನೊಂದಿಗೆ ಎಲ್ಲವನ್ನೂ, ಎಲ್ಲರಿಗೆ ಲಭ್ಯವಾಗಿಸುವಂತೆ ಮಾಡುತ್ತಿರುವ ವಿಕಿಪೀಡಿಯದಂತಹ ಸಮುದಾಯ ನಮಗೆ ಒಂದೆಡೆ ಉದಾಹರಣೆ. ಆದರೆ, ಮತ್ತೊಂದೆಡೆ ಕನ್ನಡ ಕಟ್ಟುವ, ದೇಶದ ಆಡಳಿತ ಸುಧಾರಿಸುವ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ, ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎರವಾಗುವ ಕಾನೂನುಗಳ ಬಗ್ಗೆ ಸಾಮೂಹಿಕ ಸಂಶೋಧನೆ ಮಾಡುವ, ಜನಸಂಘಟನೆಯನ್ನು ಸಾಧ್ಯವಾಗಿಸುವ ಅದೆಷ್ಟೋ ಯೋಜನೆಗಳು ನಮ್ಮ ಕಣ್ಣಮುಂದಿವೆ. ಈ ಸಾಧ್ಯತೆಗಳನ್ನು ಮತ್ತು ಇವನ್ನು ಸಾಧಿಸಲು ಬೇಕಿರುವ ಪ್ರೌಢಿಮೆಯನ್ನು ಜನಸಾಮಾನ್ಯರಲ್ಲಿ ಬೆಳೆಸುವ ಕಾರ್ಯ ತಂತ್ರಜ್ಞಾನದ ಮೂಲಕ ಆಗಬೇಕಿದೆ.

ತಂತ್ರಜ್ಞಾನದ ಸದ್ಬಳಕೆಯ ಮಾತು ಬಂದಾಗ, 2013ರಲ್ಲಿ ಟೆಡ್‌ಟಾಕ್‌ನಲ್ಲಿ ಮಾತನಾಡಿದ ಕೀನ್ಯಾದ ಮಸ್ಸಾಯ್ ಸಮುದಾಯದ ರಿಚರ್ಡ್ ಟುರೆರೆ ನೆನಪಿಗೆ ಬರುತ್ತಾನೆ. ಕಾಡೇ ಆವರಿಸಿಕೊಂಡಿದ್ದ ಪ್ರದೇಶದಲ್ಲಿ ಜೀವನದ ದಾರಿಗೆಂದು ಸಾಕಿದ್ದ ಹಸುಗಳನ್ನು ಕೊಂದು ತಿನ್ನುತ್ತಿದ್ದ ಸಿಂಹಗಳನ್ನು ಈತ ದ್ವೇಷಿಸುತ್ತಿದ್ದ. ಕಡೆಗೆ ಸೋಲಾರ್ ಪ್ಯಾನಲ್‌ಗಳನ್ನು ಬಳಸಿ, ಆಗಾಗ್ಗೆ ಮಿನುಗುವ ದೀಪಗಳನ್ನು ಬೆಳಗುವಂತೆ ಮಾಡಿ ತನ್ನ ಸಮುದಾಯದ ಹಸುಗಳನ್ನು ಉಳಿಸಿದ ಆತನ ಕತೆ, ತಂತ್ರಜ್ಞಾನವನ್ನು ಬಳಸಿಕೊಳ್ಳಲು ಬೇಕಿರುವ ಸಾಮಾನ್ಯ ಜ್ಞಾನದ ಅಗತ್ಯವನ್ನು ಒತ್ತಿ ಹೇಳುತ್ತದೆ. ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗದಿದ್ದರೂ, ಅವನ್ನು ವ್ಯಕ್ತಪಡಿಸುವಲ್ಲಿ ತೋರಬೇಕಾದ ಸಂಯಮವನ್ನು ಕಲಿಸುತ್ತದೆ ಅಥವಾ ಎಲ್ಲರಿಗೂ ಒಪ್ಪಿಗೆಯಾಗುವಂತಹ ಮಾರ್ಗವನ್ನು ಕಂಡುಕೊಳ್ಳಲು ಸಹಕರಿಸುತ್ತದೆ.